ಮಾಧ್ಯಮ ಹಕ್ಕು ನಿಯಮ ಉಲ್ಲಂಘಿಸಿದ ಬಿಸಿಸಿಐಗೆ ೫೨ ಕೋಟಿ ರು. ಬರೆ

ಬಿಸಿಸಿಐ ಮುಖ್ಯ ಹಣಕಾಸು ಅಧಿಕಾರಿಗೆ ಬೆದರಿಕೆ ಒಡ್ಡಿದ್ದಕ್ಕೆ ಸ್ಪಷ್ಟನೆ ನೀಡುವಂತೆ ಸುಪ್ರೀಂ ಕೋರ್ಟ್‌ ತಿಳಿಸಿದ ಬೆನ್ನಲ್ಲೇ, ಐಪಿಎಲ್‌ನಲ್ಲಿ ಮಾಧ್ಯಮ ಹಕ್ಕುಗಳ ಕರಾರು ಒಪ್ಪಂದದ ನಿಯಮ ಉಲ್ಲಂಘಿಸಿದ ತಪ್ಪಿಗಾಗಿ ಕೇಂದ್ರೀಯ ಸ್ಪರ್ಧಾ ಆಯೋಗ ಬಿಸಿಸಿಐಗೆ ಪುನಃ ೫೨.೨೪ ಕೋಟಿ ರುಪಾಯಿಗಳ ದಂಡ ಹೇರಿದೆ

ವಿಶ್ವ ಕ್ರಿಕೆಟ್‌ನ ಪ್ರಬಲ ಹಾಗೂ ಶ್ರೀಮಂತ ಟಿ೨೦ ಲೀಗ್ ಎಂದೇ ಕರೆಸಿಕೊಳ್ಳುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮತ್ತೊಮ್ಮೆ ಭಾರಿ ದಂಡ ತೆರುವಂತಾಗಿದೆ. ಮಾಧ್ಯಮ ಹಕ್ಕುಗಳಿಗೆ ಸಂಬಂಧಿಸಿ ಸ್ಪರ್ಧಾ ನಿಯಮಗಳನ್ನು ಮುರಿದ ತಪ್ಪಿಗಾಗಿ ಬಿಸಿಸಿಐಗೆ ಬರೆ ಬಿದ್ದಿದೆ.

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಐಪಿಎಲ್‌ನಿಂದ ಬಿಸಿಸಿಐ ಗಳಿಸಿದ ಆದಾಯದ ಶೇ.೪.೪೮ರ ಸರಾಸರಿಯಲ್ಲಿ ಈ ದಂಡವನ್ನು ವಿಧಿಸಲಾಗುತ್ತಿದೆ ಎಂದು ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಬಿಸಿಸಿಐಗೆ ಸಲ್ಲಿಸಿರುವ ತನ್ನ ೪೪ ಪುಟಗಳ ಆದೇಶ ಪತ್ರದಲ್ಲಿ ತಿಳಿಸಿದೆ. ೨೦೧೩-೧೪, ೨೦೧೪-೧೫ ಹಾಗೂ ೨೦೧೫-೧೬ನೇ ಅವಧಿಯಲ್ಲಿ ಅಂದಾಜು ೧,೧೬೪.೭ ಕೋಟಿ ರು.ಗಳನ್ನು ಬಿಸಿಸಿಐ ಐಪಿಎಲ್ ಮಾಧ್ಯಮ ಹಕ್ಕಿನಡಿ ಗಳಿಸಿದೆ ಎಂದು ಸಿಸಿಐ ಹೇಳಿದೆ.

