ರಣಜಿ ಟ್ರೋಫಿ; ಬಂಗಾಳ ವಿರುದ್ಧ ಇನ್ನಿಂಗ್ಸ್ ಗೆಲುವು ಕಂಡ ದೆಹಲಿ ಫೈನಲ್‌ಗೆ ಲಗ್ಗೆ

ಹಿರಿಯ ಆಟಗಾರ ಗೌತಮ್ ಗಂಭೀರ್ ಅವರ ಶತಕವಲ್ಲದೆ, ಸೈನಿ, ಕುಲ್ವಂತ್ ಪ್ರಚಂಡ ದಾಳಿಯಿಂದ ಬಂಗಾಳ ವಿರುದ್ಧ ದೆಹಲಿ ಇನ್ನಿಂಗ್ಸ್ ಗೆಲುವು ಕಂಡಿತು. ಈ ಮೂಲಕ ಬರೋಬ್ಬರಿ ೧೦ ವರ್ಷಗಳ ಬಳಿಕ ದೆಹಲಿ, ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಸುತ್ತು ತಲುಪಿದ ಸಾಧನೆ ಮಾಡಿದಂತಾಗಿದೆ

ಮಧ್ಯಮ ವೇಗಿಗಳಾದ ನವದೀಪ್ ಸೈನಿ (೩೫ಕ್ಕೆ ೪) ಹಾಗೂ ಕುಲ್ವಂತ್ ಖೆಜ್ರೋಲಿಯಾ (೪೦ಕ್ಕೆ ೪) ಮಾರಕ ದಾಳಿಗೆ ನಲುಗಿದ ಬಂಗಾಳ, ಈ ಋತುವಿನ ರಣಜಿ ಅಭಿಯಾನವನ್ನು ಇನ್ನಿಂಗ್ಸ್ ಸೋಲಿನೊಂದಿಗೆ ಕೊನೆಗಾಣಿಸಿತು. ಇತ್ತ, ಯುವೋತ್ಸಾಹಿ ಆಟಗಾರರಿಂದ ಕೂಡಿರುವ ದೆಹಲಿ, ಆಟದ ನಾನಾ ಮಗ್ಗಲುಗಳಲ್ಲೂ ಬಂಗಾಳದ ವಿರುದ್ಧ ಪಾರಮ್ಯ ಮೆರೆದು, ಇನ್ನಿಂಗ್ಸ್ ಹಾಗೂ ೨೬ ರನ್‌ಗಳ ಗೆಲುವಿನೊಂದಿಗೆ ರಣಜಿ ಟ್ರೋಫಿ ಫೈನಲ್ ತಲುಪಿತು. ಅಂದಹಾಗೆ, ೨೦೦೭-೦೮ರ ಆವೃತ್ತಿಯಲ್ಲಿ ಕೊನೆಯ ಬಾರಿಗೆ ಫೈನಲ್ ತಲುಪಿದ್ದ ದೆಹಲಿ ಚಾಂಪಿಯನ್ ಆಗಿತ್ತಲ್ಲದೆ, ಅಲ್ಲಿಂದಾಚೆಗೆ ಅದು ಪ್ರಶಸ್ತಿ ಸುತ್ತು ತಲುಪುವಲ್ಲಿ ಯಶಸ್ವಿ ಆಗಿರಲಿಲ್ಲ.

ಏಳು ಬಾರಿ ರಣಜಿ ಟ್ರೋಫಿ ಗೆದ್ದಿರುವ ದೆಹಲಿ, ಇದೀಗ ಇದೇ ತಿಂಗಳು ೨೯ರಿಂದ ಇಂದೋರ್‌ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ವಿದರ್ಭ ಇಲ್ಲವೇ ಕರ್ನಾಟಕ ತಂಡವನ್ನು ಎದುರುಗೊಳ್ಳಲಿದೆ. ಫೈನಲ್ ತಲುಪುವ ಫೇವರಿಟ್ ಆಗಿ ಕಾಣಿಸಿಕೊಂಡಿರುವ ಕರ್ನಾಟಕವನ್ನು ದೆಹಲಿ ಪಡೆ ಗುರಿಯಾಗಿಸಿಕೊಂಡಿದ್ದರೆ ಅಚ್ಚರಿ ಇಲ್ಲ. ಏಕೆಂದರೆ, ಗುಂಪು ಹಂತದಲ್ಲಿ ಕರ್ನಾಟಕ ವಿರುದ್ಧ ಸೆಣಸಿದ್ದ ಅದು, ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು.

