ಕುಂಬ್ಳೆ ಕುರಿತು ದ್ರಾವಿಡ್ ಆಡಿದ ಮಾತು ವೈರಲ್ ಆಗಿದ್ದೇಕೆ? ಅವರು ಹೇಳಿದ್ದೇನು?

ಭಾರತೀಯ ತರಬೇತುದಾರರು ಗೌರವದಿಂದ ನಿರ್ಗಮಿಸುವ ವಾತಾವರಣ ನಿರ್ಮಾಣ ಆಗುವುದೇ? ಈ ಪ್ರಶ್ನೆ ಸದ್ಯ ಕ್ರಿಕೆಟ್ ವಲಯದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಬೆಂಗಳೂರಿನ ಸಾಹಿತ್ಯ ಉತ್ಸವದಲ್ಲಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಡಿದ ಮಾತು ಈ ಚರ್ಚೆಯು ಮತ್ತೊಮ್ಮೆ ಚಾಲ್ತಿಗೆ ಬರಲು ಕಾರಣ

ಬೆಂಗಳೂರು ಸಾಹಿತ್ಯ ಉತ್ಸವದ ಕೊನೆಯ ದಿನ ಅದು. ಅಕ್ಟೋಬರ್ 28ರ ಮೊದಲ ದಿನಕ್ಕಿಂತಲೂ ಅಂದು ಅಶೋಕ ಹೋಟೆಲ್‌ನಲ್ಲಿ ಸೇರಿದ್ದ ಸಭಿಕರ ಸಂಖ್ಯೆ ಹೆಚ್ಚಿತ್ತು. ಖ್ಯಾತ ಕ್ರಿಕೆಟಿಗರಾದ ಇಎಎಸ್ ಪ್ರಸನ್ನ, ಸೈಯದ್ ಕೀರ್ಮಾನಿ ಅಲ್ಲದೆ, ರಾಹುಲ್ ದ್ರಾವಿಡ್ ಈ ಉತ್ಸವದಲ್ಲಿ ಭಾಗವಹಿಸುತ್ತಿದ್ದುದೂ ಇದಕ್ಕೆ ಕಾರಣವಾಗಿತ್ತು. ಅದರಲ್ಲೂ ದ್ರಾವಿಡ್ ಏನು ಹೇಳಬಹುದು ಎಂಬುದರ ಬಗ್ಗೆಯೇ ಕುತೂಹಲ ಮನೆಮಾಡಿತ್ತು.

ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಜತೆಗಿನ ಸಂವಾದದ ವೇಳೆ ಹಲವಾರು ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ ದ್ರಾವಿಡ್, ಸಹ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾರತ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಒಂದರೆಕ್ಷಣ ಗಂಭೀರವಾದಂತೆ ಕಂಡುಬಂದರು.

ಯಾವುದೇ ವಿಷಯದ ಬಗೆಗೆ ಪ್ರತಿಕ್ರಿಯಿಸುವಾಗ ತರಾತುರಿ ತೋರದೆ, ಸೂಕ್ಷ್ಮತೆಯಿಂದಲೇ ಸ್ಪಂದಿಸುವುದು ದ್ರಾವಿಡ್ ಗುಣ. ಆದರೆ, ಅನಿಲ್ ಕುಂಬ್ಳೆ ರಾಜೀನಾಮೆ ಸಲ್ಲಿಸಿದ ವಿಷಯದಲ್ಲಿ ತನಗಾದ ಬೇಸರ ಹಾಗೂ ನಿರಾಸೆಯನ್ನು ಬಹಿರಂಗವಾಗಿಯೇ ತೋಡಿಕೊಂಡರು.

