ಉತ್ತಪ್ಪ ಸ್ಫೋಟಕ ಅರ್ಧಶತಕದ ನೆರವಿನಿಂದ ಮುಂಬೈ ವಿರುದ್ಧ ಜಯ ಸಾಧಿಸಿದ ಸೌರಾಷ್ಟ್ರ

ಕರ್ನಾಟಕದ ರಾಬಿನ್ ಉತ್ತಪ್ಪ ಸಿಡಿಸಿದ ಸ್ಫೋಟಕ ಅರ್ಧಶತಕದ ನೆರವಿನೊಂದಿಗೆ ಸೈಯದ್ ಮುಷ್ತಾಕ್ ಅಲಿ ಟಿ೨೦ ಪಂದ್ಯಾವಳಿಯಲ್ಲಿ ಸೌರಾಷ್ಟ್ರ ಭರ್ಜರಿ ಜಯ ಕಂಡಿತು. ಆದರೆ, ಭಾರತ ತಂಡದಿಂದ ಕೈಬಿಡಲ್ಪಟ್ಟಿರುವ ಮತ್ತೋರ್ವ ಆಟಗಾರ ಹಾಗೂ ಆಲ್ರೌಂಡರ್ ಸುರೇಶ್ ರೈನಾ ವೈಫಲ್ಯ ಮುಂದುವರಿದಿದೆ

ಭಾರತ ತಂಡಕ್ಕೆ ಮರು ಪ್ರವೇಶ ಬಯಸಿ ಸತತ ಪ್ರಯತ್ನದಲ್ಲಿರುವ ಕರ್ನಾಟಕದ ಪ್ರತಿಭಾನ್ವಿತ ಆಟಗಾರ ರಾಬಿನ್ ಉತ್ತಪ್ಪ (೫೨) ಈ ಬಾರಿ ಬೇರೆ ರಾಜ್ಯದ ಪರ ರಣಜಿ ಪಂದ್ಯಾವಳಿಯಲ್ಲಿ ಆಡಿದ್ದರು. ಇದೀಗ ಪಶ್ಚಿಮ ವಲಯದ ಪರ ಸೌರಾಷ್ಟ್ರ ತಂಡದಲ್ಲಿ ಆಡುತ್ತಿರುವ ರಾಬಿನ್ ಉತ್ತಪ್ಪ, ಆಕರ್ಷಕ ಬ್ಯಾಟಿಂಗ್ ನಡೆಸಿ ಮತ್ತೊಮ್ಮೆ ಚುಟುಕು ಕ್ರಿಕೆಟ್‌ನಲ್ಲಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಗುರುವಾರ (ಜ.೧೧) ನಡೆದ ಪಂದ್ಯದಲ್ಲಿ ಅವರು ದಾಖಲಿಸಿದ ಅರ್ಧಶತಕದ ನೆರವಿನಿಂದ ಮುಂಬೈ ವಿರುದ್ಧ ಸೌರಾಷ್ಟ್ರ ೮ ವಿಕೆಟ್ ಸುಲಭ ಗೆಲುವು ಪಡೆಯಿತು.

ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ ೧೯.೩ ಓವರ್‌ಗಳಲ್ಲಿ ೧೩೦ ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಆದಿತ್ಯ ತಾರೆ (೩೯) ಹಾಗೂ ಸಿದ್ದೇಶ್ ಲ್ಯಾಡ್ (೩೮) ಜತೆಯಾಟವನ್ನು ಹೊರತುಪಡಿಸಿದರೆ ಮಿಕ್ಕವರಿಂದ ದಿಟ್ಟ ಬ್ಯಾಟಿಂಗ್ ಹೊಮ್ಮಲಿಲ್ಲ. ಶೌರ್ಯ ಸನಾದಿಯಾ (೨೨ಕ್ಕೆ ೪) ಪರಿಣಾಮಕಾರಿ ಬೌಲಿಂಗ್‌ಗೆ ಮುಂಬೈ ನಲುಗಿತು.

