ಸಮಾಧಾನ | ವಿನೋದನ ಏಕಾಗ್ರತೆಗೆ ಭಂಗ ತಂದಿದ್ದ ಆ ತಪ್ಪು ಗ್ರಹಿಕೆಯಾದರೂ ಏನು? 

ಹಸ್ತಮೈಥುನ ಹಾನಿಕಾರಕ ಎಂಬ ನಂಬಿಕೆ ಭಾರತದ ಉಪಖಂಡದಲ್ಲಿ ಕಂಡು ಬರುವಂತಹ ತಪ್ಪು ನಂಬಿಕೆ. ಹರೆಯಕ್ಕೆ ಕಾಲಿಡುತ್ತಿದ್ದಂತೆ, ಹುಡುಗ-ಹುಡುಗಿಯರ ದೇಹದಲ್ಲಿ ಲೈಂಗಿಕ ವಿಕಾಸ ನಡೆಯುತ್ತದೆ. ಜೊತೆಗೆ ಲೈಂಗಿಕ ಬಯಕೆಗಳೂ ಹುಟ್ಟುತ್ತವೆ. ಇದಕ್ಕೆ ವಿನೋದ ಹೊರತಾಗಿರಲಿಲ್ಲ

“ನಾನು ಪಿಯು ವಿದ್ಯಾರ್ಥಿ. ಹೆಸರು ವಿನೋದ್. ಇಂಜನಿಯರಿಂಗ್ ಅಥವಾ ಐಎಎಸ್ ಮಾಡುವ ಆಸೆ ಇದೆ. ಒಳ್ಳೆಯ ಕಾಲೇಜಿನಲ್ಲಿ ಓದುತ್ತಿದ್ದೇನೆ. ಟೀಚಿಂಗ್-ಕೋಚಿಂಗ್ ಚೆನ್ನಾಗಿದೆ. 80 ಅಥವಾ 90 ಮಾರ್ಕ್ಸ್ ತೆಗೆಯಲು ತರಬೇತಿ ಸಿಗುತ್ತಿದೆ. ಆದರೆ, ನನಗೆ ಏಕಾಗ್ರತೆ ಇಲ್ಲ. ಕುಳಿತು ಸ್ಟಡಿ ಮಾಡಲು ಆಗುತ್ತಿಲ್ಲ. ತರಗತಿಯಲ್ಲಿ ಪಾಠ ಕೇಳಿಸಿಕೊಳ್ಳಲು ಆಗುತ್ತಿಲ್ಲ. ವಿಪರೀತ ಸುಸ್ತು ಆಯಾಸವಾಗುತ್ತದೆ. ಪುಸ್ತಕದ ಮುಂದೆ ಕೂತಿರುತ್ತೇನೆ. ಹತ್ತು ನಿಮಿಷದಲ್ಲೇ ನಿದ್ರೆ ಬರುವಂತಾಗುತ್ತದೆ. ಕಣ್ಣುರಿ ಶುರುವಾಗುತ್ತದೆ. ಡಾಕ್ಟರನ್ನು ಕಂಡಿದ್ದೇ ಅವರು ರಕ್ತ ಪರೀಕ್ಷೆ ಮಾಡಿ, ಏನೂ ತೊಂದರೆ ಇಲ್ಲ ಎಂದು ಮಿಟಮಿನ್ ಬರೆದುಕೊಟ್ಟರು. ಒಂದು ತಿಂಗಳು ತಿಂದೆ. ಏನೂ ಪ್ರಯೋಜನವಾಗಿಲ್ಲ. ಹೀಗಾದರೆ ನಾನು ಪಿಯು ಪರೀಕ್ಷೆಯಲ್ಲಿ 80 ಮಾರ್ಕ್ಸ್ ತೆಗೆಯುವುದಿರಲಿ, ಪಾಸಾಗುವುದೂ ಕಷ್ಟ. ಈ ದಿನ ಓದಿದ್ದು ಸಂಜೆ ಮರೆತು ಹೋಗುತ್ತೆ, ಸಂಜೆ ಓಡಿದ್ದು ಮಾರನೇ ದಿನ ಏನೂ ಜ್ಞಾಪಕವಿರುವುದಿಲ್ಲ. ಬರೆಯಲು ಕೈನಡುಗುತ್ತದೆ. ಬರವಣಿಗೆ ಕೆಟ್ಟದಾಗಿರುತ್ತದೆ. ನಾನು ಬರೆದದ್ದನ್ನು ನಾನೇ ಓದಲಾಗುವುದಿಲ್ಲ. ಈ ಸಂಬಂಧ ನಾನು ನ್ಯೂರಾಲಜಿಸ್ಟ್ ರನ್ನು ಕಂಡಿದ್ದೆ, ಅವರು ಪರೀಕ್ಷೆ ಮಾಡಿ ‘ನಿನಗೆ ನರಸಂಬಂಧ ರೋಗ ಯಾವುದೂ ಇಲ್ಲ. ಮನೋವೈದ್ಯರನ್ನು ಕಾಣು ಎಂದು ನಿಮ್ಮ ಹೆಸರು ಹೇಳಿದರು. ನನಗೆ ಯಾವ ಟೆನ್ಸನ್ ಇಲ್ಲ ಸಾರ್. ಅಪ್ಮ ಅಮ್ಮ ಒಳ್ಳೆಯವರು. ನನ್ನನ್ನು ಬಹಳ ಪ್ರೀತಿಯಿಂದ ಸಾಕಿದ್ದಾರೆ. ನಾನು ಏನನ್ನೂ ಕೇಳಿದರೂ ತೆಗೆದುಕೊಡುತ್ತಾರೆ. ನನ್ನ ಈ ಸುಸ್ತು/ಆಯಾಸವನ್ನು ಕಂಡು ಅವರೂ ಚಿಂತಿತರಾಗಿದ್ದಾರೆ. ನನಗೇನಾಗಿದೆ ಸಾರ್”

