ಸಮಾಧಾನ | ಪಾದರಸದಂತೆ ಚುರುಕಾಗಿದ್ದ ಮಗ ಕಲ್ಲಿನಂತೆ ಜಡವಾಗಿದ್ದೇಕೆ?

ವ್ಯಕ್ತಿಯೊಬ್ಬ ಹಠಾತ್ತಾಗಿ ತನ್ನ ನಿತ್ಯ ಕೆಲಸಗಳಲ್ಲಿ ನಿರ್ಲಕ್ಷ್ಯ ತೋರಿಸಲು ಆರಂಭಿಸಬಹುದು. ಬುದ್ಧಿವಂತ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲಾಗಬಹುದು. ಸಾಮಾಜಿಕ ಶಿಷ್ಟಾಚಾರ ಪಾಲಿಸದೇ ಇರಬಹುದು. ಇದೆಲ್ಲವೂ ಮಾನಸಿಕ ಕಾಯಿಲೆಯೊಂದರ ಲಕ್ಷಣಗಳೆಂದು ವೈದ್ಯರು ಹೇಳುತ್ತಾರೆ

ಪಾದರಸದಂತೆ ಚುರುಕಾಗಿದ್ದ ಸಾರ್, ಆಟ-ಪಾಠ-ಹಾಡುಗಾರಿಕೆ ಅಭಿನಯ-ನಾಟಕದಲ್ಲಿ ಮುಂದಿದ್ದ. ಪ್ರತಿ ಶಾಲಾ ವಾರ್ಷಿಕೋತ್ಸವದಲ್ಲಿ ಇವನ ಓಡಾಟವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತಿತ್ತು. ಯಾರ ಕೆಟ್ಟದೃಷ್ಟಿ ಬಿತ್ತೋ ಕಾಣೆ. ಈ ಆರು ತಿಂಗಳಲ್ಲಿ ಇವನು ಕಲ್ಲು ಬಸವನಾಗಿ ಬಿಟ್ಟಿದ್ದಾನೆ. ಶಾಲೆಗೆ ಹೋಗಿ ಮೂರುತಿಂಗಳಾಯಿತು. ಮನೆಯೊಳಗೆ, ರೂಮಿನಲ್ಲಿ ಕಿಟಕಿ ಬಾಗಿಲುಗಳನ್ನೆಲ್ಲಾ ಬಂದ್ ಮಾಡಿ, ಕತ್ತಲಲ್ಲೇ ಕೂರುತ್ತಾನೆ. ಕಿಟಕಿ ಬಾಗಿಲು ತೆರೆದರೆ ಯಾವುದೋ ದುಷ್ಟ ಶಕ್ತಿ ಒಳಬಂದು ಅವನನ್ನು ಸಾಯಿಸಿಬಿಡುತ್ತಾರಂತೆ. ಅವನ ನೂರಾರು ಚಿತ್ರಗಳನ್ನು ಈಗಾಗಲೇ ತೆಗೆದಿದ್ದಾರಂತೆ. ಸ್ನಾನ ಮಾಡುವಾಗ, ಟಾಯ್ಲೆಟ್ನಲ್ಲಿ ಕೂತಿದ್ದಾಗ, ಅವನ ಫೋಟೊ ತೆಗೆದು ಎಲ್ಲ ಕಡೆ ಹಂಚಿಬಿಟ್ಟಿದ್ದಾರಂತೆ ಹೊರಗಡೆ ಹೋದರೆ ಜನ ನನ್ನನ್ನು ನೋಡಿ ನಗುತ್ತಾರೆ. ಪರಿಹಾಸ್ಯ ಮಾಡಿ ಅವಮಾನಿಸುತ್ತಾರಂತೆ.

