ಸಿಬಿಐ ನಿರ್ದೇಶಕರ ವಿಚಾರವಾಗಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಾಯಕರ ಸಮರ 

ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸುವ ಬಗ್ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕು ಕೇಂದ್ರ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ನಾಯಕರು ಪ್ರಶ್ನಿಸಿದ್ದಾರೆ

ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ಕಡ್ಡಾಯ ರಜೆಗೆ ತೆರಳುವಂತೆ ಸೂಚಿಸಿರುವ ಕೇಂದ್ರದ ನಡೆಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಗುರುವಾರ ಮಾತನಾಡಿರುವ ಅವರು ಭ್ರಷ್ಟರನ್ನು ರಕ್ಷಿಸಲು ಸಿಬಿಐ ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರ ನಡೆಯು ಸಂವಿಧಾನ ವಿರೋಧಿಯಾಗಿದೆ ಎಂದಿರುವ ರಾಹುಲ್‌ ಗಾಂಧಿ, “ದೇಶದ ಎಲ್ಲ ಸರ್ಕಾರಿ ಸಂಸ್ಥೆಗಳು ಪ್ರಧಾನಿ ಮೋದಿ ಅವರ ಹಿಡಿತದಲ್ಲಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮೋದಿ ಮತ್ತು ಅವರ ತಂಡದ ಹಿತ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರೆದ ಅವರು, “ರಫೇಲ್‌ ಪ್ರಕರಣದಲ್ಲಿ ತಮ್ಮ ಸ್ನೇಹಿತ ಅನಿಲ್‌ ಅಂಬಾನಿ ಅವರು ಭ್ರಷ್ಟಾಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಬಲವಿತ್ತು. ರಫೇಲ್‌ ಪ್ರಕರಣದ ಸಂಪೂರ್ಣ ಸತ್ಯಗಳನ್ನು ಹೊರಹಾಕುವ ನಿಟ್ಟಿನಲ್ಲಿ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ಕಾರ್ಯಗತರಾಗಿದ್ದರು. ಸಿಬಿಐ ಸಮಿತಿಯು ರಫೇಲ್‌ ಪ್ರಕರಣದಲ್ಲಿ ಪ್ರಧಾನಿಯವರ ಪಾತ್ರವನ್ನು ಹೊರಹಾಕಲಿತ್ತು. ಇದು ರಾಜಕೀಯವಾಗಿ ಉಂಟು ಮಾಡಬಹುದಾದ ಪರಿಣಾಮಗಳ ಹಿನ್ನೆಲೆಯಲ್ಲಿ ತರಾತುರಿಯ ಕ್ರಮವಾಗಿ ಸಿಬಿಐ ನಿರ್ದೇಶಕರನ್ನು ಬದಲಿಸಲಾಗಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಪ್ರಧಾನಿ ಈಗ ಹೆದರಿದ್ದಾರೆ,” ಎಂದು ಮೋದಿಯವರ ಮೇಲೆ ಆರೋಪಗಳ ಸುರಿಮಳೆಗರೆದಿದ್ದಾರೆ.