“ನಿನ್ನ ಈ ಸುಸ್ತು-ಆಯಾಸಕ್ಕೆ, ಏಕಾಗ್ರತೆಯ ಕೊರತೆಗೆ ಏನು ಕಾರಣವಿರಬಹುದೆಂದು ನಿನ್ನ ಊಹೆ?”

“ನೀವು ಮನೋವೈದ್ಯರು. ನಿಮ್ಮ ಜೊತೆ ಹೇಳಿಕೊಳ್ಳಲು ನನಗೆ ಸಂಕೋಚವಿಲ್ಲ. ನನ್ನ ಫ್ಯಾಮಿಲಿ ಡಾಕ್ಟರಿಗಾಗಲಿ, ನ್ಯೂರಾಲಜಿಸ್ಟ್ ಗಾಗಲಿ ಇದನ್ನು ಹೇಳಿಲ್ಲ”

“ಹೇಳು ವಿನೋದ್. ನಿನ್ನ ಮನಸ್ಸಿನಲ್ಲಿರುವುದನ್ನು ಯಾವುದೇ ಹಿಂಜರಿಕೆ ಇಲ್ಲದೆ ಹೇಳು. ಮನಸ್ಸು ನೆಮ್ಮದಿಯಾಗಿದ್ದರೆ, ಸಮಾಧಾನದಿಂದ ಇದ್ದರೆ ನಮ್ಮ ಶಕ್ತಿ ಸಾಮರ್ಥ್ಯ ಚೆನ್ನಾಗಿರುತ್ತದೆ. ಮನಸ್ಸಿಗೆ ಬೇಸರ, ಭಯ ಕ್ಲೇಶಗಳಿದ್ದರೆ, ನಮ್ಮ ಬುದ್ಧಿಗೂ ಮಂಕು ಕವಿಯುತ್ತದೆ.

