ಜೆರ್ಸಿ ನಂ.೧೦ ತೊಡದಂತೆ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ತಾಕೀತು!

ಎರಡು ದಶಕಗಳಿಗೂ ಹೆಚ್ಚುಕಾಲ ಸಚಿನ್ ತೆಂಡೂಲ್ಕರ್ ಬೆನ್ನ ಮೇಲೆ ಮಿರುಗಿದ ಜೆರ್ಸಿ ನಂ.೧೦ ಇನ್ನು ಮುಂದೆ ಕ್ರಿಕೆಟ್ ಮೈದಾನದಲ್ಲಿ ಬಹುಶಃ ಕಾಣಿಸಿಕೊಳ್ಳುವುದಿಲ್ಲ. ಅಷ್ಟಕ್ಕೂ ಈ ಜೆರ್ಸಿಯನ್ನು ಯಾರೂ ತೊಡದಂತೆ ಆಟಗಾರರಿಗೆ ಬಿಸಿಸಿಐ ತಾಕೀತು ಮಾಡಲು ಕಾರಣವಾದರೂ ಏನು?

ನಂ.೧೦ ಜೆರ್ಸಿ ತೊಟ್ಟು ಏಕದಿನ ಪಂದ್ಯಾವಳಿಯಲ್ಲಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿರುವ ಸಚಿನ್ ಗೌರವಾರ್ಥ ಈ ಸಂಖ್ಯೆಯ ಜೆರ್ಸಿಯನ್ನು ಬೇರಾರೂ ತೊಡದಂತೆ ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ಆದಾಗ್ಯೂ ಭಾರತ ‘ಎ’ ತಂಡದಲ್ಲಿ ಹಾಗೂ ಅಂತಾರಾಷ್ಟ್ರೀಯವಲ್ಲದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾರತದ ಆಟಗಾರರು ಈ ಜೆರ್ಸಿಯನ್ನು ತೊಟ್ಟು ಆಡಲು ಅನುಮತಿಸಲಾಗಿದೆ.

ಅಂದಹಾಗೆ, ಶ್ರೀಲಂಕಾ ಪ್ರವಾಸದ ವೇಳೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್ ತನ್ನ ಚೊಚ್ಚಲ ಏಕದಿನ ಪಂದ್ಯದಲ್ಲಿ ಜೆರ್ಸಿ ನಂ.೧೦ ಅನ್ನು ತೊಟ್ಟು ಮೈದಾನಕ್ಕೆ ಇಳಿದಿದ್ದರು. ಆ ಸಂದರ್ಭದಲ್ಲಿ ಬಿಸಿಸಿಐ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು. ಭವಿಷ್ಯದಲ್ಲಿ ಇಂಥದ್ದೇನೂ ಸಂಭವಿಸದಂತೆ ಬಿಸಿಸಿಐ ಅನಧಿಕೃತವಾಗಿ ಜೆರ್ಸಿಯನ್ನು ಹಿಂಪಡೆಯಲು ಮುಂದಾಗಿದೆ.

