ದಸರೆಗೆ ಮುನ್ನ ಮೈಸೂರಿನ ಸ್ವಚ್ಛತೆ ಬಹಿಷ್ಕರಿಸಿ ಬಿಸಿ ಮುಟ್ಟಿಸಿದ ಪೌರಕಾರ್ಮಿಕರು

ಕಾಯಂ ಆದೇಶ ಜಾರಿ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸ್ವಚ್ಛತೆ ಕಾರ್ಯವನ್ನು ಬಹಿಷ್ಕರಿಸಿ, ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಮೈಸೂರು ನಗರಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರು, ದಸರಾ ಮಹೋತ್ಸವದ ಮುನ್ನಾ ದಿನಗಳಲ್ಲಿ ಅಧಿಕಾರಿಸ್ಥರಿಗೆ ಬಿಸಿ ಮುಟ್ಟಿಸಿದ್ದಾರೆ

ದಸರಾ ಮಹೋತ್ಸವ ಸಂಭ್ರಮಕ್ಕೆ ಅಣಿಯಾಗುತ್ತಿರುವ ಮೈಸೂರು ನಗರದಲ್ಲಿ ಸ್ವಚ್ಚತಾ ಕಾರ್ಯವನ್ನು ಬಹಿಷ್ಕರಿಸಿರುವ ಪೌರಕಾರ್ಮಿಕರು,ತಮ್ಮ ಬಹುಕಾಲದ ಬೇಡಿಕೆಗಳಿಗೆ ಸ್ಪಂದಿಸದ ಅಧಿಕಾರಸ್ಥರಿಗೆ ಮುಷ್ಕರದ ಬಿಸಿ ಮುಟ್ಟಿಸಿದ್ದಾರೆ. ಗುತ್ತಿಗೆ ಕಾರ್ಮಿಕರ ಖಾಯಂ ಆದೇಶ ಜಾರಿಯಾಗಬೇಕು ಎನ್ನುವುದೂ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬುಧವಾರ (ಅ.೩೦) ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿರುವ ಪೌರ ಕಾರ್ಮಿಕರು ,ನಗರದ ಎಲ್ಲಾ ಹಂತದ ಸ್ವಚ್ಚತೆ, ಕಸ ವಿಲೇವಾರಿ ಕಾರ್ಯವನ್ನು ಬಹಿಷ್ಕರಿಸಿದ್ದಾರೆ.

“ಪೌರಕಾರ್ಮಿಕ ಸಂಘಟನೆಗಳ ಬಹುಕಾಲದ ಬೇಡಿಕೆಗೆ ಮಣಿದ ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ತೀರ್ಮಾನ ಪ್ರಕಟಿಸಿತ್ತು. ಮಾತ್ರವಲ್ಲ ಸಚಿವ ಸಂಪುಟದ ಒಪ್ಪಿಗೆಯೂ ದೊರಕಿತ್ತು. ಆದರೆ,ಮೈಸೂರು ಮಹಾನಗರಪಾಲಿಕೆ ಸಹಿತ ಬಹುತೇಕ ಸ್ಥಳೀಯ ಸಂಸ್ಥೆಗಳು ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂ ಮಾಡಿಕೊಂಡಿಲ್ಲ. ಗುತ್ತಿಗೆದಾರರ ಲಾಬಿ, ಈ ಲಾಬಿಗೆ ಮಣಿದ ಅಧಿಕಾರಿಗಳ ಲಾಭಕೋರತನ ಇದಕ್ಕೆ ಕಾರಣ,’’ ಎನ್ನುವುದು ಮುಷ್ಕರದ ನೇತೃತ್ವ ವಹಿಸಿರುವ ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನಾರಾಯಣ ಅವರ ಆಕ್ಷೇಪ.

