ಹಾವೇರಿ ಬಾಲಕಿಯ ಅತ್ಯಾಚಾರ ಪ್ರಕರಣ: ವಿದ್ಯಾರ್ಥಿಗಳ ಪ್ರತಿಭಟನೆ

ಹಾವೇರಿಯಲ್ಲಿ ಕಾಲೇಜು ವಿದ್ಯಾಥಿ೯ನಿಯ ದೇಹ ಹಾವೇರಿಯ ಕುಣಿಮೆಳ್ಳಹಳ್ಳಿ ಸೇತುವೆ ಕೆಳಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅತ್ಯಾಚಾರ ಮಾಡಿ ಸುಟ್ಟುಹಾಕಲಾಗಿದೆ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. ಘಟನೆ ಖಂಡಿಸಿ ಹಾವೇರಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು

ಕೋಲಾರದ ಮಾಲೂರಿನಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಮತ್ತೊಂದು ಹೃದಯವಿದ್ರಾವಕ ಘಟನೆ ಹಾವೇರಿಯಲ್ಲಿ ನಡೆದಿದೆ. ಕಾಲೇಜು ವಿದ್ಯಾಥಿ೯ನಿಯನ್ನು ಅತ್ಯಾಚಾರ ಮಾಡಿ ಸುಟ್ಟುಹಾಕಲಾಗಿದೆ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಹಾವೇರಿಯ ಕುಣಿಮೆಳ್ಳಹಳ್ಳಿ ಸೇತುವೆ ಕೆಳಗೆ ಅರೆಬೆತ್ತಲೆಯಾಗಿ ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದು ಜಿಲ್ಲೆಯ ಜನರ ನಿದ್ದೆಗೆಡಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಖಂಡಿಸಿ ಹಾವೇರಿಯಲ್ಲಿ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆ ಬಾಲಕಿ ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗಿ ಸಂಜೆಯೊಳಗೆ ಮನೆಗೆ ಬರುತ್ತಿದ್ದಳು. ಅಣ್ಣನ ಜೊತೆ ಬಂದು “ಅಣ್ಣಾ, ಜೆರಾಕ್ಸ್ ಮಾಡಿಸಿಕೊಂಡು ಕಾಲೇಜಿಗೆ ಹೊಗ್ತೇನಿ,” ಎಂದವಳು ಮನೆಗೆ ತಿರುಗಿ ಬರಲೇ ಇಲ್ಲ. ಎರಡು ದಿನವಾದರೂ ಮನೆಗೆ ಬರದ ಬಾಲಕಿ ಇಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಸದ್ಯ ಶವವಾಗಿ ಪತ್ತೆಯಾಗಿರುವ ರೇಣುಕಾ ಪಾಟೀಲ್ ಎಂಬ ಹದಿನೇಳು ವರ್ಷದ ಬಾಲಕಿ ಸವಣೂರು ತಾಲೂಕಿನ ಮಣ್ಣೂರು ಗ್ರಾಮದವಳು. ಹಾವೇರಿಯ ಜಿ ಹೆಚ್ ಕಾಲೇಜಿನಲ್ಲಿ ದ್ವೀತಿಯ ಪಿಯುಸಿಯಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಳು. ಕಾಲೇಜಿಗೆ ಹೋಗಿಬರುವುದಾಗಿ ಹೋದವಳು ಎರಡು ದಿನವಾದರೂ ಮರಳಿ ಮನೆಗೆ ಬರಲೇ ಇಲ್ಲ. ಆತಂಕಗೊಂಡ ಪೋಷಕರು ಹಾವೇರಿ ಮಹಿಳಾ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಗುರುವಾರ (ಆ.೧೦) ಹಾವೇರಿ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಪಕ್ಕದ ಬ್ರಿಡ್ಜ್ ಕೆಳಗೆ ಶವವಾಗಿ ಪತ್ತೆಯಾಗಿದ್ದಾಳೆ.

ಘಟನಾ ಸ್ಥಳಕ್ಕೆ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ನಂತರ ಪೊಲೀಸರಿಂದ ವಿಷಯ ತಿಳಿದ ಪೋಷಕರು, ಸ್ಥಳಕ್ಕೆ ಆಗಮಿಸಿ ಸುಟ್ಟುಕರಕಲಾದ ಶವ ನಮ್ಮ ಮಗಳದ್ದೇ ಎಂದು ಗುರುತಿಸಿದ್ದು, ಮೃತ ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. “ನಮಗೆ ಯಾರ ಮೇಲೂ ಅನುಮಾನವಿಲ್ಲ. ನಾವು ಯಾರ ವಿರೋಧವನ್ನು ಕಟ್ಟಿಕೊಂಡಿಲ್ಲ,” ಎನ್ನುತ್ತಾರೆ ಬಾಲಕಿಯ ತಂದೆ.

ಹಾವೇರಿಯಲ್ಲಿ ಎಸ್‌ಎಫ್‌ಐ, ಎಬಿವಿಪಿ, ಪಾಲಕರು ಹಾಗೂ ಜಿ ಎಚ್ ಕಾಲೇಜು ಆಡಳಿತ ಮಂಡಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದವು. ನ್ಯಾಯಕ್ಕಾಗಿ ಹೋರಾಟ ನಡೆಸಿದ ಸಾವಿರಾರು ವಿದ್ಯಾರ್ಥಿಗಳು, ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಆಗ್ರಹಿಸಿದರು. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಎಸ್‌ಪಿ ಪರಶುರಾಮ ಅವರು ಆರೋಪಿಗಳ ಪತ್ತೆಗಾಗಿ ಮೂರು ತಂಡ ರಚಿಸಿದ್ದಾರೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More