ಯೂಸುಫ್ ಪಠಾಣ್‌ಗೆ ನಾಲ್ಕು ವರ್ಷ ಅಮಾನತು ಶಿಕ್ಷೆ ವಿಧಿಸಲಿದೆಯೇ ವಾಡಾ?

ಅಜಾಗರೂಕ ಔಷಧಿ ಸೇವನೆಯಿಂದಾಗಿ ಡೋಪಿಂಗ್ ಎಸಗಿ ೫ ತಿಂಗಳ ಅಮಾನತು ಶಿಕ್ಷೆಗೆ ಗುರಿಯಾಗಿರುವ ಆಲ್ರೌಂಡರ್ ಯೂಸುಫ್ ಪಠಾಣ್‌ ಅವಧಿ ಪೂರ್ಣವಾಗುತ್ತಿದ್ದರೂ ದಿಗಿಲಲ್ಲಿದ್ದಾರೆ. ಉದ್ದೀಪನಾ ತಡೆ ಘಟಕ (ವಾಡಾ) ಕಠಿಣ ಕ್ರಮ ಜರುಗಿಸದರೆ ೪ ವರ್ಷ ಕ್ರಿಕೆಟ್‌ನಿಂದ ದೂರಾಗಲಿದ್ದಾರೆ

ಬರೋಡಾ ಕ್ರಿಕೆಟಿಗ ಹಾಗೂ ೨೦೧೧ರ ಐಸಿಸಿ ವಿಶ್ವಕಪ್ ವಿಜೇತ ತಂಡದ ಸದಸ್ಯ ಯೂಸುಫ್ ಪಠಾಣ್ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಜಾಗರೂಕತೆಯಿಂದ ತೆಗೆದುಕೊಂಡ ಕೆಮ್ಮು ನಿವಾರಕ ಸಿರಪ್‌ನಲ್ಲಿ ನಿಷೇಧಿತ ಉದ್ದೀಪನಾ ಮದ್ದಿನ ಅಂಶವಿದ್ದಿತೆಂಬ ಅವರ ಸ್ಪಷ್ಟನೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಸ್ವೀಕೃತವಾದರೂ, ಅಂತಾರಾಷ್ಟ್ರೀಯ ಉದ್ದೀಪನಾ ತಡೆ ಘಟಕ (ವಾಡಾ) ನಡೆ ಕುತೂಹಲ ಕೆರಳಿಸಿದೆ.

ಸದ್ಯ ಯೂಸುಫ್ ಪಠಾಣ್ ಮೇಲೆ ಬಿಸಿಸಿಐ ಹೇರಿದ್ದ ಐದು ತಿಂಗಳ ಅಮಾನತು ಶಿಕ್ಷೆ ಇದೇ ೧೪ಕ್ಕೆ ಪೂರ್ಣಗೊಳ್ಳಲಿದೆ. ಆದರೆ, ವಾಡಾ ಏನಾದರೂ ಕಠಿಣ ನಿಲುವು ತಳೆದರೆ ಅವರು ನಾಲ್ಕು ವರ್ಷಗಳವರೆಗೆ ಕ್ರಿಕೆಟ್‌ನಿಂದ ಅಮಾನತುಗೊಳ್ಳುವ ಸಾಧ್ಯತೆಯೂ ಇದೆ. ವಾಡಾ ನಿಯಮದ ಪ್ರಕಾರ ಅಥ್ಲೀಟ್ ಓರ್ವ ಮೊದಲ ಬಾರಿಗೆ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದರೆ ಆತ ಇಲ್ಲವೇ ಆಕೆ ಕನಿಷ್ಠ ೪ ವರ್ಷಗಳ ಅಮಾನತು ಶಿಕ್ಷೆಗೆ ಪಕ್ಕಾಗುತ್ತಾರೆ. ಪರೀಕ್ಷೆ ವೇಳೆ ನಿಷೇಧಿತ ಉದ್ದೀಪನಾ ಮದ್ದಿನ ಅಂಶ ಪತ್ತೆಯಾಗುತ್ತಿದ್ದಂತೆಯೇ, ಕ್ರೀಡಾಪಟು ಕೂಡಲೇ ಶಿಕ್ಷೆಗೆ ಗುರಿಯಾಗುತ್ತಾನೆ. ಹೀಗಾಗಿ ಯೂಸುಫ್ ಪಠಾಣ್ ವಿಷಯದಲ್ಲಿ ವಾಡಾ ಯಾವ ಕ್ರಮ ಜರುಗಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : ಡೋಪಿಂಗ್: ಆಲ್ರೌಂಡರ್ ಯೂಸುಫ್ ಪಠಾಣ್ ಐದು ತಿಂಗಳು ಅಮಾನತು

ಏತನ್ಮಧ್ಯೆ, ವಾಡಾ ಪಠಾಣ್ ಪ್ರಕರಣದಲ್ಲಿ ಯಾವುದೇ ನಿಲುವನ್ನು ಖಚಿತಪಡಿಸಿಲ್ಲ. ಮೊದಲಿಗೆ ಅದು, “ಸದ್ಯ ಈ ಪ್ರಕರಣ ತಾತ್ಕಾಲಿಕವಾಗಿ ತಡೆಹಿಡಿಯಲ್ಪಟ್ಟಿದ್ದು, ಖಚಿತ ನಿಲುವೇನೆಂಬುದನ್ನು ತಿಳಿಸಲು ಸಾಧ್ಯವಿಲ್ಲ,’’ ಎಂದು ವಾಡಾ ನಿರ್ವಾಹಕ ಮ್ಯಾಗಿ ಡುರಾಂಡ್ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಇ-ಮೇಲ್ ಸ್ಪಷ್ಟನೆಯಲ್ಲಿ ತಿಳಿಸಿದೆ. ೨೦೧೫ರ ವಾಡಾ ಡೋಪಿಂಗ್ ಕೋಡ್‌ನ ನಿಯಮದಂತೆ ಮೊದಲ ಪ್ರಕರಣದಲ್ಲಿಯೇ ಕ್ರೀಡಾಪಟು ನಾಲ್ಕು ವರ್ಷಗಳ ಅಮಾನತಿಗೆ ಗುರಿಯಾಗುವುದರಿಂದ ೩೫ರ ಹರೆಯದ ಪಠಾಣ್ ಕುರಿತ ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೋ ಎಂಬುದನ್ನು ಕಾದುನೋಡಬೇಕಿದೆ.

ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು
ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್
ಎ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಸ್ಪೆಲ್‌ನಿಂದ ವಿಶ್ವದಾಖಲೆ ಬರೆದ ನದೀಮ್
Editor’s Pick More