ಗಣೇಶ್ ಅಜೇಯ ಅರ್ಧಶತಕ; ಕರುನಾಡ ಗೆಲುವಿಗೆ ಕರ್ನಾಟಕವೇ ಅಡ್ಡಗಾಲು!

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಮತ್ತೊಂದು ಗೆಲುವಿನತ್ತ ನಡೆದಿರುವ ಕರ್ನಾಟಕಕ್ಕೆ ರಾಜ್ಯದ ಮಾಜಿ ಆಟಗಾರ ಗಣೇಶ್ ಸತೀಶ್ (೭೧*) ತಾತ್ಕಾಲಿಕ ತಡೆಗೋಡೆಯಾದರು. ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಸೆಮಿಫೈನಲ್‌ನಲ್ಲಿ ವಿನಯ್ ಪಡೆಯ ಗೆಲುವಿಗೆ ೬ ವಿಕೆಟ್ ಅಗತ್ಯವಿದೆ

ತನ್ನ ರಣಜಿ ಇತಿಹಾಸದಲ್ಲೇ ವೈಭವದ ಕಾಲಘಟ್ಟದಲ್ಲಿರುವ ಕರ್ನಾಟಕ ತಂಡ, ಉಪಾಂತ್ಯದಲ್ಲಿಯೂ ಜಯಭೇರಿ ಬಾರಿಸುವ ಸುಳಿವು ನೀಡಿದೆ. ಪಂದ್ಯದ ಮೂರನೇ ದಿನದಂದೂ ಪಾರಮ್ಯ ಮೆರೆದ ಕರ್ನಾಟಕದ ವಿರುದ್ಧ ವಿದರ್ಭ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತದೇ ಕಳಪೆ ಬ್ಯಾಟಿಂಗ್‌ನಿಂದ ಚಡಪಡಿಸುತ್ತಿದೆ. ದಾವಣಗೆರೆ ಆಟಗಾರ ಗಣೇಶ್ ಸತೀಶ್ ಅವರ ಆಕರ್ಷಕ ಅರ್ಧಶತಕ ರಾಜ್ಯದ ಗೆಲುವಿಗೆ ತಾತ್ಕಾಲಿಕ ತಡೆಗೋಡೆಯಂತಾಗಿದೆ. ಮತ್ತದೇ ಮಂದಬೆಳಕಿನಿಂದಾಗಿ ಮೂರನೇ ದಿನದಾಟ ಅಂತ್ಯ ಕಂಡಾಗ, ವಿದರ್ಭ ೪೭ ಓವರ್‌ಗಳಲ್ಲಿ ೪ ವಿಕೆಟ್‌ಗೆ ೧೯೫ ರನ್ ಗಳಿಸಿ ೭೯ ರನ್ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಯಿತು. ವಿಕೆಟ್‌ ಕೀಪರ್ ಎ ವಿ ವಾಡ್ಕರ್ ೧೯ ರನ್ ಗಳಿಸಿ ಗಣೇಶ್ ಅವರೊಂದಿಗೆ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದಾರೆ.

ಕರ್ನಾಟಕದ ಪ್ರಬಲ ಬೌಲಿಂಗ್‌ಗೆ ಮತ್ತೊಮ್ಮೆ ತಡಬಡಾಯಿಸಿರುವ ವಿದರ್ಭ, ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಲು ತೀವ್ರ ಹೆಣಗಾಡುತ್ತಿದೆ. ಸದ್ಯ ಇನ್ನಿಂಗ್ಸ್ ಸೋಲು ತಪ್ಪಿಸಿಕೊಂಡಿರುವ ಅದು, ಇನ್ನೂ ಸೋಲಿನ ಭೀತಿಯಿಂದ ಹೊರಬರಲಾಗಿಲ್ಲ. ಗಣೇಶ್ ಸತೀಶ್ ಆಕರ್ಷಕ ಆಟ ತುಸು ಸಮಾಧಾನ ತಂದಿದೆಯಾದರೂ, ಕರ್ನಾಟಕದ ಬೌಲಿಂಗ್ ಸವಾಲನ್ನು ಮೆಟ್ಟಿನಿಲ್ಲಬೇಕಾದರೆ ಬಹುದೊಡ್ಡ ಹೋರಾಟವನ್ನೇ ನಡೆಸಬೇಕಿದೆ.

ಮತ್ತದೇ ವೈಫಲ್ಯ: ಕರ್ನಾಟಕವನ್ನು ೩೦೧ ರನ್‌ಗಳಿಗೆ ಆಲೌಟ್ ಮಾಡಿದ ಮೇಲೆ ಬ್ಯಾಟಿಂಗ್‌ಗಿಳಿದ ವಿದರ್ಭ, ಮತ್ತೆ ಬ್ಯಾಟಿಂಗ್ ವೈಫಲ್ಯದಿಂದ ಕಳೆಗುಂದಿತು. ಮುಖ್ಯವಾಗಿ ನಾಯಕ ಫೈಜ್ ಫಜಲ್ (೦) ಮೊದಲ ಓವರ್‌ನ ಎರಡನೇ ಎಸೆತದಲ್ಲೇ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು. ಕರ್ನಾಟಕ ಕಪ್ತಾನ ವಿನಯ್ ಅವರನ್ನು ಎಲ್‌ಬಿ ಬಲೆಗೆ ಕೆಡವಿ ಆರಂಭದಲ್ಲೇ ಮೇಲುಗೈ ತಂದಿತ್ತರು. ಬಳಿಕ ಬಂದ ವಾಸೀಂ ಜಾಫರ್ (೩೩) ಅವರನ್ನು ಕೂಡಿಕೊಂಡ ಸಂಜೀವ್ ರಾಮಸ್ವಾಮಿ (೧೭) ಆಕರ್ಷಕ ಬ್ಯಾಟಿಂಗ್ ನೀಡುವಂತೆ ಕಂಡುಬಂದರಾದರೂ, ೧೦ನೇ ಓವರ್‌ನ ಎರಡನೇ ಎಸೆತದಲ್ಲಿ ಸ್ಟುವರ್ಟ್ ಬಿನ್ನಿ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್ ಸಿ ಎಂಬ ಗೌತಮ್‌ಗೆ ಕ್ಯಾಚಿತ್ತು ಹೊರನಡೆದರು.