‘ಇದೆಲ್ಲ ನಿನ್ನ ಭ್ರಮೆ ಕಣೋ ಯಾರೂ ನಿನ್ನ ಫೋಟೊ ತೆಗೆದಿಲ್ಲ. ನಿನ್ನ ಫೋಟೊಗಳನ್ನು ಯಾರಿಗೂ ಯಾರೂ ಹಂಚಿಲ್ಲ. ನಾವೆಲ್ಲ ವಿಚಾರಿಸಿದ್ದೇವೆ’ ಎಂದರೆ, ‘ನಿಮಗೆ ನಿಜ ಸಂಗತಿ ಗೊತ್ತಿಲ್ಲ. ನೀವಾಗಲಿ, ನಾನಾಗಲೀ ಕೇಳಿದರೆ ಇಲ್ಲ ಎಂತಲೇ ಎಲ್ಲರೂ ಉತ್ತರ ಕೊಡುತ್ತಾರೆ. ಅವರೆಲ್ಲ ಸುಳ್ಳು ಹೇಳುತ್ತಾರೆ. ನಾನು ಹೊರಗಡೆ ಬರುವುದಿಲ್ಲ. ದಮ್ಮಯ್ಯ ನನ್ನ ಪಾಡಿಗೆ ಬಿಟ್ಟು ಬಿಡಿ. ಹೊರಗೆ ಬಾ ಎಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎನ್ನುತ್ತಾನೆ. ಈಗಾಗಲೇ ಎರಡು ಸಲ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದುಂಟು. ಸರಿಯಾದ ಸಮಯಕ್ಕೆ ನಾವು ಅದನ್ನು ಕಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಿದೆವು. ಅದಾಗಿದ್ದಾಗಿನಿಂದ ಹೊರಗೆ ಬಾ ಹೇಳುವುದನ್ನು ಬಿಟ್ಟಿದ್ದೇವೆ.

‘ಆಯಿತಪ್ಪಾ ಮನೆಯೊಳಗೆ ನಿನ್ನ ರೂಮಿನಲ್ಲಿಯೇ ಇರು. ಊಟ ತಿಂಡಿ ತಿಂದು ಆರೋಗ್ಯವಾಗಿರು’ ಎಂದು ಹೇಳಿದ್ದೇವೆ. ಊಟ ತಿಂಡಿಯನ್ನೂ ಸರಿಯಾಗಿ ತಿನ್ನುವುದಿಲ್ಲ, ಹಸಿವಿಲ್ಲ ಎನ್ನುತ್ತಾನೆ. ವಾಕರಿಕೆ ಬರುತ್ತದೆ ಎನ್ನುತ್ತಾನೆ. ಕತ್ತಲಾದರೂ ಲೈಟ್ ಹಾಕುವುದಿಲ್ಲ. ಜೀರೋ ಕ್ಯಾಂಡಲ್ ಬಲ್ಬನ್ನು ಉರಿಸುತ್ತಾನೆ. ಸುಮ್ಮನೆ ಗೋಡೆ, ಚಾವಣಿ ನೋಡುತ್ತಾ ಕಾಲ ಕಳೆಯುತ್ತಾನೆ.

‘ಹೀಗೆ ಕುಳಿತುಕೊಳ್ಳಲು ಬೇಸರವಾಗುವುದಿಲ್ಲವೇ? ನಿನಗಿಷ್ಟವಾದ ಸಂಗೀತ ಕೇಳು. ಇಷ್ಟವಾದ ಪುಸ್ತಕಗಳನ್ನು ಓದುಬೇಡ. ಸುಮ್ಮನೆ ಕುತುಕೋ, ಹಾಗೆ ಮಾಡದಿದ್ದರೆ ನಿನ್ನ ತಂದೆತಾಯಿಯನ್ನು ಕೊಲ್ಲುತ್ತೇವೆಂದು ಹೆದರಿಸುತ್ತಾರಮ್ಮ’ ಎನ್ನುತ್ತಾನೆ. ‘ಯಾರೋ ಅವರು’ ಎಂದರೆ ‘ನನಗೆ ಗೊತ್ತಿಲ್ಲಮ್ಮ. ಇಬ್ಬರು-ಮೂವರು ಹೆಂಗಸರು ಗಂಡಸರಿದ್ದಾರೆ. ಅವರೇ ಹೇಳುತ್ತಾರಮ್ಮ’ ಎನ್ನುತ್ತಾನೆ.

