ಆಸ್ಟ್ರೇಲಿಯಾ ಓಪನ್‌ನಲ್ಲಿ ನಡಾಲ್ ನಂ ೧, ಫೆಡರರ್‌ಗೆ 2ನೇ ಶ್ರೇಯಾಂಕ

ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್‌ಗೆ ದಿನಗಣನೆ ಶುರುವಾಗಿದೆ. ಸ್ಪೇನ್ ಆಟಗಾರ ರಾಫೆಲ್ ನಡಾಲ್ ಅಗ್ರ ಕ್ರಮಾಂಕಿತರಾಗಿ ಕಣಕ್ಕಿಳಿಯಲಿದ್ದರೆ, ಹಾಲಿ ಚಾಂಪಿಯನ್ ರೋಜರ್ ಫೆಡರರ್‌ಗೆ ಎರಡನೇ ಶ್ರೇಯಾಂಕ ಲಭ್ಯವಾಗಿದೆ. ಸಹಜವಾಗಿಯೇ ಮತ್ತೊಮ್ಮೆ ಇವರಿಬ್ಬರು ವಿಶ್ವ ಟೆನಿಸ್ ಗಮನ ಸೆಳೆದಿದ್ದಾರೆ 

ಕಳೆದ ಸಾಲಿನ ನಾಲ್ಕೂ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳನ್ನು ತಲಾ ಎರಡರಂತೆ ಹಂಚಿಕೊಂಡ ರಾಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ. ಬರೋಬ್ಬರಿ ವರ್ಷದ ಹಿಂದೆ ಇದೇ ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಐತಿಹಾಸಿಕ ಐದು ಸೆಟ್‌ಗಳ ರೋಮಾಂಚನಕಾರಿ ಕಾದಾಟದಲ್ಲಿ ೩-೨ರಿಂದ ಸ್ಪೇನ್ ಆಟಗಾರ ನಡಾಲ್ ಎದುರು ಪ್ರಭುತ್ವ ಮೆರೆದಿದ್ದ ಫೆಡರರ್ ವೃತ್ತಿಬದುಕಿನ ೧೭ನೇ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗೆ ಮುದ್ದಿಕ್ಕಿದ್ದರು. ಸದ್ಯ, ಸ್ವಿಸ್ ಟೆನಿಸ್ ತಾರೆ ೨೦ನೇ ಗ್ರಾಂಡ್‌ಸ್ಲಾಮ್‌ನ ಹೊಸ್ತಿಲಲ್ಲಿದ್ದರೆ, ಸ್ಪೇನ್ ಆಟಗಾರ ನಡಾಲ್ ೧೭ನೇ ಗ್ರಾಂಡ್‌ಸ್ಲಾಮ್ ಗೆಲ್ಲುವ ಕನಸು ಕಟ್ಟಿದ್ದಾರೆ. ಆದರೆ, ಮೊಣಕಾಲು ನೋವಿನಿಂದ ಬಳಲುತ್ತಿರುವ ನಡಾಲ್‌ಗೆ ಈ ಸಾಲಿನ ಆಸ್ಟ್ರೇಲಿಯನ್ ಓಪನ್ ಸವಾಲಾಗಿ ಪರಿಣಮಿಸಿದೆ.

ಜೊಕೊವಿಚ್‌ಗೆ ೧೪ನೇ ಸ್ಥಾನ: ಏತನ್ಮಧ್ಯೆ, ಪುರುಷರ ವಿಭಾಗದಲ್ಲಿ ಪ್ರಶಸ್ತಿ ಫೇವರಿಟ್ ಎನಿಸಿರುವ ಸರ್ಬಿಯಾ ಆಟಗಾರ ಹಾಗೂ ವಿಶ್ವದ ಮಾಜಿ ನಂ ೧ ಟೆನಿಸಿಗ ಮತ್ತು ೧೨ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ವಿಜೇತ ನೊವಾಕ್ ಜೊಕೊವಿಚ್‌ಗೆ ಹದಿನಾಲ್ಕನೇ ಶ್ರೇಯಾಂಕ ಪ್ರಾಪ್ತಿಯಾಗಿದೆ ಎಂದು ಗುರುವಾರ (ಜ.೧೧) ನಡೆದ ಆಟಗಾರರ ಡ್ರಾ ವೇಳೆ ಸಂಘಟಕರು ತಿಳಿಸಿದ್ದಾರೆ. ಅಂದಹಾಗೆ, ಗಾಯದ ಸಮಸ್ಯೆಯಿಂದಾಗಿ ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ, ಜಪಾನ್ ಆಟಗಾರ ಕೀ ನಿಶಿಕೊರಿ ಟೂರ್ನಿಯಿಂದ ಹಿಮ್ಮಟ್ಟಿರುವ ಹಿನ್ನೆಲೆಯಲ್ಲಿ, ನಡಾಲ್, ಫೆಡರರ್ ಹಾಗೂ ಜೊಕೊವಿಚ್ ನಡುವೆ ಪ್ರಶಸ್ತಿಗಾಗಿ ಪ್ರಬಲ ಹೋರಾಟ ನಡೆಯುವ ಸಾಧ್ಯತೆ ಇದೆ.

