ಸಮಾಧಾನ | ಅಪ್ಪ-ಅಮ್ಮನ ಜಗಳದಿಂದ ಬೇಸತ್ತ ವಿನುತಾ ಮಾಡ ಹೊರಟಿದ್ದೇನು ಗೊತ್ತೇ?

ಬೇರೆ ಹೆಂಗಸರೊಂದಿಗೆ ತನ್ನ ಗಂಡನಿಗೆ ಸಂಬಂಧವಿದೆ ಎಂಬುದು ಹೆಂಡತಿಯ ಶಂಕೆ. ಹೆಂಡತಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾಳೆಂದು ಗಂಡನಿಗೆ ಕೋಪ. ಈ ಕಾರಣದಿಂದ ಇಬ್ಬರ ನಡುವೆ ಜಗಳ. ಇದು ಮಕ್ಕಳ ಮೇಲೆ ಬೀರಿದ ದುಷ್ಪರಿಣಾಮ ಬಗೆಗಿನ ಉದಾಹರಣೆ ಇಲ್ಲಿದೆ ನೋಡಿ

“ನನ್ನ ಹೆಸರು ವಿನುತಾ. ದೇಶೀಯ ವಿದ್ಯಾಲಯದಲ್ಲಿ ಫಸ್ಟ್ ಪಿಯುನಲ್ಲಿ ಓದುತ್ತಿದ್ದೇನೆ. ಸ್ವ ಇಚ್ಛೆಯಿಂದ ಇಂಗ್ಲಿಷ್, ಸೈಕಾಲಜಿ ಹಾಗೂ ಸೋಶಿಯಾಲಜಿ ತೆಗೆದುಕೊಂಡಿದ್ದೇನೆ ಜೊತೆಗೆ ಸಂಗೀತ, ನೃತ್ಯ, ಚಿತ್ರಕಲೆಯಲ್ಲೂ ಆಸಕ್ತಿ ಇದೆ. ಕರ್ನಾಟಕ ಸಂಗೀತ ಮತ್ತು ನೃತ್ಯದಲ್ಲಿ ಜೂನಿಯರ್ ಪರೀಕ್ಷೆ ಪಾಸ್ ಮಾಡಿದ್ದೇನೆ. ಒಂದು ಗಂಟೆ ಏನೂ ಮಾಡದೇ ಸುಮ್ಮನೇ ಕುಳಿತುಕೊಳ್ಳಲು ನನ್ನ ಕೈಲಿ ಆಗುವುದಿಲ್ಲ. ಸದಾ ಚಟುವಟಿಕೆಗಳು ಒಂದಲ್ಲ ಒಂದು ಕೆಲಸದಲ್ಲಿ ಆಕ್ಟಿವ್ ಆಗಿದ್ದ ನಾನು. ಈಗ ಸೋಮಾರಿಯಾಗಿ ಬಿಟ್ಟಿದ್ದೇನೆ. ಸಂಗೀತ-ನೃತ್ಯದ ತರಗತಿಗಳಿಗೆ ಹೋಗುತ್ತಿಲ್ಲ. ಮೇಡಮ್ ಚೆನ್ನಾಗಿ ಬೈದರು. ನಿನ್ನಂತಹ ಪ್ರತಿಭಾವಂತೆಯರು ದಿನವೂ ಪ್ರಾಕ್ಟೀಸ್ ಮಾಡಿದರೆ ದೊಡ್ಡ ಕಲಾವಿದರಾಗಿ ಹಣ, ಕೀರ್ತಿ ಸಂಪಾದಿಸಬಲ್ಲಿರಿ. ಏಕೆ ಪ್ರಾಕ್ಟೀಸ್ ಗೆ ಬರುತ್ತಿಲ್ಲ ಎಂದು ಎಲ್ಲರೆದುರು ತರಾಟೆಗೆ ತೆಗೆದುಕೊಂಡರು. ಅವರಿಗೆ ನನ್ನ ಫ್ಯಾಮಿಲಿ ಪ್ರಾಬ್ಲಂ ಹೇಗೆ ಹೇಳಲಿ. ಓದಿನಲ್ಲೂ ಆಸಕ್ತಿ ಕಳೆದುಕೊಂಡಿದ್ದೇನೆ. ತರಗತಿಯಲ್ಲಿ ಕುಳಿತು ಪಾಠ ಕೇಳಲಾಗುತ್ತಿಲ್ಲ. ಎಲ್ಲವನ್ನೂ ಬಿಟ್ಟು ಯಾವುದಾದರೂ ದೂರದ ಊರಿಗೆ ಹೋಗಿ ಬೀಡೋನ ಎನಿಸುತ್ತಿದೆ,”

