ನಮ್ಮ ಅಂತ್ಯಕ್ಕೆ ಮುನ್ನುಡಿ ಬರೆಯುತ್ತಿದೆಯೇ ನಮ್ಮದೇ ಸ್ಮಾರ್ಟ್‌ಫೋನ್‌?

ನಮ್ಮ ಬದುಕಿನ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್ ನುಂಗಿಹಾಕುತ್ತಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದರೆ, ಸ್ಮಾರ್ಟ್‌ಫೋನ್ ಗೀಳಿನಿಂದ ಹದಿಹರೆಯದವರು ಮನೋವ್ಯಾಕುಲತೆಗೆ ಒಳಗಾಗುತ್ತಿದ್ದಾರೆಂದು ಅಮೆರಿಕದ ಸಂಶೋಧಕರು ಕಂಡುಕೊಂಡಿರುವುದು ಚಿಂತೆಗೆ ಈಡುಮಾಡಿದೆ  

ಸ್ಮಾರ್ಟ್‌ಫೋನ್ ಬಂದ ಮೇಲೆ ಜಗತ್ತೇ ತಮ್ಮ ಅಂಗೈನಲ್ಲಿದೆ ಎಂಬಂತೆ ಇಂದಿನ ಯುವಜನಾಂಗ ನಡೆದುಕೊಳ್ಳುತ್ತಿದೆ ಎಂದು ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸುತ್ತಿದ್ದರು. ಅವರು ಗಮನಿಸಿದ ಹಾಗೆ ಮೆಟ್ರೊ ರೈಲುಗಳು, ಬಸ್ ನಿಲ್ದಾಣಗಳು, ಕಾಲೇಜ್ ಕ್ಯಾಂಪಸ್ ಗಳು, ಕಚೇರಿಯ ಲಿಫ್ಟ್‌ಗಳಂತಹ ಸಾರ್ವಜನಿಕ ಜಾಗಗಳಲ್ಲಿ ಹುಡುಗ-ಹುಡುಗಿಯರು ಸ್ಮಾರ್ಟ್‌ಫೋನ್‌ಗಳಲ್ಲಿ ಮುಳುಗಿಹೋಗಿರುತ್ತಾರೆ. ತಮ್ಮ ಹತ್ತಿರದ ಹಾಗುಹೋಗುಗಳ ಬಗ್ಗೆಯೂ ಪರಿವೆ ಇರುವುದಿಲ್ಲವೆಂಬುದು ಅವರ ಬೇಸರಕ್ಕೆ ಕಾರಣ.

ಹೌದು, ನಾವು ಸಹ ಅವರ ಬೇಸರದ ಭಾಗವಾಗಿರಬಹುದು. ನಮ್ಮ ಕೈಯೊಳಗಿನ ಸ್ಮಾರ್ಟ್‌ಫೋನ್ ಮಾಡಿರುವ ಮೋಡಿಯೇ ಅಂಥದ್ದು. ನಮ್ಮ ನಿತ್ಯ ಬದುಕಿನ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ಗಳು ನುಂಗಿಹಾಕುತ್ತಿವೆ. ವಿಡಿಯೋ ವೀಕ್ಷಿಸುವುದು, ಸಾಮಾಜಿಕ ಚರ್ಚೆಗಳಲ್ಲಿ ಭಾಗಿಯಾಗುವುದು, ಫೋಟೊಗಳನ್ನು ಹಂಚಿಕೊಳ್ಳುವುದು, ಜ್ಞಾನಾರ್ಜನೆ, ಓದು, ಹಾಡು, ಸಂಗೀತ, ಮನರಂಜನೆ ಹೀಗೆ ಹತ್ತು ಹಲವು ವಿಷಯ-ವಿಚಾರಗಳನ್ನು ಸ್ಮಾರ್ಟ್‌ಫೋನ್‌ಗಳು ನಮಗೆ ಒದಗಿಸಿವೆ. ಸ್ಮಾರ್ಟ್‌ಫೋನ್‌ಗಳಿಂದ ನಾವು ತಿಳಿದುಕೊಂಡಿದ್ದೇವೆ, ಕಲಿತಿದ್ದೇವೆ, ಜ್ಞಾನ ವೃದ್ಧಿಸಿಕೊಂಡಿದ್ದೇವೆ. ಆದರೆ, ಇವತ್ತು ಯುವಜನಾಂಗದಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್‌ ಗೀಳಿನ ಬಗ್ಗೆ ಋಣಾತ್ಮಕ ವರದಿಯೊಂದು ಅಮೆರಿಕದಿಂದ ಹೊರಬಿದ್ದಿದೆ.

