ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!

ತಮ್ಮ ಮೇಲೆ #MeToo ಆರೋಪ ಬಂದ ಮೇಲೆ ಸದಾನಂದ ಗೌಡರು ಬಹಳ ಬೇಸರದಲ್ಲಿದ್ದಾರೆ. ಆರೋಪ ಹೊರಿಸಿದ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನಸ್ಸಿದ್ದರೂ, ಪ್ರಕರಣವನ್ನು ತಾವೇ ಬೆಳೆಸುವುದು ಬೇಡ ಎಂದು ಮೌನವಾಗಿದ್ದಾರೆ ಎನ್ನಲಾಗುತ್ತಿದೆ

ಇತ್ತೀಚೆಗೆ ದೇವೇಗೌಡರು ಮತ್ತು ಸಿದ್ದರಾಮಯ್ಯ ನಡೆಸಿದ ಜಂಟಿ ಸುದ್ದಿಗೋಷ್ಠಿ ಜೋರಾಗಿ ಸದ್ದು ಮಾಡಿತು. ಬಹುತೇಕ ಮಾಧ್ಯಮಗಳು 'ಗುರು-ಶಿಷ್ಯರ ಸಮಾಗಮ’ ಎಂಬಂತೆ ವರದಿ ಮಾಡಿದವು. ಆದರೆ, 'ದೇವೇಗೌಡರು ತಮ್ಮ ರಾಜಕೀಯ ಗುರು' ಎನ್ನುವುದನ್ನು ಸಿದ್ದರಾಮಯ್ಯ ಸುತಾರಾಂ ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ದೆಹಲಿ ಪತ್ರಕರ್ತರ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. "ನಾನು ಚಳವಳಿಗಳ ಮೂಲಕ ಬಂದವನು. ಮೊದಲ ಬಾರಿ ಶಾಸಕ ಆದಾಗ ದೇವೇಗೌಡರು ನನ್ನೊಂದಿಗಿರಲಿಲ್ಲ. ನನ್ನನ್ನು ಮೊದಲ ಸಲ ಮಂತ್ರಿ ಮಾಡಿದ್ದು ರಾಮಕೃಷ್ಣ ಹೆಗಡೆ. ಆಮೇಲೂ ನಾನು ಬಹಳ ದಿನ ಹೆಗಡೆ ಅವರೊಂದಿಗೇ ಇದ್ದೆ. ಪಶುಸಂಗೋಪನಾ ಸಚಿವನಾಗಿದ್ದಾಗ ನನಗಾಗದ ಅಧಿಕಾರಿಯೊಬ್ಬರನ್ನು ರಾಮಕೃಷ್ಣ ಹೆಗಡೆ ಕೆಎಂಎಫ್‌ಗೆ ನೇಮಕ ಮಾಡಿದರು. ನಾನು ವಿನಂತಿ ಮಾಡಿಕೊಂಡರೂ ಅವರ ನಿಲುವು ಬದಲಾಗಲಿಲ್ಲ. ಆಗ ವಿರೋಧ ವ್ಯಕ್ತಪಡಿಸಿದೆ. ಹಾಗಂತ ದೇವೇಗೌಡರ ಜೊತೆ ಕೈಜೋಡಿಸಿರಲಿಲ್ಲ. ಆಮೇಲೆ, ಹೆಗಡೆ ವಿರುದ್ಧ ಸಮರ ಸಾರಿದ ದೇವೇಗೌಡರೇ ಬೆಂಬಲ ಕೋರಿದರು. ಆಗಲೂ ತಟಸ್ಥನಾಗಿದ್ದೆ. ಯಾವಾಗ ಹೆಗಡೆ ಸಂಯುಕ್ತ ಜನತಾದಳ ಮಾಡಿಕೊಂಡು ಬಿಜೆಪಿಗೆ ಬೆಂಬಲ ನೀಡಲು ಮುಂದಾದರೋ ಆಗ, ಬಿಜೆಪಿ ವಿರೋಧಿಯಾದ ನಾನು ಮತ್ತು ದೇವೇಗೌಡರು ಜೊತೆಯಾಗಿ ಜಾತ್ಯತೀತ ಜನತಾದಳ ಪಕ್ಷ ಕಟ್ಟಿದೆವು; ಅವರು ಅಧ್ಯಕ್ಷರಾದರು, ನಾನು ಪ್ರಧಾನ ಕಾರ್ಯದರ್ಶಿಯಾದೆ. ಹೀಗೆ ಜೊತೆಯಾಗಿ ಕೆಲಸ ಮಾಡಿದ್ದೇವೆಯೇ ವಿನಾ ಗುರು-ಶಿಷ್ಯರಲ್ಲ,” ಎಂದಿದ್ದರು ಸಿದ್ದರಾಮಯ್ಯ.

