ಬದ್ಧ ವೈರಿಗಳೂ ಮುನಿಸು ತೊರೆಯುವಂತೆ ಮಾಡಿದ ಒಲಿಂಪಿಕ್ಸ್ ಎಂಬ ಶಾಂತಿದೂತ

ದಕ್ಷಿಣ ಕೊರಿಯಾ ಹಾಗೂ ಉ. ಕೊರಿಯಾ ತಮ್ಮ ಮುನಿಸು ಮರೆತು ೨ ವರ್ಷಗಳ ನಂತರ ಮೊದಲ ಬಾರಿಗೆ ಬುಧವಾರ (ಜ.೩) ಮಾತಾಡಿವೆ. ಇದಕ್ಕೆ ಕಾರಣ ಒಲಿಂಪಿಕ್ಸ್. ಕ್ರೀಡೆ ಕೇವಲ ಮನರಂಜನೆಗಾಗಿಯಲ್ಲ, ಅದು ವಿಶ್ವ ಶಾಂತಿ ಹಾಗೂ ಸ್ನೇಹ ಸೇತು ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ

ಉಳಿದವರಿಗಿಂತ ತಾನೇ ಮೇಲು, ಶ್ರೇಷ್ಠ ಎಂಬ ಹಪಹಪಿ ಮನುಕುಲವನ್ನು ಬಾಧಿಸಿದ್ದಕ್ಕೆ ಈ ಜಗತ್ತು ಕಂಡ ಎರಡು ಮಹಾನ್ ಯುದ್ಧಗಳೇ ಸಾಕ್ಷಿ. ವಿಶ್ವಸಂಸ್ಥೆಯ ಪಾತ್ರ ಏನೇ ಇರಲಿ, ಜಗತ್ತಿನಲ್ಲಿ ಶಾಂತಿ ಹಾಗೂ ಸೌಹಾರ್ದದ ಸ್ನೇಹ ಬೆಸುಗೆಯ ಕೊಂಡಿಯಾಗಿ ನಿರಂತರವಾಗಿ ನಿರ್ಣಾಯಕ ಪಾತ್ರ ವಹಿಸುತ್ತಾ ಬರುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟ ಇದೀಗ ಮತ್ತೊಮ್ಮೆ ವಿಶ್ವ ಶಾಂತಿಯ ರಾಯಭಾರಿಯಾಗಿ ಮುನ್ನೆಲೆಗೆ ಬಂದಿದೆ. ವಿವಾದಗ್ರಸ್ಥ ಅಧ್ಯಕ್ಷ ಎಂದೇ ಕರೆಯಲಾಗುತ್ತಿರುವ ಉ.ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಸ್ಥಳೀಯ ಕಾಲಮಾನ ೩ ಗಂಟೆ ಸುಮಾರಿಗೆ ದಕ್ಷಿಣ ಕೊರಿಯಾ ಜತೆಗೆ ಮಾತನಾಡಲು ಉದ್ಯುಕ್ತವಾಗಿರುವುದಾಗಿ ಮಾಧ್ಯಮಗಳಿಗೆ ತಿಳಿಸಿ ಸಂಚಲನ ಸೃಷ್ಟಿಸಿದರು.

ಕಿಮ್ ಆಣತಿಯಂತೆ ಉ.ಕೊರಿಯಾ ಹಾಗೂ ದ. ಕೊರಿಯಾ ನಡುವಣದ ರಾಜತಾಂತ್ರಿಕತೆ ಸ್ಥಳೀಯ ಕಾಲಮಾನ ೩.೩೦ರಿಂದ ೩.೫೦ರವರೆಗೆ ಮಾತುಕತೆ ನಡೆಸಿತೆಂದು ಉ.ಕೊರಿಯಾ ಸಚಿವಾಲಯದ ಮೂಲಗಳು ಖಚಿತಪಡಿಸಿವೆ. ಯುದ್ಧೋನ್ಮಾದದಿಂದ ಕೂಡಿದ್ದ ಈ ಎರಡು ರಾಷ್ಟ್ರಗಳು ಪರಸ್ಪರ ೨೦ ನಿಮಿಷಗಳ ಕಾಲ ಮಾತುಕತೆ ನಡೆಸುವಂತಾಗಿರುವುದು ಆಶಾದಾಯಕ ಬೆಳವಣಿಗೆ ಎಂದೇ ಬಣ್ಣಿಸಲಾಗಿದೆ.

