ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?

ಎಐಎಡಿಎಂಕೆ ೧೮ ಶಾಸಕರ ಅನರ್ಹತೆ ನಿರ್ಧಾರವನ್ನು ಮದ್ರಾಸ್‌ ಹೈಕೋರ್ಟ್‌ ಎತ್ತಿ ಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಸದ್ಯಕ್ಕೆ ಪಳನಿಸ್ವಾಮಿ ನೇತೃತ್ವದ ಸರ್ಕಾರ ತೂಗುಗತ್ತಿಯಿಂದ ಪಾರಾದರೂ ಕಂಟಕ ತಪ್ಪಿದ್ದಲ್ಲ. ೨೦ ಕ್ಷೇತ್ರಗಳಿಗೆ ನಡೆವ ಉಪಚುನಾವಣೆಯು ಸರ್ಕಾರದ ಭವಿಷ್ಯ ನಿರ್ಧರಿಸಲಿದೆ ಎನ್ನಲಾಗಿದೆ

ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದ ನಂತರ ತಮಿಳುನಾಡು ಆಡಳಿತಾರೂಢ ಎಐಎಡಿಎಂಕೆಯಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ನಾಟಕೀಯ ಬೆಳವಣಿಗೆಗಳ ಸಾಲಿಗೆ ಗುರುವಾರ ಮತ್ತೊಂದು ಪ್ರಮುಖ ಅಧ್ಯಾಯ ಸೇರ್ಪಡೆಯಾಗಿದೆ. ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ಕಾರದ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದ ೧೮ ಎಐಎಡಿಎಂಕೆ ಶಾಸಕರನ್ನು ಅನರ್ಹಗೊಳಿಸಿದ್ದ ವಿಧಾನಸಭಾ ಸ್ಪೀಕರ್‌ ಪಿ ಧನಪಾಲ್‌ ಆದೇಶವನ್ನು ಮದ್ರಾಸ್ ಹೈಕೋರ್ಟ್‌ ಎತ್ತಿ ಹಿಡಿಯುವ ಮೂಲಕ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಜೈಲು ಪಾಲಾಗಿರುವ ಶಶಿಕಲಾ ನಟರಾಜನ್‌ ಸಂಬಂಧಿ ಟಿ ಟಿ ವಿ ದಿನಕರನ್‌ ಗುಂಪಿಗೆ ತೀವ್ರ ಮುಖಭಂಗವಾಗಿದ್ದು, ಪಳನಿಸ್ವಾಮಿ ಸರ್ಕಾರಕ್ಕೆ ಬಲಬಂದಿದೆ. ಮದ್ರಾಸ್‌ ಹೈಕೋರ್ಟ್ ಇತಿಹಾಸದಲ್ಲೇ ಇದು ವಿರಳ ತೀರ್ಪಾಗಿದ್ದು, ಪಳನಿಸ್ವಾಮಿ ಸರ್ಕಾರವು ತಕ್ಷಣಕ್ಕೆ ತೂಗುಗತ್ತಿಯಿಂದ ಪಾರಾಗಿದೆ. ಆದರೆ, ದ್ರಾವಿಡ ರಾಜಕಾರಣದ ನೆಲೆದಲ್ಲಿ ಮುಂದಿನ ದಿನಗಳಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮದ್ರಾಸ್ ಹೈಕೋರ್ಟ್‌ ಆದೇಶವನ್ನು ಟಿ ಟಿ ವಿ ದಿನಕರನ್ ಬಳಗವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಕ್ಷೀಣ ಎನ್ನಲಾಗಿದೆ. ಹೈಕೋರ್ಟ್‌ನಲ್ಲಿ ವಿರುದ್ಧ ತೀರ್ಪು ಪಡೆದಿರುವ ದಿನಕರನ್ ಗುಂಪು ಸುಪ್ರೀಂಕೋರ್ಟ್‌ನಲ್ಲೂ ಹಿನ್ನಡೆ ಅನುಭವಿಸುವ ಮೂಲಕ ಆತ್ಮಹತ್ಯಾಕಾರಿ ಸನ್ನಿವೇಶ ನಿರ್ಮಾಣ ಮಾಡಿಕೊಳ್ಳುವ ಇರಾದೆ ಹೊಂದಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ೧೮ ವಿಧಾನಸಭಾ ಕ್ಷೇತ್ರಗಳೂ ಒಳಗೊಂಡಂತೆ ಒಟ್ಟಾರೆ ೨೦ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಆರು ತಿಂಗಳ ಒಳಗಾಗಿ ಚುನಾವಣಾ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ.

