ಸಮಾಧಾನ | ಮಕ್ಕಳ ಅಪ್ರಬುದ್ಧ ಪ್ರೀತಿ ಎದುರಾದಾಗ ಏನು ಮಾಡಬೇಕು?

ಹದಿಹರೆಯದ ವಯಸ್ಸು ಭಾವೋದ್ವೇಗಗಳ ಅವಧಿ. ಅವರ ಭಾವನೆಗಳು ಯಾವಾಗಲೂ ಉತ್ಕಟವಾಗಿಯೇ ಇರುತ್ತವೆ. ನೈಜ ಬದುಕಿನ ನೆಲಗಟ್ಟನ್ನು ಅವರು ಕಾಣಲಾರರು. ಭಾವೋದ್ವೇಗಕ್ಕೆ ಒಳಗಾದವರಿಗೆ ಸರಿ, ತಪ್ಪು ತಿಳಿಯುವುದಿಲ್ಲ. ಅವರ ವರ್ತನೆ ಹೇಗಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ

“ಇವಳಿಗೆ ಬುದ್ದಿ ಇದೆಯಾ? ಇವಳು ಮಾಡ್ತಿರೋ ಘನಂದಾರಿ ಕೆಲಸವನ್ನು ಹಾಡಿ ಹೊಗಳಬೇಕೇ? ನೀವೇ ಹೇಳಿ ಡಾಕ್ಟರೇ. ಒಂಭತ್ತನೇ ಕ್ಲಾಸಿನ ಹುಡುಗಿ. ಆಟ-ಪಾಠದಲ್ಲಿ ಮನಸ್ಸಿರಬೇಕೇ ವಿನಃ ಪ್ರೀತಿ-ಪ್ರೇಮದಲ್ಲಿ ಅಲ್ಲ. ಇವಳು ಒಬ್ಬನ ಹಿಂದೆ ಬಿದ್ದಿದ್ದಾಳೆ. ಅವನು ಎಸ್ಸೆಸ್ಸೆಲ್ಸಿಯಲ್ಲಿ ಫೇಲು. ಡೆಲಿವರಿ ಬಾಯ್ ಆಗಿ ಯಾವುದೋ ಕಂಪನೀಲಿ ಕೆಲಸ ಮಾಡ್ತಾನಂತೆ. ವಾಸ ಲಕ್ಷ್ಮಿ ಲೇಔಟಿನ ಒಂದು ಗುಡಿಸಲು. ಅಪ್ಪ ಕುಡುಕ, ದಿನಾ ಕುಡಿದು ಚರಂಡೀಲಿ ಬಿದ್ದಿರ್ತಾನೆ. ಅಮ್ಮ ಕಸಮುಸುರೆ ತಿಕ್ಕಿ ಸಂಪಾದನೆ ಮಾಡಿ ಹೊಟ್ಟೆ ಹೊರೀತಾಳೆ. ಹುಡುಗನ ಅಣ್ಣ ಮನೆ ಬಿಟ್ಟು ಓಡಿಹೋಗಿದ್ದಾನಂತೆ. ಪೊಲೀಸರ ಲಿಸ್ಟ್‌ಲ್ಲಿದ್ದಾನೆ. ಕಳ್ಳತನ, ಜೂಜಾಟ ಇತ್ಯಾದಿ ದುಶ್ಚಟಗಳಂತೆ. ‘ನಾನು ಶಂಕ್ರನ್ನೇ ಮದುವೆಯಾಗೋದು, ಪಾಪ ಒಳ್ಳೆಯ ಹುಡುಗ. ಅವನಪ್ಪ ಅವನ್ನ ಶಾಲೆಗೆ ಹೋಗಲು ಬಿಡ್ಲಿಲ್ಲ. ಗೆರಾಜ್‌ನಲ್ಲಿ ಜೀತಕ್ಕೆ ಹಾಕಿ, ಹೊಡೆದು ಬಡಿದೂ ಮಾಡ್ತಿದ್ದನಂತೆ. ಹುಡುಗ ಬುದ್ದಿವಂತ ಆದರೂ ಪರೀಕ್ಷೆಯಲ್ಲಿ ಫೇಲಾದ. ಅದು ಅವನ ತಪ್ಪಲ್ಲ. ಅವನ್ನ ನಾನು ಪ್ರೀತಿ ಮಾಡ್ತಿದ್ದೀನಿ. ಅವನಿಗೆ ಕೊಟ್ಟು ಮದುವೆ ಮಾಡಿದರೆ ಸರಿ. ನೀವು ಮಾಡ್ಲಿಲ್ಲ ಅಂದ್ರೆ ಮನೆ ಬಿಟ್ಟು ಹೋಗ್ತಿನಿ’ ಅಂತಾಳೆ ಈಕೆ.”