ಕುಂಬ್ಳೆ-ಕೊಹ್ಲಿ ಪ್ರಕರಣವನ್ನು ಬಿಸಿಸಿಐ ಜವಾಬ್ದಾರಿಯುತವಾಗಿ ನಿಭಾಯಿಸಲಿಲ್ಲ ಎಂದು ನೇರವಾಗಿ ದ್ರಾವಿಡ್ ಹೇಳಲಿಲ್ಲ. ಆದರೆ, ಇಂತಹ ಸಂದರ್ಭಗಳಲ್ಲಿ ಬಿಸಿಸಿಐ ಹೆಚ್ಚು ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು ಎಂಬುದನ್ನು44ರ ಹರೆಯದ ಈ ಪ್ರಬುದ್ಧ ಕ್ರಿಕೆಟಿಗ ಸೂಚ್ಯವಾಗಿ ತಿಳಿಸಿದರು.

ಕುಂಬ್ಳೆ ಮತ್ತು ಕೊಹ್ಲಿ ನಡುವಣದ ಮನಸ್ತಾಪದ ಬಗೆಗೆ ದ್ರಾವಿಡ್ ಹೇಳಿದ್ದಿಷ್ಟು: ‘’ಇಬ್ಬರ ನಡುವೆ ಏನು ನಡೆಯಿತು ಎಂಬುದರ ಬಗೆಗೆ ನನ್ನಲ್ಲಿ ಮಾಹಿತಿ ಇಲ್ಲ. ಹಾಗಾಗಿ, ಈ ಕುರಿತು ನೇರವಾಗಿ ಪ್ರತಿಕ್ರಿಯಿಸಲಾರೆ. ಆದರೆ, ಇಡೀ ಪ್ರಕರಣ ಸಾರ್ವಜನಿಕ ವಲಯದಲ್ಲಿ ಪ್ರಸ್ತುತವಾದ ಬಗೆ ಮಾತ್ರ ಒಂದು ದುರದೃಷ್ಟಕರ ಎಪಿಸೋಡ್‌ನಂತಿದೆ. ನನಗೆ ತಿಳಿದಮಟ್ಟಿಗೆ ಭಾರತಕ್ಕೆ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಏಕೈಕ ಆಟಗಾರ ಅನಿಲ್. ತರಬೇತುದಾರನಾಗಿಯೂ ಯಶಸ್ವಿಯಾದ ಇಂಥ ದಿಗ್ಗಜನನ್ನು ನಡೆಸಿಕೊಂಡ ಪರಿ ನನ್ನಲ್ಲಿ ತೀವ್ರ ನಿರಾಸೆ ತರಿಸಿತು. ಆದರೆ, ಇದುವೇ ಇಂದಿನ ವಾಸ್ತವದಂತಿದೆ. ಇಂದು ಅನಿಲ್‌, ನಾಳೆ ನಾನು ಅಷ್ಟೆ,’’ ಎನ್ನುತ್ತಾರೆ.

ಮುಂದುವರಿದು, "ನಿಜ, ಭಾರತದ ಪರ ಆಡುತ್ತಿದ್ದ ಸಂದರ್ಭದಲ್ಲಿ ನಾವು ತರಬೇತುದಾರರಿಗಿಂತಲೂ ಪ್ರಭಾವಿಗಳಾಗಿದ್ದೆವು. ಬದಲಾಗುವ ಆಯಾ ಕಾಲಘಟ್ಟದಲ್ಲಿ ಈ ಪ್ರಕ್ರಿಯೆ ಸಾಮಾನ್ಯ. ಪ್ರಸಕ್ತ ಭಾರತ ಎ ಮತ್ತು 19 ವರ್ಷದೊಳಗಿನವರ ಭಾರತ ತಂಡದ ಕೋಚ್ ಆಗಿರುವ ನಾನು ಕೂಡ ಒಂದು ದಿನ ನಿರ್ಗಮಿಸಲೇಬೇಕು. ಆದರೆ, ಈ ನಿರ್ಗಮನದ ಹಾದಿ ಗೌರವದಾಯಕವಾಗಿರಬೇಕಷ್ಟೆ’’ ಎಂಬ ಅವರ ದನಿಯಲ್ಲಿ ಭಾರತೀಯ ತರಬೇತುದಾರರನ್ನು ನಡೆಸಿಕೊಳ್ಳುತ್ತಿರುವ ಬಗೆಗಿನ ಕಳವಳ ವ್ಯಕ್ತವಾಯಿತು.