ಮದ್ರಾಸ್‌ ಹೈಕೋರ್ಟ್‌ ಆದೇಶಕ್ಕೆ ಪ್ರತಿಕ್ರಿಯಿಸಿರುವ ಟಿ ಟಿ ವಿ ದಿನಕರನ್‌ “ರಾಜಕೀಯದಲ್ಲಿ ಹಿನ್ನಡೆ ಎಂಬುದು ಇರುವುದಿಲ್ಲ. ಇದು ನಮಗೆ ಅನುಭವವಷ್ಟೆ. ನಮ್ಮ ಪರವಾಗಿ ತೀರ್ಪು ಬರಬಹುದು ಎಂದು ಭಾವಿಸಿದ್ದೆವು. ಆದರೆ, ತದ್ವಿರುದ್ಧವಾದ ತೀರ್ಪನ್ನು ಕೋರ್ಟ್‌ ನೀಡಿದೆ. ಅನರ್ಹಗೊಂಡಿರುವ ೧೮ ಶಾಸಕರು ಕೈಗೊಳ್ಳುವ ನಿರ್ಣಯಕ್ಕೆ ಬೆಂಬಲವಾಗಿ ಅಮ್ಮ ಮಕ್ಕಳ ಮುನ್ನೇತ್ರ ಕಳಗಂ (ಎಎಂಎಂಕೆ) ನಿಲ್ಲಲಿದೆ. ಅನರ್ಹ ಶಾಸಕರು ಮದ್ರಾಸ್ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾದರೆ ಅದಕ್ಕೂ ಬೆಂಬಲ ನೀಡಲಾಗುವುದು” ಎಂದಿದ್ದಾರೆ.

ಟಿ ಟಿ ವಿ ದಿನಕರನ್‌ ಜೊತೆ ಗುರುತಿಸಿಕೊಳ್ಳುವ ಮೂಲಕ ಪಳನಿಸ್ವಾಮಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ೧೮ ಎಐಎಡಿಎಂಕೆ ಶಾಸಕರನ್ನು ೨೦೧೭ರ ಸೆಪ್ಟೆಂಬರ್‌ ೧೮ರಂದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್‌ ಧನಪಾಲ್‌ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠವು ಜೂನ್‌ ೧೪ರಂದು ಭಿನ್ನ ತೀಪು ಪ್ರಕಟಿಸಿತ್ತು. ಹಾಲಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹಾಗೂ ಮದ್ರಾಸ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಇಂದಿರಾ ಬ್ಯಾನರ್ಜಿ ಅವರು ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದ್ದರು. ಆದರೆ, ದ್ವಿಸದಸ್ಯ ಪೀಠದ ಮತ್ತೊಬ್ಬ ನ್ಯಾಯಮೂರ್ತಿ ಎಂ ಸುಂದರ್‌ “ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿ ಸ್ಪೀಕರ್ ನಡೆದುಕೊಂಡಿದ್ದಾರೆ” ಎಂದು ತೀರ್ಮಾನವನ್ನು ಬದಿಗೆ ಸರಿಸಿದ್ದರು. ದ್ವಿಸದಸದ್ಯ ಪೀಠದಲ್ಲಿ ದ್ವಂದ್ವ ನಿರ್ಣಯ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮೂರನೇ ನ್ಯಾಯಮೂರ್ತಿ ಎಸ್‌ ವಿಮಲಾ ವಿಚಾರಣೆಗೆ ವಹಿಸಲಾಗಿತ್ತು. ವಿಮಲಾ ಅವರ ನೇಮಕ ಪ್ರಶ್ನಿಸಿ ಶಾಸಕರೊಬ್ಬರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರಿಂದ ಎಂ ಸತ್ಯನಾರಾಯಣ ಅವರಿಗೆ ಪ್ರಕರಣದ ವಿಚಾರಣೆ ವರ್ಗಾಯಿಸಲಾಗಿತ್ತು.

