ವೇತನಕ್ಕೆ ಆಗ್ರಹಿಸಿ ಹುಬ್ಬಳ್ಳಿ ಪೌರಕಾರ್ಮಿಕರ ಪ್ರತಿಭಟನೆ

ಸರ್ಕಾರ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ಪಾಲಿಕೆಯಿಂದಲೇ ನೇರ ವೇತನ ವಿತರಿಸಬೇಕೆಂದು ನಿಯಮ ಜಾರಿಗೊಳಿಸಿದೆ. ಇಷ್ಟಾದರೂ ಪಾಲಿಕೆಗಳು ನೇರ ನೇಮಕಾತಿ ಮಾಡಿಕೊಂಡು ಸಂಬಳ ನೀಡುತ್ತಿಲ್ಲ ಎಂದು ಆರೋಪಿಸಿ ಪೌರ ಕಾರ್ಮಿಕರು ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ

ಸಂಬಳ ನೀಡದ ಕಾರಣಕ್ಕೆ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇನ್ನು ಹಸಿಯಾಗಿದೆ. ಕಳೆದ 5 ತಿಂಗಳ ಹಿಂದೆಯೇ ರಾಜ್ಯದ ಎರಡನೇ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಬ್ಬರು ನಾಲ್ಕಾರು ತಿಂಗಳುಗಳ ಕಾಲ ಕೆಲಸ ನಿರ್ವಹಿಸಿದರೂ ಸಂಬಳ ನೀಡಿಲ್ಲ ಎಂಬ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇತ್ತ ಸರ್ಕಾರವು ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ಪಾಲಿಕೆಯಿಂದಲೇ ನೇರವಾಗಿ ವೇತನ ವಿತರಿಸಬೇಕೆಂದು ನಿಯಮ ಜಾರಿಗೊಳಿಸಿದೆ. ಈ ನಿಯಮ ಜಾರಿಗೊಂಡು ಒಂದು ವರ್ಷ ಕಳೆದರೂ ಪಾಲಿಕೆಗಳು ಮಾತ್ರ ನೇರ ನೇಮಕಾತಿ ಮಾಡಿಕೊಂಡು ಸಂಬಳ ನೀಡುತ್ತಿಲ್ಲ. ಇದಕ್ಕಾಗಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸುರಿಯುವ ಮಳೆಯನ್ನು ಲೆಕ್ಕಿಸದೆ, ನಮ್ಮ ಹಸಿವು ನೀಗಿಸಿ ಎಂದು ಸರ್ಕಾರಕ್ಕೆ ಅಂಗಲಾಚುತ್ತಿದ್ದಾರೆ.

ಸರ್ಕಾರ ಸೂಚಿಸಿದಂತೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯು ನೇರ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಮಾರ್ಚ್ 16ರಂದೇ ಅರ್ಜಿಗಳನ್ನು ಆಹ್ವಾನಿಸಿತ್ತು. ನಂತರ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು. ಆನಂತರ ಪೌರ ಕಾರ್ಮಿಕರು ಕೋರ್ಟ್ ಮೆಟ್ಟಿಲೇರಿದ್ದರು. ಆಗ ಉಚ್ಛನ್ಯಾಯಾಲಯ ಮೇ. 22ರಂದು ನೇರ ನೇಮಕಾತಿ ಮಾಡಿಕೊಂಡು ವೇತನ ನೀಡಬೇಕು ಎಂದು ಆದೇಶ ನೀಡಿತ್ತು. ಇಷ್ಟಿದ್ದರೂ ಸರ್ಕಾರ ಹಾಗೂ ಕೋರ್ಟ್ ನಿಯಮ ಪಾಲಿಸದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನು ಸತಾಯಿಸುತ್ತ ಬರುತ್ತಿದೆ. ಪರಿಣಾಮವಾಗಿ ಹಲವು ಪೌರ ಕಾರ್ಮಿಕರ ಕೈಗೆ ನಾಲ್ಕಾರು ತಿಂಗಳುಗಳಿಂದ ಸಂಬಳವೇ ಸಿಗುತ್ತಿಲ್ಲ. ಅಷ್ಟೇ ಅಲ್ಲದೇ, ಜೂ. 28ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರೆಲ್ಲ ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮೂಲಕ ಕೆಲಸಕ್ಕೆ ತೆಗೆದುಕೊಳ್ಳುವುದು ಬೇಡ. ಬದಲಾಗಿ ಗುತ್ತಿಗೆ ಆಧಾರದ ಮೇಲೆಯೇ ವೇತನ ಪಾವತಿಸಬೇಕು ಎಂಬ ನಿರ್ಣಯ ತಗೆದುಕೊಂಡಿದ್ದಾರೆ.

