ಮದುವೆ ನಂತರವೂ ಬ್ಯಾಡ್ಮಿಂಟನ್ ಬಿಡೆನು; ಅಭಿಮಾನಿಗಳಿಗೆ ಅಶ್ವಿನಿ ಅಭಯ

೨೦೧೭ರ ಭಾರತೀಯ ಕ್ರೀಡಾ ಋತು ಮತ್ತೊಂದು ಮದುವೆ ಕಂಡಿದೆ. ಕ್ರಿಕೆಟಿಗ ವಿರಾಟ್ ಕೊಹ್ಲಿ-ಅನುಷ್ಕಾ ಕೈ ಹಿಡಿದರೆ, ಜಹೀರ್‌ಖಾನ್-ಸಾಗರಿಕಾ, ಭುವನೇಶ್ವರ್ ಕುಮಾರ್-ನೂಪುರ್ ನಗರ್, ಸುನೀಲ್ ಛೆಟ್ರಿ-ಸೋನಮ್ ಮದುವೆ ಬಳಿಕ ಬ್ಯಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಹಸೆಮಣೆ ಏರಿದರು

ಭಾರತ ಬ್ಯಾಡ್ಮಿಂಟನ್ ಕಂಡ ಯಶಸ್ವಿ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಕ್ರಿಸ್ಮಸ್ ಹಿಂದಿನ ದಿನ ಬಾಳ ಪಯಣದ ಮತ್ತೊಂದು ಇನ್ನಿಂಗ್ಸ್‌ಗೆ ಅಡಿಯಿಟ್ಟರು. ಬೆಂಗಳೂರಿನಲ್ಲಿ ರೂಪದರ್ಶಿ ಆಗಿರುವ ಪೊನ್ನಚ್ಚೆಟ್ಟಿರ ಕರಣ್ ಮೇದಪ್ಪ ಅವರೊಂದಿಗೆ ತಿಂಗಳ ಹಿಂದೆಯೇ ವಿವಾಹ ನಿಶ್ಚಯ ಮಾಡಿಕೊಂಡಿದ್ದ ಅವರು, ಭಾನುವಾರ (ಡಿ.೨೪) ಕೊಡವ ಸಂಪ್ರದಾಯದಂತೆ ಮದುವೆಯಾದರು. ಆದರೆ, ಮದುವೆಯ ನಂತರವೂ ಬ್ಯಾಡ್ಮಿಂಟನ್‌ನಲ್ಲಿ ಮುಂದುವರಿಯುವುದಾಗಿ ಹೇಳಿದ ಅಶ್ವಿನಿ, ಮದುವೆ ನಂತರ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ತಮ್ಮ ಮೆಚ್ಚಿನ ಆಟಗಾರ್ತಿ ಕಾಣಿಸಿಕೊಳ್ಳುವುದಿಲ್ಲವೇನೋ ಎಂಬ ಅಭಿಮಾನಿಗಳ ದುಗುಡ ಹೋಗಲಾಡಿಸಿದರು.

ಕೊಡವ ಸಂಪ್ರದಾಯದಂತೆ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಕರಣ್ ಮೇದಪ್ಪ, ಅಶ್ವಿನಿಯ ಕೈಹಿಡಿದರು. ಕರಣ್ ಮೇದಪ್ಪ ಅವರ ತಂದೆ ತಿಮ್ಮಯ್ಯ, ತಾಯಿ ಪೂವಿ, ಅಶ್ವಿನಿ ಅವರ ತಂದೆ ಪೊನ್ನಪ್ಪ ಹಾಗೂ ತಾಯಿ ಕಾವೇರಿ ಅವರಲ್ಲದೆ, ಎರಡೂ ಮನೆಯವರ ಬಂಧು-ಬಾಂಧವರು ಹಾಗೂ ಸ್ನೇಹಿತರು ಹಾಜರಿದ್ದರು.