ಶಾರ್ದೂಲ್ ಠಾಕೂರ್

ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಸಾಂಪ್ರದಾಯಿಕ ಸಂಖ್ಯೆ ಎಂತಲೇ ಕರೆಯಲಾಗುವ ಜೆರ್ಸಿ ನಂ.೧೦ ಇನ್ನು ಮುಂದೆ ಟೀಂ ಇಂಡಿಯಾದಿಂದ ಮರೆಯಾಗಲಿದೆಯೇ? ಬಿಸಿಸಿಐನ ನಡೆಯು ಇದನ್ನು ಖಚಿತಪಡಿಸಿದೆ. ಬಹುತೇಕ ಈ ಜೆರ್ಸಿಯನ್ನು ಅನಧಿಕೃತವಾಗಿ ಹಿಂಪಡೆಯಲು ಬಿಸಿಸಿಐ ಮುಂದಾಗಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ತಿಳಿಸಿದೆ. ಒಂದೊಮ್ಮೆ ಜೆರ್ಸಿ ನಂ.೧೦ ಶಾಶ್ವತವಾಗಿ ಬಿಸಿಸಿಐನಿಂದ ಹಿಂಪಡೆಯಲ್ಪಟ್ಟರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಈ ಜೆರ್ಸಿ ತೊಟ್ಟ ಎರಡನೇ ಹಾಗೂ ಕೊನೆಯ ಆಟಗಾರ ಶಾರ್ದೂಲ್ ಎನಿಸಿಕೊಳ್ಳಲಿದ್ದಾರೆ. ಆಟಗಾರರು ಸ್ವತಃ ಸಚಿನ್ ಜೆರ್ಸಿಯನ್ನು ತೊಡದಿರಲು ನಿರ್ಧರಿಸಿದ್ದರಿಂದ ಈ ನಿರ್ಧಾರ ತಳೆದಿರುವುದಾಗಿಯೂ ಬಿಸಿಸಿಐ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ : ಸಚಿನ್ ಮನೆಗೆ ಕಾಲಿಟ್ಟ ಸುರೇಶ್ ರೈನಾ ದಂಪತಿಗೆ ಕಾದಿತ್ತು ಭರ್ಜರಿ ಪಾರ್ಟಿ!

ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಮಾರ್ಗಸೂಚಿಯಂತೆ ಯಾವುದೇ ಜೆರ್ಸಿ ಸಂಖ್ಯೆಯನ್ನು ಹಿಂಪಡೆಯುವುದಾಗಲೀ, ಇಲ್ಲವೇ ನಿವೃತ್ತಗೊಳಿಸುವುದಾಗಲೀ ಮಾಡುವಂತಿಲ್ಲ. ಹಾಗೊಂದು ವೇಳೆ ಕಡ್ಡಾಯವಾಗಿ ಜೆರ್ಸಿಯನ್ನು ಹಿಂಪಡೆಯಲೇಬೇಕಿದ್ದರೆ, ಐಸಿಸಿಯಿಂದ ಅನುಮತಿ ಪಡೆಯಬೇಕು. ಆದರೆ, ಸಚಿನ್ ವಿಷಯದಲ್ಲಿ ಬಿಸಿಸಿಐ ಅನಧಿಕೃತವಾಗಿ ಈ ಸಂಖ್ಯೆಯನ್ನು ಹಿಂಪಡೆದಿದೆ. ಅಂದಹಾಗೆ, ೨೦೧೩ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಚಿನ್ ವಿದಾಯ ಹೇಳುತ್ತಲೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಜೆರ್ಸಿ ನಂ.೧೦ ಅನ್ನು ಹಿಂಪಡೆದಿತ್ತು.

ಅಂದಹಾಗೆ, ಕ್ರೀಡಾಕ್ಷೇತ್ರದಲ್ಲಿ ಈ ಥರದ ಘಟನೆ ಇದೇ ಮೊದಲೇನೂ ಅಲ್ಲ. ಫುಟ್ಬಾಲ್‌ನಲ್ಲಿ ಇಂಟರ್ ಮಿಲನ್ ಮತ್ತು ಎಸಿ ಮಿಲಿನ್‌ ಕ್ರಮವಾಗಿ ೪ ಮತ್ತು ೩ರ ಜೆರ್ಸಿ ಸಂಖ್ಯೆಯ ಉಡುಪನ್ನು ಹಿಂಪಡೆದಿದ್ದವು. ದಿಗ್ಗಜರಾದ ಜೇವಿಯರ್ ಜನೆಟ್ಟಿ ಹಾಗೂ ಪಾಲೊ ಮಾಲ್ದಿನಿ ಗೌರವಾರ್ಥ ಈ ಫುಟ್ಬಾಲ್ ಕ್ಲಬ್‌ಗಳು ಈ ನಿರ್ಧಾರ ತಳೆದಿದ್ದವು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More