ವಾಂಖೆಡೆಯಲ್ಲೂ ಸೋಲುಂಡ ಲಂಕಾ, ಕ್ರಿಸ್ಮಸ್ ಸಂಭ್ರಮ ಹೆಚ್ಚಿಸಿದ ಟೀಂ ಇಂಡಿಯಾ

ಭಾರತದ ವಿರುದ್ದ ಮೊದಲ ಹಂತದಲ್ಲಿ ನಡೆದ ತವರಿನ ಸರಣಿಯಲ್ಲಿ ದಯನೀಯವಾಗಿ ಸೋತಿದ್ದ ಶ್ರೀಲಂಕಾ, ಭಾರತ ನೆಲದಲ್ಲೂ ಜಯದ ಸವಿ ಕಾಣಲಿಲ್ಲ. ವಾಂಖೆಡೆಯಲ್ಲಿ ಗೆಲುವು ಪಡೆದು ಕ್ರಿಸ್ಮಸ್ ಆಚರಿಸಿಕೊಳ್ಳುವ ಕನಸು ಕಂಡಿದ್ದ ಲಂಕಾಗೆ ಪ್ರತಿಯಾಗಿ ಆ ಸಂಭ್ರಮದಲ್ಲಿ ತೇಲಿದ್ದು ಟೀಂ ಇಂಡಿಯಾ!

ಜುಲೈನಿಂದ ಆಗಸ್ಟ್‌ವರೆಗಿನ ಸುದೀರ್ಘ ಅವಧಿಯ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಭಾರತ, ಯುವೋತ್ಸಾಹಿ ವಿರಾಟ್ ಕೊಹ್ಲಿಯ ಸಾರಥ್ಯದಲ್ಲಿ ಕ್ಲೀನ್‌ಸ್ವೀಪ್ ಸಾಧನೆ ಮೆರೆದಿತ್ತು. ಮೊದಲಿಗೆ, ಮೂರು ಟೆಸ್ಟ್ ಪಂದ್ಯ ಸರಣಿಯಲ್ಲಿ ಆತಿಥೇಯರನ್ನು ೩-೦ಯಿಂದ ಮಣಿಸಿದ ಭಾರತ ತಂಡ, ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಇನ್ನಿಂಗ್ಸ್ ಗೆಲುವು ದಾಖಲಿಸಿದ್ದು ಗಮನಾರ್ಹ. ಇನ್ನು, ಐದು ಏಕದಿನ ಪಂದ್ಯ ಸರಣಿಯನ್ನು ೫-೦ ಅಂತರದಿಂದ ಭಾರತ ಕ್ಲೀನ್‌ಸ್ವೀಪ್ ಮಾಡಿತ್ತು. ಕೊನೆಯದಾಗಿ, ಸೆ. ೬ರಂದು ನಡೆದ ಏಕೈಕ ಚುಟುಕು ಪಂದ್ಯದಲ್ಲಿಯೂ ಭಾರತ ೭ ವಿಕೆಟ್ ಗೆಲುವಿನೊಂದಿಗೆ ವಿಜಯೋತ್ಸಾಹ ಆಚರಿಸಿಕೊಂಡು ತವರಿಗೆ ಮರಳಿತ್ತು.

ದ್ವಿಪಕ್ಷೀಯ ಸರಣಿಯ ಎರಡನೇ ಹಂತದಲ್ಲಿಯೂ ಶ್ರೀಲಂಕಾದ ಹಣೆಬರಹವೇನೂ ಬದಲಾಗಲಿಲ್ಲ. ಮೊದಲ ಮೂರು ಟೆಸ್ಟ್ ಪಂದ್ಯ ಸರಣಿಯಲ್ಲಿ ೦-೧ರಿಂದ ಹಿನ್ನಡೆ ಅನುಭವಿಸಿದ ಅದು, ಸೀಮಿತ ಓವರ್‌ಗಳ ಸರಣಿಯಲ್ಲಿಯೂ ನಿರಾಸೆ ಅನುಭವಿಸಿತು. ಅದರಲ್ಲೂ, ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ಏಕದಿನ ಸರಣಿಯಲ್ಲಿ ೨-೧ ಹಾಗೂ ಮೂರು ಚುಟುಕು ಪಂದ್ಯ ಸರಣಿಯಲ್ಲಿ ೩-೦ ವೈಟ್‌ವಾಶ್ ಸಾಧನೆ ಮೆರೆಯಿತು. ಬಹುಶಃ ಶ್ರೀಲಂಕಾ ಕ್ರಿಕೆಟ್ ಇತಿಹಾಸದಲ್ಲಿ ಇಂಥದ್ದೊಂದು ದಯನೀಯ ಸರಣಿ ಸೋಲಿನ ಅಧ್ಯಾಯ ಇದೇ ಮೊದಲೇನೋ.