ದೇವೇಗೌಡರು ಮುಖ್ಯಮಂತ್ರಿ ಆದಾಗ ಮಂತ್ರಿಮಂಡಲ ರಚಿಸುವುದಕ್ಕೂ ಸಿದ್ದರಾಮಯ್ಯ ಅವರ ಸಹಕಾರ ಪಡೆದಿದ್ದರಂತೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು, ಯಾರಿಗೆ ಯಾವ ಖಾತೆ ಕೊಡಬೇಕೆಂಬುದನ್ನು ಬಹುತೇಕ ಸಿದ್ದರಾಮಯ್ಯ ಸಲಹೆ ಮೇರೆಗೆ ಮಾಡಿದ್ದರಂತೆ ದೇವೇಗೌಡರು. ಆದರೆ, ಸಿದ್ದರಾಮಯ್ಯಗೆ ಯಾವ ಖಾತೆ ಕೊಡಬೇಕೆಂಬುದನ್ನು ಮಾತ್ರ ದೇವೇಗೌಡರೇ ನಿಶ್ಚಯಿಸಿದ್ದರಂತೆ. ಸಿದ್ದರಾಮಯ್ಯ ಕಂದಾಯ ಇಲಾಖೆಯೇ ಬೇಕೆಂದು ಪಟ್ಟು ಹಿಡಿದಿದ್ದರಂತೆ. ದೇವೇಗೌಡರು, ಹಣಕಾಸು ಇಲಾಖೆಯನ್ನೇ ತೆಗೆದುಕೊಳ್ಳಬೇಕೆಂದು ಹಠ ಮಾಡಿದರಂತೆ. "ಹಣಕಾಸು ಇಲಾಖೆ ನಂಬಿಕಸ್ಥರ ಕೈಯಲ್ಲಿರಬೇಕು,” ಎಂದು ಸಿದ್ದರಾಮಯ್ಯ ಅವರನ್ನು ಒಪ್ಪಿಸಿದ್ದರಂತೆ.

ಕುಮಾರಸ್ವಾಮಿ ರಾಜಕೀಯಕ್ಕೆ ಬರುವವರೆಗೂ ದೇವೇಗೌಡ-ಸಿದ್ದರಾಮಯ್ಯ ಸಂಬಂಧ ಹಳಸಿರಲಿಲ್ಲವಂತೆ. "ದೇವೇಗೌಡರು ಮುಖ್ಯಮಂತ್ರಿ ಗಾದಿ ಬಿಟ್ಟು ಪ್ರಧಾನಿಯಾದಾಗ ಅರ್ಹತೆ ಆಧಾರದ ಮೇಲೆಯೇ ಮುಖ್ಯಮಂತ್ರಿ ಸ್ಥಾನ ಕೇಳಿದ್ದೆ. ತಪ್ಪಿಸಲು ಬಹಳ ಜನ ಕೆಲಸ ಮಾಡಿದ್ದರು. ಅದರಲ್ಲಿ ಕುಮಾರಸ್ವಾಮಿ ಪಾತ್ರ ಕನಿಷ್ಠ ಮಟ್ಟದಲ್ಲಿತ್ತು. ಎರಡನೇ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಅವಕಾಶ ಬಂದಿತ್ತು. ಆಗ ಆ ಅವಕಾಶವನ್ನು ತಪ್ಪಿಸುವುದರಲ್ಲಿ ಕುಮಾರಸ್ವಾಮಿ ಪಾತ್ರವೇ ಪ್ರಮುಖವಾಗಿತ್ತು. ಬಳಿಕ ಯಾವ ಕಾರಣಕ್ಕೆ ಎನ್ನುವುದು ಸಾಬೀತಾಯಿತು," ಎಂದು ಸಿದ್ದರಾಮಯ್ಯ ಇತಿಹಾಸವನ್ನು ಮೆಲುಕು ಹಾಕಿದ್ದರು.