ಮುಂದಿನ ಸೋಮವಾರದಿಂದ (ಜ.೧೫) ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ನಡಾಲ್ ಮೊದಲ ಸುತ್ತಿನಲ್ಲಿ ಜೆಕ್ ಗಣರಾಜ್ಯದ ವಿಕ್ಟರ್ ಎಸ್ಟ್ರೆಲ್ಲಾ ಬರ್ಗೊಸ್ ವಿರುದ್ಧ ಸೆಣಸಲಿದ್ದರೆ, ಐದು ಬಾರಿಯ ಚಾಂಪಿಯನ್ ಫೆಡರರ್, ಏಜಾಜ್ ಬೆದೆನಿ ಎದುರು ಕಾದಾಡಲಿದ್ದಾರೆ. ಅಂತೆಯೇ, ಜೊಕೊವಿಚ್, ಡೊನಾಲ್ಡ್ ಯಂಗ್ ವಿರುದ್ಧದ ಕಾದಾಟದೊಂದಿಗೆ ಈ ಋತುವಿನ ಆಸ್ಟ್ರೇಲಿಯನ್ ಅಭಿಯಾನ ಆರಂಭಿಸಲಿದ್ದಾರೆ.

ಹ್ಯಾಲೆಪ್‌ಗೆ ಅಗ್ರ ಶ್ರೇಯಾಂಕ: ರಾಡ್ ಲೇವರ್ ಅರೇನಾದಲ್ಲಿ ನಡೆದ ಡ್ರಾದಲ್ಲಿ ಮಹಿಳೆಯರ ವಿಭಾಗದಲ್ಲಿ ವಿಶ್ವದ ನಂ.೧ ಆಟಗಾರ್ತಿ, ರೊಮೇನಿಯಾದ ಸಿಮೋನಾ ಹ್ಯಾಲೆಪ್ ಅಗ್ರ ಕ್ರಮಾಂಕದಲ್ಲಿ ಕಾದಾಟಕ್ಕೆ ಇಳಿಯಲಿದ್ದಾರೆ. ಮೊದಲ ಸುತ್ತಿನಲ್ಲಿ ಆಕೆ ಯುವ ಆಟಗಾರ್ತಿ ಡೆಸ್ಟಾನಿ ಏವಾ ವಿರುದ್ಧ ಸೆಣಸಲಿದ್ದಾರೆ. ಇನ್ನು, ಮಾಜಿ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾ, ಆಂಡ್ರಿಯಾ ಪೆಟ್ಕೋವಿಕ್ ವಿರುದ್ಧ ಕಾದಾಡಲಿದ್ದಾರೆ. ಇತ್ತ, ಹಾಲಿ ರನ್ನರ್‌ಅಪ್ ಹಾಗೂ ವಿಶ್ವದ ಮಾಜಿ ನಂ.೧ ಆಟಗಾರ್ತಿ ವೀನಸ್ ವಿಲಿಯಮ್ಸ್, ಬೆಲಿಂಡಾ ಬೆನ್ಸಿಕ್ ಎದುರು ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ.

ಶರಪೋವಾಗೆ ಸವಾಲು: ಎರಡು ವರ್ಷಗಳ ಹಿಂದೆ ಇದೇ ಆಸ್ಟ್ರೇಲಿಯನ್ ಓಪನ್ ಸಂದರ್ಭದಲ್ಲಿ ನಿಷೇಧಿತ ಉದ್ದೀಪನಾ ಮದ್ದು ಮೆಲ್ಡೋನಿಯಂ ಅನ್ನು ಸೇವಿಸಿದ್ದಾಗಿ ವಿಶ್ವ ಟೆನಿಸ್ ಅನ್ನು ಬೆಚ್ಚಿಬೀಳಿಸಿದ್ದ ಮರಿಯಾ ಶರಪೋವಾ, ಐಟಿಎಫ್‌ ಹೇರಿದ್ದ ನಿಷೇಧದ ಹಿನ್ನೆಲೆಯಲ್ಲಿ ೨೦೧೬ರ ಆಸ್ಟ್ರೇಲಿಯಾ ಓಪನ್‌ನಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಾರಿಯ ಡ್ರಾ ವೇಳೆ ಟ್ರೋಫಿಯನ್ನು ಹಿಡಿದು ಆಗಮಿಸಿದರು. ಐದು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ಶರಪೋವಾ ಪ್ರಸಕ್ತ ವಿಶ್ವದ ೪೭ನೇ ಶ್ರೇಯಾಂಕಿತೆ. ಗಾಯದ ನಿಮಿತ್ತ ಸೆರೆನಾ ವಿಲಿಯಮ್ಸ್ ಟೂರ್ನಿಗೆ ಹಿಮ್ಮೆಟ್ಟಿರುವುದರಿಂದ ಅವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಆಕೆ ಟಾಟ್ಜಾನ ಬೆನ್ಸಿಕ್ ವಿರುದ್ಧ ಸೆಣಸಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More