ಸಮಾಧಾನ | ಪದೇಪದೇ ಕೈಕಾಲು, ಮುಖ ತೊಳೆಯುವ ವಿಚಿತ್ರ ಗೀಳುರೋಗ

ಕೃಪಾನಿಧಿಗೆ Obessive Compulsive Disorder ಇದೆ. ಇದೊಂದು ವಿಚಿತ್ರ ಹಾಗೂ ವಿಶಿಷ್ಟ ಮನೋರೋಗ. ಮಿದುಳಿನ ನರಕೋಶಗಳಲ್ಲಿ ಸೆರೋಟೋನಿಕ್ ಎಂಬ ನರವಾಹಕದ ಲಭ್ಯತೆ ಕಡಿಮೆ ಆಗುವುದರಿಂದ ಈ ರೋಗ ಸೃಷ್ಟಿಯಾಗುತ್ತದೆ. ಹಾಗಾದರೆ ಕೃಪಾನಿಧಿಯ ಸಮಸ್ಯೆಗೆ ಪರಿಹಾರ?

“ಕೃಪಾನಿಧಿ, ಈತ ನನ್ನ ಮಗ. ಬುದ್ದಿವಂತ. ಪಿಯು ಮೊದಲನೇ ವರ್ಷದಲ್ಲಿ ಓದುತ್ತಿದ್ದಾನೆ. ಎಸ್ಎಸ್ಎಲ್ಸಿಯಲ್ಲಿ ಶೇ.88 ಮಾರ್ಕ್ಸ್ ತೆಗೆದಿದ್ದಾನೆ. ಸ್ಪೋರ್ಟ್‌ನಲ್ಲೂ ಮುಂದಿದ್ದಾನೆ. ಹೆಚ್ಚಿಗೆ ಡೊನೇಷನ್ ಕೇಳದೆ ದೀಪಾ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ದಿನಾ ಕಾಲೇಜಿಗೆ ಲೇಟಾಗಿ ಹೋಗುತ್ತಾನೆ. ಟೀಚರ್‌ಗಳ ಕೈಲಿ ಬೈಸಿಕೊಳ್ಳುತ್ತಾನೆ. ಇವನಿಗೆ ಕ್ಲೀನ್ ಮಾಡುವ, ದೇವರಿಗೆ ನಮಸ್ಕಾರ ಮಾಡುವ ಗೀಳು ಹತ್ಕೊಂಡಿದೆ. ಹೋದವರ್ಷ ಈ ಗೀಳು ಇರಲಿಲ್ಲ. ಒಂದು ದಿನ ಹೊರಗೆ ಹೋಗಿದ್ದಾಗ ಹೊಲಸು ತುಳಿದುಬಿಟ್ನಂತೆ. ಬಹಳ ಬೇಜಾರು ಮಾಡಿಕೊಂಡ. ಹಲವು ಸಲ ಸೋಪು ಹಾಕಿ ಕಾಲು ತೊಳೆದುಕೊಂಡ. ಆಮೇಲೆ ಶುರುವಾಯಿತು ನೋಡಿ ಇವನ ಕ್ಲೀನ್ ಮಾಡುವ ಹುಚ್ಚು. ಮನೆಯಿಂದ ಹೊರಗೆ ಹೋಗಿ ವಾಪಾಸ್ ಬಂದರೆ ಅರ್ಧಗಂಟೆ ಕಾಲ ಸುಮಾರು ನಾಲ್ಕೈದು ಬಕೆಟ್ ನೀರು ಉಪಯೋಗಿಸಿ ಕೈಕಾಲು ತೊಳೆಯುತ್ತಾನೆ. ಹಾಕಿದ ಪ್ಯಾಂಟನ್ನು ತೊಳೆಯುತ್ತಾನೆ. ರಸ್ತೆಯಲ್ಲಿ ಮನುಷ್ಯರು, ಪ್ರಾಣಿಗಳು, ಕೀಟಗಳು ಕಕ್ಕ ಮಾಡಿರುತ್ತದೆ. ಅದು ತನ್ನ ಕಾಲುಗಳಿಗೆ ಪ್ಯಾಂಟಿಗೆ ಅಂಟಿಕೊಂಡಿರುತ್ತದೆ ಎಂಬುದು ಇವನ ವಾದ.”