“ನನಗೆ ಹಸ್ತಮೈಥುನ ಮಾಡಿಕೊಳ್ಳುವ ಚಟವಿದೆ ಸರ. ಮಾಡಿಕೊಳ್ಳಬಾರದು ಎಂದುಕೊಂಡರೂ ಅದನ್ನು ಬಿಡಲಾಗುತ್ತಿಲ್ಲ. ನಾಲ್ಕು ವರ್ಷದ ಹಿಂದೆ ನನ್ನ ಕಸಿನ್ ಇದನ್ನು ನನಗೆ ಕಲಿಸಿದ. ಒಂದು ದಿನ ನಾವಿಬ್ಬರೂ ಒಂದೇ ಕಡೆ ಮಲಗಿದ್ದೆವು. ಆತ ನನ್ನ ಜನನಾಂಗವನ್ನು ಮುಟ್ಟಿ ಪ್ರಚೋದಿಸಿದ. ವೀರ್ಯ ಹೊರಬಂತು. ಏನೋ ಒಂದು ರೀತಿಯ ಖುಷಿ ಆಯ್ತು. ನನ್ನಿಂದ ಆತ ಹಸ್ತಮೈಥುನ ಮಾಡಿಸಿಕೊಂಡ. ಅವನು ಆಗಾಗ ನಮ್ಮ ಮನೆಗೆ ಬರುತ್ತಿದ್ದ. ಈ ಚಟುವಟಿಕೆಯನ್ನು ಮುಂದುವರೆಸಿದೆವು. ಒಮ್ಮೆ ಹೀಗೆ ಮಾಡುವಾಗ, ಅಮ್ಮ ನೋಡಿ ಬಿಟ್ಟಳು. ಇಬ್ಬರಿಗೂ ಚೆನ್ನಾಗಿ ಬೈದಳು. ಇದೊಂದುಕೆಟ್ಟ ಅಭ್ಯಾಸ. ಇದರ ಅನುಕರಣೆಯಿಂದ ನೀವು ದುರ್ಬಲರಾಗುತ್ತೀರಿ. ಶರೀರ ಮತ್ತು ಮನಸ್ಸು ವೀಕ್ ಆಗತ್ತೆ. ನೆನಪಿನ ಶಕ್ತಿ ಕುಗ್ಗುತ್ತೆ. ಮುಂದೆ ನಿಮ್ಮ ಪುರುಷ ಶಕ್ತಿ ಕಡಿಮೆಯಾಗುತ್ತೆ ಅಂತ ಹೇಳಿ, ಮತ್ತೆ ಈ ಅಬ್ಯಾಸ ಮುಂದುವರೆಸುವುದಿಲ್ಲವೆಂದು ನನ್ನಿಂದ ಭಾಷೆ ತೆಗೆದುಕೊಂಡಳು. ಭಾಷೆಯನ್ನೇನೋ ಕೊಟ್ಟೆ. ಆದರೆ, ಹಸ್ತಮೈಥುನ ಮಾಡಿಕೊಳ್ಳದೇ ಇರಲು ನನ್ನಿಂದ ಸಾಧ್ಯವಾಗಲಿಲ್ಲ. ವಾರಕ್ಕೊಮ್ಮೆ, ಎರಡು ವಾರಕ್ಕೊಮ್ಮೆ , ರಾತ್ರಿ ಹೊತ್ತು ಮಾಡಿಕೊಳ್ಳುತ್ತೇನೆ. ಅದರ ಫಲವನ್ನು ಈಗ ಅನುಭವಿಸಿದ್ದೇನೆ. ಹಸ್ತಮೈಥುನ ಮಾಡಿಕೊಳ್ಳದಂತೆ ಮಾಡಿ ಸರ್. ಏನಾದರೂ ಮಾತ್ರೆ, ಇಂಜೆಕ್ಷನ್ ಕೊಡಿ. ನೀವು ಸಹಾಯ ಮಾಡದಿದ್ದರೆ ನಾನು ಸರ್ವನಾಶವಾಗಿ ಹೋಗುತ್ತೇನೆ.” ಅವನ ಕಂಠ ಗದ್ಗದಗೊಂಡಿತು.

ಈ ವಿನೋದನಂತೆ ಹಸ್ತಮೈಥುನ ಕೆಟ್ಟದ್ದು, ಹಾನಿಕಾರಕ. ಅದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಮನಸ್ಸು ದುರ್ಬಲವಾಗುತ್ತದೆ. ನೆನಪಿನ ಶಕ್ತಿ ಕುಂದುತ್ತದೆ ಎಂದು ನಂಬುವ ಸಾವಿರಾರು ಹರೆಯದವರಿದ್ದಾರೆ ಸಮಾಜದಲ್ಲಿ.