“ಫ್ಯಾಮಿಲಿ ಪ್ರಾಬ್ಲಂ ಎಂದಿರಿ, ಅದರ ವಿವರಗಳನ್ನು ಹೇಳುತ್ತೀರಾ?,”

“ನನ್ನ ತಂದೆ ವಕೀಲರು. ತಾಯಿ ಬ್ಯಾಂಕ್ ಆಫೀಸರ್. ಇಬ್ಬರೂ ಹಾವು- ಮುಂಗುಸಿ ರೀತಿ ಕಚ್ಚಾಡ್ತಾರೆ. ನನಗೆ ಅಣ್ಣ ಒಬ್ಬ ಇದ್ದಾನೆ. ಎಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ನಲ್ಲಿದ್ದಾನೆ. ತಂಗಿ ಈಗ ಹತ್ತನೇ ತರಗತಿಯಲ್ಲಿದ್ದಾಳೆ. ಅಜ್ಜಿ ಅಂದರೆ ತಂದೆಯ ತಾಯಿ. 80 ವರ್ಷ ವಯಸ್ಸಾಗಿದೆ. ತಮ್ಮ ಕೆಲಸಗಳನ್ನು ಮಾಡಿಕೊಳ್ಳುವಷ್ಟು ಶಕ್ತಿ ಇದೆ. ತಮ್ಮ ಪಾಡಿಗೆ ತಾವಿರುತ್ತಾರೆ. ಅಮ್ಮನಿಗೂ ಅಜ್ಜಿಗೂ ಅಷ್ಟಕ್ಕಷ್ಟೆ. ಜಗಳವಾಡೊಲ್ಲ. ಆದರೆ, ಹೇಳಿಕೊಳ್ಳುವಂತಹ ಪ್ರೀತಿ, ವಿಶ್ವಾಸವಿಲ್ಲ. ಅಮ್ಮನಿಗೆ ಅಪ್ಪನ ಬಗ್ಗೆ ಸಂಶಯ. ಅಫೇರ್ ಇದೆ ಎಂದು ಗುಮಾನಿ. ಮೊದಲು ಅಪ್ಪನ ಆಫೀಸಿನಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಕ್ಯಾಸ್ಟೆಲಿನಾ ಬಗ್ಗೆ, ಆಮೇಲೆ ಒಬ್ಬ ಕ್ಲಯೆಂಟ್. ಆನಂತರ ಮತ್ತೊಬ್ಬ ಸಹೋದ್ಯೋಗಿ. ಅಪ್ಪ ಹೆಚ್ಚು ಸೋಶಿಯಲ್. ಕ್ಲಬ್, ಪಾರ್ಟಿ, ಟೂರು, ಪಿಕ್ ನಿಕ್ ಅಂತ ಮನೆಯಿಂದ ಹೊರಗಡೆ ಇರುವುದೇ ಹೆಚ್ಚು. ‘ಇನ್ನೊಬ್ಬ ಹೆಂಗಸೊಂದಿಗೆ ನಗುತ್ತಾ ಮಾತಾಡಿಬಿಟ್ಟರೆ, ರೆಸ್ಟೋರೆಂಟ್ ಗೆ ಹೋಗಿ ತಿಂಡಿ ತಿಂದು ಬಿಟ್ಟರೆ, ಅವಳೊಂದಿಗೆ ಮಲಗಿಕೊಳ್ಳುತ್ತೇನೆ ಅಂತ ಅರ್ಥವೇ. ನೀನೊಬ್ಬ ಪೆರಾನಾಯಿಡ್ ಸೈಕೋ’ ಎನ್ನುತ್ತಾ ಅಮ್ಮನ ಜೊತೆ ಜಗಳ ಕಾಯುತ್ತಾರೆ. ‘ನನ್ನನ್ನು ಒಂದು ದಿನ ಹೋಟೆಲ್ಲಿಗೆ ಕರೆದೊಯ್ಯಲ್ಲ. ಟೂರ್ ಪಿಕ್ ನಿಕ್ ಗೆ ಕರೆದಿಲ್ಲ. ಹೋದರೆ ದೇವಸ್ಥಾನ ಪುಣ್ಯಕ್ಷೇತ್ರ. ಬೇರೆ ಹೆಂಗಸರೊಂದಿಗೆ ಎಲ್ಲ ಕಡೆ ಸುತ್ತುವ ನಿಮಗೆ ನಾಚಿಕೆಯಾಗಬೇಕು’ ಅಂತ ಅಮ್ಮನ ಎದುರೇಟು,”