“ನಮ್ಮನ್ನೂ ಕೈ ಕಾಲು ತೊಳೆಯುವಂತೆ ಮಾಡುತ್ತಾನೆ. ನಾವು ಒಂದು ಸಲ ತೊಳೆದು ಸುಮ್ಮನಾಗುತ್ತೇವೆ. ಇವನಿಗೆ ಒಂದು ಸಲ ತೊಳೆದರೆ ಸಮಾಧಾನವಿಲ್ಲ. ಹತ್ತು ಹನ್ನೆರಡು ಸಲ ತೊಳೆಯುತ್ತಾನೆ. ಟಾಯ್ಲೆಟ್ಟಿಗೆ ಹೋಗುವ ಮೊದಲು, ಟಾಯ್ಲೆಟ್ಟಿನ ನೆಲ, ಗೋಡೆಗೆ ನೀರು ಸುರಿಯುತ್ತಾನೆ. ಟಾಯ್ಲೆಟ್ ಬಳಸಿದ ಮೇಲೆ ಮತ್ತೆ ಯಥೇಚ್ಚವಾಗಿ ನೀರು ಸುರಿಯುತ್ತಾನೆ. ಡೆಟಾಲ್-ಫೆನಾಯಿಲ್ ಉಪಯೋಗಿಸುತ್ತಾನೆ.”

“ಈ ಮೂರು ತಿಂಗಳಿನಿಂದ ಇನ್ನೊಂದು ಗೀಳು ಶುರುವಾಗಿದೆ. ದೇವರ ಫೋಟೋಗಳಿಗೆ ನಮಸ್ಕರಿಸುತ್ತಾನೆ. ಪ್ರತಿ ಫೋಟೋಗಳಿಗೆ ಮೂರು ಸಲ ನಮಸ್ಕರಿಸುತ್ತಾನೆ. ‘ನಾನು ನಿಮಗೆ ಬೈದುಬಿಟ್ಟಿದ್ದೆ, 8ನೇ ತರಗತಿಯ ಗಣಿತದಲ್ಲಿ ಕಡಿಮೆ ಮಾರ್ಕ್ಸ್ ಕಡಿಮೆ ಬಂದಾಗ ಟೀಚರನ್ನೂ ಬೈದುಬಿಟ್ಟಿದ್ದೆ, ಇದು ಮಾಡಬಾರದ ತಪ್ಪು, ದೇವರು ನನ್ನನ್ನು ಕ್ಷಮಿಸಬೇಕು. ಅದಕ್ಕಾಗಿ ಮೂರು ಮೂರು ಸಲ ದೇವರ ಫೋಟೋಗಳಿಗೆ ನಮಸ್ಕಾರ ಮಾಡುತ್ತೇನೆ’ ಎಂದ. ಕ್ಲೀನ್ ಮಾಡಿ ನಮ್ಮ ಮನೆಯಲ್ಲಿದ್ದ ಎಂಟು ಹತ್ತು ಫೋಟೋಗಳಿಗೆ ಮೂರು ಮೂರು ಸಲ ನಮಸ್ಕಾರ ಮಾಡುತ್ತಾನೆ. ಕಾಲೇಜಿಗೆ ಹೋಗಲು ತಡವಾಗುತ್ತಿತ್ತಾದರೂ ಅವನು ನಮಸ್ಕಾರ ಮಾಡುವುದನ್ನು ಕಡಿಮೆ ಮಾಡಲಿಲ್ಲ. ಮನೆಯಲ್ಲಿದ್ದ ದೇವರ ಫೋಟೋಗಳನ್ನೆಲ್ಲ ಎತ್ತಿಟ್ಟೆವು. ನಮಸ್ಕಾರ ಮಾಡಲು ಮನೆಯೊಳಗೆ ಒಂದೂ ಪೋಟೋ ಇರದಂತೆ ನೋಡಿಕೊಂಡೆವು. ನಮ್ಮ ಮನೆಯ ಹತ್ತಿರ ದೇವಸ್ಥಾನವಿದೆ. ಅಲ್ಲಿಗೆ ಹೋಗಿ ಅಲ್ಲಿದ್ದ ಹತ್ತಾರು ವಿಗ್ರಹಗಳಿಗೆ ನಮಸ್ಕಾರ ಮಾಡಲು ಶುರುಮಾಡಿದ್ದಾನೆ. ಏನು ಮಾಡುವುದೆಂದು ತೋಚುತ್ತಿಲ್ಲ. ಇವನಿಗೆ ಮಾನಸಿಕ ಕಾಯಿಲೆಯಾ? ಇದಕ್ಕೆ ಚಿಕಿತ್ಸೆ ಇದೆಯಾ?” ಎಂದರು ವಿಜಯಮ್ಮ.