“ಇವಳಿಗೆ ನೀವು ಬುದ್ದಿ ಹೇಳಿ ಸಾರ್. ಬಡವ ಅಂತ ಕರುಣೆ ಇದೆ. ‘ಅವನಿಗೆ ಸ್ಪಲ್ಪ ಸಹಾಯ ಮಾಡೋಣ. ಓದ್ತೀನಿ ಅಂದ್ರೆ ಮುಂದಕ್ಕೆ ಓದಿಸೋಣ. ಆದರೆ, ನೀನು ಅವನನ್ನು ಮದುವೆ ಮಾಡಿಕೊಳ್ಳೋ ಹುಚ್ಚುತನ ಬಿಡು. ನೀನು ಅವನನ್ನು ಮದುವೆಯಾದರೆ ಗುಡಿಸಲಿಗೆ ಹೋಗಿ ಇರ್ಬೇಕು. ನೀನು ನಿನ್ನ ಅತ್ತೆ ಜೊತೆ ಕಸ ಮುಸುರೆ ತಿಕ್ಕಬೇಕು. ಕುಡುಕ ಮಾವನ್ನ ಸುಧಾರಿಸಬೇಕು. ನಾವೆಲ್ಲ ನಿನ್ನ ಮನೆಗೆ ಬರೋದಿಕ್ಕೆ ಆಗುತ್ತಾ? ನಮ್ಮ ನೆಂಟರಿಷ್ಟರು ಏನಂತಾರೆ. ಬಿದ್ದು ಬಿದ್ದು ನಗ್ತಾರೆ. ನಮಗೂ ಬಹಿಷ್ಕಾರ ಹಾಕ್ತಾರೆ. ಜಾತಿ ಕೆಟ್ಟವರ ಮನೇಲಿ ನೀರೂ ಕುಡಿಯೋಲ್ಲ ಅಂತಾರೆ. ಬೇಡ ಕಣೇ ಈ ಹುಚ್ಚು ಪ್ರೀತಿ, ಬಿಡು. ಜಾಣೆಯಾಗು. ಓದು. ಇಂಜಿನಿಯರೋ, ಡಾಕ್ಟರೋ ಆಗು. ಫಾರಿನ್ ವರನನ್ನು ತಂದು, ಗ್ರ್ಯಾಂಡ್ ಆಗಿ ಮದುವೆ ಮಾಡ್ತಿನಿ. ಸುಖವಾಗಿರ್ತಿಯಾ' ಎಂದು ಗಿಣಿಗೆ ಹೇಳಿದ ಹಾಗೆ ಹೇಳ್ತಿದ್ದೇವೆ.”

“ಇವಳು ನಮ್ಮ ಮಾತು ಕೇಳ್ತಿಲ್ಲ. ಊಟ, ತಿಂಡಿ ಬಿಟ್ಟು ಕೂತಿದ್ದಾಳೆ. ಶಾಲೆಗೆ ನಾವು ಕಳುಹಿಸುತ್ತಿಲ್ಲ. ಹೋದರೆ ಓಡಿಹೋಗ್ತಾಳೇನೋ ಭಯ. ಮೊನ್ನೆ ರಾತ್ರಿ ನೇಣು ಹಾಕ್ಕೊಳ್ಳೊದಕ್ಕೆ ಪ್ರಯತ್ನಪಟ್ಟಳು, ತಪ್ಪಿಸಿದೆವು. ಒಂದೇ ಸಮ ಅಳ್ತಾಳೆ. ನಿದ್ರೆ ಮಾಡ್ತಿಲ್ಲ. ಕರುಳು ಚುರುಕ್ ಅನ್ಸುತ್ತೆ. ನೀವು ಅವಳಿಗೆ ತಿಳಿವಳಿಕೆ ಹೇಳಿ. ಹಿಪ್ನೋಟೈಸ್ ಮಾಡಿ. ಆ ಹುಡುಗನನ್ನು ಮರೆಯುವಂತೆ ಮಾಡಿ. ನಿಮ್ಮ ಫೀಸ್ ಎಷ್ಟಾದರೂ ಕೊಡ್ತೇವೆ. ನಮ್ಮ ಹುಡುಗೀನ ಉಳಿಸಿಕೊಡಿ,” ಎಂದು ಗೀತಮ್ಮ ಕಣ್ಣೀರು ಹಾಕಿದಳು.