ಅಮೆರಿಕದ ಸ್ಯಾನ್‌ಡಿಯಾಗೊ ಸ್ಟೇಟ್ ಯೂನಿವರ್ಸಿಟಿ ಮನೋವಿಜ್ಞಾನ ಪ್ರಾಧ್ಯಾಪಕ ಜೀನ್ ಟ್ವೆಂಗೆ ನಡೆಸಿರುವ ಅಧ್ಯಯನದ ಪ್ರಕಾರ, ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆಯಿಂದ ಹದಿಹರೆಯದವರಲ್ಲಿ ಖಿನ್ನತೆ ಹೆಚ್ಚಾಗುತ್ತಿದ್ದು, ಇದು ಆತ್ಮಹತ್ಯೆಗೆ ಪ್ರೇರಣೆ ನೀಡುತ್ತಿದೆ. 15ರಿಂದ 19 ವರ್ಷದೊಳಗಿನವರು ಸ್ಮಾರ್ಟ್‌ಫೋನ್‌ನೊಂದಿಗೆ ಅಧಿಕ ಸಮಯ ಕಳೆಯುತ್ತಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ.

ಐದು ಲಕ್ಷಕ್ಕಿಂತಲೂ ಹೆಚ್ಚು ಹದಿಹರೆಯದವರಿಂದ ಸಂಗ್ರಹಿಸಿದ ಮಾಹಿತಿಗಳ ಪ್ರಕಾರ, ಸ್ಮಾರ್ಟ್‌ಫೋನ್‌ ಬಳಸಿ ಸ್ನ್ಯಾಪ್ ಚಾಟ್, ಫೇಸ್ಬುಕ್, ಇನ್ಸ್ಟಾಗ್ರಾಂನಂತಹ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯವನ್ನು ಯುವಕರು ಕಳೆಯುತ್ತಾರೆ. ಅಮೆರಿಕದ ಶೇ.75 ಹದಿಯರೆಯದರು ಸ್ಮಾರ್ಟ್‌ಫೋನ್‌ ಉಪಯೋಗಿಸುತ್ತಾರೆ. ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಸಮಯ ಕಳೆಯುವವರು 'ಭವಿಷ್ಯದ ಭರವಸೆ ಉಳಿದಿಲ್ಲ', 'ನಾನು ಏನನ್ನೂ ಸಾಧಿಸಲಾರೆ ಎಂದು ಭಾವಿಸಿದ್ದೇನೆ' ಎಂಬಂಥ ಹತಾಶ ಮನೋಭಾವ ಹೊಂದಿದ್ದಾರೆ. ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬಳಸುವವರು, ತಮ್ಮ ಸಮಯವನ್ನು ಆಟ, ವ್ಯಾಯಾಮ, ಸಂಗೀತ, ನೃತ್ಯ, ಸ್ನೇಹಿತರೊಂದಿಗೆ ಒಟನಾಟ, ಸಾಮಾಜಿಕವಾಗಿ ಹೆಚ್ಚು ತೊಡಗಿಸಿಕೊಳ್ಳುವಿಕೆಯಿಂದ ಆರೋಗ್ಯಕರ ಮನಸ್ಥಿತಿ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