ಅಂದಹಾಗೆ, ಬದ್ಧ ವೈರಿಗಳು ಮೈಮನಸ್ಸು ಮರೆತು ಸ್ನೇಹದ ಹಸ್ತ ಚಾಚುವಂತಾಗಲು ಇದೇ ಫೆಬ್ರವರಿ ೯ರಿಂದ ೨೫ರವರೆಗೆ ದಕ್ಷಿಣ ಕೊರಿಯಾದ ಪಿಯಾಂಗ್‌ಚಾಂಗ್‌ನಲ್ಲಿ ನಡೆಯಲಿರುವ ೨೩ನೇ ಚಳಿಗಾಲದ ಒಲಿಂಪಿಕ್ಸ್ ಪ್ರಮುಖ ವೇದಿಕೆ ಎಂಬುದು ಗಮನಾರ್ಹ. ಏತನ್ಮಧ್ಯೆ, ಕಿಮ್ ಅವರ ಈ ನಡೆ ಅಚ್ಚರಿದಾಯಕವೇನಲ್ಲ. ೨೦೧೮ರ ಹೊಸ ವರ್ಷದ ಭಾಷಣದ ವೇಳೆ, ಪಿಯಾಂಗ್‌ಚಾಂಗ್ ಗೇಮ್ಸ್‌ಗೆ ಉ.ಕೊರಿಯಾದಿಂದ ಕ್ರೀಡಾ ಪ್ರತಿನಿಧಿಗಳನ್ನು ಕಳುಹಿಸುವ ಸಂಬಂಧ ಗಂಭೀರ ಮಾತುಕತೆ ನಡೆಯುತ್ತಿದೆ ಎಂದಿದ್ದರು. ಇದೀಗ ಬುಧವಾರದ ಬೆಳವಣಿಗೆಯಿಂದ ಎರಡನೇ ಬಾರಿಗೆ ಉತ್ತರ ಕೊರಿಯಾದಿಂದ ಕರೆ ಬರಲಿದೆ ಎಂದು ದಕ್ಷಿಣ ಕೊರಿಯಾ ಆಶಾಭಾವ ವ್ಯಕ್ತಪಡಿಸಿದೆ. ಇನ್ನು, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾಯಿ-ಇನ್ ಕೂಡ ತನ್ನ ನೆರೆಯ ರಾಷ್ಟ್ರದ ನಿಲುವನ್ನು ಸ್ವಾಗತಿಸಿದ್ದಾರೆ.

ಆದರೆ, ಕೊರಿಯಾ ರಾಷ್ಟ್ಗಗಳ ನಾಯಕರಿಬ್ಬರ ಈ ಅಪೂರ್ವ ನಡೆಯಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏನೂ ಮೆದುವಾಗಿಲ್ಲ. ಮಂಗಳವಾರ ತಡರಾತ್ರಿ ಅವರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮತ್ತೊಮ್ಮೆ ಉತ್ತರ ಕೊರಿಯಾ ನಾಯಕ ಕಿಮ್ ಅವರನ್ನು ಕೆಣಕಿದ್ದಾರೆ. ಇದಕ್ಕೆ ಕಿಮ್ ಅವರ ಪ್ರಚೋದನಕಾರಿ ಭಾಷಣವೂ ಕಾರಣ ಎಂಬುದನ್ನು ಮರೆಯುವಂತಿಲ್ಲ. ಹೊಸ ವರ್ಷದ ತಮ್ಮ ಭಾಷಣದ ವೇಳೆ ಇದೇ ಕಿಮ್, “ನನ್ನ ಕಚೇರಿಯ ಮೇಜಿನಲ್ಲಿ ಅಣ್ವಸ್ತ್ರದ ಬಟನ್ ಇದೆ’’ ಎಂದು ಅಮೆರಿಕವನ್ನು ಮತ್ತೊಮ್ಮೆ ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್, “ನನ್ನ ಬಳಿಯೂ ಅಣ್ವಸ್ತ್ರದ ಬಟನ್ ಇದ್ದು, ಅದು ಕಿಮ್ ಹೊಂದಿರುವ ಅಣ್ವಸ್ತ್ರಕ್ಕಿಂತಲೂ ಅತ್ಯಂತ ಶಕ್ತಿಶಾಲಿ ಹಾಗೂ ದೊಡ್ಡದಾದುದು. ಹಾಗೆಯೇ ನನ್ನ ಬಟನ್ ಕ್ರಿಯಾಶೀಲವಾದದ್ದು’’ ಎಂದು ಟಾಂಗ್ ಕೊಟ್ಟಿದ್ದರು.

