ಸಂಕಲನ | ಸುಳ್ಳು ಸಮೀಕ್ಷೆಗಳ ಅಬ್ಬರ, ಮತದಾರರನ್ನು ಪ್ರಭಾವಿಸುವ ಸಾಹಸ ಭರಪೂರ

ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯುವುದಕ್ಕೆ, ಪ್ರಭಾವಿಸುವುದಕ್ಕೆ ಸಾಹಸ ಮಾಡುತ್ತಿವೆ. ಸೋಷಿಯಲ್‌ ಮೀಡಿಯಾ ಎಂಬ ಸಾಧನ ಎಲ್ಲ ರೀತಿಯ ಪ್ರಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸುಳ್ಳು ಸಮೀಕ್ಷೆಗಳ ಮೂಲಕ ಅಭಿಪ್ರಾಯ ರೂಪಿಸಲು ಯತ್ನಿಸುತ್ತಿವೆ

ಅಭ್ಯರ್ಥಿಗಳ ಪಟ್ಟಿ ಅಂತಿಮವಿನ್ನೂ ಆಗಿರಲಿಲ್ಲ. ಆಗಲೇ ಯಾರು ಗೆಲ್ಲುತ್ತಾರೆ, ಯಾರು ಸರ್ಕಾರ ರಚಿಸುತ್ತಾರೆ ಎಂಬ ಲೆಕ್ಕಾಚಾರವನ್ನು ರಾಜ್ಯದ ಜನತೆ ಶುರು ಮಾಡಿತ್ತು. ಮೋದಿಯ ವರ್ಚಸ್ಸು, ರಾಹುಲ್‌ ಗಾಂಧಿ ಸರಳತೆಯೂ ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಪ್ರಭಾವಿಸಬಹುದು ಎಂದು ಮಾಧ್ಯಮಗಳು ಅಳೆದು ತೂಗಿ ವಿಶ್ಲೇಷಿಸಿದ್ದವು. ಇವುಗಳ ಜೊತೆಗೆ ಚುನಾವಣಾ ಹಂಗಾಮಿ ಮೈಕೊಡವಿಕೊಳ್ಳುವ ಸಮೀಕ್ಷಾ ಸಂಸ್ಥೆಗಳು ತಮ್ಮ ಲೆಕ್ಕಾಚಾರಗಳನ್ನು ಜನರ ಮುಂದಿಡಲಾರಂಭಿಸಿದ್ದರು. ಇವರೆಲ್ಲರಿಗಿಂತ ಹೆಚ್ಚು ಗಮನ ಸೆಳೆದಿದ್ದು ಮಾತ್ರ ಸುಳ್ಳು ಸುದ್ದಿಗಳು. ಬಿಜೆಪಿ ಗೆಲ್ಲುತ್ತದೆ, ಸರ್ಕಾರ ಮಾಡುತ್ತದೆ ಎಂದು ಬಂದ ಸಮೀಕ್ಷೆಗಳೇ ಹೆಚ್ಚು. ಇಲ್ಲಿದೆ ಸಮೀಕ್ಷೆಗಳ ಪಟ್ಟಿ.

