ಟೋಲ್ ಸಂಗ್ರಹ ಅವಧಿ ಮುಗಿದರೂ ವಸೂಲಿ; ಮಂಗಳೂರಿನಲ್ಲಿ ಪ್ರತಿಭಟನೆ

ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರದ ಟೋಲ್ ಸಂಗ್ರಹ ಅವಧಿ ಕಳೆದ ಜುಲೈಗೆ ಮುಕ್ತಾಯವಾಗಿದ್ದರೂ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು

ಮಂಗಳೂರಿನ ಸುರತ್ಕಲ್ ಮತ್ತು ಹೆಜಮಾಡಿ ನಡುವಿನ ಎಂಟು ಕಿಲೋಮೀಟರ್ ಅಂತರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟೋಲ್ ಸಂಗ್ರಹ ಕೇಂದ್ರಗಳಿವೆ. ಅವುಗಳಲ್ಲಿ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರದ ಟೋಲ್ ಸಂಗ್ರಹ ಅವಧಿ ಕಳೆದ ಜುಲೈಗೆ ಮುಕ್ತಾಯವಾಗಿದ್ದರೂ ಅಕ್ರಮವಾಗಿ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಯಿತು.

ಹೆದ್ದಾರಿಯಲ್ಲಿ ಸಾಕಷ್ಟು ಗುಂಡಿಗಳು ಉಂಟಾಗಿ ಅಪಘಾತ ಸಾಮಾನ್ಯವಾಗಿದೆ. ಕೆಲವರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಇತ್ತ ಸರ್ವಿಸ್ ರಸ್ತೆಗಳು ನಿರ್ಮಾಣವಾಗದೆ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಟೋಲ್ ಸಂಗ್ರಹ ನಿರಂತರವಾಗಿ ಸಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, “ನಂಬರ್ ಒನ್ ಸಂಸದ ಎಂದು ಹೆಸರು ಪಡೆದಿರುವ ನಳೀನ್ ಕುಮಾರ್ ಕಟೀಲ್ ಹೆದ್ದಾರಿ ನಿರ್ವಹಣೆಯಲ್ಲಿ ಎಡವಿದ್ದಾರೆ. ತೊಕ್ಕೊಟ್ಟು, ಪಂಪ್‌ವೆಲ್ ಬಳಿಯ ಫ್ಲೈ ಓವರ್ ನಿರ್ಮಾಣ ಕೂಡ ನನೆಗುದಿಗೆ ಬಿದ್ದಿದೆ. ಟೋಲ್ ಕೇಂದ್ರ ಎಂಬುದು ಸಂಸದರ ಅಧಿಕೃತ ದರೋಡೆ ಕೇಂದ್ರವಾಗಿದೆ. ಈ ಹಿಂದೆ ಹಲವು ಬಾರಿ ಧರಣಿ, ಪ್ರತಿಭಟನೆ ನಡೆಸಿದ್ದರೂ ಜನಪ್ರತಿನಿಧಿಗಳು ಸಮಸ್ಯೆಗೆ ಸ್ಪಂದಿಸಿಲ್ಲ,” ಎಂದು ಆರೋಪಿಸಿದರು.

ಸುರತ್ಕಲ್ ಡಿವೈಎಫ್‌ಐ ಘಟಕ, ದ.ಕನ್ನಡ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರ ಮಾಲೀಕರ ಸಂಘಟನೆ, ಜಯಕರ್ನಾಟಕ ಸಂಘಟನೆ, ಸುರತ್ಕಲ್ ಗೂಡ್ಸ್ ಟೆಂಪೋ ಚಾಲಕರ ಮಾಲೀಕರ ಸಂಘ, ಪಿಕಪ್ ಟೆಂಪೋ ಚಾಲಕರು ಮತ್ತು ಮಾಲೀಕರ ಸಂಘ, ದ.ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್, ಕಿನ್ನಿಗೋಳಿ ಮುಲ್ಕಿ ವಲಯ ಲಾರಿ ಮಾಲೀಕರ ಸಂಘ, ಬಸ್ ಮಾಲೀಕರ ಸಂಘ ಜೋಕಟ್ಟೆ, ಕುಳಾಯಿ ಹಾಗೂ ಕಾನದ ನಾಗರಿಕ ಹೋರಾಟ ಸಮಿತಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More