ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?

ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು, ಕೇರಳದಲ್ಲಿ ನಡೆಯುತ್ತಿರುವ ಸಂಘ-ಪರಿವಾರ ಪ್ರಾಯೋಜಿತ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಹಿಂದೆ ರಾಮಮಂದಿರ ವಿಚಾರದಲ್ಲಿ ಹೆಣೆದ ತಂತ್ರಗಳನ್ನೇ ಬಿಜೆಪಿ ಹಾಗೂ ಸಂಘ-ಪರಿವಾರ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ

ಆರೆಸ್ಸೆಸ್‌ ಹಾಗೂ ಬಿಜೆಪಿ ಕೇರಳದ ಶಾಂತಿ ಮತ್ತು ನೆಮ್ಮದಿ ಹಾಳು ಮಾಡುವ ನಿಟ್ಟಿನಲ್ಲಿ ಕಾರ್ಯಗತವಾಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ. ಆ ಮೂಲಕ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಆರೆಸ್ಸೆಸ್‌ ಹಾಗೂ ಬಿಜೆಪಿ ನಡೆಸುತ್ತಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಮಾತನಾಡಿರುವ ಅವರು, “ಪವಿತ್ರ ಸ್ಥಳವಾದ ಶಬರಿಮಲೆಯನ್ನು ರಣಾಂಗಣವಾಗಿಸುವ ಉದ್ದೇಶದಿಂದ ಆರೆಸ್ಸೆಸ್‌ ಹಾಗೂ ಬಿಜೆಪಿ ರಾಜ್ಯಾದ್ಯಂತ ವ್ಯಾಪಕ ಹಿಂಸಾಚಾರ ನಡೆಸುತ್ತಿವೆ. ಕೇರಳದಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಆರೆಸ್ಸೆಸ್‌ ಈ ಹುನ್ನಾರ ಹೂಡಿದೆ. ಆರೆಸ್ಸೆಸ್‌ ನಿಲುವಿನ ಪರ ಕಾಂಗ್ರೆಸ್‌ ವಾಲುತ್ತಿರುವುದು ಬೇಸರ ತರುವಂತಹ ಸಂಗತಿ,” ಎಂದು ಖೇದ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದೆಂದು ಸುಪ್ರೀಂ ಕೋರ್ಟ್‌ ಕಳೆದ ತಿಂಗಳು ಐತಿಹಾಸಿಕ ತೀರ್ಪು ನೀಡಿತ್ತು. ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಹಿಂದೂ ಪರ ಸಂಘಟನೆಗಳು, ಒಂದು ವೇಳೆ ಮಹಿಳೆಯರು ದೇಗುಲ ಪ್ರವೇಶಕ್ಕೆ ಮುಂದಾದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದವು. ಕಳೆದ ವಾರ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಲು ಮುಂದಾದ ಸಂದರ್ಭ ಶಬರಿಮಲೆ ಸೇರಿದಂತೆ ಕೇರಳಾದ್ಯಂತ ವ್ಯಾಪಕ ಹಿಂಸಾಚಾರ ನಡೆದಿತ್ತು. ಹಿಂದೂ ಪರ ಸಂಘಟನೆಗಳ ಹಿಂಸಾತ್ಮಕ ಪ್ರತಿಭಟನೆಯನ್ನು ಅಲ್ಲಿನ ಬಿಜೆಪಿ ನಾಯಕರು ಬೆಂಬಲಿಸುವ ಮಾತುಗಳನ್ನಾಡಿದ್ದರು. ಮಹಿಳೆಯರ ದೇಗುಲ ಪ್ರವೇಶದ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸದ ಕಾಂಗ್ರೆಸ್‌, ಸುಪ್ರೀಂ ತೀರ್ಪಿನ ವಿರುದ್ಧವಾಗಿ ನಡೆಯುತ್ತಿರುವ ಪ್ರತಿಭಟನೆಗೆ ಪರೋಕ್ಷ ಸಮ್ಮತಿ ಸೂಚಿಸಿದೆ ಎನ್ನಲಾಗುತ್ತಿದೆ.