ಕಳೆದ ವರ್ಷದ ಆಗಸ್ಟ್‌ನಲ್ಲಿ ದಿನಕರನ್‌ಗೆ ನಿಷ್ಠರಾದ ಎಐಎಡಿಎಂಕೆಯ ೧೮ ಶಾಸಕರು ಮುಖ್ಯಮಂತ್ರಿ ಪಳನಿಸ್ವಾಮಿ ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ಅಂದಿನ ರಾಜ್ಯಪಾಲರಾದ ವಿದ್ಯಾಸಾಗರ ರಾವ್‌ ಅವರಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ್ದರು. ಈ ಶಾಸಕರ ನಡೆಯನ್ನು ಮುಂದಿಟ್ಟುಕೊಂಡು ಎಐಎಡಿಎಂಕೆ ಮುಖ್ಯ ಸಚೇತಕ ಎಸ್‌ ರಾಜೇಂದ್ರನ್ ಅವರು ಸ್ವೀಕರ್ ಪಿ ಧನಪಾಲ್‌ಗೆ ೧೮ ಶಾಸಕರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಅವರ ಶಾಸಕತ್ವ ಅನರ್ಹಗೊಳಿಸುವಂತೆ ಮನವಿ ಮಾಡಿದ್ದರು. ರಾಜೇಂದ್ರನ್‌ ಮನವಿ ಪುರಸ್ಕರಿಸಿದ್ದ ಸ್ಪೀಕರ್ ಧನಪಾಲ್‌ ೧೮ ಮಂದಿ ಶಾಸಕರ ವಿಧಾನಸಭಾ ಸದಸ್ಯತ್ವವನ್ನು ಕಳೆದ ಸೆಪ್ಟೆಂಬರ್‌ನಲ್ಲಿ ವಜಾಗೊಳಿಸಿದ್ದರು. ಈ ಸಂಬಂಧ ೨೦೧೭ರ ಸೆಪ್ಟೆಂಬರ್ ೧೮ರಂದು ಗೆಜೆಟ್‌ ಅಧಿಸೂಚನೆಯನ್ನೂ ಪ್ರಕಟಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨೦ರಂದು ಉಪಚುನಾವಣೆ ನಡೆಸುವ ಸಂಬಂಧ ಅಧಿಸೂಚನೆ ಹೊರಡಿಸುವುದಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಆದರೆ, ಶಾಸಕರ ಅನರ್ಹತೆ ಆದೇಶ ತಡೆ ಹಿಡಿಯಲು ನಿರಾಕರಿಸಿತ್ತು. ಎಎಂಎಂಕೆ ನಾಯಕ ಹಾಗೂ ಎಐಎಡಿಎಂಕೆ ಉಚ್ಚಾಟಿತ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ ಅವರಿಗೆ ನಿಷ್ಠರಾದ ೧೮ ಶಾಸಕರು ಸ್ವಇಚ್ಛೆಯಿಂದ ವಿಧಾನಸಭಾ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದನ್ನು ಆಧಾರವಾಗಿರಿಸಿಕೊಂಡು ಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ : ಕರುಣಾನಿಧಿ ನಿರ್ಗಮನ: ಬದಲಾಗಲಿದೆಯೇ ದ್ರಾವಿಡ ಚಳವಳಿಯ ರಾಜಕೀಯ ವ್ಯಾಕರಣ?