ಎರಡು ಬಾರಿ ಮುಖ್ಯಮಂತ್ರಿ ಗಾದಿ ತಪ್ಪಿಸಿದ್ದರೂ ಖಾಸಗಿ ಮಾತುಕತೆಗಳ ನಡುವೆಯೂ ದೇವೇಗೌಡರ ಬಗ್ಗೆ ಸಿದ್ದರಾಮಯ್ಯ ಏಕವಚನ ಬಳಸುವುದಿಲ್ಲ. ಆಡಳಿತದ ವಿಚಾರದಲ್ಲಿ ರಾಮಕೃಷ್ಣ ಹೆಗಡೆಗೆ ಫುಲ್ ಮಾರ್ಕ್ಸ್ ನೀಡುವ ಸಿದ್ದರಾಮಯ್ಯ, "ಪೊಲಿಟಿಕಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ದೇವೇಗೌಡರಿಗೆ ಸರಿಸಾಟಿಯಿಲ್ಲ,” ಎನ್ನುತ್ತಾರೆ.

ಸದಾನಂದ ಗೌಡರಿಗೆ ತುಂಬಾ ಬೇಸರವಾಗಿದೆಯಂತೆ

ತಮ್ಮ ವಿರುದ್ಧ #MeToo ಆರೋಪ ಕೇಳಿಬಂದಿದ್ದರಿಂದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡರಿಗೆ ತುಂಬಾ ಬೇಸರವಾಗಿದೆಯಂತೆ. ಆರೋಪ ಮಾಡಿದ ಮಾದರಿ ವಿರುದ್ಧ ಕಾನೂನು ಹೋರಾಟ ಮಾಡಲು ಆಲೋಚಿಸಿ ಕಡೆಗೆ ಕೈಬಿಟ್ಟರಂತೆ. ಏಕೆಂದರೆ, “ಸದ್ಯಕ್ಕೆ ಪ್ರಕರಣ ಇಷ್ಟಕ್ಕೆ ನಿಂತಿದೆ. ನಾನೇ ಏಕೆ ಬೆಳಸಲಿ?” ಎಂದು. ಒಂದೊಮ್ಮೆ ಆರೋಪ ಮಾಡಿರುವ ಮಹಿಳೆ ಇನ್ನು ಒಂದು ಹೆಜ್ಜೆ ಮುಂದಿಟ್ಟಿದ್ದರೂ ಸದಾನಂದ ಗೌಡರು ನ್ಯಾಯಾಲಯದ ಮೊರೆಹೋಗುತ್ತಿದ್ದರಂತೆ. ಆದಾಗಲೇ ಕಾನೂನು ತಜ್ಞರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದರಂತೆ.

