‘ಕಿಸಾನ್ ಕ್ರಾಂತಿ ಪಾದಯಾತ್ರೆ’ಗೆ ಉತ್ತರ ಪ್ರದೇಶ ಗಡಿಯಲ್ಲಿ ಪೊಲೀಸರಿಂದ ತಡೆ

ಸ್ವಾಮಿನಾಥನ್ ಸಮಿತಿ ವರದಿ ಜಾರಿ, ಸಕ್ಕರೆ ಕಾರ್ಖಾನೆಗಳ ಕಬ್ಬು ಪೂರೈಕೆಯ ಬಾಕಿ ಹಣ ಪಾವತಿ, ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ‘ಕಿಸಾನ್ ಕ್ರಾಂತಿ ಪಾದಯಾತ್ರೆ’ ಗೆ ತಡೆಯೊಡ್ಡಿದ ಪೊಲೀಸರು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೆಹಲಿಗೆ ರ್ಯಾಲಿ ಹಮ್ಮಿಕೊಂಡಿದ್ದ ‘ಕಿಸಾನ್ ಕ್ರಾಂತಿ ಪಾದಯಾತ್ರೆ’ಯನ್ನು ಉತ್ತರ ಪ್ರದೇಶದ ಗಡಿಯಲ್ಲೇ ತಡೆದ ಪೊಲೀಸರು, ಪ್ರತಿಭಟನಾನಿರತರ ಮೇಲೆ ಬಲಪ್ರಯೋಗ ಮಾಡಿದ್ದಾರೆ.

ಸ್ವಾಮಿನಾಥನ್ ಸಮಿತಿ ವರದಿಯನ್ನು ಶೀಘ್ರ ಜಾರಿ ಮಾಡಬೇಕು, ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಕೆಯ ಬಾಕಿ ಹಣವನ್ನು ಪಾವತಿಸಬೇಕು, ಕೃಷಿಸಾಲ ಮನ್ನಾ ಮತ್ತು ಕೃಷಿಜಮೀನಿನ ಕೊಳವೆಬಾವಿಗಳಿಗೆ ಉಚಿತ ವಿದ್ಯುತ್ ನೀಡಬೇಕು, ಎಲ್ಲ ಬೆಳೆಗಳಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಸಲವತ್ತು ಸಿಗಬೇಕು, ವಿಮೆಯ ಕಂತನ್ನು ಸರ್ಕಾರವೇ ಪಾವತಿಸಬೇಕು, ರೈತರಿಗೆ ಕನಿಷ್ಠ ಆದಾಯದ ಖಾತ್ರಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ‘ಕಿಸಾನ್ ಕ್ರಾಂತಿ ಯಾತ್ರಾ’ ಹಮ್ಮಿಕೊಂಡಿರುವ ರೈತರು, ಸೋಮವಾರವೇ ದೆಹಲಿ ಹೊರಭಾಗಕ್ಕೆ ಬಂದಿದ್ದರು. ಮಂಗಳವಾರ ದೆಹಲಿಯ ಕಿಸಾನ್‌ ಘಾಟ್ ತಲುಪಬೇಕೆಂದು ಹರಿದ್ವಾರದಿಂದ ಜಾಥಾ ಆರಂಭಿಸಿದ್ದ ರೈತರನ್ನು, ಉತ್ತರ ಪ್ರದೇಶದ ಗಡಿಯಲ್ಲೇ ತಡೆಯಲಾಯಿತು. ರೈತರನ್ನು ತಡೆಯಲು ಪೊಲೀಸರು ಹಾಗೂ ಅರೆಸೇನಾ ಪಡೆ ತುಕಡಿಗಳನ್ನು ನಿಯೋಜಿಸಲಾಗಿತ್ತು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ವಾಗ್ವಾದ ನಡೆದು, ಹಿಂಸಾರೂಪಕ್ಕೆ ತಿರುಗಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾನಿರತರ ಮೇಲೆ ಜಲಫಿರಂಗಿ ಪ್ರಯೋಗಿಸಿದರು.

ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ರೈತರು ದೆಹಲಿಯತ್ತ ದೌಡಾಯಿಸುತ್ತಿದ್ದರು. ಆದರೆ, ಉತ್ತರ ಪ್ರದೇಶದ ಗಡಿಯಲ್ಲಿ ರೈತರ ಜಾಥಾವನ್ನು ತಡೆದ ಪೊಲೀಸರು ಜಲಫಿರಂಗಿ, ಅಶ್ರುವಾಯು ಸಿಡಿಸಿದರು. “ರೈತರು ಸಾಗುತ್ತಿದ್ದ ದಾರಿಗೆ ಬ್ಯಾರಿಕೇಡ್ ಹಾಕಿದ್ದರಿಂದ ಸಿಟ್ಟಿಗೆದ್ದ ರೈತರು ಒಂದು ಹಂತದಲ್ಲಿ ಕಲ್ಲು ತೂರಾಟ ನಡೆಸಲು ಆರಂಭಿಸಿದರು. ಹೀಗಾಗಿ ನಾವು ಬಲಪ್ರಯೋಗ ಮಾಡಬೇಕಾಯಿತು,” ಎಂದು ಪೊಲೀಸರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More