ಹಸ್ತಮೈಥುನ ಹಾನಿಕಾರಕ ಎಂಬ ನಂಬಿಕೆ ಭಾರತದ ಉಪಖಂಡದಲ್ಲಿ ಕಂಡುಬರುವಂತಹ ತಪ್ಪು ನಂಬಿಕೆ. ಹರೆಯಕ್ಕೆ ಕಾಲಿಡುತ್ತಿದ್ದಂತೆ, ಹುಡುಗ-ಹುಡುಗಿಯರ ದೇಹದಲ್ಲಿ ಲೈಂಗಿಕ ಬೆಳವಣಿಗೆ ಮತ್ತು ವಿಕಾಸ ನಡೆಯುತ್ತದೆ. ಹುಡುಗನಲ್ಲಿ ಪುರುಷ ಲಕ್ಷಣಗಳು, ಹುಡುಗಿಯಲ್ಲಿ ಸ್ತ್ರಿ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಜೊತೆಗೆ ಲೈಂಗಿಕ ಆಸೆ/ಬಯಕೆಗಳೂ ಹುಟ್ಟುತ್ತವೆ. ಹುಡುಗ-ಹುಡುಗಿಯರು ಪರಸ್ಪರ ಆಕರ್ಷಿತರಾಗುತ್ತಾರೆ. ಪ್ರೀತಿ-ಪ್ರೇಮದ ವಿಚಾರಗಳು ಅವರ ಮನಸ್ಸಿನೊಳಗೆ ಮೂಡಲು ಶುರುವಾಗುತ್ತವೆ. ಇಂದಿನ ಮಾಧ್ಯಮಗಳಲ್ಲಿ ಲೈಂಗಿಕ ಪ್ರಚೋದಕ ಚಿತ್ರಗಳು, ದೃಶ್ಯಗಳೂ ದಾರಾಳವಾಗಿ ಸಿಗುತ್ತವೆ. ಹರೆಯದ ಅವಧಿಯಲ್ಲಿ ಜನನಾಂಗ ಮತ್ತು ಅದರ ಸುತ್ತಮುತ್ತಲಿನ ಭಾಗದ ಸ್ಪರ್ಶ ಸಂವೇದನೆ ಹೆಚ್ಚುತ್ತದೆ. ಸ್ಪರ್ಶ ಮತ್ತು ಒತ್ತಡದಿಂದ ಜನನಾಂಗ ಉದ್ರೇಕಗೊಳ್ಳುತ್ತದೆ. ಮನಸ್ಸಿಗೆ ಹಿತ-ಸುಖವನ್ನು ನೀಡುತ್ತದೆ. ವೀರ್ಯ ಸ್ಖಲನವಾಗಿ, ಲೈಂಗಿಕ ಸುಖಾನುಭವವೂ ಆಗುತ್ತದೆ. ಹಸ್ತಮೈಥುನ ಮಾಡಿಕೊಳ್ಳುತ್ತಾ, ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿದಂತೆ, ಕಲ್ಪಿಸಿಕೊಳ್ಳುತ್ತಾ ಹರೆಯದವರು ಸುಖಪಡುತ್ತಾರೆ. ಶೇ. 99 ರಷ್ಟು ಹುಡುಗರು ಮತ್ತು ಶೇ. 30 ರಷ್ಟು ಹುಡುಗಿಯರು ಹಸ್ತಮೈಥುನ ಮಾಡಿಕೊಳ್ಳುತ್ತಾರೆಂದು ಅಧ್ಯಯನಗಳು ತಿಳಿಸುತ್ತವೆ. ಬಹುತೇಕ ಜನ ಹಸ್ತಮೈಥುನದ ಬಗ್ಗೆ ಭಯ, ನಾಚಿಕೆ ಹಾಗೂ ತಪ್ಪಿತಸ್ಥ ಭಾವನೆಗಳನ್ನು ಬೆಳೆಸಿಕೊಳ್ಳುತ್ತಾರೆ. ಮಾನಸಿಕವಾಗಿ ತೊಂದರೆ/ಹಿಂಸೆಯನ್ನೂ ಅನುಭವಿಸುತ್ತಾರೆ.

