ಸ್ಕೀಯಿಂಗ್‌ನಲ್ಲಿ ಐತಿಹಾಸಿಕ ಸಾಧನೆ ಮೆರೆದ ಮನಾಲಿ ಬೆಡಗಿ ಅಂಚಲ್ ಠಾಕೂರ್ 

ಮನಾಲಿ ಮೂಲದ ಅಂಚಲ್ ಠಾಕೂರ್ ಸ್ಕೀಯಿಂಗ್‌ನಂಥ ಸಾಹಸಮಯ ಕ್ರೀಡೆಯಲ್ಲಿ ಭಾರತಕ್ಕೆ ಮೊಟ್ಟಮೊದಲ ಪದಕ ತಂದುಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಸ್ಕೀಯಿಂಗ್ ಒಕ್ಕೂಟ ಟರ್ಕಿಯಲ್ಲಿ ಆಯೋಜಿಸಿದ್ದ ಆಲ್ಪೈನ್ ಎಡ್ಜರ್ ೩೨೦೦ ಕಪ್‌ನಲ್ಲಿ ಅಂಚಲ್ ಕಂಚು ಪದಕ ಜಯಿಸಿ ಚಾರಿತ್ರಿಕ ಸಾಧನೆ ಮೆರೆದರು

ಹಿಮಾಚ್ಛಾದಿತ ತಾಣ ಮನಾಲಿಯ ಪುಟ್ಟ ಹಳ್ಳಿಯಿಂದ ಬಂದ ಅಂಚಲ್, ಅಸಾಮಾನ್ಯ ಸಾಧಕಿ ಎನಿಸಿ ಚರಿತ್ರಾರ್ಹ ದಾಖಲೆ ಬರೆದಿದ್ದಾರೆ. ಸ್ಕೀಯಿಂಗ್‌ನಂಥ ಚಳಿಗಾಲದ ಕ್ರೀಡಾವಳಿಗೆ ಬೇಕಾದ ಮೂಲಸೌಕರ್ಯ ಹಾಗೂ ಪ್ರೋತ್ಸಾಹ ಭಾರತದಲ್ಲಿ ಇಲ್ಲದೆ ಹೋದರೂ, ಟರ್ಕಿಯ ಪಲಾಂಡೊಕೆನ್ ಸ್ಕೀ ಸೆಂಟರ್‌ನಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧಾವಳಿಯ ಸಾಲೋಮ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಚಾರಿತ್ರಿಕ ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಖುಷಿ ಹಂಚಿಕೊಂಡಿರುವ ಅಂಚಲ್‌, ‘ತಿಂಗಳುಗಳ ಕಾಲ ನಡೆಸಿದ ಸತತಾಭ್ಯಾಸ ಕಡೆಗೂ ಫಲ ನೀಡಿದೆ,’ ಎಂದು ಹೇಳಿದ್ದಾರೆ.

ಅಂದಹಾಗೆ, ಅಂಚಲ್ ಅವರ ಈ ಸಾಹಸಗಾಥೆಯ ಹಿಂದೆ ಆಕೆಯ ತಂದೆಯ ಪಾತ್ರ ಬಲುದೊಡ್ಡದು. ವಿಂಟರ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯೂಜಿಎಫ್‌ಐ) ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅಂಚಲ್ ತಂದೆ ರೋಷನ್ ಠಾಕೂರ್, ಮಗಳ ಈ ಸಾಧನೆ ಬಗ್ಗೆ ಮಾತನಾಡುತ್ತಾ, ‘ಅಂಚಲ್‌ ಸಾಧನೆಯಿಂದಲಾದರೂ, ಭಾರತದಲ್ಲಿ ಚಳಿಗಾಲದ ಕ್ರೀಡಾವಳಿಗಳಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸವಲತ್ತು ಸಿಗಲಿದೆ,’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ, ಅಂಚಲ್ ಅವರ ಅಂತಾರಾಷ್ಟ್ರೀಯ ಸ್ಕೀಯಿಂಗ್ ಪ್ರವೇಶವು ಸುಲಭದ್ದಾಗಿರಲಿಲ್ಲ. ಟರ್ಕಿಯ ಪ್ರಯಾಣ ಹಾಗೂ ಅಲ್ಲಿನ ಸ್ಪರ್ಧೆಗೆ ಆಕೆಯ ತಂದೆಯೇ ಹಣಕಾಸನ್ನು ಪೂರೈಸಬೇಕಿತ್ತು. ‘ನಮ್ಮ ಕ್ರೀಡಾ ಸಚಿವಾಲಯದ ಅಧಿಕಾರಿಗಳು ಸ್ಕೀಯಿಂಗ್ ಅನ್ನು ಕ್ರೀಡೆ ಎಂದು ಪರಿಗಣಿಲ್ಲ,’ ಎಂದು ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ. ‘ವೃತ್ತಿಪರ ಸ್ಕೀಯರ್‌ಗಳಿಗೆ ಬೂಟು, ಬೈಂಡಿಂಗ್ಸ್, ಪೋಲ್, ಹೆಲ್ಮೆಟ್‌, ಸೂಟು, ಕನ್ನಡಕ ಹಾಗೂ ಕೈಗವಸುಗಳು ಅತ್ಯಗತ್ಯವಾದ ಕ್ರೀಡಾ ಪರಿಕರಗಳು. ಇವುಗಳನ್ನು ಕೊಳ್ಳಲು ಕನಿಷ್ಠ ₹ ೫ರಿಂದ ₹ ೧೦ ಲಕ್ಷ ಗಳವರೆಗೆ ಖರ್ಚಾಗುತ್ತದೆ. ಈಗ ಅಂಚಲ್ ಸಾಧನೆ ಕೇಂದ್ರಸರ್ಕಾರದಿಂದ ಹಣಕಾಸು ನೆರವಿಗೆ ಪ್ರೇರಕವಾಗಲಿದೆ,’ ಎಂಬ ಭರವಸೆ ಇದೆ ಎಂದಿದ್ದಾರೆ ಠಾಕೂರ್‌.

ಇದನ್ನೂ ಓದಿ : ೨೦೧೯ರಲ್ಲಿ ನಡೆಯಲಿದೆ ಐತಿಹಾಸಿಕ ಇಂಡೋ-ಆಫ್ಘನ್ ಟೆಸ್ಟ್ ಕ್ರಿಕೆಟ್ ಪಂದ್ಯ

ಬರುವಾ ನಿವಾಸಿ ಅಂಚಲ್ ಮೊದಲಿಗೆ ಸ್ಕೀಯಿಂಗ್‌ನ ಕುಶಲತೆಗಳನ್ನು ಕಲಿತದ್ದು ಮಾಜಿ ಒಲಿಂಪಿಯನ್ ಹೀರಾ ಲಾಲ್ ಅವರಿಂದ. ಆನಂತರ, ತನ್ನ ತಂದೆ ನೀಡಿದ ಸಲಹೆ, ಮಾರ್ಗದರ್ಶನ ಹಾಗೂ ತರಬೇತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವಷ್ಟರಮಟ್ಟಿಗೆ ನಿಪುಣರಾಗಿದ್ದಾರೆ. ಅಂಚಲ್ ಅವರ ಈ ಐತಿಹಾಸಿಕ ಸಾಧನೆಯನ್ನು ಕ್ರೀಡಾ ಸಚಿವ ಹಾಗೂ ಮಾಜಿ ಒಲಿಂಪಿಯನ್ ರಾಜ್ಯವರ್ಧನ್ ಸಿಂಗ್ ರಾಠೋಡ್ ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More