“ಅಪ್ಪ ಯಾವ ದಿನವಾದರೂ ಮನೆಗೆ ಲೇಟಾಗಿ ಬಂದರೆ, ಅಮ್ಮನ ವಿಚಾರಣೆ, ಪಾಟೀ ಸವಾಲು, ವಾದ-ವಿವಾದ ಶುರುವಾಗಿಬಿಡುತ್ತೆ. ಗುಡುಗು, ಸಿಡಿಲು, ಮಳೆ ಎಲ್ಲ ಬಂದ ಮೇಲೆ ಶೀತ. ಆದರೆ, ಯಾರಿಗೂ ಊಟ ಮಾಡಲು ಮನಸ್ಸು ಬರೋದಿಲ್ಲ. ಪಾಪ ಅಜ್ಜಿನೂ ಊಟವಾದ ಮೇಲೆ ಮಲಗ್ತಾರೆ. ಜಗಳವಾಡಬೇಡಿ ಎಂದು ಗೋಗರೆದರೂ ಅಪ್ಪ-ಅಮ್ಮ ಕೇಳಲ್ಲ. ಕಳೆದ ಆರು ತಿಂಗಳಿನಿಂದೀಚೆ ಅವರ ಜಗಳ ನಿಲ್ಲುವ ಹೊತ್ತಿನಲ್ಲಿ ‘ಡೈವೋರ್ಸ್’ ರಾರಾಜಿಸುತ್ತದೆ. ‘ಆಯಿತು ಡೈವೋರ್ಸ್ ಕೊಟ್ಟು ಬಿಡಿ, ನಿಮಗೆ ಬೇಕಾದವಳ ಜೊತೆ ಇರಿ. ನಾನೂ ನನ್ನ ಮಕ್ಕಳು ನಮ್ಮ ಪಾಡಿಗೆ ಬೇರೆ ಇರ್ತೇವೆ. ಸೆಪರೇಟ್ ಮನೆ ಮಾಡಿ, ನಾನು ನನ್ನ ಮಕ್ಕಳು ನೆಮ್ಮದಿಯಿಂದ ಬದುಕಿಕೊಳ್ತೇವೆ’ ಎಂದು ಅಮ್ಮ ಹೇಳುತ್ತಾಳೆ,”

“ಇದಕ್ಕೆ ಎದುರುತ್ತರಿಸುವ ಅಪ್ಪ, ‘ನಿನ್ನ ಹತ್ತಿರ ನನ್ನ ಮಕ್ಕಳನ್ನು ಬಿಡೋಲ್ಲ. ನಿನ್ನ ಬುದ್ದೀನೆ ಅವರಿಗೂ ಬರುತ್ತೆ. ನನ್ನ ಮಕ್ಕಳು ನನ್ನ ಹತ್ರ ಇರ್ತಾರೆ. ಕಾನೂನಿನ ಪ್ರಕಾರ, ಬೆಳೆದ ಮಕ್ಕಳಿಗೆ ನಾನೇ ಗಾರ್ಡಿಯನ್ ಅಂತಾರೆ.’ ಆದರೆ, ಅಮ್ಮ , ‘ನಿಮ್ಮ ಕಾನೂನನ್ನು ಕೈಬಿಡಿ. ಜಡ್ಜಿಗೆ ನಾನೇ ಹೇಳ್ತೇನೆ. ಹಾದರ ಮಾಡೋ ಅಪ್ಪನ ಹತ್ರ ಮಕ್ಕಳನ್ನು ಬಿಟ್ರೆ ಅವರೂ ಅದೇ ದಾರಿ ಹಿಡೀತಾರೆ. ಮಕ್ಕಳನ್ನು ನನ್ನ ಕಸ್ಟಡಿಗೆ ಕೊಡಿ ಅಂತ ಕೇಳ್ತಿನೆ’ ಅಂತ ಅವರು ಕೂಗಾಡ್ತಾರೆ.”

“ಇದನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಅಪ್ಪ- ಅಮ್ಮ ಡೈವೋರ್ಸ್ ತೆಗೆದುಕೊಂಡರೆ, ನಮ್ಮ ಗತಿ ಏನು? ಅಮ್ಮನಿಗೆ ಅಣ್ಣನನ್ನು ಕಂಡರೆ ಪ್ರೀತಿ. ಅಪ್ಪನಿಗೆ ನನ್ನ ತಂಗಿಯನ್ನು ಕಂಡರೆ ಇಷ್ಟ. ನನ್ನನ್ನು ಕಂಡರೆ ಅಷ್ಟಕ್ಕಷ್ಟೆ. ನಾನು ಸ್ವಲ್ಪ ಕಪ್ಪಗಿದ್ದೇನೆ. ನನ್ನ ತಂಗಿ ಬೆಳ್ಳಗಿದ್ದಾಳೆ. ಅದೇ ಅವಳ ಪ್ಲಸ್ ಪಾಯಿಂಟ್. ನಾನು ಅನಾಥಳಾಗುತ್ತೇನೆ ಎನ್ನುವ ಭಾವನೆ ಇತ್ತೀಚೆಗೆ ನನ್ನನ್ನು ಕಾಡತೊಡಗಿದೆ. ಇದನ್ನು ಯಾರಲ್ಲಿ ಹೇಳಿಕೊಳ್ಳಲಿ. ಯಾವುದಾದರೂ ಆಶ್ರಮಕ್ಕೆ ಸೇರಿಕೊಂಡು ಬಿಡೋಣ ಎನಿಸುತ್ತದೆ. ಕೆಲವು ಸಲ ಆತ್ಮಹತ್ಯೆಯ ಯೋಚನೆಗಳೂ ಬರುವುದುಂಟು. ನನ್ನ ಸಾವಿಗೆ ಅಪ್ಪ ಅಮ್ಮನೇ ಕಾರಣ. ಇಂತಹ ಅಪ್ಪ-ಅಮ್ಮಂದಿರು ಯಾವ ಮಕ್ಕಳಿಗೂ ಇರುವುದು ಬೇಡ ಎಂದು ಬರೆದು ಸಾಯಬೇಕೆನಿಸುತ್ತಿದೆ. ಪ್ರಾಣ ಕಳೆದುಕೊಳ್ಳುವುದು ಸುಲಭವಲ್ಲವಂತೆ ತುಂಬಾ ನೋವನ್ನು ಅನುಭವಿಸಬೇಕೆನಿಸಿ, ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವನ್ನು ಕೈಬಿಟ್ಟಿದ್ದೇನೆ. ಓದಲು ಕುಳಿತರೆ ಏಕೆ ಓದಬೇಕು. ಹಾಡಲು ಕುಳಿತರೆ ಏಕೆ ಹಾಡಬೇಕು. ಯಾರಿಗೆ ಬೇಕು ಈ ಸಂಗೀತ. ಪರೀಕ್ಷೆ, ಡಿಗ್ರಿ ಇವುಗಳೆಗೆಲ್ಲ ಅರ್ಥವೇ ಇಲ್ಲ. ಇದೆಲ್ಲ ಒಂದು ಭ್ರಮೆ. ಕಷ್ಟಪಡುವುದಕ್ಕೆ ಅರ್ಥವಿಲ್ಲ, ಅದರ ಅಗತ್ಯವೂ ಇಲ್ಲ. ಸುಮ್ಮನೇ ಕೂತು, ನಿಂತು, ಅಡ್ಡಾಡುತ್ತಾ ಕಾಲ ಕಳೆದರಾಯಿತು ಎನಿಸುತ್ತದೆ. ಓದದೇ ಪರೀಕ್ಷೆಯಲ್ಲಿ ಫೇಲಾದರೆ ಅವಮಾನ. ಜೊತೆಗಾರರೆಲ್ಲ ಮುಂದೆ ಹೋಗುತ್ತಾರೆ. ದಡ್ಡಿ ಎನ್ನುವ ಪಟ್ಟವನ್ನು ಅಲಂಕರಿಸಬೇಕಾಗುತ್ತದೆ. ಏಕೋ ಎಲ್ಲವೂ ಗೊಂದಲಮಯ,” ಎಂದಳು.