ಚೌಧರಿಗೆ ಚಾಟಿ: ಈ ಮಧ್ಯೆ, ನ್ಯಾ.ಲೋಧಾ ಸಮಿತಿ ಶಿಫಾರಸುಗಳ ಅನುಷ್ಠಾನ ವಿಷಯದಲ್ಲಿ ಹೈರಾಣಾಗಿರುವ ಬಿಸಿಸಿಐಗೆ ಸದ್ಯಕ್ಕಂತೂ ಸರ್ವೋಚ್ಚ ನ್ಯಾಯಾಲಯದಿಂದ ಮುಕ್ತಿ ಇಲ್ಲದಂತಾಗಿದೆ. ಶಿಫಾರಸುಗಳ ಅನುಷ್ಠಾನ ವಿಷಯಕ್ಕೆ ಸಂಬಂಧಿಸಿ ಬುಧವಾರ ನಡೆದ ಮತ್ತೊಂದು ಸುತ್ತಿನ ವಿಚಾರಣೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಿಗದಿಯಾಗಿತ್ತು. ಈ ವೇಳೆ, ಬಿಸಿಸಿಐ ಗೌರವ ಖಜಾಂಚಿ ಅನಿರುದ್ಧ ಚೌಧರಿಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಬಿಸಿಸಿಐ ಮುಖ್ಯ ಹಣಕಾಸು ಅಧಿಕಾರಿಗೆ ನಾನು ಬೆದರಿಕೆ ಒಡ್ಡಿದ್ದೇನೆ ಎಂಬುದು ಆಘಾತ ತರಿಸಿದೆ. ನನ್ನ ಮೇಲಿನ ಈ ಆರೋಪದಲ್ಲಿ ಹುರುಳಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನಗಾಣಿಸುತ್ತೇನೆ.
ಅಮಿತಾಭ್ ಚೌಧರಿ, ಬಿಸಿಸಿಐ ಗೌರವ ಖಜಾಂಚಿ 

ಜ.೨೫ ಹಾಗೂ ಅ.೬ರಂದು, ಬಿಸಿಸಿಐ ಗೌರವ ಕಾರ್ಯದರ್ಶಿ ಅನಿರುದ್ಧ್ ಚೌಧರಿ ಅವರಿಂದ ತನಗೆ ಬೆದರಿಕೆಯ ಇಮೇಲ್ ಸಂದೇಶಗಳು ಬಂದಿವೆ ಎಂಬ ಬಿಸಿಸಿಐ ಮುಖ್ಯ ಹಣಕಾಸು ಅಧಿಕಾರಿ ಸಂತೋಷ್ ರಂಗ್ನೇಕರ್ ಅವರು ನೀಡಿರುವ ಲಿಖಿತ ದೂರಿನ ಕುರಿತು ಏಮಿಕಸ್ ಕ್ಯೂರಿ ಗೋಪಾಲ್ ಸುಬ್ರಹ್ಮಣ್ಯಂ ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಕೇಳುತ್ತಿದ್ದಂತೆಯೇ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟನೆ ನೀಡುವಂತೆ ಚೌಧರಿ ಪರ ವಕೀಲರಿಗೆ ತಿಳಿಸಿತು.

ಇದನ್ನೂ ಓದಿ : ಕಳ್ಳ ಕ್ರಿಕೆಟಿಗರ ಹೆಸರು ಬಹಿರಂಗಗೊಳಿಸಲು ಒಪ್ಪಲಿದೆಯೇ ಸುಪ್ರೀಂ ಕೋರ್ಟ್?

ಬಿಸಿಸಿಐ ಹಣಕಾಸನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಲ್ಲಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಬೇಕಾಗುತ್ತದೆ ಎಂದು ಚೌಧರಿ ತಮ್ಮನ್ನು ಬೆದರಿಸಿದ್ದಾರೆಂದು ಲಿಖಿತ ದೂರಿನಲ್ಲಿ ಸಂತೋಷ್ ರಂಗ್ನೇಕರ್ ಹೇಳಿದ್ದರು. ಈ ಗಂಭೀರ ಆರೋಪವನ್ನು ಕೇಳುತ್ತಿದ್ದಂತೆಯೇ ಚೌಧರಿ ಪರ ಹಾಜರಿದ್ದ ವಕೀಲರು, ಇಂಥದ್ದೇನೂ ತನ್ನ ಕಕ್ಷಿದಾರನಿಂದ ಆಗಿಲ್ಲ ಎಂದರು. ಆದರೆ, ನ್ಯಾಯಾಲಯ ಸೂಕ್ತ ಸ್ಪಷ್ಟನೆ ನೀಡುವಂತೆ ಬಿಸಿಸಿಐ ಹಾಗೂ ಚೌಧರಿಗೆ ಮತ್ತೊಮ್ಮೆ ಸೂಚಿಸಿತು. ಅಂದಹಾಗೆ, ೨೦೧೩ರ ಆವೃತ್ತಿ ವೇಳೆಯೂ ಇಂಥದ್ದೇ ತಪ್ಪಿಗಾಗಿ ಬಿಸಿಸಿಐಗೆ ಸ್ಪರ್ಧಾ ಆಯೋಗ ಇಷ್ಟೇ ಪ್ರಮಾಣದ ದಂಡ ವಿಧಿಸಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More