ಉತ್ತರ ಹಾಗೂ ದಕ್ಷಿಣ ಕೊರಿಯಾಗಳ ಸದ್ಯದ ಬೆಳವಣಿಗೆ ಅಮೆರಿಕದೊಂದಿಗೆ ದಕ್ಷಿಣ ಕೊರಿಯಾ ಹೊಂದಿರುವ ಮೈತ್ರಿಯನ್ನು ಮುರಿಯುವ ತಂತ್ರವಾಗಿರಬಹುದು ಎಂದು ಈ ಎರಡೂ ರಾಷ್ಟ್ರಗಳ ಸಾಮೀಪ್ಯವನ್ನು ಕೆಲವು ವಿಶ್ಲೇಷಕರು ತಮ್ಮದೇ ಧಾಟಿಯಲ್ಲಿ ಬಣ್ಣಿಸಿದ್ದಾರೆ. ಆದರೆ, ಬೀಜಿಂಗ್‌ನ ಜಾಗತಿಕ ನೀತಿಯಲ್ಲಿರುವ ತೊಂಗ್ ಝಾವೊ, “ಇಂಥದ್ದೊಂದು ಚಿಂತನೆ ಸಮಸ್ಯಾತ್ಮಕವಾದುದು ಎಂದೇ ನನ್ನ ಅನಿಸಿಕೆ. ಉತ್ತರ ಹಾಗೂ ದಕ್ಷಿಣ ಕೊರಿಯಾ ನಡುವಣದ ದ್ವಿಪಕ್ಷೀಯ ಸಂಬಂಧ ಆಪ್ತವಾದಷ್ಟೂ ವಾಷಿಂಗ್ಟನ್ ಹಾಗೂ ಅಂತಾರಾಷ್ಟ್ರೀಯ ಸಮುದಾಯವು ಉತ್ತರ ಕೊರಿಯಾವನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಪೂರಕವಾಗುತ್ತ ದೆ’’ ಎನ್ನುತ್ತಾರೆ.

ಇದನ್ನೂ ಓದಿ : ಕಿಮ್ ಮಾತನಾಡಲು ಆರಂಭಿಸಿದರೆ ನಡುಗುತ್ತಾರೆ ವಿಶ್ವನಾಯಕರು, ಏಕೆ ಗೊತ್ತಾ?

ಕಳೆದ ನವೆಂಬರ್ ತಿಂಗಳಿನಲ್ಲಿ ಸಿಎನ್‌ಎನ್ ಜತೆಗಿನ ಸಂದರ್ಶನದ ವೇಳೆ ಮಾತನಾಡಿದ್ದ ದಕ್ಷಿಣ ಕೊರಿಯಾ ನಾಯಕ ಮೂನ್, “ಮುಂದಿನ ವರ್ಷ ತವರಿನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟವು ಉತ್ತರ ಕೊರಿಯಾ ಜತೆಗಿನ ಬಾಂಧವ್ಯ ವೃದ್ಧಿಗೆ ನೆರವಾಗಲಿದೆ’’ ಎಂಬ ಭರವಸೆ ವ್ಯಕ್ತಪಡಿಸಿದ್ದರು. ಉಭಯ ನಾಯಕರೂ ಆ ದಿಸೆಯಲ್ಲಿ ಹೆಜ್ಜೆ ಹಾಕಿರುವುದು ಶಾಂತಿ ಹಾಗೂ ಸೌಹಾರ್ದತೆಗೆ ಪೂರಕವಾಗಿ ಪರಿಣಮಿಸಿದೆ. ಏತನ್ಮಧ್ಯೆ, ಮುಂದಿನ ತಿಂಗಳ ಕ್ರೀಡಾಕೂಟಕ್ಕೆ ಉತ್ತರ ಕೊರಿಯಾದಿಂದ ಅರ್ಹತೆ ಪಡೆದಿರುವುದು ಕೇವಲ ಇಬ್ಬರು ಅಥ್ಲೀಟ್‌ಗಳಷ್ಟೆ. ಈ ನಿಟ್ಟಿನಲ್ಲಿ ಫಿಗರ್ ಸ್ಕೇಟರ್‌ಗಳಾದ ಯೊಮ್-ತಾಯಿ-ಒಕ್ ಹಾಗೂ ಕಿಮ್ ಜು-ಸಿಕ್ ಕೇಂದ್ರಬಿಂದುವೆನಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More