“ಸಿಬಿಐ ನಿರ್ದೇಶಕರನ್ನು ಬದಲಾಯಿಸುವ ಅಥವಾ ಕಡ್ಡಾಯ ರಜೆಗೆ ಕಳಿಸುವ ಹಕ್ಕು ಪ್ರಧಾನಿ ಒಬ್ಬರಿಗೆ ಇರುವುದಿಲ್ಲ. ಪ್ರಧಾನ ಮಂತ್ರಿ, ಮುಖ್ಯನ್ಯಾಯಮೂರ್ತಿ, ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ಮೂಲಕ ಸಿಬಿಐ ನಿರ್ದೇಶಕರ ಬದಲಾವಣೆ ನಿರ್ಧಾರ ಕೈಗೊಳ್ಳಬೇಕು. ಸಮಿತಿಯಲ್ಲಿ ಪ್ರತಿಪಕ್ಷದ ನಾಯಕ ಇರುತ್ತಾರೆ. ಆದರೆ, ಸಿಬಿಐ ನಿರ್ದೇಶಕರ ಕಡ್ಡಾಯ ರಜೆ ವಿಚಾರದಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಂದ್ರ ಸರ್ಕಾರ ಅವರು ಸಂಪರ್ಕಿಸಿಲ್ಲ. ಆ ಮೂಲಕ ಪ್ರಧಾನಿ ಮೋದಿ ದೇಶದ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ,” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆಗೆ ಕಳುಹಿಸಿದ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿಯವರಿಗೆ ಮೂರು ಪುಟದ ಪತ್ರ ಬರೆದಿದ್ದಾರೆ. ಸಿಬಿಐ ನಿರ್ದೇಶಕರೊಂದಿಗೆ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯನ್ನು ಪ್ರಶ್ನಿಸಿರುವ ಖರ್ಗೆ, “ಸಿಬಿಐ ನಿರ್ದೇಶಕರನ್ನು ಕಡ್ಡಾಯ ರಜೆಯ ಮೇಲೆ ಕಳಿಸುವ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕು ಕೇಂದ್ರ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರ ಯಾವ ಆಧಾರದ ಮೇಲೆ ಈ ನಿರ್ಧಾರ ಕೈಗೊಂಡಿತು,” ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಈ ಸಂಬಂಧ ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, “ಪ್ರಧಾನಿ ಮೋದಿ ಅವರು ರಾತ್ರಿ ವೇಳೆಯಲ್ಲಿ ನಿದ್ರಾಹೀನರಾಗುತ್ತಿದ್ದಾರೆ. ನಡು ರಾತ್ರಿಯಲ್ಲಿ ಸಿಬಿಐ ನಿರ್ದೇಶಕನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ, ನೂತನ ಹಂಗಾಮಿ ನಿರ್ದೇಶಕರೊಬ್ಬರನ್ನು ನೇಮಿಸಿದ್ದಾರೆ. ಕಡ್ಡಾಯ ರಜೆ ಮೇಲೆ ತೆರಳಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ರಫೇಲ್‌ ಪ್ರಕರಣದ ಬಗೆಗಿನ ಮಾಹಿತಿ, ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದರು. ಆ ವಿಚಾರ ಪ್ರಧಾನಿ ಮೋದಿ ಅವರನ್ನು ನಿದ್ರಾಹೀನರಾಗುವಂತೆ ಮಾಡಿದೆ,” ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಸಿಬಿಐ ನಿರ್ದೇಶಕರಿಗೆ ಕಡ್ಡಾಯ ರಜೆ ಕೊಟ್ಟು ಹಂಗಾಮಿ ನಿರ್ದೇಶಕರ ನೇಮಿಸಿದ ಕೇಂದ್ರ

ತಲ್ಲಣ ಸೃಷ್ಟಿಸಿದ ಗುಪ್ತಚರ ಅಧಿಕಾರಿಗಳ ಗೂಢಚಾರ ವಿಚಾರ!