‘ಇದೆಲ್ಲ ನೆಗೆಟಿವ್ ಎನರ್ಜಿ ಪ್ರಭಾವ. ನಿಮ್ಮ ಯಾರೋ ಶತ್ರುಗಳು ಮಾಟ-ಮಂತ್ರ ಮಾಡಿಸಿದ್ದಾರೆ. ಜಾತಕದ ಪ್ರಕಾರ ಅವನ ಗ್ರಹಗತಿ ಚೆನ್ನಾಗಿಲ್ಲ. ಹೋಮ-ಹವನ ನವಗ್ರಹ ಶಾಂತಿ ಮಾಡಿಸಿ’ ಎಂದರು. ಒಬ್ಬ ಜ್ಯೋತಿಷಿ ಆಂಜನೇಯನ ಗುಡಿಯ ಪೂಜಾರಿಗಳೂ ಹಾಗೇ ಹೇಳಿದರು. ಅವರು ಹೇಳಿದಂತೆ ಪೂಜೆ ಪುನಸ್ಕಾರ, ದಿಗ್ಭಂದನ ಎಲ್ಲವೂ ಆಯಿತು. ಇವನಲ್ಲಿ ಯಾವ ಬದಲಾವಣೆಯೂ ಕಾಣಲಿಲ್ಲ. ದಿನೇದಿನೇ ಅವನ ಸ್ಥಿತಿ ಕೆಡುತ್ತಲೇ ಇದೆ. ಚಿನ್ನದಂತಹ ಹುಡುಗ ಈ ರೀತಿ ಆಗಿ ಬಿಟ್ಟಿರುವುದನ್ನು ನೋಡಿದರೆ ಕರುಳುಕಿತ್ತು ಬರುತ್ತದೆ’ ಎಂದು ಒಸರಿದ ಕಣ್ಣೀರನ್ನು ಕೈಯಿಂದ ಒರೆಸಿಕೊಂಡು ಬಿಕ್ಕಳಿಸಿದರು ಧನಲಕ್ಷ್ಮಿ.

‘ರಕ್ಷಿತ್ ಎಲ್ಲಿ ನನ್ನ ಕಡೆ ನೋಡು’ ಎಂದೆ. ಅವನ ಗಮನ ಇನ್ನೆಲ್ಲೊ ಇತ್ತು. ಅವನ ಭುಜ ಅಲುಗಿಸಿ. ರಕ್ಷಿತ್ ನಾನು ಡಾ. ಚಂದ್ರಶೇಖರ್ ಅಂತ. ಹೇಗಿದೆ ನಿನ್ನ ಆರೋಗ್ಯ?’ ಎಂದೆ. ಆತ ತಲೆತಗ್ಗಿಸಿ, ‘ನನ್ನ ಆರೋಗ್ಯ?’ ಎಂದೆ. ಆತ ತಲೆತಗ್ಗಿಸಿ, ‘ನನ್ನ ಆರೋಗ್ಯ... ಏನಾಗಿದೆ? ನಾನು ಚೆನ್ನಾಗಿದ್ದೇನೆ’ ಎಂದು ಅವನ ಕೈಗಳು ಮುಷ್ಟಿ ಹಿಡಿಯುವುದು, ಬಿಡುವುದು ಮಾಡುತ್ತಿದ್ದವು.

‘ನೀನು ಕಾಲೇಜಿಗೆ ಹೋಗಿ ಮೂರು ತಿಂಗಳಾಯಿತಂತೆ, ಏಕೆ ಹೋಗುತ್ತಿಲ್ಲ. ಕಾಲೇಜು ನಿನಗಿಷ್ಟವಿಲ್ಲವೇ’ ಕೇಳಿದೆ.

‘ಕಾಲೇಜು ನನಗೆ ಇಷ್ಟ. ಆದರೆ ಅವರು ನನ್ನನ್ನು ಹೋಗಲು ಬಿಡುತ್ತಿಲ್ಲ. ನಾನು ಮನೆ ಬಿಟ್ಟು ಹೋಗಬಾರದೆಂದು ತಾಖೀತು ಮಾಡಿದ್ದಾರೆ. ನಾನು ಮನೆಬಿಟ್ಟು ಹೊರಬಂದರೆ ನಮ್ಮನ್ನೆಲ್ಲಾ ಸಾಯಿಸಿಬಿಡುತ್ತಾರಂತೆ’

‘ಯಾರವರು ಏಕೆ ನಿನ್ನ ಮೇಲೆ ಒತ್ತಡ ಹಾಕಿದ್ದಾರೆ?’

‘ಯಾರೋ ಗೊತ್ತಿಲ್ಲ. ಹೆಸರು ಹೇಳುವುದಿಲ್ಲ. ಕಣ್ಣುಗಳಿಗೆ ಕಾಣಿಸುವುದೂ ಇಲ್ಲ. ಆದರೆ ಅವರಾಡುವ ಮಾತುಗಳು ದಿಗಿಲು ಹುಟ್ಟಿಸುತ್ತವೆ’

‘ಅವರು ಏನೇನು ಹೇಳುತ್ತಾರೆ? ಅವರು ನಿನ್ನನ್ನು ಕಂಟ್ರೋಲ್ ಮಾಡುತ್ತಾರೆಯೇ?’

