ಟೆಸ್ಟ್, ಏಕದಿನ ನಂತರ ಇದೀಗ ಚುಟುಕು ಸರಣಿಯಲ್ಲೂ ಪ್ರಭುತ್ವ ಮೆರೆಯುವ ತುಡಿತ

ಮೊದಲಿಗೆ ಮೂರು ಪಂದ್ಯ ಸರಣಿಯನ್ನು ೧-೦ಯಿಂದ ಗೆದ್ದ ಭಾರತ ತಂಡ, ತದನಂತರ ಮೂರು ಏಕದಿನ ಪಂದ್ಯ ಸರಣಿಯನ್ನು ೨-೧ ಅಂತರದಿಂದ ಗೆದ್ದುಕೊಂಡಿತು. ಬುಧವಾರದಿಂದ (ಡಿ.೨೦) ಶುರುವಾಗಲಿರುವ ಮೂರನೇ ಹಂತದ ಚುಟುಕು ಸರಣಿಯನ್ನು ಈಗ ಗುರಿಯಾಗಿಸಿಕೊಂಡಿದೆ

ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧ ಮತ್ತೊಂದು ಆಕ್ರಮಣಶೀಲ ಆಟವಾಡಲು ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ ಸಜ್ಜಾಗಿದೆ. ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರು ಪಂದ್ಯ ಸರಣಿಯ ಮೊದಲ ಚುಟುಕು ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡುವ ತವಕದಲ್ಲಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯ ಸರಣಿಯಲ್ಲಿ ಏಕಪಕ್ಷೀಯ ಪ್ರದರ್ಶನ ನೀಡಿದ ಆತಿಥೇಯರ ವಿರುದ್ಧ ತಿಸಾರ ಪೆರೆರಾ ನೇತೃತ್ವದ ಶ್ರೀಲಂಕಾ ತಂಡ ತೀವ್ರ ಒತ್ತಡಕ್ಕೆ ಸಿಲುಕಿದೆ. ಆದಾಗ್ಯೂ, ಕಳೆದೆರಡು ಸರಣಿಗಳಲ್ಲಿನ ಸೋಲನ್ನು ಸದ್ಯ ಬದಿಗೊತ್ತಿ, ಭಾರತ ಪ್ರವಾಸದ ಈ ಕಟ್ಟಕಡೆಯ ಕಾದಾಟದಲ್ಲಾದರೂ ಯಶ ಸಾಧಿಸಿ ವರ್ಷಾಂತ್ಯವನ್ನು ಗೆಲುವಿನೊಂದಿಗೆ ಮುಗಿಸಲು ಹಾತೊರೆಯುತ್ತಿದೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದ ಭಾರತ ತಂಡಕ್ಕೆ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಸೋಲಾಗಿತ್ತು. ಆದರೆ, ನಂತರದ ಎರಡೂ ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಪಡೆದ ಭಾರತ ತಂಡ, ಇದೀಗ ಚುಟುಕು ಸರಣಿಯನ್ನೂ ಗಂಭೀರವಾಗಿ ಪರಿಗಣಿಸಿದೆ. ಮೊಹಾಲಿ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ ನಂತರ ವೈಜಾಗ್‌ನಲ್ಲಿ ನಡೆದ ನಿರ್ಣಾಯಕ ಕಾದಾಟದಲ್ಲಿ ಶ್ರೀಲಂಕಾಗೆ ಐತಿಹಾಸಿಕ ಸರಣಿ ಗೆಲ್ಲುವ ಅವಕಾಶವಿತ್ತು. ೧೩೧ ರನ್‌ಗಳಿಗೆ ಕೇವಲ ೧ ವಿಕೆಟ್ ಕಳೆದುಕೊಂಡಿದ್ದ ಅದು ಬ್ಯಾಟಿಂಗ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿತ್ತು. ಆದರೆ, ಯಜುವೇಂದ್ರ ಚಾಹಲ್ ಹಾಗೂ ಕುಲದೀಪ್ ಯಾದವ್ ಹೆಣೆದ ಸ್ಪಿನ್ ಸುಳಿಗೆ ಸಿಲುಕಿ, ೨೧೫ ರನ್‌ಗಳಿಗೆ ಸರ್ವಪತನ ಕಂಡಿತ್ತು.