“ವಿನುತಾ ನಿನ್ನ ಮನಸ್ಸಿನ ಕಷ್ಟ, ನೋವು ಅರ್ಥವಾಗುವಂಥದ್ದೇ. ನಿನಗೆ ಸಹಜವಾಗಿ ಖಿನ್ನತೆ ಬಂದಿದೆ. ಖಿನ್ನತೆ ಹೋಗಲು ಒಳ್ಳೆಯ ಮಾತ್ರೆಗಳನ್ನು ಬರೆದುಕೊಡುತ್ತೇನೆ. ಪ್ರತಿದಿನ ಸೇವಿಸು. ಏನಾದರೂ ಮಾಡಿ ನಿನ್ನ ಅಪ್ಪನನ್ನು ಕರೆದುಕೊಂಡು ಬಾ. ನಾನು ಅವರ ಜೊತೆಯಲ್ಲಿ ಮಾತನಾಡುತ್ತೇನೆ. ಸಮಾಧಾನದಿಂದಿರು. ನೀನೀಗ ನಿನ್ನ ಓದು ಹವ್ಯಾಸದ ಬಗ್ಗೆ ಗಮನಕೊಡು. ಅಪ್ಪ ಅಮ್ಮನ ಜಗಳದ ಬಗ್ಗೆ ತಲೆಕಡಿಸಿಕೊಳ್ಳಬೇಡ,” ಎಂದೆ.

ಇದನ್ನೂ ಓದಿ : ಸಮಾಧಾನ | ಸಲಿಂಗಕಾಮದ ಬಗ್ಗೆ ರಮಾನಂದ ಅವರಿಗಿದ್ದ ಆತಂಕವೇನು?

ವಿನುತಾಳ ಅಮ್ಮ ಬಂದರು. ವಿನುತಾಳ ಡಿಪ್ರೆಶನ್ ಬಗ್ಗೆ ಹೇಳಿದೆ. “ನಿಮ್ಮ ದಾಂಪತ್ಯ ವಿರಸದ ಬೆಂಕಿಯ ಕಾವಿನಿಂದ ಅವಳು ಬೇಯುತ್ತಿದ್ದಾಳೆ. ತಾಯಿಯಾಗಿ ನಿಮ್ಮ ಪ್ರೀತಿ ಬೇಕು ಅವಳಿಗೆ,” ಎಂದೆ. ರಾಜೇಶ್ವರಿಯ ಕಣ್ಣಾಲಿಗಳು ತುಂಬಿದವು. ಸುಮಾರು ಹೊತ್ತು ಗಂಡನ ಬಗ್ಗೆ ದೂರುಗಳ ಸುರಿಮಳೆಯನ್ನು ಸುರಿಸಿದರು.

“ನಿಮ್ಮ ಗಂಡನಿಗೆ ಬೇರೊಂದು ಹೆಂಗಸಿನ ಬಗ್ಗೆ ಸಂಬಂಧ ಇದೆ ಎನ್ನಲು ನಿಮ್ಮಲ್ಲಿ ಸಾಕ್ಷಿ, ಪುರಾವೆ ಇದೆಯೇ,” ಎಂದೆ.

“ಇಲ್ಲ ಸಾರ್, ನನ್ನ ಗಂಡ ಬಲು ಚಾಣಾಕ್ಷ. ಸಾಕ್ಷಿ, ಪುರಾವೆ ಸಿಗದಂತೆ ಎಚ್ಚರವಹಿಸಿದ್ದಾರೆ.” ಎಂದರು.