ಬಿಜೆಪಿಗೆ ೯೫, ಕಾಂಗ್ರೆಸ್‌ ೮೫, ಜೆಡಿಎಸ್‌ ೪೦ ಸೀಟ್‌ ಕೊಟ್ಟ ಬೆಂಗಳೂರು ಹೆರಾಲ್ಡ್‌

ಬೆಂಗಳೂರು ಹೆರಾಲ್ಡ್‌. ಕಾಂ ಯಾವ ಸಂಸ್ಥೆಯ ವಿವರಗಳು ಇಲ್ಲದೆ ಪ್ರಕಟವಾಗುತ್ತಿರುವ ವೆಬ್‌ಸೈಟ್‌. ಕಾಂಗ್ರೆಸ್‌ ಹಾಗೂ ಬಿಜೆಪಿಯನ್ನು ವಿರೋಧಿ ಎಲ್ಲ ಪ್ರಾದೇಶಿಕ ಪಕ್ಷಗಳ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತಿರುವ ಈ ತಾಣ ಒಂದು ಸುಳ್ಳು ಸಮೀಕ್ಷೆಯನ್ನು ಪ್ರಕಟಿಸಿತು. 'ಸಿ-ಫೋರ್‌'ಅನ್ನು ಹೋಲುವ 'ಸಿ-ಫೋರ್ಸ್‌' ಹೆಸರಿನಲ್ಲಿ ಸಮೀಕ್ಷೆಯನ್ನು ಪ್ರಕಟಿಸಿತು. ಈ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ೯೫, ಕಾಂಗ್ರೆಸ್‌ ೮೫, ಜೆಡಿಎಸ್‌ ೪೦ ಸೀಟ್‌ ಗೆಲ್ಲುತ್ತದೆ ಎಂದಿತ್ತು. ಜೊತೆಗೆ ಸಿದ್ದರಾಮಯ್ಯನವರು ಸ್ಪರ್ಧಿಸುತ್ತಿರುವ ಎರಡೂ ಕ್ಷೇತ್ರಗಳಿಂದ ಸೋಲುತ್ತಾರೆ ಎಂದಿತ್ತು. ವಾಸ್ತವದಲ್ಲಿ 'ಸಿ-ಫೋರ್ಸ್‌' ಸಂಸ್ಥೆಯೇ ಇಲ್ಲ. ಇಲ್ಲದ ಸಂಸ್ಥೆಯ ಹೆಸರಿನಲ್ಲಿ ಸಮೀಕ್ಷೆಯನ್ನು ಈ ಸೈಟ್‌ ಪ್ರಕಟಿಸಿತ್ತು. ‘ದಿ ಸ್ಟೇಟ್‌’ ಈ ಕುರಿತು ಬರೆದ ಸುದ್ದಿ ಇಲ್ಲಿದೆ

ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ ಬಿಬಿಸಿ-ಜನ್‌ ಕಿ ಬಾತ್ ಸಮೀಕ್ಷೆ

ವಾಟ್ಸ್ಆಪ್‌ಗಳಲ್ಲಿ ಹೆಚ್ಚು ವಿನಿಮಯವಾದ ಸಮೀಕ್ಷೆ ಇದು. ಬಿಬಿಸಿ ಲಾಂಛನ ಮತ್ತು ವೆಬ್‌ಸೈಟ್‌ ಲಿಂಕ್‌ ಅನ್ನು ಬಳಸಿಕೊಂಡು ಸಮೀಕ್ಷೆಯೊಂದನ್ನು ಹರಡಲಾಗುತ್ತಿತ್ತು. ಈ ಸಮೀಕ್ಷೆಯಲ್ಲಿ ಬಿಜೆಪಿಗೆ ೧೩೫, ಜೆಡಿಎಸ್‌ ೪೫, ಕಾಂಗ್ರೆಸ್‌ ೩೫ ಮತ್ತು ಇತರೆ ೧೯ ಸೀಟ್‌ಗಳನ್ನು ನೀಡಲಾಗಿತ್ತು. ಈ ಸಮೀಕ್ಷೆಗೂ ಬಿಬಿಸಿಗೂ ಯಾವುದೇ ಸಂಬಂಧವಿಲ್ಲವೆಂದೂ ಇದು, ನಕಲಿ ಸುದ್ದಿಯೆಂದು ಸ್ವತಃ ಬಿಬಿಸಿ ಭಾರತದ ಪ್ರತಿನಿಧಿ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದರು. ‘ದಿ ಸ್ಟೇಟ್‌’ ಈ ಕುರಿತು ಬರೆದ ಸುದ್ದಿ ಇಲ್ಲಿದೆ.