ಅಂದಹಾಗೆ, ಗೌರವ ಕಾಯ್ದುಕೊಳ್ಳಲಷ್ಟೇ ಸೀಮಿತವವಾಗಿದ್ದ ವಾಂಖೆಡೆ ಮೈದಾನದಲ್ಲಿ ತಿಸಾರ ಪೆರೇರಾ ಸಾರಥ್ಯದ ಶ್ರೀಲಂಕಾ ತಂಡ, ಕಡೆಗೂ ಆತಿಥೇಯರ ಮನಮೋಹಕ ಆಟದಿಂದಾಗಿ ನಿರಾಸೆ ಅನುಭವಿಸಿತು. ಸರಣಿಯನ್ನು ಸೋತರೂ, ಕನಿಷ್ಠ ಗೆಲುವಿನೊಂದಿಗೆ ಋತುವಿಗೆ ವಿದಾಯ ಹೇಳಬೇಕೆಂಬ ಶ್ರೀಲಂಕಾ, ಭಾರತ ಪ್ರವಾಸದ ಈ ಕಡೆಯ ಪಂದ್ಯದಲ್ಲಿಯೂ ಐದು ವಿಕೆಟ್ ಸೋಲನುಭವಿಸಿತು. ಇದರೊಂದಿಗೆ ಈ ಋತುವಿನಲ್ಲಿ ಸತತ ಎಂಟನೇ ಚುಟುಕು ಪಂದ್ಯದಲ್ಲಿ ಅದು ಸೋಲಿನ ಯಾತನೆಗೆ ಗುರಿಯಾಯಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ, ೨೦ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೧೩೫ ರನ್ ಗಳಿಸಲಷ್ಟೇ ಶಕ್ತವಾಯಿತು. ನಿರೀಕ್ಷೆಯಂತೆಯೇ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ವೇಗಿ ಜೈದೇವ್ ಉನದ್ಕಟ್, ಆರಂಭದಲ್ಲೇ ಲಂಕಾವನ್ನು ಕಾಡಿದರು. ಎರಡನೇ ಓವರ್‌ನ ಐದನೇ ಎಸೆತದಲ್ಲಿ ನಿರೋಷನ್ ಡಿಕ್ವೆಲ್ಲಾ (೧) ಅವರನ್ನು ಬಲಿಪಡೆದ ಅವರು, ಅಪಾಯಕಾರಿ ಆಟಗಾರ ಉಪುಲ್ ತರಂಗ (೧೧) ಅವರನ್ನು ನಾಲ್ಕನೇ ಓವರ್‌ನಲ್ಲೇ ಪೆವಿಲಿಯನ್‌ ದಾರಿ ತುಳಿಯುವಂತೆ ಮಾಡಿದರು.

ಇನ್ನು, ಕಳೆದ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ್ದ ಕುಶಾಲ್ ಪೆರೇರಾ (೪) ಅವರನ್ನು ಚೊಚ್ಚಲ ಪಂದ್ಯವನ್ನಾಡಿದ ವಾಷಿಂಗ್ಟನ್ ಸುಂದರ್ ಕ್ರೀಸ್ ತೊರೆಯುವಂತೆ ಮಾಡಿದರು. ಕೇವಲ ೧೮ ರನ್‌ಗಳಿಗೆ ೩ ವಿಕೆಟ್ ಕಳೆದುಕೊಂಡ ಲಂಕಾ ತತ್ತರಿಸಿತು. ಮಧ್ಯಮ ಕ್ರಮಾಂಕದಲ್ಲಿ ಸದೀರ ಸಮರವಿಕ್ರಮ (೨೧) ಹಾಗೂ ಅಸೇಲಾ ಗುಣರತ್ನೆ (೩೬) ತುಸು ಪ್ರತಿರೋಧ ನೀಡಲು ಯತ್ನಿಸಿದರು. ಆದರೆ, ಈ ಇಬ್ಬರನ್ನೂ ಹಾರ್ದಿಕ್ ಪಾಂಡ್ಯ ಪೆವಿಲಿಯನ್‌ಗೆ ಅಟ್ಟಿದರು. ಕೊನೆಗೆ ದಾಸುನ್ ಶನಾಕ (೨೯) ಮತ್ತು ಅಕಿಲ ಧನಂಜಯ ೧೧ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು.