“ಪ್ರತಿ ದೇವರ ಫೋಟೋ, ಪ್ರತಿ ದೇವರ ಪ್ರತಿಮೆಗೆ ಮೂರು ಸಲ ನಮಸ್ಕಾರ ಮಾಡದಿದ್ದರೆ ನಾನು ಫೇಲಾಗಬಹುದು. ನನ್ನ ತಂದೆ-ತಾಯಿಗೆ ಕಾಯಿಲೆ ಬರಬಹುದು. ಬಾಂಬೆಯಲ್ಲಿರುವ ನನ್ನ ಅಕ್ಕ-ಭಾವನಿಗೆ ಆಕ್ಸಿಡೆಂಟ್ ಆಗಬಹುದು ಎನಿಸುತ್ತದೆ. ಹೀಗಾಗಿ ಎಷ್ಟು ಕಷ್ಟವಾದರೂ, ಕಾಲೇಜಿಗೆ ತಡವಾಗುತ್ತಿದ್ದರೂ ದೇವರಿಗೆ ನಮಸ್ಕಾರ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಭಯದಿಂದ ನನ್ನನ್ನು ಬಿಡುಗಡೆ ಮಾಡಿ. ಇನ್ನು, ಕೈಕಾಲು ತೊಳೆಯುವುದು, ಟಾಯ್ಲೆಟ್ ತೊಳೆಯುವುದು, ಅದೊಂದು ದೊಡ್ಡ ಕತೆ. ಒಂದು ನಾಯಿಯ ಹೊಲಸು ತುಳಿದುಬಿಟ್ಟೆ, ತುಂಬಾ ಅಸಹ್ಯವಾಯಿತು. ಚೆನ್ನಾಗಿ ಸೋಪು ಹಾಕಿ, ಕಾಲು, ಕೈಗಳನ್ನು ತೊಳೆದುಕೊಂಡೆ ಆಮೇಲೆ ಎಲ್ಲ ಬೀದಿಗಳಲ್ಲಿ ಎಷ್ಟೊಂದು ನಾಯಿಗಳಿವೆ. ಅವುಗಳೆಲ್ಲ ರಸ್ತೆಯಲ್ಲಿ ಹೊಲಸು ಮಾಡುತ್ತದೆ. ಅವುಗಳ ಮೇಲೆ ನಡೆದಾಡಿದ ಓಡಾಡಿದ ವಾಹನಗಳಿಗೆ ನಾಯಿ ಹೊಲಸು ಕಣಕಣಗಳಾಗಿ ರಸ್ತೆಯಲ್ಲಿರುತ್ತದೆ. ಅವು ನನ್ನ ಕಾಲು ಪ್ಯಾಂಟಿನ ತುದಿಗೆ ಅಂಟಿಕೊಂಡಿರುತ್ತದೆ ಅನ್ನುವ ಯೋಚನೆಗಳು ಶುರುವಾಯಿತು ನೋಡಿ... ಹೊರಗಡೆ ಹೋಗಿ ಬಂದಾಗಲೆಲ್ಲ ಕೈಕಾಲುಗಳು ಪ್ಯಾಂಟ್‌ನ ಕೆಳಭಾಗವನ್ನು ತೊಳೆಯಲೇಬೇಕು, ಇಲ್ಲದಿದ್ದರೆ ಅಸಹ್ಯದ ಭಾವನೆಗಳಿಂದ ಮನಸ್ಸಿಗೆ ಬಹಳ ಹಿಂಸೆಯಾಗುತ್ತೆ. ವಾಕರಿಕೆ ಬರುತ್ತದೆ. ಊಟ-ತಿಂಡಿ ತಿನ್ನಲು ಮನಸ್ಸು ಬರುವುದಿಲ್ಲ. ಈ ಹಿಂಸೆಯಿಂದ ಬಿಡುಗಡೆ ಮಾಡಿ ಸಾರ್,” ಎಂದ ಕೃಪಾನಿಧಿ.