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕರ ನಿವಾಸ ಸಮೀಪ ಅನುಮಾನಾಸ್ಪದ ವ್ಯಕ್ತಿಗಳನ್ನು ಗುರುವಾರ ಮುಂಜಾನೆ ಬಂಧಿಸಿದ ವಿಚಾರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೆಹಲಿಯ ಜನಪಥ ರಸ್ತೆ ಬಳಿ ಇರುವ ಅಲೋಕ್‌ ವರ್ಮಾ ಮನೆಯ ಮುಂದೆ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದ ಭದ್ರತಾ ಸಿಬ್ಬಂದಿ ಅವರನ್ನು ದೆಹಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬಂಧಿತರಾದ ವ್ಯಕ್ತಿಗಳು ತಮ್ಮ ಇಲಾಖೆಗೆ ಸೇರಿದವರೆಂದು ಗುಪ್ತಚರ ಇಲಾಖೆ ತಿಳಿಸಿದ್ದು, ಅವರು ಗೂಢಚಾರಿಕೆಯಲ್ಲಿ ತೊಡಗಿರಲಿಲ್ಲವೆಂದು ಸ್ಪಷ್ಟನೆ ನೀಡಿದೆ. ಬಂಧಿತ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ ನಂತರ ದೆಹಲಿ ಪೊಲೀಸರು ಬಿಡುಗಡೆಗೊಳಿಸಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರ ರಾಜಧಾನಿಯ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಗುಪ್ತಚರ ಇಲಾಖೆಯು ಗಸ್ತು ತಿರುಗಲು ನಿಯಮಿತವಾಗಿ ಅಧಿಕಾರಿಗಳನ್ನು ನೇಮಿಸಿರುತ್ತದೆ. ಆ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಟ್ಟಿರುವ ನಾಲ್ವರು ಗುಪ್ತಚರ ಇಲಾಖೆಯ ಅಧಿಕಾರಿಗಳು ಗೂಢಚರ್ಯೆ ಮಾಡಲು ಅಲೋಕ್‌ ವರ್ಮಾ ಮನೆಯ ಮುಂದೆ ಕಾಣಿಸಿಕೊಂಡಿಲ್ಲ. ಹಾಗೇನಾದರೂ ಇದ್ದರೆ ಅವರೇಕೆ ತಮ್ಮ ಬಳಿ ಗುರುತಿನ ಚೀಟಿ (ಐಡಿ ಕಾರ್ಡ್‌)ಗಳನ್ನು ಇಟ್ಟುಕೊಂಡಿರುತ್ತಿದ್ದರು ಎಂದು ಗೃಹ ಸಚಿವಾಲಯ ಪ್ರಶ್ನಿಸಿದೆ.

ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕರ ಮನೆಯ ಮುಂದೆ ಯಾವ ಕಾರಣಕ್ಕೆ ಗುಪ್ತಚರ ಇಲಾಖೆ ಅಧಿಕಾರಿಗಳು ಕಾಣಿಸಿಕೊಂಡರು, ಭದ್ರತಾ ಸಿಬ್ಬಂದಿಗೆ ಅವರ ಮೇಲೆ ಸಂಶಯ ಮೂಡಲು ಕಾರಣವೇನು ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್‌ ಎತ್ತಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಐಸಿಸಿ ವಕ್ತಾರ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು, “ಸಿಬಿಐ ಸಂಸ್ಥೆಯನ್ನು ಕೇಂದ್ರ ತನಿಖಾ ಸಮಾಧಿ (ಸೆಂಟ್ರಲ್‌ ಬರಿಯಲ್‌ ಆಫ್‌ ಇನ್ವೆಸ್ಟಿಗೇಶನ್‌) ಮಾಡಿದ ನಂತರ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಹೊಸ ಕೀಳುಮಟ್ಟದ ಕೆಲಸವೊಂದಕ್ಕೆ ಕೈ ಹಾಕಿದೆ. ಗುಪ್ತಚರ ಇಲಾಖೆಯಿಂದ ಕಡ್ಡಾಯ ರಜೆಯಲ್ಲಿರುವ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರ ಮೇಲೆ ಗೂಢಚರ್ಯೆ ನಡೆಸಿದೆ. ಸಿಬಿಐ ಸಂಸ್ಥೆಯನ್ನು ದುರುಪಯೋಗ ಪಡಿಸಿಕೊಂಡ ರೀತಿಯಲ್ಲಿಯೇ ಗುಪ್ತಚರ ಇಲಾಖೆಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುವುದರ ಬಗೆಗಿನ ಎಚ್ಚರಿಕೆಯ ಕರೆಗಂಟೆ ಇದಾಗಿದೆ,” ಎಂದು ಟ್ವಿಟ್‌ ಮೂಲಕ ತಿಳಿಸಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More