ಒಂದು ಸುದ್ದಿವಾಹಿನಿಯವರು ನಿರಂತರವಾಗಿ ಸದಾನಂದ ಗೌಡರ ವಿರುದ್ದ ಸುಳ್ಳು ಸುದ್ದಿ ಮಾಡಿದರಂತೆ. ಶಿವಾನಂದ ನಾಯಕ್ ಹೆಸರು ಹಾಕಿ ಸದಾನಂದ ಗೌಡರ ಫೋಟೋ ತೋರಿಸುತ್ತಿದ್ದರಂತೆ. ಇಷ್ಟಬಂದಂತೆ ಸುದ್ದಿ ಮಾಡಿದ ಮೇಲೆ ಆ ವಾಹಿನಿಯ ಮಾಲೀಕ ಕರೆ ಮಾಡಿ ಕ್ಷಮೆ ಕೇಳಿದರಂತೆ.

ಇದನ್ನೂ ಓದಿ : ಚಾಣಕ್ಯಪುರಿ | ಮೂರೂ ಪಕ್ಷಗಳಲ್ಲಿ ಬೆಂಗಳೂರು ಉತ್ತರಕ್ಕಾಗಿ ಭಾರಿ ಬೇಡಿಕೆ

ಖಡ್ಗೆ ನಹೀ, ಖರ್ಗೆ ಬೋಲೋ...

“ಕನ್ವರ್ ನಹೀ, ಕನ್ವರ್ ಲಾಲ್ ಬೋಲೋ...” ಎಂಬ 'ಅಂತ’ ಸಿನಿಮಾ ಡೈಲಾಗ್ ಕೇಳಿರುತ್ತೀರಾ. ಆಲ್ ಮೋಸ್ಟ್ ಇದೇ ಧಾಟಿಯಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ದೆಹಲಿ ಪತ್ರಕರ್ತರಿಗೆ, “ಖಡ್ಗೆ ನಹೀ, ಖರ್ಗೆ ಬೋಲೋ...” ಎಂದು ಗುಡುಗಿದರು. ರಾಷ್ಟ್ರೀಯ ಮಾಧ್ಯಮದ ಬಹುತೇಕ ಪತ್ರಕರ್ತರಿಗೆ, ಅದರಲ್ಲೂ ಇಂಗ್ಲೀಷ್ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವವರಿಗೂ ಖರ್ಗೆ ಹೆಸರನ್ನು ‘ಖರ್ಗೆ’ ಎಂದು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ. ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿ ಹೇಳಿ ಸುಸ್ತಾಗಿಬಿಟ್ಟಿದ್ದಾರೆ.

ಇತ್ತೀಚೆಗೆ ಸಿಬಿಐ ನಿರ್ದೇಶಕರನ್ನು ರಾತ್ರೋರಾತ್ರಿ ರಜೆಯ ಮೇಲೆ ಕಳುಹಿಸಿದ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಖರ್ಗೆ ಕೂಡ ಸಿಬಿಐ ನಿರ್ದೇಶಕರನ್ನು ಆಯ್ಕೆ ಮಾಡುವ ಉನ್ನತ ಮಟ್ಟದ ಸಮಿತಿಯ ಸದಸ್ಯರಾದುದರಿಂದ ಆ ಸುದ್ದಿಗೋಷ್ಠಿಗೆ ಬಹಳ ಮಹತ್ವವಿತ್ತು. ಖರ್ಗೆಯವರ ಮಾತುಗಳು ಕೂಡ ಖಡಕ್ ಆಗಿದ್ದವು. ಖುದ್ದು ಪ್ರಧಾನಿಗೆ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದರು. ಹಾಗಾಗಿ, ಆ ಸುದ್ದಿಗೋಷ್ಠಿ ಮುಗಿದ ಮೇಲೆ ಟಿವಿ ಪತ್ರಕರ್ತರು ಖರ್ಗೆ ಬಳಿ ಚಿಟ್ ಚಾಟ್ ಮಾಡಲು ಸಾಲುಗಟ್ಟಿ ನಿಂತಿದ್ದರು. ಆಗ ಖರ್ಗೆ ಮತ್ತೊಂದು ಮೀಟಿಂಗ್‌ಗೆ ಹೊರಡಬೇಕಾದ ಒತ್ತಡದಲ್ಲಿದ್ದರು. ಇಂಥ ಪರಿಸ್ಥಿತಿಯಲ್ಲಿ ದೆಹಲಿ ಪತ್ರಕರ್ತರೊಬ್ಬ, “ಹಮಾರ ಸಾಥ್ ಖಡ್ಗೆ ಸಾಬ್ ಮಹಜೂದ್ ಹೈ...” ಎನ್ನುವಷ್ಟರಲ್ಲಿ ಅರ್ಧಕ್ಕೆ ಮೊಟಕುಗೊಳಿದ ಖರ್ಗೆ, “ಖಡ್ಗೆ ನಹೀ, ಖರ್ಗೆ ಬೋಲೋ...” ಎಂದರು. ಆ ಪತ್ರಕರ್ತ ಪ್ರಜ್ಞಾಪೂರ್ವಜವಾಗಿ ಮತ್ತೊಮ್ಮೆ ಖರ್ಗೆ ಎಂದು ಹೇಳಲು ಪ್ರಯತ್ನ ಪಟ್ಟರಾದರೂ ಅದು ಸಾಧ್ಯವಾಗಲಿಲ್ಲ.