ಕೃಪಾನಿಧಿಗೆ Obessive Compulsive Disorder (ಗೀಳು ಮನೋರೋಗ) ಇದೆ. ಇದೊಂದು ವಿಚಿತ್ರ ಹಾಗೂ ವಿಶಿಷ್ಟ ಮನೋರೋಗ. ಮಿದುಳಿನ ನರಕೋಶಗಳಲ್ಲಿ ಸೆರೋಟೋನಿಕ್ ಎಂಬ ನರವಾಹಕದ ಲಭ್ಯತೆ ಕಡಿಮೆಯಾಗುವುದರಿಂದ ಈ ರೋಗ ಸೃಷ್ಟಿಯಾಗುತ್ತದೆ.

ರೋಗದ ಪ್ರಮುಖ ಲಕ್ಷಣಗಳು

  • ಯಾವುದೇ ಆಲೋಚನೆ, ವಿಚಾರ, ಚಿತ್ರ ಮನಸ್ಸಿನೊಳಗೆ ಪದೇಪದೇ ಬಂದು ಪುನರಾವರ್ತನೆಯಾಗುತ್ತದೆ. ಅದನ್ನು ಬರದಂತೆ ತಡೆಯುವಲ್ಲಿ ವ್ಯಕ್ತಿ ವಿಫಲವಾಗುತ್ತಾನೆ.
  • ಯಾವುದೇ ಅನುಮಾನ, ದ್ವಂದ್ವ ಅನಗತ್ಯವಾಗಿ ಅಸಂಬಂದ್ಧವಾಗಿ ವ್ಯಕ್ತಿಯನ್ನು ಕಾಡತೊಡಗುತ್ತದೆ.
  • ಪದೇಪದೇ ಹಲವು ಸಲ ಚೆಕ್ ಮಾಡಬೇಕೆನಿಸುವುದು. ಉದಾಹರಣೆಗೆ ಬಾಗಿಲಿನ ಬೋಲ್ಟ್, ದೀಪ, ಫ್ಯಾನ್‌ ಸ್ವಿಚ್ ಹಾಕಿದೆಯೋ ಆಫ್ ಆಗಿದೆಯೋ ಎಂದು ನೋಡುವುದು. ಎಣಿಸಿದ ನೋಟುಗಳ ಸಂಖ್ಯೆಯನ್ನು ಪದೇಪದೇ ಚೆಕ್ ಮಾಡುವುದು ಇತ್ಯಾದಿ.
  • ಪ್ರತಿಯೊಂದು ವಸ್ತುವನ್ನು ಒಂದು ನಿರ್ದಿಷ್ಠ ರೀತಿಯಲ್ಲಿ, ಒಂದು ನಿರ್ದಿಷ್ಟ ಜಾಗದಲ್ಲೇ ಇಡುವ ತವಕ, ಸ್ಪಲ್ಪ ಸ್ಥಾನಪಲ್ಲಟವಾದರೂ ಸಹಿಸದಿರುವುದು, ಹಿಂಸೆ ಮಾಡುವ, ನಾಶ ಮಾಡುವ, ಗಾಯಗೊಳಿಸುವ ಬಯಕೆಗಳು ಮನಸ್ಸಿನಲ್ಲೇ ಉತ್ಪತ್ತಿಯಾಗುವುದು. ಉದಾಹರಣೆಗೆ ಬ್ಲೇಡು, ಚಾಕು, ಚೂರಿ ಹಾಗೂ ಸೂಜಿಯಿಂದ ಇತರರಿಗೆ ಚುಚ್ಚಬೇಕು, ಕುದಿಯುವ ಕಾಫಿ, ಸಾಂಬಾರನ್ನು ಯಾರ ಮೇಲಾದರೂ ಹಾಕಬೇಕು. ಒಣಗಿದ ಹುಲ್ಲಿನ ಮೆದೆ, ಬಟ್ಟೆಗಳ ಗಂಟಿಗೆ ಬೆಂಕಿ ಇಡಬೇಕು. ಮಲಗಿದವರ ಹೊಟ್ಟೆಯನ್ನು ತುಳಿಯಬೇಕು ಇತ್ಯಾದಿ.