ಇದನ್ನೂ ಓದಿ : ಆಫ್ರಿಕನ್ ಬಾಕ್ಸರ್ ಅರ್ನೆಸ್ಟ್ ವಿರುದ್ಧ ಇದೇ ೨೩ಕ್ಕೆ ಸೆಣಸಲಿರುವ ವಿಜೇಂದರ್ ಸಿಂಗ್

ಜಯದ ನಗೆಬೀರಿದ ಭಾರತ: ಗೆಲುವಿಗೆ ಲಂಕಾ ನೀಡಿದ್ದ ಸುಲಭ ಗುರಿಯನ್ನು ತುಸು ಪ್ರಯಾಸದಿಂದಲೇ ಮುಟ್ಟುವಲ್ಲಿ ಕಡೆಗೂ ಭಾರತ ಯಶಸ್ವಿಯಾಯಿತು. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಜತೆಯಾಟವಾಡಿದ್ದ ಕೆ ಎಲ್ ರಾಹುಲ್ (೪) ಹಾಗೂ ರೋಹಿತ್ ಶರ್ಮಾ (೨೭) ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ, ಶ್ರೇಯಸ್ ಅಯ್ಯರ್ (೩೦: ೩೨ ಎಸೆತ, ೧ ಬೌಂಡರಿ, ೧ ಸಿಕ್ಸರ್) ಹಾಗೂ ಮನೀಶ್ ಪಾಂಡೆ (೩೨: ೨೯ ಎಸೆತ, ೪ ಬೌಂಡರಿ) ಉತ್ತಮ ಜತೆಯಾಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಆದರೆ, ೧೪ನೇ ಓವರ್‌ನಲ್ಲಿ ಶ್ರೇಯಸ್ ರನೌಟ್ ಆಗಿ ಕ್ರೀಸ್ ತೊರೆದರೆ, ಮನೀಶ್ ಪಾಂಡೆ, ಚಮೀರಾಗೆ ಬೌಲ್ಡ್ ಆಗಿ ಹೊರನಡೆದರು. ಆನಂತರ ಹಾರ್ದಿಕ್ ಪಾಂಡ್ಯ (೪) ಶನಾಕಗೆ ಬಲಿಯಾದರೆ, ದಿನೇಶ್ ಕಾರ್ತಿಕ್ (೧೮) ಮತ್ತು ವಿಜಯದ ಬೌಂಡರಿ ಬಾರಿಸಿದ ಧೋನಿ ೧೬ ರನ್ ಗಳಿಸಿ ಭಾರತದ ಕ್ಲೀನ್‌ಸ್ವೀಪ್ ಸಾಧನೆಗೆ ನೆರವಾದರು.

ಸಂಕ್ಷಿಪ್ತ ಸ್ಕೋರ್

ಶ್ರೀಲಂಕಾ: ೧೩೫/೭ (ಸದೀರಾ ೨೧, ಅಸೇಲಾ ಗುಣರತ್ನೆ ೩೬, ದಾಸುನ್ ಶನಾಕ ೨೯; ಜೈದೇವ್ ಉನದ್ಕಟ್ ೧೫ಕ್ಕೆ ೨, ಹಾರ್ದಿಕ್ ಪಾಂಡ್ಯ ೨೫ಕ್ಕೆ ೨) ಭಾರತ: ೧೩೯/೫ (ಶ್ರೇಯಸ್ ಅಯ್ಯರ್ ೩೦, ಮನೀಶ್ ಪಾಂಡೆ ೩೨; ದುಷ್ಮಂತಾ ಚಮೀರಾ ೨೨ಕ್ಕೆ ೨, ದಾಸುನ್ ಶನಾಕ ೨೭ಕ್ಕೆ ೨) ಫಲಿತಾಂಶ: ಭಾರತಕ್ಕೆ ೫ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಜೈದೇವ್ ಉನದ್ಕಟ್.

ಡಬ್ಲ್ಯೂಟಿಎ ಫೈನಲ್ಸ್ | ಕ್ವಿಟೋವಾ ವಿರುದ್ಧ ಜಯ ಸಾಧಿಸಿದ ವೋಜ್ನಿಯಾಕಿ
ಫೇವರಿಟ್ ಭಾರತಕ್ಕೆ ವಿಶಾಖಪಟ್ಟಣದಲ್ಲೂ ಕೆರಿಬಿಯನ್ನರನ್ನು ಗೆಲ್ಲುವ ಧಾವಂತ
ವಿಶ್ವ ಕುಸ್ತಿಯಲ್ಲಿ ಎರಡು ಪದಕ ಗೆದ್ದ ಬಜರಂಗ್ ಪುನಿಯಾ ಚಾರಿತ್ರಿಕ ಸಾಧನೆ
Editor’s Pick More