“ಹಾಗಾದರೆ ನಿಮ್ಮ ಆರೋಪ ಕೇವಲ ಊಹಾಪೋಹವಾಗುತ್ತದೆ. ನಿಮಗಿರುವುದು ಒಂದು ದಾರಿ. ವಿವಾಹೇತರ ಸಂಬಂಧದ ಬಗ್ಗೆ ಮಾತಾಡದೇ ಸುಮ್ಮನಿರಿ. ಈಗ ಮಾತನಾಡಿ, ಕೇವಲ ಜಗಳ ಕಾಯುವುದೇ ನಿತ್ಯ ಕೆಲಸವಾಗಿದೆ. ಇದರಿಂದ ನಿಮಗೆ ಹಿಂಸೆ. ಮಕ್ಕಳಿಗೆ ಹಿಂಸೆ. ಈ ದಾರಿ ಬೇಡ ಎಂದರೆ, ಡೈವೋರ್ಸ್ ಗೆ ಪ್ರಯತ್ನಿಸುವುದು. ಡೈವೋರ್ಸ್ ಪಡೆಯಲು ಎಷ್ಟು ಕಾಲ ಬೇಕಾಗಬಹುದೋ ಗೊತ್ತಿಲ್ಲ. ಡೈವೋರ್ಸ್ ನಿಂದ ಮಕ್ಕಳು ಅನಾಥರಾಗುತ್ತಾರೆ. ಅವರ ಕಸ್ಟಡಿಗಾಗಿ ಮತ್ತೆ ನೀವು ಗಂಡ-ಹೆಂಡತಿ ಕೋರ್ಟಿನ ಮೊರೆ ಹೋಗಬೇಕಾಗುತ್ತದೆ. ಫಲಿತಾಂಶ ಏನೇ ಇರಲಿ. ಮಕ್ಕಳಿಗೆ ನೀವು ಅಥವಾ ನಿಮ್ಮ ಗಂಡ ಅವರಿಗೆ ಸಿಗುತ್ತಾರೆಯೇ ವಿನಃ ಒಟ್ಟಿಗೆ ಸಿಗುವುದು ಸಾಧ್ಯವಿಲ್ಲವಾಗುತ್ತದೆ. ನೀವು ಬುದ್ಧಿವಂತರು. ಯೋಚಿಸಿ ನೋಡಿ,” ಎಂದೆ.

“ಅವರ ಅಕ್ರಮ ಸಂಬಂಧಗಳನ್ನು ಮಾನ್ಯ ಮಾಡಬೇಕೇ ಸಾರ್,” ಎಂದು ಕೇಳಿದರು.

“ಇಲ್ಲಿ ಮಾನ್ಯ ಮಾಡುವ ಪ್ರಶ್ನೆಯೇ ಉದ್ಬವಾಗುವುದಿಲ್ಲ. ನೀವೇ ಇದೆ ಎನ್ನುತ್ತೀರಿ. ಅವರು ಇಲ್ಲ ಎನ್ನುತ್ತಾರೆ. ಇದೆ ಎನ್ನಲು ನಿಮ್ಮಲ್ಲಿ ಸಾಕ್ಷಿ, ಪುರಾವೆಗಳಿಲ್ಲ. ಆದ್ದರಿಂದ ಸುಮ್ಮನಿರುವುದೇ ಕ್ಷೇಮ. ಸಾಕ್ಷ್ಯಾದಾರ ಸಿಕ್ಕಾಗ ಏನು ಮಾಡಬೇಕೆಂದು ಯೋಚಿಸುವಿರಂತೆ,” ಎಂದೆ.

“ಹೌದು ಸಾರ್, ನೀವು ಹೇಳುವುದು ಸರಿ. ಸುಮ್ಮನೇ ಮಾತನಾಡಿ ನಾನು ಕೆಟ್ಟವಳಾಗಿದ್ದೇನೆ. ನಿಮ್ಮ ಸಲಹೆಯಂತೆ ಮಕ್ಕಳ ಯೋಗಕ್ಷೇಮದ ಬಗ್ಗೆ ಗಮನ ಕೊಡುತ್ತೇನೆ.” ಎಂದರು.

ಒಂಟಿತನದ ವ್ಯಾಕುಲತೆ ಮೀರಲು ಸಾಧ್ಯ; ಒಂಟಿತನ ದಿವ್ಯ ಏಕಾಂತವೂ ಕೂಡ!
ಹುದುಗಿದ ನೋವ ಹೊರತಂದ #MeToo ಅಸಹಾಯಕತೆಗೆ ದನಿಯಾದ ಅಭಿಯಾನ 
ಸಮಾಧಾನ | ಅಂತೂ ಅರ್ಜುನ ಕಾಲೇಜಿಗೆ ಹೋದ! ರಗಳೆ ಆಗುವಂಥದ್ದು ಏನಿತ್ತು?
Editor’s Pick More