  • ದೇವರು ಧರ್ಮಕ್ಕೆ ವಿರುದ್ಧವಾದದ್ದನ್ನು ಮಾಡಬೇಕೆನಿಸುವುದು. ಉದಾಹರಣೆಗೆ, ದೇವರ ಮೂರ್ತಿಯನ್ನು ಮಲಿನಗೊಳಿಸಬೇಕು. ಒಡೆದುಹಾಕಬೇಕು. ದೇವರನ್ನು ಕೆಟ್ಟ ಮಾತುಗಳಲ್ಲಿ ಎಲ್ಲರೆದುರು ಬಯ್ಯಬೇಕು. ಧಾರ್ಮಿಕ ಆಚರಣೆಗಳನ್ನು ಜನ ಮಾಡದಂತೆ ತಡೆಗಟ್ಟಬೇಕು. ನಿಯಮಭಂಗ ಮಾಡಬೇಕು.
  • ಲೈಂಗಿಕ ವಿಚಾರಗಳನ್ನು ಬಹಿರಂಗವಾಗಿ ಅಸಭ್ಯ ರೀತಿಯಲ್ಲಿ ಮಾತನಾಡುವುದು. ವಿಕೃತ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅಥವಾ ಆ ರೀತಿ ಕಲ್ಪಿಸಿಕೊಳ್ಳುವುದು. ಜನ ವಿಕೃತ ರೀತಿಯಲ್ಲಿ ವರ್ತಿಸುತ್ತಿರುವಂತೆ ಕಾಣುವುದು.
  • ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಬೇಕೆನಿಸುವುದು. ಉದಾಹರಣೆಗೆ ಈಗ ಅಡುಗೆ ಮಾಡುತ್ತೇನೆ/ಮಾಡುವುದಿಲ್ಲ. ಊರಿಗೆ ಹೊರಡುತ್ತೇನೆ/ಹೊರಡುವುದಿಲ್ಲ. ಸ್ನೇಹಿತನಿಗೆ ಸಹಾಯ ಮಾಡುತ್ತೇನೆ/ ಮಾಡುವುದಿಲ್ಲ.
  • ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳುವುದು. ಭೂಮಿ ಏಕೆ ಗುಂಡಗಿದೆ? ಇದ್ದಿಲು ಯಾಕೆ ಕಪ್ಪು? ಸೂರ್ಯ ಪೂರ್ವದಲ್ಲೇ ಏಕೆ ಹುಟ್ಟಬೇಕು?

ಚಿಕಿತ್ಸೆ ಮತ್ತು ಪರಿಹಾರ

ಮಿದುಳಿನಲ್ಲಿ ಸೆರೋಟೋವಿನ್ ಪ್ರಮಾಣವನ್ನು ಹೆಚ್ಚಿಸುವ ಔಷಧಗಳು, ಸೆಟ್ರಾಲಿನ್, ಎಸ್ಸಿಟಲೋಪ್ರಾಂ, ಪ್ಲೂವಾಕ್ಸಮಿನ್, ಕೋಮಿಪ್ರಮಿನ್, ಪೆರಾಕ್ಸಿಟೀನ್, ಗೀಳುಮನೋರೋಗಕ್ಕೆ ಸಿದ್ದೌಷಧ. ಒಂದೆರಡು ವರ್ಷಗಳ ಕಾಲ ಮಾತ್ರೆಯನ್ನು ಸೇವಿಸಬೇಕು. ಆಪ್ತ ಸಮಾಲೋಚನೆ ಅತ್ಯಗತ್ಯ.

ಲೇಖಕರು, ಖ್ಯಾತ ಮನೋವೈದ್ಯರು

ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ!
ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 
ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?
Editor’s Pick More