ಇನ್ನು, ೧೧೨ ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ದೆಹಲಿ, ಮೊದಲ ನಾಲ್ಕು ವಿಕೆಟ್‌ಗಳನ್ನು ಕೇವಲ ೩೯ ರನ್‌ಗಳಿಗೆ ಬಲಿಗೊಟ್ಟಿತು. ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ್ದು ಸುದೀಪ್ ಚಟರ್ಜಿ (೨೧) ಮಾತ್ರ. ಅವರು ಕೂಡ ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು. ಅಂದಹಾಗೆ, ವೃತಿಕ್ ಚಟರ್ಜಿ (೧) ಮತ್ತು ಮನೋಜ್ ತಿವಾರಿ (೧೪) ನಡುವಿನ ತಪ್ಪುಗ್ರಹಿಕೆಯಿಂದಾಗಿ ಚಟರ್ಜಿ ರನೌಟ್ ಆಗಿ ಹೊರನಡೆದರು. ಎರಡನೇ ರನ್‌ಗೆ ತಿವಾರಿ ಮುಂದಾಗುತ್ತಿದ್ದಂತೆ, ಆ ಬದಿಯಿಂದ ಚಟರ್ಜಿ ಬೇಡ ಎಂದು ಕೂಗಿಕೊಂಡರೂ ಅದಕ್ಕೆ ಓಗೊಡದ ತಿವಾರಿ ರನ್‌ ಕದಿಯಲು ಮುಂದಾದರು. ಪರಿಣಾಮ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಒಂದೇ ಅಂಚಿನಲ್ಲಿ ಸೇರಿ ಅಂತಿಮವಾಗಿ ಚಟರ್ಜಿ ತನ್ನ ವಿಕೆಟ್ ಕಳೆದುಕೊಳ್ಳುವಂತಾಯಿತು. ನಂತರ ತಿವಾರಿ ಕೂಡ ಹೆಚ್ಚು ಹೊತ್ತೇನೂ ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇತ್ತ, ಶ್ರೀವತ್ಸ್ ಗೋಸ್ವಾಮಿ ೧೭ ರನ್‌ಗೆ ನಿರುತ್ತರವಾದಾಗ ದೆಹಲಿ ಕೈ ಮೇಲಾಯಿತು.

ಇದನ್ನೂ ಓದಿ : ಕರ್ನಾಟಕಕ್ಕೆ ಮಹತ್ವದ ಮುನ್ನಡೆ ತಂದಿತ್ತ ಕರುಣ್ ನಾಯರ್ ಅಜೇಯ ಶತಕ

ಶಮಿ ಹೋರಾಟ ವ್ಯರ್ಥ: ಏತನ್ಮಧ್ಯೆ, ಎರಡನೇ ದಿನದಾಟದ ಅಂತ್ಯಕ್ಕೆ ೩ ವಿಕೆಟ್‌ಗೆ ೨೭೧ ರನ್ ಗಳಿಸಿದ್ದ ದೆಹಲಿಗೆ ಮೊಹಮದ್ ಶಮಿ (೧೨೨ಕ್ಕೆ ೬) ಮಾರಕರಾದರು. ಅವರ ಕರಾರುವಾಕ್ ದಾಳಿಗೆ ಬೆಚ್ಚಿದ ದೆಹಲಿ, ಉಳಿದ ಏಳು ವಿಕೆಟ್‌ಗಳಿಂದ ೧೧೮ ರನ್ ಕಲೆಹಾಕಿತು. ಆದಾಗ್ಯೂ ಕುನಾಲ್ ಚಾಂಡಿಲಾ (೧೧೩) ಮತ್ತು ಗೌತಮ್ ಗಂಭೀರ್ ಜೋಡಿಯ ಮನೋಜ್ಞ ಜೊತೆಯಾಟ ಮತ್ತು ಹಿಮ್ಮತ್ ಸಿಂಗ್ (೬೦) ದಾಖಲಿಸಿದ ಅರ್ಧಶತಕದಿಂದ ದೆಹಲಿ ತನ್ನ ಮೊದಲ ಇನ್ನಿಂಗ್ಸ್ ಅನ್ನು ೩೯೮ ರನ್‌ಗಳಿಗೆ ಮುಗಿಸಿತು.

ಸಂಕ್ಷಿಪ್ತ ಸ್ಕೋರ್

ಬಂಗಾಳ: ೨೮೬ (ಸುದೀಪ್ ಚಟರ್ಜಿ ೮೩; ನವದೀಪ್ ಸೈನಿ ೫೫ಕ್ಕೆ ೩) ಮತ್ತು ೮೬ (ಸುದೀಪ್ ಚಟರ್ಜಿ ೨೧; ನವದೀಪ್ ಸೈನಿ ೩೫ಕ್ಕೆ ೪, ಕುಲ್ವಂತ್ ಖೆಜ್ರೊಲಿಯಾ ೪೦ಕ್ಕೆ ೪) ದೆಹಲಿ: ೩೯೮ (ಗೌತಮ್ ಗಂಭೀರ್ ೧೨೭, ಕುನಾಲ್ ಚಾಂಡೀಲಾ ೧೧೩; ಮೊಹಮದ್ ಶಮಿ ೧೨೨ಕ್ಕೆ೬) ಫಲಿತಾಂಶ: ದೆಹಲಿಗೆ ಇನ್ನಿಂಗ್ಸ್ ಹಾಗೂ ೨೬ ರನ್ ಗೆಲುವು; ಪಂದ್ಯಶ್ರೇಷ್ಠ: ನವದೀಪ್ ಸೈನಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More