ದ್ರಾವಿಡ್ ಅವರ ಈ ಮಾತಿನ ಒಳಾರ್ಥ ಭಾರತೀಯ ತರಬೇತುದಾರರ ಮೇಲೆ ತಂಡದ ನಾಯಕನ ಸವಾರಿ ಪ್ರಶ್ನಾತೀತ, ಇಂಥ ಸಂದರ್ಭಗಳಲ್ಲಿ ಬಿಸಿಸಿಐ ನಾಯಕನ ಬೆನ್ನಿಗೇ ನಿಲ್ಲುತ್ತಿರುವುದು ಸುಸ್ಪಷ್ಟ ಎಂಬುದನ್ನೂ ಧ್ವನಿಸುತ್ತದೆ.

ಅಂದಹಾಗೆ, ಭಾರತ ತಂಡದ ಕೆಲವು ನಾಯಕರು ತಮ್ಮ ತರಬೇತುದಾರರ ಮೇಲೆಯೇ ವೀಟೋ ಪರಮಾಧಿಕಾರ ಚಲಾಯಿಸುತ್ತಾ ಬಂದದ್ದಕ್ಕೆ ಸಾಕಷ್ಟು ನಿದರ್ಶನಗಳಿವೆ ಮತ್ತು ಇಂಥದ್ದೊಂದು ಸಂಸ್ಕೃತಿ ಬೆಳೆಯಲು ಬಿಸಿಸಿಐನ ದುರ್ಬಲ ಆಡಳಿತ ವ್ಯವಸ್ಥೆಯೇ ಕಾರಣ ಎಂಬುದು ಗುಟ್ಟೇನಲ್ಲ. ಇದನ್ನು ಇತಿಹಾಸಕಾರ ಹಾಗೂ ಕ್ರಿಕೆಟ್ ವಿಶ್ಲೇಷಕ ರಾಮಚಂದ್ರಾ ಗುಹಾ, ಸರ್ವೋಚ್ಚ ನ್ಯಾಯಾಲಯದಿಂದ ನೇಮಕವಾಗಿರುವ ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ ವಿನೋದ್ ರೈಗೆ ಬರೆದಿದ್ದ ತಮ್ಮ ರಾಜೀನಾಮೆ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ರಾಮಚಂದ್ರ ಗುಹಾ

ಬಿಸಿಸಿಐನ ಹಲವಾರು ಲೋಪಗಳಲ್ಲಿ ಟೀಂ ಇಂಡಿಯಾದಲ್ಲಿನ ಸೂಪರ್ ಸ್ಟಾರ್ ಸಂಸ್ಕೃತಿಯೂ ಒಂದೆಂಬುದು ಬಹುಮುಖ್ಯವಾದುದು. ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರವೂ ಧೋನಿಗೆ ವಾರ್ಷಿಕ ಕರಾರಿನಲ್ಲಿ ‘ಎ’ ದರ್ಜೆಯ ಮಾನ್ಯತೆ ನೀಡುವುದು, ಕೋಚ್ ಮೇಲೆಯೇ ವೀಟೋ ಅಧಿಕಾರ ಚಲಾಯಿಸುವಂಥ ತಂಡದ ನಾಯಕನ ನಡೆಯನ್ನು ಪ್ರಶ್ನಿಸದಿರುವುದು ಈ ಸೂಪರ್ ಸ್ಟಾರ್ ಸಂಸ್ಕೃತಿಯ ಪ್ರಮುಖ ನಿದರ್ಶನಗಳೆಂದು ಗುಹಾ ಹೇಳುತ್ತಾರೆ.