ಕಾಂಗ್ರೆಸ್‌ಗೆ ೧೩೫ ಸೀಟ್‌ ಕೊಟ್ಟ ಆರ್‌ಎಸ್‌ಎಸ್‌ ಆಂತರಿಕ ಸಮೀಕ್ಷೆ

ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾದ ಸಮೀಕ್ಷೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುದ್ದಿ ಇದು. ಆರ್‌ಎಸ್‌ಎಸ್‌ ಆಂತರಿಕವಾಗಿ ಸಮೀಕ್ಷೆ ನಡೆಸಿದ್ದು ಇದರಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಪಡೆಯುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಕಾಂಗ್ರೆಸ್‌ ೧೧೫ರಿಂದ ೧೨೦, ಬಿಜೆಪಿ ೬೫ರಿಂದ ೭೦ ಮತ್ತು ಜೆಡಿಎಸ್‌ ೨೯-೨೪ ಸೀಟುಗಳನ್ನು ಪಡೆಯುತ್ತದೆ ಎಂದು ಹೇಳಿತ್ತು. ಪತ್ರಿಕೆಯ ಸಂಪಾದಕರು ಈ ರೀತಿಯ ಯಾವುದೇ ವರದಿ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ ಎಂದು ಹೇಳಿಕೆ ನೀಡಿ, ಸಮೀಕ್ಷೆ ಮತ್ತು ಅದನ್ನು ಆಧರಿಸಿದ ವರದಿಯನ್ನು ಸುಳ್ಳು ಎಂದು ಸ್ಪಷ್ಟಪಡಿಸಿದರು.

ಗುಪ್ತಚರ ಇಲಾಖೆಯಲ್ಲೊಂದು ಚುನಾವಣಾ ಸಮೀಕ್ಷೆ

ರಾಜ್ಯ ಸರ್ಕಾರದ ಗುಪ್ತಚರ ದಳವು ಮುಖ್ಯಮಂತ್ರಿಗಳ ಅಣತಿಯಂತೆ ಸಮೀಕ್ಷೆಯೊಂದನ್ನು ನಡೆಸಿದ್ದಾಗಿ ಒಂದು ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಈ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ೮೫ರಿಂದ ೮೯ , ಬಿಜೆಪಿ ೬೬ರಿಮದ ೭೫, ಜೆಡಿಎಸ್‌ ಮತ್ತು ಬಿಎಸ್‌ಪಿ ಮೈತ್ರಿ ೫೮ರಿಂದ ೬೨ ಹಾಗೂ ಇತರೆ ೪ ರಿಂದ ೭ ಸೀಟ್‌ಗಳನ್ನು ಪಡೆಯುತ್ತದೆ ಎಂದು ಹೇಳಿತ್ತು. ಇದು ಸೃಷ್ಟಿಸಿದ ಪತ್ರವಾಗಿತ್ತು, ಈ ಕುರಿತು ದೂರು ಕೂಡ ದಾಖಲಾಯಿತು.

ಅಮೆರಿಕದ ರಾಯಭಾರಿ ಕಚೇರಿಯ ಸಮೀಕ್ಷೆ!