ಡಿಎಂಕೆ ವರಿಷ್ಠರಾಗಿದ್ದ ಎಂ ಕರುಣಾನಿಧಿ ಮರಣದ ಹಿನ್ನೆಲೆಯಲ್ಲಿ ತಿರುವರೂರು ಹಾಗೂ ಎಐಎಡಿಎಂಕೆ ಶಾಸಕರಾಗಿದ್ದ ಎ ಕೆ ಬೋಸ್‌ ನಿಧನದ ಹಿನ್ನೆಲೆಯಲ್ಲಿ ತಿರುಪ್ಪರಾಂಕುಡ್ರಂ ಕ್ಷೇತ್ರ ತೆರವಾಗಿವೆ. ೧೮ ಶಾಸಕರು ಅನರ್ಹರಾಗಿರುವುದರಿಂದ ಒಟ್ಟಾರೆ ೨೦ ವಿಧಾನಸಭಾ ಕ್ಷೇತ್ರಗಳಿಗೆ ಜನಪ್ರತಿನಿಧಿಗಳಿಲ್ಲವಾಗಿದ್ದಾರೆ. ತಮಿಳುನಾಡು ವಿಧಾನಸಭೆಯು ೨೩೪ ಶಾಸಕರ ಬಲವನ್ನು ಹೊಂದಿದ್ದು, ಸರಳ ಬಹುಮತಕ್ಕೆ ೧೧೮ ಶಾಸಕರ ಬೆಂಬಲ ಅಗತ್ಯವಾಗಿದೆ. ಈಗ ೨೦ ಶಾಸಕರ ಸ್ಥಾನ ಖಾಲಿಯಾಗಿರುವುದರಿಂದ ಸರಳ ಬಹುಮತವು ೧೦೮ಕ್ಕೆ ಕುಸಿದಿದೆ. ಆಡಳಿತರೂಢ ಎಐಎಡಿಎಂಕೆ ೧೧೬ ಶಾಸಕರ ಬಲಹೊಂದಿದ್ದು, ಬಹುಮತದ ತೂಗುಗತ್ತಿಯಿಂದ ಪಾರಾಗಿದೆ. ಎಂ ಕೆ ಸ್ಟಾಲಿನ್‌ ನೇತೃತ್ವದ ವಿರೋಧ ಪಕ್ಷಗಳು ೯೮ ಶಾಸಕರ ಬಲ ಹೊಂದಿವೆ.

ಉಪಚುನಾವಣೆಯು ಪಳನಿಸ್ವಾಮಿ ನೇತೃತ್ವದ ಸರ್ಕಾರಕ್ಕೆ ಮಹತ್ವದ ಸವಾಲಾಗಲಿದೆ. ೨೦ ಸ್ಥಾನಗಳನ್ನು ಎಐಎಡಿಎಂಕೆ ಕಳೆದುಕೊಂಡರೆ ಪಳನಿಸ್ವಾಮಿ ಸರ್ಕಾರ ಪತನವಾಗಲಿದೆ. ಸರ್ಕಾರದ ಬಗೆಗೆ ಜನರು ಹೊಂದಿರುವ ಅಭಿಪ್ರಾಯ ಹಾಗೂ ಎಐಎಡಿಎಂಕೆ ಭವಿಷ್ಯವನ್ನು ಉಪಚುನಾವಣೆ ನಿರ್ಧರಿಸಲಿದೆ. ಈ ಹಿಂದೆ ಜಯಲಲಿತಾ ನಿಧನದ ನಂತರ ಅವರು ಪ್ರತಿನಿಧಿಸುತ್ತಿದ್ದ ಆರ್‌ ಕೆ ನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಟಿ ಟಿ ವಿ ದಿನಕರನ್‌ ಅಭೂತಪೂರ್ವ ಗೆಲುವು ದಾಖಲಿಸಿದ್ದರು. ಇದರಿಂದ ಆಡಳಿತಾರೂಢ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಬಣಗಳಿಗೆ ಭಾರಿ ಮುಖಭಂಗವಾಗಿದ್ದನ್ನು ನೆನೆಯಬಹುದಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
Editor’s Pick More