‘ಏನೇನೋ ಬಾಯಿಗೆ ಬಂದದ್ದು, ಒಳ್ಳೆಯದು ಕೆಟ್ಟದ್ದು ಹೇಳುತ್ತಾರೆ. ನನ್ನ ಮಿದುಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಿಡುತ್ತಾರೆ. ಈಗ ನನ್ನ ತಲೆಯಲ್ಲಿ ಮೆದುಳಿಲ್ಲ. ಅವರ ಹತ್ತಿರ ಇದೆ. ವೈರುಗಳನ್ನು ಚುಚ್ಚಿ ಕರೆಂಟ್ ಪಾಸ್ ಮಾಡುತ್ತಾರೆ. ತುಂಬಾ ನೋವಾಗುತ್ತೆ. ನನ್ನ ಮಿದುಳಿನ ಮೇಲೆ ಏನೇನೋ ಪ್ರಯೋಗ ಮಾಡುತ್ತಾರೆ. ಮಾಡಬೇಡಿ ಎಂದರೆ ಕೇಳುವುದೇ ಇಲ್ಲ. ವಿಪರೀತವಾಗಿ ದೈಹಿಕ-ಮಾನಸಿಕ ಹಿಂಸೆ ನೀಡುತ್ತಾರೆ. ಅವರನ್ನು ಕಂಟ್ರೋಲ್ ಮಾಡುವವರೇ ಇಲ್ಲ. ಮಂತ್ರತಂತ್ರ ಮಾಡುವವರೆಲ್ಲ ಅವರ ಮುಂದೆ ಸೋತುಹೋದರು’

‘ಅವರನ್ನು ನಿಗ್ರಹಿಸುವ ಮಾತ್ರೆಗಳಿವೆ ತೆಗೆದುಕೊಳ್ಳುತ್ತೀಯಾ?’

‘ಅಂತಹ ಮಾತ್ರೆ ಇದ್ದರೆ ಬೇಗ ಕೊಡಿ ಡಾಕ್ಟರೇ. ಈಗಲೇ ನುಂಗುತ್ತೇನೆ. ಅವರ ಕಾಟ ತಪ್ಪಿದರೆ ಸಾಕು’ ಎಂದ ರಕ್ಷಿತ್.

ಸ್ಕಿಜೋಫ್ರೀನಿಯಾ ಒಂದು ಬಗೆಯ ವಿಚಿತ್ರವೆನಿಸುವ, ಜನಸಾಮಾನ್ಯರ, ಕಲ್ಪನೆ-ಅನುಭವಕ್ಕೆ ಮೀರಿದ ಮಾನಸಿಕ ಕಾಯಿಲೆ. ಸಾಮಾನ್ಯವಾಗಿ ಹದಿವಯಸ್ಸು, ಯುವವಯಸ್ಸಿನವರಲ್ಲಿ ಪ್ರಾರಂಭವಾಗುವ ಈ ಕಾಯಿಲೆಯಲ್ಲಿ ವ್ಯಕ್ತಿ ವಾಸ್ತವಿಕತೆಯಿಂದ ದೂರವಾಗಿ ಭ್ರಮಾ ಜಗತ್ತಿನಲ್ಲೇ ಇರುತ್ತಾನೆ. ಸುತ್ತಮುತ್ತ ಯಾರೂ ಇಲ್ಲದೇ ಹೋದರೂ, ಯಾರೋ ಮಾತನಾಡಿದಂತೆ, ಆಜ್ಞೆ ಮಾಡಿದಂತೆ ಬೈದಂತೆ ಶಬ್ದಗಳು ಕೇಳಿಸುತ್ತವೆ. ಯಾರಿಗೂ ಕಾಣದ ದೃಶ್ಯಗಳು, ವಾಸನೆ, ಸ್ಪರ್ಶ ಅನುಭವಗಳು ಅವರಿಗೆ ಅಗುತ್ತವೆ. ಈ ಭ್ರಮೆಗಳನ್ನು ಅವರು ನಿಜವೆಂದೇ ನಂಬಿ ಅವರು ಪ್ರತಿಕ್ರಿಯಿಸುತ್ತಾರೆ. ಅನುಮಾನ-ಸಂಶಯಗಳು ಅವರನ್ನು ಕಾಡತೊಡಗುತ್ತಾರೆ. ಅವರ ಮಾತು-ವರ್ತನೆ ಪ್ರತಿಕ್ರಿಯೆಗಳು ಏರುಪೇರಾಗಿ, ಅವರಿಗೂ ಮತ್ತು ಇತರರಿಗೂ ಮುಜುಗರ, ತೊಂದರೆಗಳನ್ನುಂಟು ಮಾಡುತ್ತವೆ.