‘’ತನ್ನ ತರಬೇತುದಾರನ ವಿರುದ್ಧವೇ ವೀಟೋ ಚಲಾಯಿಸುವ ಅಧಿಕಾರವನ್ನು ಯಾವುದೇ ಉನ್ನತ ಹಾಗೂ ವೃತ್ತಿಪರ ತಂಡಕ್ಕೆ ನೀಡಿರುವುದನ್ನು ಜಗತ್ತಿನ ಯಾವೊಂದು ದೇಶದಲ್ಲಿಯೂ ಕಾಣಲಾಗದು. ಆದರೆ, ಇದಕ್ಕೆ ವ್ಯತಿರಿಕ್ತವಾದ ವ್ಯವಸ್ಥೆಯನ್ನು ಪೋಷಿಸುವ ಬಿಸಿಸಿಐನ ನಡೆ ಭಾರತೀಯ ಕ್ರಿಕೆಟ್‌ಗೆ ಅತ್ಯಂತ ಅಪಾಯಕಾರಿ’’ ಎಂದು ಗುಹಾ ಎಚ್ಚರಿಸುತ್ತಾರೆ.

ಅಂದಹಾಗೆ, ನ್ಯಾ. ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನಕ್ಕಾಗಿ ನೇಮಕವಾಗಿದ್ದ ಬಿಸಿಸಿಐ ಆಡಳಿತಗಾರರ ಸಮಿತಿಯ ಸದಸ್ಯರಲ್ಲಿ ಗುಹಾ ಕೂಡ ಒಬ್ಬರು. ಆದರೆ, ಮಂಡಳಿಯಲ್ಲಿನ ಆಡಳಿತ ವ್ಯವಸ್ಥೆ ಪಾರದರ್ಶಕವಾಗಿಲ್ಲ, ಇವನ್ನೆಲ್ಲಾ ಕಂಡೂ ಕಾಣದಂತೆ ಇರಲು ತನ್ನಿಂದ ಸಾಧ್ಯವಿಲ್ಲ, ಹೀಗಾಗಿ ತನ್ನನ್ನು ಸೇವೆಯಿಂದ ಮುಕ್ತಗೊಳಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಅಜಯ್ ಶಿರ್ಕೆ ಮತ್ತು ಅನುರಾಗ್ ಠಾಕೂರ್ 

ವಾಸ್ತವವಾಗಿ ಭಾರತ ತಂಡದ ಕೋಚ್‌ ಆಗಿ ಹೆಚ್ಚು ಕಾಲ ಉಳಿದವರು ವಿದೇಶಿಗರೇ ಹೊರತು ಈ ನೆಲದ ಆಟಗಾರರಲ್ಲ. ನ್ಯೂಜಿಲೆಂಡ್‌ನ ಜಾನ್ ರೈಟ್, ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್, ದ.ಆಫ್ರಿಕಾದ ಗ್ಯಾರಿ ಕಸ್ಟನ್, ಜಿಂಬಾಬ್ವೆಯ ಡಂಕನ್ ಫ್ಲೆಚರ್‌ ಹೆಚ್ಚಿನ ಅವಧಿಯವರೆಗೆ ಕಾರ್ಯನಿರ್ವಹಿಸಿದ್ದಾರೆ. ಆದರೆ, ಕಪಿಲ್ ದೇವ್, ಮದನ್ ಲಾಲ್, ಅಂಶುಮಾನ್ ಗಾಯಕ್ವಾಡ್ ಮತ್ತು ಸಂದೀಪ್ ಪಾಟೀಲ್ ಒಂದಲ್ಲಾ ಒಂದು ಕಾರಣದಿಂದ ತಮ್ಮ ಒಪ್ಪಂದದ ಅವಧಿಯನ್ನೂ ಮುಗಿಸದೆ ಅರ್ಧದಲ್ಲೇ ನಿರ್ಗಮಿಸಿದ್ದಾರೆ.