ಹದಿನೈದು ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ದಸರಾ ಮಹೋತ್ಸವದ ಸಂದರ್ಭ ಸ್ವಚ್ಚತಾ ಕಾರ್ಯ ಬಹಿಷ್ಕರಿಸುತ್ತೇವೆ ಎಂದು ಪೌರಕಾರ್ಮಿಕ ಸಂಘಟನೆಗಳು ಮಹಾನಗರಪಾಲಿಕೆ ಮತ್ತು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದವು. ಈ ಗಡುವಿನಲ್ಲಿ ಅಧಿಕಾರಿಸ್ಥರು ಸೂಕ್ತ ಸ್ಪಂದನೆ ತೋರದ್ದರಿಂದ ಗಾಂಧಿ ಜಯಂತಿಯ ಮರುದಿನದಿಂದ ಸ್ವಚ್ಚತೆಯನ್ನು ಬಹಿಷ್ಕರಿಸಿದ್ದಾರೆ. “ನಿತ್ಯದ ಶುಚಿತ್ವ ಮಾತ್ರವಲ್ಲ, ಪ್ರತಿ ವರ್ಷ ದಸರೆಯಲ್ಲಿ ಪೌರ ಕಾರ್ಮಿಕರು ನಗರದ ಶುಚಿತ್ವಕ್ಕೆ ಟೊಂಕ ಕಟ್ಟಿ ನಿಲ್ಲುತ್ತಿದ್ದರು. ಈ ಬಾರಿ ಅವರು ಕುಟುಂಬ ಸಮೇತ ದಸರಾ ಕಾರ್ಯಕ್ರಮಗಳನ್ನು ನೋಡುತ್ತಾರೆ. ಅಧಿಕಾರಿಗಳು ಸ್ವಚ್ಚತೆ ಹೊಣೆ ನಿರ್ವಹಿಸಿಕೊಳ್ಳಲಿ,’’ ಎನ್ನುವ ಮಾರ್ಮಿಕ ಎಚ್ಚರಿಕೆಯನ್ನು ಹೋರಾಟಗಾರರು ನೀಡಿದ್ದಾರೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮೈಸೂರು ದಸರಾಗೆ ‘ಗಜಪಯಣ’ ಆರಂಭಿಸಿದ ಆನೆಗಳು

ಮೈಸೂರು ನಗರಪಾಲಿಕೆಯಲ್ಲಿ ೧೮೪೮ ಪೌರಕಾರ್ಮಿಕರಿದ್ದು, ಈ ಪೈಕಿ ೫೨೫ ಮಂದಿಯಷ್ಟೆ ಖಾಯಂ ಆದವರು. ರಸ್ತೆ ಕಸ ಗುಡಿಸುವುದು, ಸಾರ್ವಜನಿಕ ಸ್ಥಳಗಳಲ್ಲಿನ ಕಸ ತೆರವು, ಮನೆ ಮನೆಗಳಿಂದ ಕಸ ಸಂಗ್ರಹ ಮತ್ತಿತರ ಕೆಲಸಗಳಿಂದ ಎಲ್ಲಾ ಪೌರಕಾರ್ಮಿಕರು ದೂರ ಉಳಿದಿರುವುದರಿಂದ ಮೊದಲ ಮೂರು ದಿನದಲ್ಲೇ ನಗರದಲ್ಲೆಡೆ ಅನೈರ್ಮಲ್ಯ ಹೆಚ್ಚಿದ್ದು, ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ಖಾಯಂ ಪೌರ ಕಾರ್ಮಿಕರ ಮೂಲಕ ಸ್ವಚ್ಚತೆ ಮಾಡಿಸುವ ಅಧಿಕಾರಿಗಳ ಪ್ರಯತ್ನ ವಿಫಲವಾಗಿದ್ದು, ಅವರು ಗುತ್ತಿಗೆ ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.ಕೆಲವೆಡೆ ಜನಪ್ರತಿನಿಧಿಗಳು,ಅಧಿಕಾರಿಗಳು ಪೊರಕೆ ಹಿಡಿದು ಸ್ವಚ್ಚ ಮಾಡಲು ಮುಂದಾದರಾದರೂ ಅದು “ಫೋಟೋ ಪೋಸ್‌’’ಗೆ ಸೀಮಿತವಾಯಿತು.

