ಛಲ ಬಿಡದೆ ಮೆಗೆಲ್ಲಾನ್ ಜಲಸಂಧಿ ಈಜಿ ಇತಿಹಾಸ ಬರೆದ ಮೈಸೂರಿನ ಮಧು

ಸಾಧಿಸಲೇಬೇಕೆಂಬ ತುಡಿತ ಮೈಸೂರು ಮೂಲದ ಮಧು ನಾಗರಾಜ ಅವರನ್ನು ಹೊಸದೊಂದು ಇತಿಹಾಸ ಬರೆಯುವಂತೆ ಮಾಡಿದೆ. ಮೆಗಲ್ಲಾನ್ ಜಲಸಂಧಿ ಈಜಲು ನಡೆಸಿದ ಮೊದಲ ಯತ್ನ ಫಲಿಸದಿದ್ದರೂ ಎರಡು ವರ್ಷಗಳ ನಂತರ ಗುರಿ ಸಾಧಿಸಿದ ಮೊಟ್ಟಮೊದಲ ಕೆನಡಿಯನ್ ಎನಿಸಿ ಇತಿಹಾಸ ಬರೆದಿದ್ದಾರೆ

ಒಂಟಾರಿಯೊದ ಸಾಫ್ಟ್‌ವೇರ್ ಡೆವಲಪರ್ ಮಧು ನಾಗರಾಜ, ಅಪಾಯಕಾರಿ ಮೆಗೆಲ್ಲಾನ್ ಜಲಸಂಧಿಯನ್ನು ಈಜಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ೪೭ರ ಹರೆಯದ, ಒಕಾವಿಲ್ಲಿ ನಿವಾಸಿ ಮಧು, ಕಳೆದ ಮಾಸಾಂತ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ೩.೯ ಕಿಮೀ ದೂರ ಮೆಗೆಲ್ಲಾನ್ ಜಲಸಂಧಿಯನ್ನು ಈಜಿ ಚರಿತ್ರೆ ಬರೆದರು. ಪ್ರಬಲವಾದ ಗಾಳಿ, ದೈತ್ಯಾಕಾರದ ಅಲೆಗಳು ಹಾಗೂ ಮೈಕೊರೆಯುವ ಶೀತಲ ನೀರಿನಲ್ಲಿನ ಸವಾಲನ್ನು ಮೆಟ್ಟಿನಿಂತ ಮಧು, ಕಠಿಣಕಾರಿ ಮೆಗಲ್ಲಾನ್ ಜಲಸಂಧಿಯನ್ನು ಈಜಿದ ಭಾರತದ ಮೊಟ್ಟಮೊದಲ ಹಾಗೂ ಜಗತ್ತಿನ ೨೩ನೇ ಈಜುಪಟು ಎನಿಸಿಕೊಂಡರು.

ಅಂದಹಾಗೆ, ೨೦೧೨ರಲ್ಲಿ ಒಂಟಾರಿಯೊ ಲೇಕ್ ಅನ್ನು ಯಶಸ್ವಿಯುತವಾಗಿ ೨೪ ತಾಸು, ೨೬ ನಿಮಿಷಗಳಲ್ಲಿ ಈಜಿದ್ದ ಮಧು ನಾಗರಾಜ, ೨೦೧೫ರಲ್ಲಿ ಮೆಗಲ್ಲಾನ್ ಜಲಸಂಧಿಗೆ ಧುಮುಕುವ ಸಾಹಸಕ್ಕೆ ಕೈಹಾಕಿದ್ದರು. ಆದರೆ, ಪ್ರತಿಕೂಲ ಹವಾಮಾನದಿಂದ ತತ್ತರಿಸಿಹೋಗಿದ್ದ ಅವರು, ಎರಡು ತಾಸು ಕೊರೆಯುವ ನೀರಿನಲ್ಲೇ ಸಿಲುಕಿ ಅಪಾಯಕ್ಕೆ ಸಿಲುಕಿಕೊಂಡಿದ್ದರು. ದೇಹದ ಉಷ್ಣಾಂಶವು ಕ್ಷೀಣಿಸಿ ಅಪಾಯಕ್ಕೆ ಸಿಲುಕಿದ್ದ ಅವರನ್ನು ಚಿಲಿ ನಾವಿಕರು ರಕ್ಷಿಸಿ ತೀರಕ್ಕೆ ಕರೆತಂದಿದ್ದರು. ಆದರೆ, ಛಲ ಬಿಡದ ಮಧು, ಮೆಗೆಲ್ಲಾನ್ ಜಲಸಂಧಿಯನ್ನು ಈಜಿಯೇ ತೀರಬೇಕೆಂದು ನಿಶ್ಚಯಿಸಿದರು. ಅದರಂತೆ, ನ.೨೯ರಂದು ಈ ಸಾಹಸವನ್ನು ಒಂದು ತಾಸು, ೧೯ ನಿಮಿಷಗಳಲ್ಲಿ ಪೂರೈಸಿದರು.