“ನಾನು ಅವನ್ನ ತುಂಬಾ ಪ್ರೀತಿಸ್ತೀನಿ. ಅವನೂ ನನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಾನೆ. ಶಂಕರ ತುಂಬಾ ಒಳ್ಳೆಯ ಹುಡುಗ ಸಾರ್. ಬುದ್ದಿವಂತ. ಇಂಗ್ಲಿಷಿನಲ್ಲಿ ಎಷ್ಟು ಚೆನ್ನಾಗಿ ಮಾತಾಡ್ತಾನೆ ಗೊತ್ತಾ? ಇಂಗ್ಲಿಷ್ ಪೊಯಮ್ಸ್ ಅವನಿಗೆ ಕಂಠಪಾಠ. ಕನ್ನಡಾನೂ ಚೆನ್ನಾಗಿ ಬರುತ್ತೆ. ಕತೆ, ಕಾದಂಬರಿ ಓದುತ್ತಾನೆ. ಕವನಗಳನ್ನೂ ಬರೆದಿದ್ದಾನೆ. ಪಾಪ, ಅವರಪ್ಪ ಅವನನ್ನು ಓದೋಕೆ ಬಿಡ್ಲಿಲ್ಲ. ಗೆರಾಜ್‌ನಲ್ಲಿ ಜೀತಕ್ಕೆ ಬಿಟ್ಟಿದ್ರಂತೆ. ಈಗ ಅವನು ಡೆಲಿವರಿ ಬಾಯ್. ಎಸ್ಸೆಸ್ಸೆಲಿ ಪರೀಕ್ಷೆ ಕಟ್ಟಿದ್ದಾನೆ. ಮೂರು ಸಬ್ಜೆಕ್ಟ್ ಪಾಸ್ ಮಾಡಿದರೆ, ಸಂಜೆ ಕಾಲೇಜು ಸೇರಿ ಓದು ಮುಂದುವರಿಸ್ತಾನೆ. ಡಿಗ್ರಿ ಮಾಡಿ ಒಳ್ಳೆಯ ಕೆಲಸ ಹುಡುಕ್ತಾನೆ.”

"ನೀನು ನನ್ನ ಮದುವೆಯಾಗು. ನೀನು ನನ್ನ ಅದೃ‍‍‍‍‍‍‍‍ಷ್ಟದೇವತೆ. ನಿನ್ನ ಸ್ನೇಹವಾದ ಮೇಲೆ ನನ್ನ ಶರೀರದಲ್ಲಿ ಹೊಸಶಕ್ತಿ ಬಂದಿದೆ. ನಿನ್ನನ್ನು ರಾಣಿ ತರ ನೋಡ್ಕೊಳ್ತೇನೆ. ಇಂಡಿಯಾ, ಫಾರೀನ್ ಟೂರ್ ಮಾಡಿಸ್ತೇನೆ’ ಅಂತ ಹೇಳ್ತಾನೆ. ಅವನ ಹೃದಯ ಅಪ್ಪಟ ಬಂಗಾರ ಸರ್. ನಾನು ಅವನ್ನೇ ಮದುವೆ ಆಗೋದು. ಆಗದೆಹೋದರೆ ಇನ್ಯಾರನ್ನೂ ಮದುವೆ ಮಾಡ್ಕೊಳಲ್ಲ. ಬಲವಂತ ಮಾಡಿ ನನಗೆ ಇನ್ನೊಬ್ಬನ ಜೊತೆ ಮದುವೆ ಮಾಡೋಕೆ ನನ್ನ ಅಪ್ಪ-ಅಮ್ಮ ಪ್ರಯತ್ನ ಮಾಡಿದ್ರೆ ನಾನು ಆತ್ಮಹತ್ಯೆ ಮಾಡಿಕೊಂಡು ಸತ್ತು ಹೋಗ್ತೇನೆ ಸರ್. ಶಂಕರನನ್ನು ನಿಮ್ಮ ಹತ್ರ ಕರ್ಕೊಂಡು ಬರ್ತೀನಿ. ನೀವು ಅವನನ್ನು ನೋಡಿ, ಮಾತಾಡ್ಸಿ ಸಾರ್. ಅವನು ಎಷ್ಟು ಒಳ್ಳೆಯವನು ಅಂತ ನಿಮಗೇ ಗೊತ್ತಾಗುತ್ತೆ. ‘ನಿಮ್ಮ ಮಗಳು ಚೆನ್ನಾಗಿರಬೇಕಾದರೆ ಅವಳು ಇಷ್ಟಪಟ್ಟವನ ಜೊತೇಲೇ ಮದುವೆ ಮಾಡಿಸಿ’ ಅಂತ ನೀವು ನನ್ನ ಅಪ್ಪ-ಅಮ್ಮನಿಗೆ ಹೇಳಿ ಸರ್. ನಾನಿಲ್ದೆ ಶಂಕರ ಬದುಕೋಲ್ಲ. ಅವನಿಲ್ಲದೆ ನಾನು ಬದುಕೋಲ್ಲ,” ಎಂದಾಗ ಅವಳ ಕಣ್ಣುಗಳಲ್ಲಿ ನೀರು ತುಂಬಿದ್ದವು.