💍💖

A post shared by Ashwini Ponnappa (@ashwiniponnappa) on

ಕಾಣದ ಜ್ವಾಲಾ ಗುಟ್ಟಾ: ಅಶ್ವಿನಿ ಪೊನ್ನಪ್ಪ ಅವರ ಫಿಟ್ನೆಸ್ ತರಬೇತುದಾರ ಡೆಕ್ಲೇನ್ ಲಿಯೊಟ್, ಡಬಲ್ಸ್ ಆಟಗಾರ ರೋಹನ್ ಬೋಪಣ್ಣ, ಸ್ಕ್ವಾಶ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ, ಕರ್ನಾಟಕ ರಾಜ್ಯ ಹಾಕಿ ಒಕ್ಕೂಟದ ಕಾರ್ಯದರ್ಶಿ ಕೃಷ್ಣಮೂರ್ತಿ, ಎ ಬಿ ಸುಬ್ಬಯ್ಯ, ಈಜು ತರಬೇತುದಾರ ಸಂತೋಷ್ ಕುಮಾರ್ ಅಲ್ಲದೆ ಸಾಕಷ್ಟು ಮಂದಿ ಪ್ರಮುಖರು ಮದುವೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನವ ವಧು-ವರರನ್ನು ಹರಸಿದರು. ಅಂದಹಾಗೆ, ಗುವಾಹತಿಯಲ್ಲಿ ಮೊದಲ ಹಂತದ ಪ್ರೀಮಿಯರ್ ಲೀಗ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತಿದ್ದು, ಸೈನಾ ನೆಹ್ವಾಲ್, ಪಿ ವಿ ಸಿಂಧು ಮುಂತಾದ ಸ್ಟಾರ್ ಆಟಗಾರ್ತಿಯರು ಭಾಗವಹಿಸಿರಲಿಲ್ಲ. ಆದರೆ, ಎಲ್ಲಕ್ಕಿಂತ ಮಿಗಿಲಾಗಿ, ಅಶ್ವಿನಿ ಅವರ ಸುದೀರ್ಘ ಕಾಲದ ಜೊತೆಯಾಟಗಾರ್ತಿ ಜ್ವಾಲಾ ಗುಟ್ಟಾ ಮದುವೆಗೆ ಅನುಪಸ್ಥಿತರಾಗಿದ್ದುದು ಎದ್ದುಕಾಣುತ್ತಿತ್ತು.

ಸದ್ಯ ಪಿಬಿಎಲ್‌ನಲ್ಲಿ ಡೆಲ್ಲಿ ಡ್ಯಾಶರ್ಸ್ ಪರ ಆಡುತ್ತಿರುವೆ. ಮದುವೆಯ ನಂತರವೂ ಬ್ಯಾಡ್ಮಿಂಟನ್ ಆಟ ಮುಂದುವರಿಸುತ್ತೇನೆ. ಇದಕ್ಕೆ ಪತಿ ಕರಣ್ ಅಲ್ಲದೆ, ಕುಟುಂಬದ ಎಲ್ಲರ ಸಹಕಾರವೂ ಇದೆ. 
ಅಶ್ವಿನಿ ಪೊನ್ನಪ್ಪ, ಬ್ಯಾಡ್ಮಿಂಟನ್ ಆಟಗಾರ್ತಿ
ಇದನ್ನೂ ಓದಿ : ಮೊದಲ ಆರತಕ್ಷತೆಯಲ್ಲೇ ಮೋಡಿ ಮಾಡಿದ ವಿರುಷ್ಕಾ ದಂಪತಿಯ ಸಖತ್ ಡ್ಯಾನ್ಸ್

ಯಶಸ್ವಿ ಆಟಗಾರ್ತಿ: ಅಂದಹಾಗೆ, ಅಶ್ವಿನಿ ಪೊನ್ನಪ್ಪ ಭಾರತೀಯ ಬ್ಯಾಡ್ಮಿಂಟನ್ ಕಂಡ ಯಶಸ್ವಿ ಡಬಲ್ಸ್ ಆಟಗಾರ್ತಿ. ಹೈದರಾಬಾದ್‌ನ ಜ್ವಾಲಾ ಗುಟ್ಟಾ ಅವರೊಂದಿಗೆ ಹಲವಾರು ಪದಕಗಳನ್ನು ಭಾರತಕ್ಕಾಗಿ ಗೆದ್ದುಕೊಟ್ಟಿದ್ದಾರೆ. ಪ್ರಮುಖವಾಗಿ, ೨೦೧೦ರ ದೆಹಲಿ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಜ್ವಾಲಾ-ಅಶ್ವಿನಿ ಜೋಡಿ ಚಿನ್ನದ ಪದಕ ಗೆದ್ದಿತ್ತು. ನಂತರ ಹಲವಾರು ಟೂರ್ನಿಗಳಲ್ಲಿ ಮಹತ್ವಪೂರ್ಣ ಪ್ರದರ್ಶನ ನೀಡಿದ್ದ ಈ ಜೋಡಿ ಇತ್ತೀಚೆಗಷ್ಟೇ ಬೇರ್ಪಟ್ಟಿತ್ತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More