ಸಾವಿರ ದಿನ ಪೂರೈಸಿದ ಮಹದಾಯಿ ಹೋರಾಟ, ನರಗುಂದದಲ್ಲಿ ಪ್ರತಿಭಟನೆ

ಹತ್ತು ಹಲವು ಏಳುಬೀಳುಗಳ ನಡುವೆಯೂ ಮಹದಾಯಿ ಹೋರಾಟ ಸಾವಿರ ದಿನವನ್ನುಪೂರೈಸಿದೆ. ಆದರೆ, ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹೋರಾಟಗಾರರು, ನರಗುಂದ ಪಟ್ಟಣದ ಬಾಬಾಸಾಹೇಬ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು

ಹತ್ತು ಹಲವು ಏಳುಬೀಳುಗಳ ನಡುವೆ ಸಾವಿರ ದಿನಗಳನ್ನು ಮಹದಾಯಿ ಹೋರಾಟ ಪೂರೈಸಿದೆ‌. ಆದರೂ ಮಹಾದಾಯಿ ವಿವಾದ ಬಗೆಹರಿಯುವ ಸೂಚನೆ ಕಾಣುತ್ತಿಲ್ಲ. ಈ ಮೂಲಕ ಬಂಡಾಯದ ನೆಲದಲ್ಲಿ ನಡೆದ ಮಹದಾಯಿ ಹೋರಾಟ ನೀರಿಗಾಗಿ ನಡೆದ ದಾಖಲೆಯ ಹೋರಾಟ ಎನ್ನುವ ಹೆಗ್ಗಳಿಗೆ ಪಾತ್ರವಾಗಿದೆ. ಚುನಾವಣೆಯ ಹೊಸ್ತಿಲಲ್ಲಿ ಇಂದು ನಡೆದ ಮಹದಾಯಿ ಸಾವಿರದಿನದ ಹೋರಾಟ ಮಹತ್ವ ಪಡೆದಿದೆ.

2015ರ ಜುಲೈ 15ರಂದು ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಆರಂಭವಾದ ಮಹದಾಯಿ ಹೋರಾಟಕ್ಕೀಗ ಸಾವಿರ ದಿನ. ಒಂದೆಡೆ ಸಾವಿರ ದಿನಗಳಿಂದ ಹೋರಾಟವನ್ನು ಜೀವಂತವಾಗಿಟ್ಟುಕೊಂಡು ಬಂದ ಸಂತೃಪ್ತಿ ಇದ್ದರೆ, ಮುಖ್ಯವಾಗಿ ಸುಧೀರ್ಘ ಹೋರಾಟಕ್ಕೆ ರಾಜಕೀಯ ಪಕ್ಷಗಳಿಂದ ದೊರೆತ ಶೂನ್ಯ ಕೊಡುಗೆ ಈ ಭಾಗದ ರೈತರ ಆಕ್ರೋಶಕ್ಕೆ ಕಾರಣವಾಗಿದೆ‌.

ಸಾವಿರ ದಿನದಲ್ಲಿ 75ಕ್ಕೂ ಹೆಚ್ಚು ಬಾರಿ ಬಂದ್ ಕರೆ ನೀಡಲಾಗಿದೆ. ರಸ್ತೆ ತಡೆ, ಮೆರವಣಿಗೆ, ಮುತ್ತಿಗೆ, ಧರಣಿ, ಹತ್ತು ಹಲವು ಬಗೆಯ ಪ್ರತಿಭಟನೆಗಳು ನಿರಂತರವಾಗಿವೆ. ಈಗಾಗಲೇ ಹೋರಾಟದಲ್ಲಿ ಪಾಲ್ಗೊಂಡ 10 ಜನ ರೈತರು ಸಾವನ್ನಪ್ಪಿದ್ದಾರೆ. ಅದ್ರಲ್ಲಿ ನಾಲ್ವರು ಪೊಲೀಸ್ ಲಾಠಿ ಏಟಿಗೆ ಬಲಿಯಾಗಿದ್ರೆ, ಮೂವರು ಹೃದಯಾಘಾತ, ಹೋರಾಟ ವೇದಿಕೆಯಲ್ಲಿ ಉಂಟಾದ ನೂಕುನುಗ್ಗಲು ವೇಳೆ ಕಾಲ್ತುಳಿತಕ್ಕೆ ಒಬ್ಬರು ಬಲಿಯಾಗಿದ್ದಾರೆ. ಇವೆಲ್ಲ ಸಾವಿರದಿನದಲ್ಲಿ ರೈತರು ಅನುಭವಿಸಿದ ಕಹಿ ಘಟನೆಗಳು.

ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ನಾಲ್ಕು ಜಿಲ್ಲೆಯ 11 ತಾಲೂಕಿನ ರೈತರ ಪಾಲಿಗೆ ಈ ಯೋಜನೆ ಕನಸಿನ ಕೂಸಾಗಿದೆ‌. ಮಹದಾಯಿ ಹೋರಾಟ ಸಮಿತಿಯ ಮೂಲಕ ಮೂರು ವರ್ಷದ ಈ ಹೋರಾಟದಲ್ಲಿ ರೈತರಿಗಾಗಿ ಸಮಿತಿ ಅಧ್ಯಕ್ಷ ಸೊಬರದಮಠ ಸನ್ಯಾಸತ್ವ ಸ್ವೀಕರಿಸಿದ್ದು ಕೂಡ ದಾಖಲೆ.

ಯೋಜನೆಗೆ 2000ದಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2002ರಲ್ಲಿ ಕೇಂದ್ರ ಸರ್ಕಾರ ಕೂಡ ಇದಕ್ಕೆ ಸಮ್ಮತಿಸಿತ್ತು. ನಂತರ ವಿವಾದ ನ್ಯಾಯಾಲಯದ ಮೆಟ್ಟಿಲೇರಿತು. 2016ರಲ್ಲಿ 3 ರಾಜ್ಯಗಳ ಸಿಎಂಗಳ ಸೌಹಾರ್ದಯುತ ವಾದ ಬಗೆಹರಿಸಿಕೊಳ್ಳುವ ಸಲಹೆ ಹೊರಬಿತ್ತು. ನಂತರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಜಟಾಪಟಿಯಾಗಿ ವಿವಾದ ಇನ್ನೂ ಜೀವಂತವಾಗಿಯೇ ಉಳಿದಿದೆ.

ರಾಜ್ಯದಲ್ಲಿ ಚುನಾವಣೆಯ ಕಾಲ ಸನ್ನಿಹಿತವಾಗಿದ್ದು, ಇವತ್ತಿನ ಸಾವಿರ ದಿನದ ಹೋರಾಟ ಜನರ ಕುತೂಹಲಕ್ಕೆ ಕಾರಣವಾಗಿತ್ತು. ಇಂದು ನರಗುಂದ ಪಟ್ಟಣದ ಬಾಬಾಸಾಹೇಬ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಯ್ತು. ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಸೊಬರದಮಠ ಮೈಮೇಲೆ ಸಗಣಿ ನೀರು ಎರಚಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿದರು.

ಗದಗದಲ್ಲೂ ಮಹದಾಯಿ ಸಾವಿರ ದಿನದ ಅಂಗವಾಗಿ ವಿನೂತನ ಪ್ರತಿಭಟನೆ ಮಾಡಲಾಯಿತು. ಜಯಕರ್ನಾಟಕ ಸಂಘಟನೆಯಿಂದ ನೇಣು ಕುಣಿಕೆ ಬಿಗಿದುಕೊಂಡು ಅಣಕು ಪ್ರದರ್ಶನ ನಡೆಸಲಾಯಿತು. ಗದಗ ನಗರದ ಗಾಂಧಿ ವೃತ್ತದಲ್ಲಿ 20ಕ್ಕೂ ಹೆಚ್ಚು ಕಾರ್ಯಕರ್ತರು ಇದರಲ್ಲಿ ಪಾಲ್ಗೊಂಡಿದ್ದರು.

ಸಾವಿರ ದಿನದ ಹೋರಾಟದ ನಿರ್ಣಯಗಳು

  • ಚುನಾವಣೆ ವೇಳೆ ಮತ ಕೇಳಲು ಬಂದವರಿಗೆ ಮಹದಾಯಿಗಾಗಿ ನೀವೇನು ಕೆಲಸ ಮಾಡಿದ್ದೀರಿ ಅಂತ ಪ್ರಶ್ನಿಸಬೇಕು
  • ವಿವಾದ ಇತ್ಯರ್ಥಕ್ಕೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬೇಕು
  • ಮಹದಾಯಿ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳದಿರುವುದು
ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More