ಹಲವು ಸಂದರ್ಭಗಳಲ್ಲಿ ಭಾರತ ತಂಡದ ಕೋಚ್ ಹಾಗೂ ನಾಯಕನ ನಡುವಿನ ಮನಸ್ತಾಪ, ಒಳಬೇಗುದಿಗಳು ಬೂದಿಮುಚ್ಚಿದ ಕೆಂಡದಂತಿದ್ದರೂ, ಬಹುದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡದ್ದು ಸೌರವ್ ಗಂಗೂಲಿ ಹಾಗೂ ಆಸ್ಟ್ರೇಲಿಯಾದ ಗ್ರೆಗ್ ಚಾಪೆಲ್ ಪ್ರಕರಣದಲ್ಲಿ. ಆ ಸಂದರ್ಭದಲ್ಲಿ ಗಂಗೂಲಿ ಪರ ನಿಂತಿದ್ದ ಬಿಸಿಸಿಐ ನಡೆ ಸಹಜವಾಗಿತ್ತಾದರೂ, ಕುಂಬ್ಳೆ-ಕೊಹ್ಲಿ ವಿಷಯದಲ್ಲಿ ಬಿಸಿಸಿಐನ ನಡೆ ಪ್ರಶ್ನಾರ್ಹವೇ.

‘’ಆಸ್ಟ್ರೇಲಿಯಾದಂಥ ರಾಷ್ಟ್ರಗಳಲ್ಲಿ ತರಬೇತುದಾರನಿಗೆ ಅಮಿತ ಅಧಿಕಾರವಿರುತ್ತದೆ. ತಂಡದ ನಾಯಕನ ಜತೆಗೆ ಅಭಿಪ್ರಾಯ ಘರ್ಷಣೆಯಂಥ ಸಂದರ್ಭಗಳನ್ನು ಅಲ್ಲಿನ ಕ್ರಿಕೆಟ್ ಆಡಳಿತ ಸಮರ್ಥವಾಗಿ ನಿಭಾಯಿಸುತ್ತವೆ. ಅಂತೆಯೇ, ಅಲ್ಲಿ ಕ್ರೀಡಾಪಟುಗಳು ಕ್ರೀಡಾಪಟುಗಳಷ್ಟೆ, ಇಲ್ಲಿಯಂತೆ ಆಟಗಾರರನ್ನು ಹೀರೋಗಳಾಗಿ ಬಿಂಬಿಸುವುದಿಲ್ಲ. ಭಾರತ ತಂಡದ ತರಬೇತುದಾರನ ಸ್ಥಾನದಲ್ಲಿ ಮುಂದುವರೆಯಬೇಕಾದರೆ, ನಾಯಕ ಹೇಳುವ ಕ್ಷುಲ್ಲಕ ಸಂಗತಿಗಳನ್ನೂ ಸಮ್ಮತಿಸಬೇಕಿರುತ್ತದೆ’’ ಎಂಬ ಮಾಜಿ ನಾಯಕ ಮದನ್ ಲಾಲ್ ಅವರ ನುಡಿಗಳಲ್ಲಿ ಭಾರತೀಯ ಕೋಚ್‌ಗಳ ದಯನೀಯ ಸ್ಥಿತಿಯೂ ವೇದ್ಯವಾಗುತ್ತದೆ. ಈ ನಿಟ್ಟಿನಲ್ಲಿ ದ್ರಾವಿಡ್ ಮಾತಿನ ಬಗ್ಗೆ ಬಿಸಿಸಿಐ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ.

ಭಾರತೀಯ ಕ್ರಿಕೆಟ್ ಮಾತ್ರವೇ ಅಲ್ಲದೆ, ಒಂದು ಬಗೆಯಲ್ಲಿ ಇಡೀ ವಿಶ್ವ ಕ್ರಿಕೆಟ್‌ ಅನ್ನೇ ನಿಯಂತ್ರಿಸುವಷ್ಟು ಧನಾಢ್ಯವಾಗಿರುವ ಬಿಸಿಸಿಐ, ವಿವಾದಗಳಿಂದಲೂ ಅಷ್ಟೇ ಸಂಪನ್ನ. ಇಂತಹವುಗಳಿಂದ ಮುಕ್ತವಾಗದೆ ಹೋದರೆ, ಭಾರತೀಯ ಕ್ರಿಕೆಟ್‌ ನಿಜವಾಗಿಯೂ ಅಪಾಯಕ್ಕೆ ಸಿಲುಕುವುದರಲ್ಲಿ ಸಂಶಯವಿಲ್ಲ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More