ಎಂಥದ್ದೇ ವೈಪರೀತ್ಯ ಹಾಗೂ ಪ್ರತಿಕೂಲದ ಸವಾಲಿನ ಸನ್ನಿವೇಶಗಳು ಎದುರಾದಾಗಲೂ ಸಾಧಿಸುವ ಛಲವೊಂದಿದ್ದರೆ, ಆತ್ಮವಿಶ್ವಾಸವು ತಾನಾಗೇ ಒಡಮೂಡುತ್ತದೆ. ಈ ಆತ್ಮವಿಶ್ವಾಸವೇ ನನ್ನ ಈ ಅಸಾಮಾನ್ಯ ಸಾಧನೆಗೆ ಪ್ರೇರಣೆ.
ಮಧು ನಾಗರಾಜ, ಓಪನ್ ವಾಟರ್ ಸ್ವಿಮ್ಮರ್

ಅಂದಹಾಗೆ, ಮಧು ನಾಗರಾಜ ಅವರು ಓರ್ವ ಓಪನ್ ವಾಟರ್ ಸ್ವಿಮ್ಮರ್ (ತೆರೆದ ನೀರಿನ ಈಜುಗಾರ). ಈ ಹಿಂದೆ ಇಂಗ್ಲಿಷ್ ಚಾನೆಲ್ ಹಾಗೂ ದೀರ್ಘ ಅಂತರದ ಲೇಕ್ ಒಂಟಾರಿಯೊಗಳನ್ನು ಯಶಸ್ವಿಯಾಗಿ ಈಜಿದ್ದ ಮಧು, ಇದೀಗ ಮತ್ತೊಂದು ಅಸಾಮಾನ್ಯ ಸಾಧನೆ ಮೆರೆದಿದ್ದಾರೆ. ಕೇವಲ ನಾಲ್ಕು ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದ, ಗಂಟೆಗೆ ೫೦ ಕಿಮೀ ವೇಗದಲ್ಲಿ ಬೀಸುವ ಗಾಳಿ ಹಾಗೂ ಎರಡು ಮೀಟರ್‌ಗಳವರೆಗಿನ ಎತ್ತರದ ದೈತ್ಯ ಅಲೆಗಳ ಮಧ್ಯೆ ಈಜುವುದು ಸಾಮಾನ್ಯವೇನಲ್ಲ. ಆದರೆ, ಇಂಥ ಪ್ರತಿಕೂಲ ವಾತಾವರಣದಲ್ಲಿ ಸ್ಪರ್ಧಿಸಿ ಯಶಸ್ಸು ಕಂಡಿದ್ದರ ಬಗ್ಗೆ ಮಧು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಫುಟ್ಬಾಲ್‌ಗೆ ವಿದಾಯ ಹೇಳಿದ ಬ್ರೆಜಿಲ್ ತಂಡದ ಸೂಪರ್ ಸ್ಟಾರ್ ಕಾಕಾ

ಏನಿದು ಮೆಗಲ್ಲಾನ್ ಜಲಸಂಧಿ?: ಮೆಗೆಲ್ಲಾನ್ ಸ್ಟ್ರೈಟ್ಸ್ ಎಂತಲೂ ಕರೆಯಲ್ಪಡುವ ಮೆಗೆಲ್ಲಾನ್ ಜಲಸಂಧಿಯು ದಕ್ಷಿಣಕ್ಕೆ ಉತ್ತರ ಅಮೆರಿಕದ ಮುಖ್ಯ ಭಾಗವನ್ನು ಹಾಗೂ ದಕ್ಷಿಣಕ್ಕೆ ಟಿಯೆರಾ ಡೆಲ್ ಫ್ಯೂಗೋವನ್ನು ಪ್ರತ್ಯೇಕಿಸುವ ಸಮುದ್ರಯಾನ ಮಾರ್ಗ. ಮೇಲಾಗಿ ಈ ಜಲಸಂಧಿ ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಸಾಗರಗಳ ನಡುವಿನ ಪ್ರಮುಖ ನೈಸರ್ಗಿಕ ಹಾದಿ ಕೂಡ. ಈ ಮಾರ್ಗವನ್ನು ಅತ್ಯಂತ ಜಟಿಲ ಮಾರ್ಗವೆಂದು ಗುರುತಿಸಲಾಗುತ್ತದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More