ಬಳಿಕ ಬ್ಯಾಟ್ ಮಾಡಿದ ಸೌರಾಷ್ಟ್ರ, ಆರಂಭಿಕ ಉತ್ತಪ್ಪ (೫೨: ೩೬ ಎಸೆತ, ೫ ಬೌಂಡರಿ, ೩ ಸಿಕ್ಸರ್) ಅವರ ಬಿಡುಬೀಸಿನ ಬ್ಯಾಟಿಂಗ್‌ನಿಂದ ಕೇವಲ ೧೭.೨ ಓವರ್‌ಗಳಲ್ಲಿಯೇ ೨ ವಿಕೆಟ್ ಕಳೆದುಕೊಂಡು ೧೩೩ ರನ್ ಗಳಿಸಿ ಗೆಲುವಿನ ನಗೆಬೀರಿತು. ಉತ್ತಪ್ಪ ಹಾಗೂ ಶೆಲ್ಡಾನ್ ಜಾಕ್ಸನ್ (೨೦) ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿ ಕ್ರೀಸ್ ತೊರೆದ ಬಳಿಕ ಪರ್ಮಾರ್ (೩೫) ಹಾಗೂ ವಿಶ್ವರಾಗ್‌ಸಿಂಗ್ ಜಡೇಜಾ (೨೦) ತಂಡವನ್ನು ಸುನಾಯಾಸವಾಗಿ ಜಯದ ದಡ ತಲುಪಿಸಿದರು.

ಇದನ್ನೂ ಓದಿ : ಮಯಾಂಕ್ ಅರ್ಧಶತಕ, ಗೋವಾ ಮಣಿಸಿ ಶುಭಾರಂಭ ಮಾಡಿದ ಕರ್ನಾಟಕ

ರೈನಾ ವಿಫಲ: ಅಂದಹಾಗೆ, ಈ ಋತುವಿನಿಂದ ಐಪಿಎಲ್‌ಗೆ ಮರಳಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ಪ್ರಮುಖ ಆಟಗಾರ ಸುರೇಶ್ ರೈನಾ ರಣಜಿ ಪಂದ್ಯಾವಳಿಯ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಲಾಗದೆ ಚಡಪಡಿಸಿದರು. ಕೇಂದ್ರೀಯ ವಲಯದ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ ರೈನಾ ಸಾರಥ್ಯದ ಉ.ಪ್ರದೇಶ ತಂಡ ೭ ವಿಕೆಟ್ ಸೋಲನುಭವಿಸಿತು. ಕೇವಲ ೧ ರನ್ ಗಳಿಸಿದ ರೈನಾ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಮಧ್ಯಪ್ರದೇಶದ ಬೌಲರ್‌ಗಳ ಶಿಸ್ತುಬದ್ಧ ದಾಳಿಯಿಂದಾಗಿ ಕೇವಲ ೧೦೮ ರನ್‌ಗಳಿಗೆ ಸರ್ವಪತನ ಕಂಡ ಉ.ಪ್ರದೇಶ ವಿರುದ್ಧ ಇನ್ನೂ ಮೂರು ಓವರ್‌ಗಳು ಬಾಕಿ ಇರುವಂತೆಯೇ ಮಧ್ಯಪ್ರದೇಶ ಕೇವಲ ೩ ವಿಕೆಟ್‌ಗಳಿಗೆ ೧೧೦ ರನ್ ಗಳಿಸಿ ಜಯ ಪಡೆಯಿತು. ಆರಂಭಿಕ ರಜತ್ ಪತೀದಾರ್ (೫೧: ೪೧ ಎಸೆತ, ೫ ಬೌಂಡರಿ, ೧ ಸಿಕ್ಸರ್) ಆಕರ್ಷಕ ಅರ್ಧಶತಕ ತಂಡದ ಸುಲಭ ಗೆಲುವಿಗೆ ನೆರವಾಯಿತು.

ಕೊಹ್ಲಿ, ಮೀರಾ ಬಾಯಿ ಚಾನುಗೆ ಖೇಲ್ ರತ್ನ; ಕನ್ನಡಿಗ ಬೋಪಣ್ಣಗೆ ಅರ್ಜುನ
ಚೀನಾ ಓಪನ್ ಬ್ಯಾಡ್ಮಿಂಟನ್: ಎಂಟರ ಘಟ್ಟ ತಲುಪಿದ ಶ್ರೀಕಾಂತ್, ಸಿಂಧು
ಏಷ್ಯಾ ಕಪ್ | ಮನೀಶ್ ಪಾಂಡೆ ಪ್ರಚಂಡ ಕ್ಯಾಚ್‌ಗೆ ಅಭಿಮಾನಿಗಳು ಕ್ಲೀನ್ ಬೌಲ್ಡ್
Editor’s Pick More