ಇದನ್ನೂ ಓದಿ : ಸಮಾಧಾನ | ಪೋಷಕರ ತಾರತಮ್ಯವೇ ಶಾಂತಾಳ ಕೋಪಕ್ಕೆ ಮೂಲ ಕಾರಣ

ಆಹಾರ ಸೇವನೆ, ನಿದ್ರೆ, ಮೈಥುನ, ದೈಹಿಕ ಸ್ವಚ್ಛತೆಯ ಬಗ್ಗೆ ಗಮನವಿರುವುದಿಲ್ಲ. ನಿತ್ಯ ಕೆಲಸ ಕರ್ತವ್ಯಗಳನ್ನು ವ್ಯಕ್ತಿ ನಿರ್ಲಕ್ಷ್ಯ ತೋರುತ್ತಾನೆ. ಬುದ್ದವಂತ ವಿದ್ಯಾರ್ಥಿಯಾದರೂ ಪರೀಕ್ಷೆಯಲ್ಲಿ ಫೇಲಾಗಬಹುದು. ಸಾಮಾಜಿಕ ಶಿಷ್ಟಾಚಾರವನ್ನು ವ್ಯಕ್ತಿ ಪಾಲಿಸುವುದಿಲ್ಲ. ನೆಂಟರಿಷ್ಟರನ್ನು ಮಾತಾಡಿಸುವುದಿಲ್ಲ. ಅಥವಾ ಕಾರಣವಿಲ್ಲದೆ ಅವರ ಮೇಲೆ ರೇಗಾಡಬಹುದು. ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಬಹುದು. ಕಾಲು ಕೆರೆದು ಜಗಳಕ್ಕೆ ನಿಲ್ಲಬಹುದು. ಹಿಂಸಾಚಾರದಲ್ಲಿ ತೊಡಗಬಹುದು.

ಚಿಕಿತ್ಸೆ: ಮಿದುಳಿನ ರಾಸಾಯನಿಕ ಕಣಗಳ ಉತ್ಪಾದನೆ ಮತ್ತು ಕ್ರಿಯಾಶೀಲತೆಯಲ್ಲಿ ವ್ಯಾತ್ಯಾಸವಾಗುವುದೇ ಸ್ಕಿಜೋಪ್ರೀನಿಯಾ ಕಾಯಿಲೆಗೆ ಕಾರಣ ಎನ್ನಲಾಗಿರುವುದರಿಂದ ಈ ರಾಸಾಯನಿಕ ವ್ಯತ್ಯಾಸವನ್ನು ಸರಿಪಡಿಸಬಲ್ಲ ಔಷಧಿಗಳನ್ನು ರೋಗಿಗೆ ನೀಡಲಾಗುತ್ತದೆ. ಶಮನಕಾರಿ ಮಾತ್ರೆಗಳನ್ನೂ ಆರು ತಿಂಗಳಿನಿಂದ ಒಂದು ವರ್ಷ ಕಾಲಸೇವಿಸಲು ಹೇಳಲಾಗುತ್ತದೆ. ವ್ಯಕ್ತಿ ನಿತ್ಯ ಚಟುವಟಿಕೆಯಲ್ಲಿ ಮಗ್ನನಾಗುವಂತೆ ಪ್ರೋತ್ಸಾಹಿಸಬೇಕು. ಚಿಕಿತ್ಸೆಯಿಂದ ಕಾಯಿಲೆ ಗುಣವಾಗುತ್ತಿದ್ದಂತೆ, ವ್ಯಕ್ತಿ ಎಲ್ಲರಂತೆ ಜೀವನ ಮಾಡಲು ವಿದ್ಯಾಭ್ಯಾಸ ಮುಂದುವರೆಸಲು ಶಕ್ತನಾಗುತ್ತಾನೆ.

ಹರೆಯದಲ್ಲಿ ಆರಂಭವಾಗುವ ಸ್ಕಿಜೋಪ್ರೀನಿಯಾ ಕಾಯಿಲೆಯನ್ನು ಗುರುತಿಸಿ ಮತ್ತು ಹತೋಟೆಯಲ್ಲಿಡಿ, ಮನೋವೈದ್ಯರ ಸಲಹೆಯನ್ನು ಪಡೆಯಿತಿ.

ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ!
ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 
ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?
Editor’s Pick More