ಹರೆಯದ ಉತ್ಕಟ ಪ್ರೀತಿ-ಪ್ರೇಮ

ಲೈಂಗಿಕ ಹಾರ್ಮೋನುಗಳು ಮತ್ತು ಮಾಧ್ಯಮಗಳ ಪ್ರಭಾವಕ್ಕೆ ಒಳಗಾದ ಹರೆಯದವರ ಪ್ರೀತಿ-ಪ್ರೇಮ ಬಹಳ ಉತ್ಕಟವಾಗಿರುತ್ತದೆ. ಬಣ್ಣ, ವಿದ್ಯೆ, ಜಾತಿ-ಧರ್ಮ, ಭಾಷೆಯ ಇತಿಮಿತಿಯನ್ನು ಮೀರಿ ಹರೆಯದ ಹುಡುಗ-ಹುಡುಗಿಯರು ಪ್ರೀತಿ-ಪ್ರೇಮದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ತಮ್ಮ ಮನೆಯವರ, ಸಮಾಜದ ವಿರೋಧವನ್ನೂ ಅವರು ಲೆಕ್ಕಿಸುವುದಿಲ್ಲ. ವಾಸ್ತವಿಕ ಪ್ರಜ್ಞೆ ಇಲ್ಲದೆ ಪರಸ್ಪರ ಪ್ರೀತಿಸುತ್ತಾರೆ. ಪ್ರೀತಿಸುವ ಅವರಿಗೆ ಬೇರೇನೂ ಕಾಣುವುದಿಲ್ಲ. ತಮ್ಮ ಪ್ರೀತಿಗೆ ಇತರರು ಅಡ್ಡಿ ಬಂದಾಗ ಸಿಟ್ಟಾಗುತ್ತಾರೆ. ಮನೆ ಬಿಟ್ಟು ಓಡಿಹೋಗುತ್ತಾರೆ. ಹೋರಾಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಂಥ ಕಷ್ಟನಷ್ಟಗಳನ್ನೂ ಅನುಭವಿಸಲು ಸಿದ್ಧರಾಗುತ್ತಾರೆ. ಬುದ್ದಿ ಭ್ರಮಣೆಗೆ ಒಳಗಾಗುತ್ತಾರೆ. ಕೆಲವರು ದುರಂತ ಅಂತ್ಯವನ್ನು ಕಾಣುತ್ತಾರೆ.

ಹರೆಯದ ಪ್ರೀತಿ-ಪ್ರೇಮ ನಮ್ಮ ಸಿನಿಮಾ, ಟಿವಿಗಳಿಗೆ ನಿತ್ಯನೂತನ ವಸ್ತು. ಪ್ರೇಮಿಗಳು ಶ್ರೀಮಂತಿಕೆ, ಬಡತನ, ವಿಭಿನ್ನ ಜಾತಿ-ವರ್ಗ-ಧರ್ಮ, ಭಾಷೆ, ದೇಶಗಳಿಗೆ ಸೇರಿದಾಗ ಉಂಟಾಗುವ ಸಂಘರ್ಷಗಳನ್ನು ಚಿತ್ರಿಸುತ್ತಾರೆ. ಪ್ರೇಮಿಗಳ ಸುಖಾಂತ್ಯದ ಕತೆಗಳನ್ನು, ದುಃಖಾಂತ್ಯದ ಕತೆಗಳನ್ನು ನೋಡಲು ಜನರೂ ಸಿದ್ಧರಿತ್ತಾರೆ.

ಇದನ್ನೂ ಓದಿ : ಸಮಾಧಾನ | ಪಾದರಸದಂತೆ ಚುರುಕಾಗಿದ್ದ ಮಗ ಕಲ್ಲಿನಂತೆ ಜಡವಾಗಿದ್ದೇಕೆ?