ಮನೋವಿಜ್ಞಾನ-ಲೈಂಗಿಕ ವಿಜ್ಞಾನದ ಪ್ರಕಾರ ಹಸ್ತಮೈಥುನ ಒಂದು ಸಹಜ, ನೈಸರ್ಗಿಕ ಮತ್ತು ಸುರಕ್ಷಿತ ಚಟುವಟಿಕೆ. ಆದರಿಂದ ಯಾವ ಅಪಾಯ ಹಾನಿಯೂ ಇಲ್ಲ. ಹಸ್ತಮೈಥುನದಿಂದ ಜನನಾಂಗ ಚಿಕ್ಕದಾಗುವುದಿಲ್ಲ. ದುರ್ಬಲವಾಗುವುದಿಲ್ಲ. ವೀರ್ಯ ನಷ್ಟವಾಗುವುದಿಲ್ಲ. ಏಕೆಂದರೆ ಹಸ್ತಮೈಥುನ ಮಾಡಿಕೊಂಡಾಗ ವೀರ್ಯ ಚೀಲದಲ್ಲಿ ಸಂಗ್ರಹಗೊಂಡ ವೀರ್ಯ ಹೊರಬರುತ್ತದೆ. ಅದು ಹೊರಬರಲೇಬೇಕು. ಸತತವಾಗಿ/ನಿರಂತರವಾಗಿ ವೀರ್ಯೋತ್ಪತ್ತಿ ಹುಡುಗನ ಶರೀರದಲ್ಲಿ ನಡೆದೇ ಇರುತ್ತದೆ. ವೀರ್ಯ ಚೀಲದಲ್ಲಿ ಸಂಗ್ರಹವಾಗುತ್ತಲೇ ಇರುತ್ತದೆ. ವೀರ್ಯೋತ್ಪತ್ತಿಗಾಗಿ ಶರೀರ ವಿಶೇಷ ಶಕ್ತಿಯನ್ನು ವ್ಯಯಮಾಡುವುದಿಲ್ಲ. ಬೆವರು, ಜೀರ್ಣರಸಗಳಂತೆ, ವೀರ್ಯವೂ ಒಂದು ಜೀವರಸ. ಹೀಗೆ ಹಸ್ತಮೈಥುನ ಹೆಚ್ಚು ನಡೆದರೆ, ನಮ್ಮ ಪಾದಗಳು ಸವೆಯುವುದಿಲ್ಲ. ಹೆಚ್ಚು ಕೆಲಸ ಮಾಡಿದರೆ ಕೈಗಳು ದುರ್ಬಲವಾಗುವುದಿಲ್ಲವೋ ಹಾಗೆಯೇ ಪದೇಪದೇ ಹಸ್ತಮೈಥುನದಿಂದ ಶಿಶ್ನ ಸವೆಯುವುದಿಲ್ಲ.

ಇದನ್ನೂ ಓದಿ : ಸಮಾಧಾನ | ಪಾದರಸದಂತೆ ಚುರುಕಾಗಿದ್ದ ಮಗ ಕಲ್ಲಿನಂತೆ ಜಡವಾಗಿದ್ದೇಕೆ?

ಮದುವೆಯಾಗಿ ಲೈಂಗಿಕ ಕ್ರಿಯೆ ಮಾಡಲು ಸಂಗಾತಿ ಸಿಗುವವರೆಗೆ ಹಸ್ತಮೈಥುನ ವ್ಯಕ್ತಿಗೆ ಲೈಂಗಿಕ ತೃಪ್ತಿ ನೀಡುತ್ತದೆ. ಅದನ್ನು ಮಾಡಿ ಲೈಂಗಿಕ ಬಯಕೆಯ ಒತ್ತಡವನ್ನು ವಿವಾಹೇತರ ಸಂಬಂಧ ಮಾಡುವ ಅಪಾಯವನ್ನು ನಿವಾರಿಸಿಕೊಳ್ಳಬಹುದು. ಈ ಮಾಹಿತಿಯನ್ನು ಬೆಳೆಯುವ ಹರೆಯದವರಿಗೆ, ತಂದೆತಾಯಿಗಳು ಶಿಕ್ಷಕರು ಮತ್ತು ವೈದ್ಯರು ನೀಡಬೇಕು. ಹಸ್ತಮೈಥುನದ ಬಗ್ಗೆ, ವೀರ್ಯ ಸ್ಖಲನದ ಬಗ್ಗೆ ನಮ್ಮ ಜನರಲ್ಲಿರುವ ಮೌಢ್ಯ, ಭಯ ತಪ್ಪಿತಸ್ಥ ಭಾವನೆಯನ್ನು ತೆಗೆದು ಹಾಕಬೇಕು.

ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ!
ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 
ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?
Editor’s Pick More