ಅಂದಹಾಗೆ, ಚುಟುಕು ಕ್ರಿಕೆಟ್‌ ಮಿಕ್ಕೆರಡು ಪ್ರಕಾರಗಳಿಗಿಂತ ವೈವಿಧ್ಯತೆಯದ್ದಾಗಿದ್ದು, ಮತ್ತೊಮ್ಮೆ ಶ್ರೀಲಂಕಾ ಅದೃಷ್ಟ ಪರೀಕ್ಷೆಗಿಳಿದಿದೆ. ಧರ್ಮಶಾಲಾದಲ್ಲಿನ ಏಕದಿನ ಪಂದ್ಯದಲ್ಲಿ ವೇಗಿ ಸುರಂಗ ಲಕ್ಮಲ್ ನೇತೃತ್ವದಲ್ಲಿ ಶ್ರೀಲಂಕಾ ಬೌಲಿಂಗ್ ಪ್ರಖರವಾಗಿ ಕಂಡುಬಂದಿತ್ತಾದರೂ, ಬಳಿಕ ನಡೆದ ಎರಡೂ ಪಂದ್ಯಗಳಲ್ಲಿ ಲಕ್ಮಲ್ ಪಡೆಯ ಸೊಲ್ಲು ಅಡಗಿದಂತಿತ್ತು. ಲಂಕಾ ಬೌಲರ್‌ಗಳ ಈ ನಿಷ್ಕ್ರಿಯತೆಯ ಲಾಭ ಪಡೆದ ಭಾರತದ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದ್ದರು. ಅದರಲ್ಲೂ ಮೊಹಾಲಿಯಲ್ಲಿ ರೋಹಿತ್ ಶರ್ಮಾ ವೃತ್ತಿಬದುಕಿನ ಮೂರನೇ ದ್ವಿಶತಕ ದಾಖಲಿಸಿದರೆ, ಶ್ರೇಯಸ್ ಅಯ್ಯರ್ ಹಾಗೂ ಶಿಖರ್ ಧವನ್ ಕೂಡ ಅಬ್ಬರಿಸಿದ್ದರು.

ಶ್ರೀಲಂಕಾ ತಂಡಕ್ಕೆ ಸತ್ವಪರೀಕ್ಷೆ

ಅಂದಹಾಗೆ, ಎರಡು ವರ್ಷಗಳ ಹಿಂದೆ ಇದೇ ಬಾರಾಬತಿ ಮೈದಾನದಲ್ಲಿ ನಡೆದ ದ.ಆಫ್ರಿಕಾ ವಿರುದ್ಧದ ಚುಟುಕು ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದ ಭಾರತ ತಂಡ, ೯೨ ರನ್‌ಗಳಿಗೆ ಆಲೌಟ್ ಆಗಿತ್ತು. ಇದರಿಂದ ಕೆರಳಿದ್ದ ಕೆಲವು ಕಿಡಿಗೇಡಿ ಕ್ರಿಕೆಟ್ ಅಭಿಮಾನಿಗಳು ಮೈದಾನದೊಳಗೆ ಬಾಟಲಿಗಳನ್ನು ಎಸೆದು ಆಟಕ್ಕೆ ಅಡ್ಡಿಪಡಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಅಂದಹಾಗೆ, ಇಲ್ಲಿವರೆಗಿನ ಒಟ್ಟು ಹನ್ನೊಂದು ಪಂದ್ಯಗಳ ಮುಖಾಮುಖಿಯಲ್ಲಿ ಭಾರತ ೭-೪ರಲ್ಲಿ ಮೇಲುಗೈ ಮೆರೆದಿದ್ದು, ಲಂಕನ್ನರಿಗೆ ಮತ್ತೊಂದು ವಿಧದ ಸವಾಲು ಎದುರಾಗಿದೆ.

ಆಲ್ರೌಂಡ್ ಆಟದ ಅಗತ್ಯ: ಭಾರತ ತಂಡದ ವಿರುದ್ಧ ನಡೆಯಲಿರುವ ಚುಟುಕು ಸರಣಿಯನ್ನು ಗೆದ್ದು ಇತಿಹಾಸ ಬರೆಯುವ ಧಾವಂತದಲ್ಲಿರುವ ಶ್ರೀಲಂಕಾ ತಂಡ, ಆಲ್ರೌಂಡ್ ಆಟವಾಡುವ ಒತ್ತಡದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಅಸ್ಥಿರ ಪ್ರದರ್ಶನ ನೀಡುತ್ತಿರುವ ಅದಕ್ಕೆ, ಈ ಸರಣಿ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ನಾಯಕ ತಿಸಾರ ಪೆರೆರಾ ಅವರಿಂದ ತಂಡಕ್ಕೆ ಯಾವುದೇ ರೀತಿಯ ಒತ್ತಾಸೆ ಸಿಕ್ಕಿಲ್ಲ ಎಂಬುದು ಗಮನಾರ್ಹ. ಆಲ್ರೌಂಡರ್ ಆಗಿರುವ ಅವರು ತಮ್ಮ ಸಾಮರ್ಥ್ಯವನ್ನು ನಿರೂಪಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ : ಫುಟ್ಬಾಲ್‌ಗೆ ವಿದಾಯ ಹೇಳಿದ ಬ್ರೆಜಿಲ್ ತಂಡದ ಸೂಪರ್ ಸ್ಟಾರ್ ಕಾಕಾ

ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮೊಹಾಲಿಯಲ್ಲಿ ಬಾರಿಸಿದ ಶತಕವು ತಂಡದ ಉಪಯೋಗಕ್ಕೇನೂ ಬಂದಿರಲಿಲ್ಲ. ಆದರೆ, ಗೆಲುವಿನ ಅಂತರವನ್ನು ತುಸು ತಗ್ಗಿಸಿತ್ತಷ್ಟೆ. ಚುಟುಕು ಸರಣಿಯಲ್ಲಿ ಭಾರತದ ಮೇಲೆ ಒತ್ತಡ ಹೇರಬೇಕಾದರೆ, ಅವರು ಕೂಡ ಆಲ್ರೌಂಡ್ ಆಟದಿಂದ ಪುಟಿದೆದ್ದು ನಿಲ್ಲಬೇಕಿದೆ. ಇನ್ನು, ಉಪುಲ್ ತರಂಗ, ನಿರೋಷನ್ ಡಿಕ್ವೆಲ್ಲಾ, ಅಸೆಲಾ ಗುಣರತ್ನೆ ಮತ್ತು ಸದೀರಾ ಸಮರವಿಕ್ರಮರಂಥ ಯುವ ಆಟಗಾರರಿಂದಲೂ ಉತ್ತಮ ಪ್ರದರ್ಶನ ಹೊರಹೊಮ್ಮಬೇಕಿದೆ.

ತಂಡಗಳು ಇಂತಿವೆ

ಭಾರತ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್, ಬಾಸಿಲ್ ಥಂಪಿ ಹಾಗೂ ಜೈದೇವ್ ಉನದ್ಕಟ್.

ಶ್ರೀಲಂಕಾ: ತಿಸಾರ ಪೆರೇರಾ (ನಾಯಕ), ಉಪುಲ್ ತರಂಗ, ಆ್ಯಂಜೆಲೊ ಮ್ಯಾಥ್ಯೂಸ್, ಕುಶಾಲ್ ಜನಿತಾ ಪೆರೆರಾ, ದನುಷ್ಕಾ ಗುಣತಿಲಕ, ನಿರೋಷನ್ ಡಿಕ್ವೆಲ್ಲಾ, ಅಸೆಲಾ ಗುಣರತ್ನೆ, ಸದೀರ ಸಮರವಿಕ್ರಮ, ದಾಸುನ್ ಶನಾಕ, ಚತುರಂಗ ಡಿ’ಸಿಲ್ವಾ, ಸಚಿತ್ ಪತಿರಾಣ, ಧನಂಜಯ ಡಿ’ಸಿಲ್ವಾ, ನುವಾನ್ ಪ್ರದೀಪ್, ವಿಶ್ವ ಫೆರ್ನಾಂಡೊ ಹಾಗೂ ದುಸ್ಮಂತ ಚಮೀರಾ.

ಪಂದ್ಯ ಆರಂಭ: ರಾತ್ರಿ ೭.೦೦ | ನೇರ ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

ಕಟಕ್‌ ಪಂದ್ಯದ ವಿಶೇಷ

  • ಬಾರಾಬತಿ ಮೈದಾನದಲ್ಲಿನ ನಡೆದಿರುವ ಚುಟುಕು ಪಂದ್ಯದ ಗರಿಷ್ಠ ಸ್ಕೋರ್ ೯೬
  • ಈ ಅಂಗಣದಲ್ಲಿ ನಡೆದ ಕಡೆಯ ಪಂದ್ಯದಲ್ಲಿ ಹರಿಣಗಳ ವಿರುದ್ಧ ಭಾರತಕ್ಕೆ ೬ ವಿಕೆಟ್ ಸೋಲು
  • ಒಟ್ಟಾರೆ ೧೧ ಚುಟುಕು ಪಂದ್ಯಗಳಲ್ಲಿ ಶ್ರೀಲಂಕಾ ವಿರುದ್ಧ ೭-೪ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ
ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More