ಹರೆಯ ಭಾವೋದ್ವೇಗಗಳ ಅವಧಿ, ಅವರ ಭಾವನೆಗಳು ಯಾವಾಗಲೂ ಉತ್ಕಟವಾಗೇ ಇರುತ್ತವೆ. ವಾಸ್ತವಿಕತೆಯ ನೆಲಗಟ್ಟನ್ನು ಅವರು ಕಾಣಲಾರರು. ಕಲ್ಪನಾ ಲೋಕದಲ್ಲಿಯೇ ಅವರು ವಿಹರಿಸುತ್ತಾರೆ. ಭಾವೋದ್ವೇಗಕ್ಕೆ ಒಳಗಾದವರಿಗೆ ಸರಿ-ತಪ್ಪುಗಳ ಅರಿವೇ ಆಗುವುದಿಲ್ಲ.

ಹರೆಯದ ಅವಧಿಯಲ್ಲಿ ಪ್ರೀತಿ-ಪ್ರೇಮದ ಆಕರ್ಷಣೆಗೆ ಸಿಲುಕಬೇಡಿ ಎಂದೇ ಹೇಳಬೇಕು. ಪ್ರೌಢತೆ ಇಲ್ಲದ ಹುಡುಗ-ಹುಡುಗಿ, ಈ ಭಾವೋದ್ವೇಗದಲ್ಲಿ ಸರಿಯಾದ ಜೀವನ ಸಂಗಾತಿಯನ್ನು ಆಯ್ಕೆ ಮಾಡಲಾರರು. ಮದುವೆ-ಸಂಸಾರದ ಬಗ್ಗೆ ಯೋಚಿಸಲು ಇದು ಸಮಯವೂ ಅಲ್ಲ. 18 ವರ್ಷ ದಾಟಿರದ ಹುಡುಗಿ, 21 ವರ್ಷ ದಾಟಿರದ ಹುಡುಗ ಕಾನೂನಿನ ಪ್ರಕಾರ ಮದುವೆಯಾಗಲು ಸಾಧ್ಯವೂ ಇಲ್ಲ. ಪ್ರೀತಿಸಿದ್ದರೆ ಕಾಯಿರಿ. ಪ್ರೌಢತೆಗೆ ಬಂದ ಮೇಲೆ, ಮದುವೆಯ ನಿರ್ಧಾರ ಮಾಡಿ ಎಂದು ಎಲ್ಲರೂ ಈ ಹುಡುಗ-ಹುಡುಗಿಯರ ಮನ ಒಲಿಸಬೇಕು. ವಿರೋಧ ಮಾಡಿದರೆ, ಬಲವಂತವಾಗಿ ಬೇರ್ಪಡಿಸಲು ಪ್ರಯತ್ನಿಸಿದರೆ, ಅವರನ್ನು ಗೃಹಬಂಧನದಲ್ಲಿಟ್ಟರೆ, ಅನಾಹುತಗಳಾಗುವ ಸಂಭವವೇ ಹೆಚ್ಚು. ಮನೆಯವರ ವಿರೋಧ ಹೆಚ್ಚಿದಷ್ಟೂ ಹುಡುಗ-ಹುಡುಗಿಯ ಹಠವೂ ಹೆಚ್ಚುತ್ತದೆ. ಭಗ್ನಪ್ರೇಮಿ ಹಿಂಸಾಚಾರಕ್ಕೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ/ಳೆ ಅಥವಾ ಮಾನಸಿಕ ರೋಗಿಯಾಗುತ್ತಾನೆ/ಳೆ. ಹುಡುಗ-ಹುಡುಗಿ ಮತ್ತು ಎರಡೂ ಮನೆಯವರಿಗೆ ಆಪ್ತ ಸಮಾಲೋಚನೆಯ ಅಗತ್ಯವಿರುತ್ತದೆ. ಯಾರೊಬ್ಬರೂ ದುಡುಕಬಾರದು. ತಮ್ಮ ನಿರ್ಧಾರವನ್ನು ಇತರರ ಮೇಲೆ ಹೇರಬಾರದು. ರಾಜಿ, ಸಂಧಾನ, ಮಾತುಕತೆಯಿಂದ ಸಮಸ್ಯೆಯನ್ನು ಬಿಡಿಸಲು ಪ್ರಯತ್ನ ನಡೆಯಬೇಕು. ಸಹನೆ, ಸೂಕ್ಷ್ಮತೆಯಿಂದ ವಿಷಯವನ್ನು ನಿಭಾಯಿಸಬೇಕು.

ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ!
ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 
ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?
Editor’s Pick More