ಕಾಂಗ್ರೆಸ್‌ ಮತ್ತು ಬಿಜೆಪಿ ಪರ ಅಭಿಪ್ರಾಯ ರೂಪಿಸುವಂತಹ ಸಮೀಕ್ಷೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೇಲೆ ಜೆಡಿಎಸ್‌ ಪರವಾಗಿಯೂ ಒಂದು ಸುಳ್ಳು ಸಮೀಕ್ಷೆ ಗಮನಸೆಳೆಯಿತು. ಈ ಬಾರಿಯ ಸಮೀಕ್ಷೆ ಜೆಡಿಎಸ್‌ ಅಂತಾರಾಷ್ಟ್ರೀಯ ಮಟ್ಟದ ಮೊಹರನ್ನು ಹಾಕುವ ಪ್ರಯತ್ನ ನಡೆಯಿತು. ಯಾಕೆಂದರೆ ಸಮೀಕ್ಷೆಯನ್ನು ಅಮೆರಿಕದ ರಾಯಭಾರಿ ಮಾಡಿಸಿತ್ತು ಎಂದು ಸುದ್ದಿಯಾಯಿತು. ಈ ಸಮೀಕ್ಷೆಯಲ್ಲಿ ಜೆಡಿಎಸ್‌ ೯೦ ಸೀಟುಗಳನ್ನು, ಕಾಂಗ್ರೆಸ್‌ ೭೦ ಮತ್ತು ಬಿಜೆಪಿ ೬೩ ಸೀಟುಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಭವಿಷ್ಯ ನುಡಿಯಿತು. ಅಷ್ಟೇ ಅಲ್ಲ, ಯಾವ ಪಕ್ಷ, ಯಾವ ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದೂ ಸಮೀಕ್ಷೆ ಹೇಳಿತು. ಆದರೆ ಅಮೆರಿಕದ ರಾಯಭಾರಿ ಕಚೇರಿ ಇಂಥ ಯಾವ ಸಮೀಕ್ಷೆ ನಡೆಸಿಲ್ಲ ಎಂದು ಸುದ್ದಿಯನ್ನು ತಳ್ಳಿಹಾಕಿತು.

ಚುನಾವಣೆಯ ಈ ಹೊತ್ತಿನಲ್ಲಿ ಸಮೀಕ್ಷೆಗಳು ಸದ್ದು ಮಾಡಿರುವುದು ನಿಜ. ಆದರೆ ಮೂರು ತಿಂಗಳು ಮೊದಲೇ ಕೆಲವು ಸಮೀಕ್ಷೆಗಳು ಚುನಾವಣೆಯ ಗ್ರಹಿಕೆಯನ್ನು, ಪಕ್ಷಗಳ ಬಲಾಬಲದ ಬಗ್ಗೆ ಚರ್ಚೆಗಳನ್ನು ನಿರ್ದೇಶಿಸುವುದಕ್ಕೆಂದೇ ಸೃಷ್ಟಿಯಾಗಿದ್ದವು.

ಪ್ರಜಾವಾಣಿ ಹೆಸರಲ್ಲಿ ಹರಿದಾಡುತ್ತಿರುವ ಚುನಾವಣಾ ಸಮೀಕ್ಷೆಯ ಮಾಹಿತಿ ನಿಜವೇ?

ಜನವರಿ ತಿಂಗಳಲ್ಲೇ ಪ್ರಜಾವಾಣಿ ಪತ್ರಿಕೆಯ ಹೆಸರಿನಲ್ಲೊಂದು ಸಮೀಕ್ಷೆ ವಾಟ್ಸ್‌ ಆಪ್‌ಗಳಲ್ಲಿ ಹರಿದಾಡಿತು. ಈ ಸಮೀಕ್ಷೆಯಲ್ಲಿ ಜೆಡಿಎಸ್‌ ಬಹುಮತ ಪಡೆಯುವ ಸಾಧ್ಯತೆಯನ್ನು ಹೇಳಿತ್ತು. ಸಮೀಕ್ಷೆಯ ಪ್ರಕಾರ ಜೆಡಿಎಸ್‌ ೧೨೦ರಿಂದ ೧೩೨, ಬಿಜೆಪಿ ೬೦ರಿಂದ ೭೨ ಮತ್ತು ಕಾಂಗ್ರೆಸ್‌ನಿಂದ ೨೪ರಿಂದ ೩೦ ಸೀಟುಗಳನ್ನು ಪಡೆಯುವುದು ಎಂದು ಹೇಳಿತ್ತು. ಪ್ರಜಾವಾಣಿ ವಾಸ್ತವದಲ್ಲಿ ಇಂಥ ಯಾವುದೇ ಸಮೀಕ್ಷೆಯನ್ನು ಪ್ರಕಟಿಸಿರಲಿಲ್ಲ. ಸ್ವತಃ ಪ್ರಜಾವಾಣಿ ಈ ಮಾಹಿತಿಯನ್ನು ನೀಡಿ ಸ್ಪಷ್ಟಪಡಿಸಿತು.