ಮಧ್ಯಾಹ್ನದ ಭೋಜನ ವಿರಾಮದ ಹೊತ್ತಿಗೆ ೫೮ ರನ್‌ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡ ವಿದರ್ಭಕ್ಕೆ ಆಸರೆಯಾದದ್ದು ವಾಸೀಂ ಜಾಫರ್ ಹಾಗೂ ಗಣೇಶ್ ಸತೀಶ್ ಜೋಡಿ. ಆದರೆ, ಸೊಗಸಾದ ಇನ್ನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದ ಈ ಜೋಡಿಯನ್ನು ವೇಗಿ ಎಸ್ ಅರವಿಂದ್ ಬೇರ್ಪಡಿಸಿ ಮತ್ತೆ ವಿದರ್ಭಕ್ಕೆ ಪೆಟ್ಟುನೀಡಿದರು. ಮಾಜಿ ಮುಂಬೈ ಆಟಗಾರ ವಾಸೀಂ ಜಾಫರ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡಿದ ಅರವಿಂದ್, ವಿದರ್ಭದ ಮತ್ತೊಂದು ಪ್ರಮುಖ ವಿಕೆಟ್ ಪತನಕ್ಕೆ ಕಾರಣರಾದರು.

ಇದನ್ನೂ ಓದಿ : ಆಂಗ್ಲರಿಂದ ಆ್ಯಶಸ್ ಸರಣಿ ಕಿತ್ತುಕೊಂಡು ವಾಕಾದಲ್ಲಿ ಕೇಕೆ ಹಾಕಿದ ಕಾಂಗರೂ ಪಡೆ

ಕುಸಿತ ತಪ್ಪಿಸಿದ ಜೋಡಿ: ೬೨ ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ತಲ್ಲಣಿಸಿಹೋದ ವಿದರ್ಭದ ಇನ್ನಷ್ಟು ಕುಸಿತವನ್ನು ಗಣೇಶ್ ಸತೀಶ್ ಹಾಗೂ ಎವಿ ವಾಂಖೆಡೆ ಅವರ ಜವಾಬ್ದಾರಿಯುತ ಜೊತೆಯಾಟ ತಪ್ಪಿಸಿತು. ಕರ್ನಾಟಕ ಬೌಲರ್‌ಗಳ ಮಿಂಚಿನ ದಾಳಿಯನ್ನು ಈ ಜೋಡಿ ಎಚ್ಚರಿಕೆಯಿಂದ ನಿಭಾಯಿಸಿತಲ್ಲದೆ, ನಿಧಾನಗತಿಯಲ್ಲಿ ರನ್ ಪೇರಿಸುತ್ತಾ ನಡೆಯಿತು. ಆದರೆ, ಡ್ರಿಂಕ್ಸ್ ವಿರಾಮದ ನಂತರದಲ್ಲಿ ಎಸ್ ಅರವಿಂದ್ ವಿದರ್ಭಕ್ಕೆ ಮತ್ತೊಂದು ಆಘಾತ ನೀಡಿದರು. ಆಕ್ರಮಣಕಾರಿ ಆಟವಾಡುತ್ತಿದ್ದ ವಾಂಖೆಡೆ ದೊಡ್ಡ ಹೊಡೆತಕ್ಕೆ ಕೈಹಾಕಿ, ವಿನಯ್ ಕುಮಾರ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ೪೮ ಎಸೆತಗಳನ್ನು ಎದುರಿಸಿದ ಅವರು, ೯ ಆಕರ್ಷಕ ಬೌಂಡರಿ ಸೇರಿದ ೪೯ ರನ್‌ ಗಳಿಸಿ ಕೇವಲ ೧ ರನ್ ಅಂತರದಿಂದ ಅರ್ಧಶತಕ ವಂಚಿತವಾದರು. ಅಂದಹಾಗೆ, ಗಣೇಶ್ ಜೊತೆಗೆ ೪ನೇ ವಿಕೆಟ್‌ಗೆ ಅಮೂಲ್ಯ ೮೮ ರನ್‌ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: ೩೦೧ (ಕರುಣ್ ನಾಯರ್ ೧೫೩, ಸಿ ಎಂ ಗೌತಮ್ ೭೩, ವಿನಯ್ ೨೧; ಉಮೇಶ್ ಯಾದವ್ ೭೩ಕ್ಕೆ ೪) ವಿದರ್ಭ: ೧೮೫ ಮತ್ತು ೧೯೫/೪ (ವಾಸೀಂ ಜಾಫರ್ ೩೩, ಗಣೇಶ್ ಸತೀಶ್ ೭೧*, ಅಪೂರ್ವ್ ವಾಂಖೆಡೆ ೪೮, ವಾಡ್ಕರ್ ೧೯*); ಕರ್ನಾಟಕ ವಿರುದ್ಧ ೭೯ ರನ್ ಮುನ್ನಡೆ ಸಾಧಿಸಿದ ವಿದರ್ಭ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More