ನಾನು ಸತ್ತಿಲ್ಲ, ಸತ್ತಿಲ್ಲ, ಸತ್ತಿಲ್ಲ ಎಂದು ಸಾರಿ ಹೇಳಿದ ಉಮರ್ ಅಕ್ಮಲ್!

ಸಾಮಾಜಿಕ ಜಾಲತಾಣದ ಮಹಿಮೆಯಲ್ಲಿ ಒಂದಲ್ಲ ಒಂದು ಗದ್ದಲ, ಗೌಜು ನಡೆಯೋದು ಮಾಮೂಲಿ. ಅಲ್ಲಿ ಬದುಕಿರುವವರು ಸಾಯಲೂಬಹುದು, ಸತ್ತವರು ಬದುಕಲೂಬಹುದು! ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಸ್ವತಃ ನಾನು ಬದುಕಿದ್ದೇನೆ ಎಂದು ಹೇಳಿಕೊಳ್ಳುವಂತೆ ಆದದ್ದಾದರೂ ಹೇಗೆ? ಇಲ್ಲಿದೆ ಸ್ವಾರಸ್ಯ

ಪಾಕಿಸ್ತಾನ ಕ್ರಿಕೆಟ್ ಕೋಚ್ ಮಿಕಿ ಅರ್ಥರ್ ವಿರುದ್ಧ ಬಹಿರಂಗವಾಗಿ ಸ್ಫೋಟಿಸಿದ ಬಳಿಕ, ಕಳೆದ ಹಲವಾರು ತಿಂಗಳಿಂದ ಕಷ್ಟಕರ ದಿನಗಳನ್ನು ಉಮರ್ ಅಕ್ಮಲ್ ದೂಡುತ್ತಿದ್ದಾರೆ. ಇದೂ ಸಾಲದೆಂಬಂತೆ, ನ.೨೯ರ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಸಾಯಿಸಲಾಗಿತ್ತು!

ಪಾಕಿಸ್ತಾನ ಕ್ರಿಕೆಟ್‌ಗೆ ಕಾಲಿರಿಸಿದ ಸಂದರ್ಭದಲ್ಲಿ ಪಾಕ್ ಕ್ರಿಕೆಟ್‌ನ ಬಹುದೊಡ್ಡ ಭರವಸೆಯಾಗಿ ಹೊರಹೊಮ್ಮಿದ್ದ ೨೭ರ ಹರೆಯದ ಉಮರ್ ಅಕ್ಮಲ್ ಸತ್ತುಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಗುಲ್ಲೆದ್ದಿತು. ಇದು ಅತಿಯಾಗುತ್ತಿದ್ದಂತೆ ಸ್ವತಃ ಅಕ್ಮಲ್ ತಾನು ಬದುಕಿರುವುದಾಗಿ ಟ್ವೀಟಿಸಿದರಲ್ಲದೆ, ವಿಡಿಯೋ ತುಣುಕೊಂದನ್ನು ಹಾಕಿ ತನ್ನ ಇರುವಿಕೆಯ ಕುರಿತು ಸ್ಪಷ್ಟನೆ ನೀಡಿದರು.

ಉಮರ್ ಸತ್ತಿದ್ದಾರೆ ಎಂಬ ಸುಳ್ಳು ಸಂಗತಿ ಕೆಲಕಾಲ ಅವರ ಸ್ನೇಹಿತರು ಹಾಗೂ ಹಿತೈಷಿಗಳನ್ನು ಆತಂಕಕ್ಕೆ ದೂಡಿತ್ತು. ಆದರೆ, “ರಾಷ್ಟ್ರೀಯ ಟಿ೨೦ ಸೆಮಿಫೈನಲ್‌ನಲ್ಲಿ ನಾನು ಆಡುವುದನ್ನು ನೀವು ಕಣ್ಣಾರೆ ಕಾಣುವಿರಿ,” ಎಂದು ಅಭಿಮಾನಿಗಳಿಗೆ ಟ್ವಿಟರ್ ಮೂಲಕ ತಿಳಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಂಗತಿ ಶುದ್ಧ ಸುಳ್ಳು ಎಂಬುದನ್ನು ಉಮರ್ ಅಕ್ಮಲ್ ಮತ್ತೊಮ್ಮೆ ಖಚಿತಪಡಿಸಿದ್ದಾರೆ.

ಇದನ್ನೂ ಓದಿ : ಕ್ಯಾಪ್ಟನ್ ಧೋನಿ ನಿಜಕ್ಕೂ ಕೂಲ್ ಅಲ್ಲವೇ ಅಲ್ಲ ಎಂದ ಸುರೇಶ್ ರೈನಾ!

ಅಂದಹಾಗೆ, ಇದೇ ಆಗಸ್ಟ್ ತಿಂಗಳಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿನ ಸೌಕರ್ಯಗಳನ್ನು ಬಳಸಿಕೊಳ್ಳಲು ತನಗೆ ಮಿಕಿ ಆರ್ಥರ್ ಅಡ್ಡಿಪಡಿಸುತ್ತಿದ್ದಾರೆ ಎಂದು ಹೇಳಿ ದೊಡ್ಡ ವಿವಾದ ಹುಟ್ಟುಹಾಕಿದ್ದರು. ಆನಂತರ ತನ್ನ ಹೇಳಿಕೆಗೆ ವಿಷಾದಿಸಿದ್ದರು ಕೂಡ. ೨೦೧೧ರಲ್ಲಿ ಪಾಕ್ ಪರ ಕೊನೆಯ ಟೆಸ್ಟ್ ಆಡಿದ ಈ ಸ್ಟೈಲಿಶ್ ಬ್ಯಾಟ್ಸ್‌ಮನ್ ಅಕ್ಮಲ್, ೨೦೧೭ರ ಜನವರಿಯಿಂದ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಡಿಲ್ಲ.

ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು
ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್
ಎ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಸ್ಪೆಲ್‌ನಿಂದ ವಿಶ್ವದಾಖಲೆ ಬರೆದ ನದೀಮ್
Editor’s Pick More