ಆದರೆ, ಪೌರ ಕಾರ್ಮಿಕರು ಮಾತ್ರ ಪಾಲಿಕೆಯು ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ನಿರ್ಧಾರದಿಂದ ಪೌರ ಕಾರ್ಮಿಕರ ಕುಟುಂಬಗಳು ಬೀದಿಗೆ ಬರುತ್ತಿವೆ. ಕಳೆದ ಆರೇಳು ತಿಂಗಳುಗಳಿಂದ ಗುತ್ತಿಗೆದಾರರಿಂದ ಸರಿಯಾಗ ವೇತನ ಸಿಗುತ್ತಿಲ್ಲ. 6 ತಿಂಗಳಾದರೂ ವೇತನ ಆಗದ ಕಾರಣ ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯ ಎಂಬುವವರು ಮೃತಪಟ್ಟಿದ್ದರೆ, ಹನುಮಂತಪ್ಪ ಎಂಬುವವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಪಾಲಿಕೆಯು ಸರ್ಕಾರದ ನಿಯಮದ ವಿರುದ್ಧ ನಿರ್ಣಯ ತೆಗೆದುಕೊಂಡರೆ, ಇನ್ನುಳಿದ ಪೌರ ಕಾರ್ಮಿಕರ ಪರಿಸ್ಥಿತಿಯೂ ಇದೇ ತರಹ ಆಗುತ್ತದೆ ಎಂದು ಪ್ರತಿಭಟಿಸಿದರು.

ಗುತ್ತಿಗೆದಾರರು ಪೌರ ಕಾರ್ಮಿಕರನ್ನು ಸರಿಯಾಗಿ ದುಡಿಸಿಕೊಳ್ಳುವುದಿಲ್ಲ. ಬದಲಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುತ್ತಾರೆ. ಆರೋಗ್ಯ ಹಾಳಾಗದಂತೆ ಮುಂಜಾಗೃತಾ ಕ್ರಮಗಳಿಗಾಗಿ ಯಾವುದೇ ಸಲಕರಣೆಗಳನ್ನು ಕೂಡ ನೀಡುವುದಿಲ್ಲ. ಕನಿಷ್ಠ ಜೀವನ ಸಾಗಿಸಲು ಕೂಡ ಆಗದಷ್ಟು ಸಂಬಳ ನೀಡುತ್ತಿರುತ್ತಾರೆ. ಅಲ್ಲದೇ, ನಾಲ್ಕಾರು ಜನ ಮಾಡುವ ಕೆಲಸವನ್ನು ಒಬ್ಬರಿಂದ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ಪಾಲಿಕೆಯು ಸರ್ಕಾರದ ನಿಯಮದಂತೆ ನೇರ ನೇಮಕಾತಿ ಮಾಡಿಕೊಂಡು ಸೂಕ್ತ ಸಂಬಳ ನೀಡಬೇಕು ಎಂದು ಪ್ರತಿಭಟಿಸುತ್ತಿದ್ದಾರೆ. ನಮಗೆ ನ್ಯಾಯ ಸಿಗುವವರೆಗೂ ಹಗಲು ರಾತ್ರಿ ಹೋರಾಟ ಮಾಡುತ್ತೇವೆ ಎಂದು ಹೋರಾಟಗಾರರು ಪಟ್ಟು ಹಿಡಿದು ಕುಳಿತಿದ್ದಾರೆ.

ಸರ್ಕಾರವು ಪೌರ ಕಾರ್ಮಿಕರನ್ನು ನೇರ ನೇಮಕಾತಿಯ ಮೂಲಕ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂಬ ನಿಯಮ ಜಾರಿಗೊಳಿಸಿದ್ದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆ ನಿಯಮ ಪಾಲಿಸುತ್ತಿಲ್ಲ. ಬದಲಾಗಿ ಗುತ್ತಿಗೆದಾರರ ಮೂಲಕವೇ ಪೌರ ಕಾರ್ಮಿಕರಿಂದ ಕೆಲಸ ತೆಗೆದುಕೊಳ್ಳಲು ಮುಂದಾಗಿದೆ. ಇದರಿಂದಾಗಿ ಪೌರ ಕಾರ್ಮಿಕರ ಬದುಕು ಬೀದಿಗೆ ಬರುತ್ತಿದೆ. ಪೌರ ಕಾರ್ಮಿಕರಿಗೆ ಸರಿಯಾಗಿ ಸಂಬಳ ಆಗದ ಕಾರಣ ಹಲವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಪಾಲಿಕೆಯು ಕೂಡಲೇ ಸರ್ಕಾರದ ನಿಯಮ ಪಾಲಿಸಲು ಮುಂದಾಗಬೇಕು. ಅದು ಮುಂದಾಗುವವರೆಗೂ ನಾವು ಹೋರಾಟ ಕೈಗೊಳ್ಳುತ್ತೇವೆ.
ವಿಜಯ ಗುಂಟ್ರಾಳ, ಧಾರವಾಡ ಜಿಲ್ಲಾ ಎಸ್ಸಿ- ಎಸ್ಟಿ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ
ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More