ಹಿಂದೆ ಸ್ಪೀಕರ್ ಬಾಲಯೋಗಿಯವರು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಢಿ ಅವರ ಹೆಸರನ್ನು 'ರಾಜೀವ್ ಪ್ರತಾಪ್ ರೌಡಿ' ಎಂದೇ ಹೇಳುತ್ತಿದ್ದರಂತೆ. ರಾಜೀವ್ ಪ್ರತಾಪ್ ರೂಢಿ ಎಷ್ಟೇ ಬಾರಿ ಹೇಳಿದರೂ ಪ್ರಯೋಜನ ಆಗಲಿಲ್ಲವಂತೆ. ಬಾಲಯೋಗಿಯವರು ಉದ್ದೇಶಪೂರ್ವಕವಾಗಿಯೇ ಹೀಗೆ ಹೇಳುತ್ತಿದ್ದಾರೆ ಎಂದು ಕೆಲವರು ಮಾತನಾಡಿಕೊಂಡರೆ, ಕೆಲವರು ಸರಿಯಾಗಿಯೇ ಹೇಳುತ್ತಿದ್ದಾರೆ ಎಂದು ತಮಾಷೆ ಮಾಡುತ್ತಿದ್ದರಂತೆ.

ಕೌನ್ ಬನೇಗಾ ಕರೋಡ್‌ಪತಿ ಅಂತ ಮೊದಲೇ ಗೊತ್ತಾಗುತ್ತಾ?

ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎನ್ನುವ ಗುಲ್ಲು ದಿಲ್ಲಿಯಲ್ಲಿ ಜೋರಾಗಿದೆ. ಜೊತೆಗೆ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆಯೂ ಚರ್ಚೆ ನಡೆಯತ್ತಿದೆ. ಅಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಕಿ ಇರುವುದೇ ಎರಡು ಹೆಸರು. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್. ಕಾಂಗ್ರೆಸ್ ಪಕ್ಷದಲ್ಲಿ ಇಂಥ ವಾತಾವರಣ ವಿರಳ. ವಿಶೇಷ ಏನೆಂದರೆ ಇಬ್ಬರೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆಪ್ತರು. ಹಾಗಾಗಿ ಯಾರಾಗುತ್ತಾರೆ ಎಂಬ ಕುತೂಹಲ. ಈ ಬಗ್ಗೆ ಅಶೋಕ್ ಗೆಹ್ಲೋಟ್ ಅವರನ್ನು ಕೇಳಿದಾಗ ಅವರು ಹೇಳಿದ್ದು ಇಷ್ಟು: “ಕೌನ್ ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ ಕರೋಡ್‌ಪತಿ ಯಾರಾಗುತ್ತಾರೆ ಅಂತ ಮೊದಲೇ ಹೇಳೋಕಾಗುತ್ತಾ?”

ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
Editor’s Pick More