2010 ಮತ್ತು 2015 ರ ನಡುವಿನ ಅವಧಿಯಲ್ಲಿ 13 ರಿಂದ 18 ವರ್ಷದೊಳಗಿನವರ ಆತ್ಮಹತ್ಯೆ ಪ್ರಮಾಣ ಶೇ.65ರಷ್ಟು ಹೆಚ್ಚಾಗಿದೆ. ಹದಿಹರೆಯದ ಹುಡುಗಿಯರಲ್ಲಿ ಶೇ.58ರಷ್ಟು ಅಧಿಕವಾಗಿ ತೀವ್ರ ಖಿನ್ನತೆಯ ವರದಿಗಳು ಕಂಡುಬಂದಿದೆ. "ಮಾನಸಿಕ ಆರೋಗ್ಯದಲ್ಲಿ ಹಠಾತ್ತಾಗಿ ಕಂಡುಬಂದಿರುವ ಈ ಬದಲಾವಣೆ ಒಳ್ಳೆಯದಲ್ಲ. ಕಳೆದ ಐದಾರು ವರ್ಷಗಳಿಂದೀಚೆ ಜನಜೀವನದಲ್ಲಿ ಕಂಡುಬಂದ ಅತಿ ದೊಡ್ಡ ಬದಲಾವಣೆ ಇದಾಗಿದ್ದು, ಆರೋಗ್ಯದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆಯಲ್ಲ,” ಎನ್ನುತ್ತಾರೆ ಮನೋವಿಜ್ಞಾನ ಪ್ರಾಧ್ಯಾಪಕ ಜೀನ್ ಟ್ವೆಂಗೆ.

ಹದಿಯರೆಯದವರು ಸ್ಮಾರ್ಟ್‌ಫೋನ್‌ಗಳಲ್ಲಿ ವ್ಯಯಿಸುತ್ತಿರುವ ಸಮಯ, ಖಿನ್ನತೆಯ ಲಕ್ಷಣಗಳು ಮತ್ತು ಆತ್ಮಹತ್ಯೆಯ ಅಂಕಿ-ಅಂಶಗಳ ನಡುವಿನ ಸಂಬಂಧವನ್ನು ಈ ವರದಿಯಲ್ಲಿ ಸೂಕ್ಷ್ಮವಾಗಿ ಗ್ರಹಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳಲ್ಲಿ ದಿನವೊಂದಕ್ಕೆ ಐದು ಗಂಟೆಗಳಿಗಿಂತ ಹೆಚ್ಚು ಕಾಲ ಕಳೆದ ಹದಿಹರೆಯದ ಶೇ.48ನಷ್ಟು ಜನರು ಕನಿಷ್ಠ ಒಂದು ಬಾರಿಯಾದರೂ ಆತ್ಮಹತ್ಯೆ ಸಂಬಂಧಿತ ಆಲೋಚನೆ, ಆತ್ಮಹತ್ಯಾ ಪ್ರಯತ್ನದಂತಹ ಚಟವಟಿಕೆಗಳಲ್ಲಿ ತೊಡಗಿದ್ದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ : ದಿನಕ್ಕೆ ಮೂರು ಬಾರಿಗೂ ಹೆಚ್ಚು ಸೆಲ್ಫಿ ಕ್ಲಿಕ್ಕಿಸುತ್ತೀರಾ? ಹಾಗಾದರೆ ಇದನ್ನು ಓದಿ 

ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ಸಮಯ ಕಳೆಯುವುದು, ಸಾಮಾಜಿಕ ಸಂವಹನಗಳಲ್ಲಿ ತೊಡಗುವುದು, ಕ್ರೀಡೆ, ವ್ಯಾಯಾಮ ಮತ್ತು ಮನೆಗೆಲಸ ಮಾಡುವುದು, ಧಾರ್ಮಿಕ ಸೇವೆಗಳಲ್ಲಿ ಭಾಗವಹಿಸುವುದು, ಪುಸ್ತಕಗಳನ್ನು ಓದುವುದರಿಂದ ಖಿನ್ನತೆ ಅಥವಾ ಆತ್ಮಹತ್ಯೆಯಂಥ ಆತಂಕಕಾರಿ ಮನೋತುಮುಲಗಳನ್ನು ದೂರ ಮಾಡಬಹುದೆಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಇದನ್ನು ಭಾರತದೊಂದಿಗೆ ಹೋಲಿಕೆ ಮಾಡಿದಾಗ, ಇವತ್ತಲ್ಲದಿದ್ದರೂ ಮುಂದಿನ ಕೆಲವೇ ವರ್ಷಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಹದಿಹರೆಯದವರ ಮಾನಸಿಕ ಸ್ಥಿತಿಗತಿಗಳ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಸ್ಮಾರ್ಟ್‌ಫೋನ್‌ನ ಶಿಸ್ತುಬದ್ಧ ಬಳಕೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿ ಹಾಗೂ ಇಂದಿನ ಅನಿವಾರ್ಯವೆಂದೇ ಹೇಳಬಹುದು.

ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ!
ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 
ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?
Editor’s Pick More