ವಿಪರ್ಯಾಸವೆಂದರೆ, ತೀರ್ಪನ್ನು ಗೌರವಿಸಬೇಕಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಪ್ರಾರ್ಥನೆಯ ಹಕ್ಕೆಂದರೆ ಅಪವಿತ್ರಗೊಳಿಸುವುದಲ್ಲ,” ಎಂದಿದ್ದಾರೆ. ಮುಂಬೈನಲ್ಲಿ ಮಂಗಳವಾರ ಮಾತನಾಡಿರುವ ಅವರು, “ಸುಪ್ರೀಂ ಕೋರ್ಟ್‌ ತೀರ್ಪನ್ನು ಪ್ರಶ್ನಿಸಲು ನನಗೆ ಯಾವ ಹಕ್ಕೂ ಇಲ್ಲ. ಆದರೆ, ಪ್ರಾರ್ಥನೆಯ ಹಕ್ಕು ಎಂದರೆ ಅಪವಿತ್ರಗೊಳಿಸುವುದಲ್ಲ. ರಕ್ತದ ಕಲೆ ಅಂಟಿರುವ ಸ್ಯಾನಿಟರಿ ಪ್ಯಾಡ್‌ ತೆಗೆದುಕೊಂಡು ಸ್ನೇಹಿತರ ಮನೆಯೊಳಗೆ ನಾವೂ ಪ್ರವೇಶಿಸಲಾಗುವುದಿಲ್ಲ. ಅದೇ ರೀತಿ ದೇವರು ನೆಲೆಸಿರುವ ಪ್ರವಿತ್ರ ಜಾಗಕ್ಕೂ ಪ್ರವೇಶವಿಲ್ಲ,” ಎಂದು ಪರೋಕ್ಷವಾಗಿ ಸುಪ್ರೀಂ ಕೋರ್ಟ್‌ ತೀರ್ಪನ್ನು ವಿರೋಧಿಸಿದ್ದಾರೆ.

ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳು, ಕೇರಳದಲ್ಲಿ ನಡೆಯುತ್ತಿರುವ ಸಂಘ-ಪರಿವಾರ ಪ್ರಾಯೋಜಿತ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಹಿಂದೆ ರಾಮಮಂದಿರ ವಿಚಾರದಲ್ಲಿ ಹೆಣೆದ ತಂತ್ರಗಳನ್ನೇ ಬಿಜೆಪಿ ಹಾಗೂ ಸಂಘ-ಪರಿವಾರ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಕೇರಳದಲ್ಲಿ ಅಸ್ತಿತ್ವವೇ ಇರದ ಬಿಜೆಪಿಗೆ ರಾಜಕೀಯ ನೆಲೆ ಕಂಡುಕೊಳ್ಳಲು ಶಬರಿಮಲೆ ವಿವಾದ ಬುನಾದಿಯಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ದೇಗುಲದೊಳಗೆ ಮಹಿಳೆಯರ ಪ್ರವೇಶಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಪಿಣರಾಯಿ ವಿಜಯನ್‌ ನೇತೃತ್ವದ ಸಿಪಿಐ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸುವ ನಿಟ್ಟಿನಲ್ಲಿ ಹಿಂದೂ ಪರ ಸಂಘಟನೆಗಳು ಕಾರ್ಯಗತವಾಗಿವೆ ಎಂಬ ಮಾತುಗಳೂ ಕೇಳಿಬಂದಿವೆ. ಇತ್ತ, ದೇಗುಲದೊಳಗೆ ಮಹಿಳೆಯರ ಪ್ರವೇಶವನ್ನು ಕಾಂಗ್ರೆಸ್‌ ಪಕ್ಷವೂ ಸ್ವಾಗತಿಸದಿರುವುದು ಪ್ರಗತಿಪರ ಹಾಗೂ ಎಡಪಂಥೀಯ ವಿಚಾರವಾದಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಇನ್ನು, ನಂಬಿಕೆ ಹಾಗೂ ಕಾನೂನು ನಡುವೆ ಸಂಘರ್ಷಗಳು ಉಂಟಾದಾಗ ಅದನ್ನು ಹೇಗೆ ಎದುರುಗೊಳ್ಳಬೇಕು ಎನ್ನುವ ವಿಚಾರದಲ್ಲಿಯೂ ಸಾಕಷ್ಟು ಅಭಿಪ್ರಾಯಭೇದಗಳು ಉಂಟಾಗಿವೆ. ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿರುವ ಗುಂಪುಗಳು ಕಾನೂನಾತ್ಮಕವಾಗಿಯೇ ನಮ್ಮ ಹೋರಾಟವನ್ನು ಮುಂದುವರಿಸಲು ಸೀಮಿತವಾಗದೆ, ಭಾವೋದ್ರೇಕದ ಹೋರಾಟಗಳಿಗೆ ಮುಂದಾಗಿರುವುದು ಆತಂಕಕಾರಿಯಾಗಿ ಪರಿಣಮಿಸಿದೆ. ನೆಲದ ಕಾನೂನಿಗಿಂತಲೂ ಧಾರ್ಮಿಕ ನಂಬಿಕೆಗಳೇ ಮುಖ್ಯವಾಗುವಂತಹ ಸನ್ನಿವೇಶ ಉದ್ಬವಿಸಿರುವುದು ಮುಂದಿನ ದಿನಗಳಲ್ಲಿ ಧರ್ಮ ಸಂಪ್ರದಾಯ, ಕಾನೂನು ಹಾಗೂ ವಿಚಾರಪರತೆಯ ನಡುವಿನ ಸುದೀರ್ಘ ಸಂಘರ್ಷಗಳಿಗೆ ಎಡೆಮಾಡಿಕೊಡಲಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನವೆಂಬರ್‌ 13ಕ್ಕೆ ನಿಗದಿಯಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More