ಸಿಎಚ್‌ಎಸ್‌ ಚುನಾವಣಾಪೂರ್ವ ಸಮೀಕ್ಷೆಯೇ ಸುಳ್ಳು

ಜನವರಿ ತಿಂಗಳ ಎರಡನೆಯ ವಾರದಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡುವ ಸಮೀಕ್ಷೆಯೊಂದು ಗಮನಸೆಳೆದಿತ್ತು. ಸಿಎಚ್‌ಎಸ್‌ ನಡೆಸಿದ ಸಮೀಕ್ಷೆ ಎಂದು ಜಾಲತಾಣಗಳಲ್ಲಿ ಸದ್ದು ಮಾಡಿದ ಈ ಸಮೀಕ್ಷೆ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿಯ ಸಾಧ್ಯತೆಯನ್ನು ಹೇಳಿತ್ತು. ಈ ಸಮೀಕ್ಷೆ ಕಾಂಗ್ರೆಸ್‌ಗೆ ೭೭ರಿಂದ ೮೧, ಬಿಜೆಪಿ ೭೩ರಿಂದ ೭೬, ಜೆಡಿಎಸ್‌ ೬೪ರಿಂದ ೬೬, ಇತರೆ ೪ರಿಂದ ೫ ಸೀಟುಗಳನ್ನು ನೀಡಿತ್ತು. ಈ ಸಮೀಕ್ಷೆಯನ್ನು ಕಾಂಗ್ರೆಸ್ ಪಕ್ಷ ಮಾಡಿಸಿತ್ತು ಎಂದು ಹೇಳಲಾಗಿತ್ತು.

ಮತದಾರರನ್ನು ಗೊಂದಲಕ್ಕೆ ತಳ್ಳುವ ಅಥವಾ ಸಮೀಕ್ಷೆಗಳ ಸಂಖ್ಯೆಗಳನ್ನು ಬಿಂಬಿಸಿ ಪ್ರಭಾವಿಸುವ ಪ್ರಯತ್ನವನ್ನು ಎಲ್ಲ ಪಕ್ಷದ ಬೆಂಬಲಿಗರು ಈ ಸಮೀಕ್ಷೆಗಳ ಮೂಲಕ ಮಾಡಲು ಯತ್ನಿಸಿದ್ದಾರೆ. ಪ್ರಜ್ಞಾವಂತ ಮತದಾರ ಇವುಗಳಾಚೆಗೆ ಯೋಚಿಸಿ ಮತಹಾಕುತ್ತಾನೆ ಎಂಬ ಸಾಮಾನ್ಯ ತಿಳಿವಳಿಕೆಯನ್ನು ಈ ಸಮೀಕ್ಷೆ ಮತ್ತು ಇದರ ಸೃಷ್ಟಿಕರ್ತರು ಉಪೇಕ್ಷಿಸಿದಂತೆ ಕಾಣುತ್ತದೆ.

ಸಂಕಲನ | ಸಲಿಂಗ ಪ್ರೇಮ ಅಪರಾಧವಲ್ಲ ಎಂಬ ತೀರ್ಪು ಕುರಿತ ವರದಿ, ವಿಶ್ಲೇಷಣೆಗಳು
ಸಂಕಲನ | ಇನ್ಫೋಸಿಸ್‌ಗೆ ಸರ್ಕಾರಿ ಜಮೀನು ಮಂಜೂರಾತಿ ಕುರಿತ ತನಿಖಾ ವರದಿಗಳು
ಸಂಕಲನ | ನೋಟು ಅಮಾನ್ಯ ವೈಫಲ್ಯಕ್ಕೆ ಕನ್ನಡಿ ಹಿಡಿದ ಆರ್‌ಬಿಐ ಅಂಕಿ-ಅಂಶ
Editor’s Pick More