“ಪೌರಕಾರ್ಮಿಕರು ಮುಂದಿಟ್ಟಿರುವ ಬೇಡಿಕೆಗಳು ರಾಜ್ಯ ಸರ್ಕಾರದ ಹಂತದಲ್ಲಿ ಬಗೆಹರಿಸಬೇಕಾದಂಥವು. ಸಚಿವರು ಮತ್ತು ಮುಖ್ಯಮಂತ್ರಿಯ ಗಮನಕ್ಕೆ ತರಲಾಗಿದೆ,’’ ಎನ್ನುವುದು ಸ್ಥಳೀಯ ಅಧಿಕಾರಗಳ ಹೇಳಿಕೆ. ವಿಳಂಬ ಧೋರಣೆಯಿಂದ ಸಿಟ್ಟಿಗೆದ್ದ ಪೌರಕಾರ್ಮಿಕರು ರಸ್ತೆ ಮಧ್ಯೆ ಕಸ ಸುರಿದು ಪ್ರತಿಭಟಿಸಿದರು. ತಕ್ಷಣ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ ರಾ ಮಹೇಶ್‌ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, “ಮುಖ್ಯಮಂತ್ರಿಯ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇವೆ. ಈಗ ಮುಷ್ಕರ ವಾಪಸ್ ಪಡೆದು ನಾಡ ಹಬ್ಬದ ಸಂಭ್ರಮಕ್ಕೆ ಕೈ ಜೋಡಿಸಿ,’’ ಎಂದು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, “ಬೇಡಿಕೆ ಈಡೇರಿಕೆ ಖಚಿತ ಆಗುವ ವರೆಗೆ ಮುಷ್ಕರ ಹಿಂಪಡೆಯುವುದಿಲ್ಲ,’’ ಎಂದು ಪೌರಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಹಲವು ಬಾರಿ ಭರವಸೆ ಕೇಳಿ ಭ್ರಮನಿರಸನಗೊಂಡಿರುವ ಅವರು ದಸರೆಯ ಸಂದರ್ಭದಲ್ಲಿ ಅಧಿಕಾರಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಒಂದೆರಡು ದಿನದಲ್ಲಿ ಸರ್ಕಾರ ಸಮಸ್ಯೆಯನ್ನು ಇತ್ಯರ್ಥಗೊಳಿಸದಿದ್ದರೆ, ಪ್ರವಾಸಿ ನಗರಿಯಲ್ಲಿ ಸ್ವಚ್ಚತೆಯ ಸಮಸ್ಯೆ ಬಿಗುಡಾಯಿಸಲಿದೆ ಮತ್ತು ಅದು ದಸರಾ ಸಂಭ್ರಮವನ್ನು ಅಸಹನೀಯಗೊಳಿಸುವ ಅಪಾಯವೂ ಇದೆ.

ಬೇಡಿಕೆಗಳು

  • ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ಪೌರಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಿಂದಲೇ ನೇರ ಸಂಬಳ ನೀಡಬೇಕು.
  • ಒಳಚರಂಡಿ ವಿಭಾಗದಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರನ್ನು ಪೌರಕಾರ್ಮಿಕರೆಂದು ಪರಿಗಣಿಸಬೇಕು.
  • ಏಳು ನೂರು ಜನರಿಗೆ ಒಬ್ಬ ಪೌರಕಾರ್ಮಿಕ ಎನ್ನುವ ಸರ್ಕಾರದ ಆದೇಶ ಅವೈಜ್ಞಾನಿಕ. ೫೦೦ ಜನರಿಗೆ ಒಬ್ಬ ಪೌರ ಕಾರ್ಮಿಕನಂತೆ ನೇಮಕ ಮಾಡಬೇಕು.
  • ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕೆ ದಿನಕ್ಕೆ ನೀಡುವ ೨೦ ರೂ.ಬಾಕಿ ಉಳಿಸಿಕೊಂಡಿದ್ದು,ಈ ಮೊತ್ತವನ್ನು ಬಿಡುಗಡೆ ಮಾಡಬೇಕು.
  • ಹಬ್ಬಗಳಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ವರ್ಷಕ್ಕೆ ಹೆಚ್ಚುವರಿ ೨೧ ದಿನದ ಸಂಬಳ ನೀಡುತ್ತಿದ್ದು, ಅದನ್ನು ೩೦ ದಿನಕ್ಕೆ (ಪೊಲೀಸ್ ಇಲಾಖೆಯಲ್ಲಿರುವಂತೆ) ಹೆಚ್ಚಿಸಬೇಕು.
  • ಡಾ.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಪ್ರತಿವರ್ಷ ಬಿಬಿಎಂಪಿ ತನ್ನ ಪೌರ ಕಾರ್ಮಿಕರಿಗೆ ೨೦ ಸಾವಿರ ರೂ.ಬೋನಸ್‌ ನೀಡುತ್ತಿದ್ದು, ಅದನ್ನು ಮೈಸೂರು ಪಾಲಿಕೆ ಪೌರಕಾರ್ಮಿಕರಿಗೂ ವಿಸ್ತರಿಸಬೇಕು.
ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ, ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ
ನಿವೃತ್ತಿ ವೇತನಕ್ಕೆ ಆಗ್ರಹಿಸಿ ಸೀಮೆಎಣ್ಣೆ ವಿತರಕರಿಂದ ಬೀದರ್‌ನಲ್ಲಿ ಹೋರಾಟ 
ಬಾಲಕಿ ಮೇಲಿನ ಅತ್ಯಾಚಾರ, ಕೊಲೆಗೆ ಖಂಡನೆ; ಬೀದರ್‌ನಲ್ಲಿ ಪ್ರತಿಭಟನೆ
Editor’s Pick More