ಸೆಂಚೂರಿಯನ್‌ ಸಮರಕ್ಕೆ ಸಜ್ಜಾದ ವಿರಾಟ್ ಪಡೆ, ಹರಿಣಗಳಿಗೆ ಸರಣಿ ಮೇಲೆ ಕಣ್ಣು

ಸತತ ಒಂಬತ್ತು ಟೆಸ್ಟ್ ಸರಣಿಗಳನ್ನು ಗೆದ್ದು ಆಸ್ಟ್ರೇಲಿಯಾದ ವಿಶ್ವದಾಖಲೆ ಸರಿಗಟ್ಟಿದ್ದ ವಿರಾಟ್ ಕೊಹ್ಲಿ ಪಡೆಗೆ ಅಗ್ನಿಪರೀಕ್ಷೆ ಎದುರಾಗಿದೆ. ಆತಿಥೇಯ ದ.ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಸೋತಿರುವ ಕೊಹ್ಲಿ ಪಡೆ, ಶನಿವಾರದಿಂದ (ಜ.೧೩) ಶುರುವಾಗುತ್ತಿರುವ ನಿರ್ಣಾಯಕ ಪಂದ್ಯಕ್ಕೆ ಅಣಿಯಾಗಿದೆ

ವಿದೇಶಿ ನೆಲದಲ್ಲಿ ಅದರಲ್ಲೂ, ದ.ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲುವ ಅಪೂರ್ವ ಅವಕಾಶ ಇದಕ್ಕಿಂತ ಮತ್ತೊಂದು ಒದಗಿಬರಲಾರದು ಎಂಬ ಮಾತನ್ನು ಉಳಿಸಿಕೊಳ್ಳಲು ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಹೆಣಗುತ್ತಿದೆ. ಕೇಪ್‌ಟೌನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ೭೨ ರನ್‌ಗಳ ಸೋಲನುಭವಿಸಿರುವ ಭಾರತ ತಂಡ, ಇದೀಗ ಎರಡನೇ ಹಾಗೂ ನಿರ್ಣಾಯಕವಾಗಿರುವ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಡಲು ಕೊಹ್ಲಿ ಪಡೆ ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಸಜ್ಜಾಗಿದೆ. ಆದರೆ, ಆತಿಥೇಯ ಪಾಳೆಯದಲ್ಲಿ ಸೆಂಚೂರಿಯನ್ ಟೆಸ್ಟ್ ಗೆಲ್ಲುವುದರೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ಇರಾದೆ ಇದೆ.

ಮೊದಲ ಪಂದ್ಯದಲ್ಲಿ ಭಾರತದ ಪ್ರಾಬಲ್ಯ ವ್ಯಕ್ತವಾಗಿದ್ದು ಬೌಲಿಂಗ್‌ನಲ್ಲಿ ಎನ್ನಲು ಸಾಕಷ್ಟು ಪುರಾವೆಗಳನ್ನು ಬೌಲರ್‌ಗಳ ಶ್ರೇಷ್ಠ ಪ್ರದರ್ಶನ ನಿರೂಪಿಸಿತ್ತು. ಪಂದ್ಯದ ಮೂರನೇ ದಿನದಾಟ ಸಂಪೂರ್ಣವಾಗಿ ಮಳೆಯಿಂದಾಗಿ ರದ್ದಾದರೆ, ನಾಲ್ಕನೇ ದಿನದಂದು ೧೮ ವಿಕೆಟ್‌ ಪತನ ಕಂಡು, ಹರಿಣಗಳು ಜಯದ ಕೇಕೆ ಹಾಕಿದ್ದವು. ಮೇಲ್ನೋಟಕ್ಕೆ ೨೦೮ ರನ್‌ಗಳ ಗುರಿ ಸುಲಭದ್ದೆನಿಸಿದ್ದರೂ, ಬಲಾಢ್ಯ ಬ್ಯಾಟಿಂಗ್ ತಂಡವೆಂದೇ ಕರೆಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಪಡೆ ಕೇವಲ ೧೩೫ ರನ್‌ಗಳಿಗೆ ಸರ್ವಪತನ ಕಂಡು ಆಘಾತಕಾರಿ ಸೋಲನುಭವಿಸಿತ್ತು. ಇದೀಗ ಎರಡನೇ ಪಂದ್ಯಕ್ಕೆ ಅಣಿಯಾಗಿರುವ ಸೂಪರ್ ಸ್ಪೋರ್ಟ್ ಪಾರ್ಕ್‌ನ ಪಿಚ್ ಕೂಡ ಬೌನ್ಸಿಯಿಂದ ಕೂಡಿರಲಿದ್ದು, ವೇಗಿಗಳ ಸ್ವರ್ಗತಾಣವಾಗಲಿದೆ ಎಂಬ ಸುಳಿವು ಸಿಕ್ಕಿದೆ. ಹೀಗಾಗಿ ಮತ್ತೊಮ್ಮೆ ಸ್ಪಿನ್ನರ್‌ಗಳ ಪಾತ್ರ ಇಲ್ಲಿ ನಗಣ್ಯವಾಗುವ ಸಾಧ್ಯತೆ ಇದೆ.

ರಾಹುಲ್‌, ರಹಾನೆಗೆ ಸ್ಥಾನ?: ಮೊದಲ ಟೆಸ್ಟ್ ಪಂದ್ಯದಲ್ಲಿ ಅರಂಭಿಕರಾಗಿ ಕಾರ್ಯನಿರ್ವಹಿಸಿದ್ದ ಮುರಳಿ ವಿಜಯ್ ಮತ್ತು ಶಿಖರ್ ಧವನ್ ದಿವ್ಯ ವೈಫಲ್ಯ ಅನುಭವಿಸಿದ್ದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಇವರು ಕ್ರಮವಾಗಿ ೧, ೧೩ ಮತ್ತು ೧೬, ೧೬ ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಈ ಜೋಡಿ ಬೇರ್ಪಡುವುದು ನಿಚ್ಚಳವಾಗಿದೆ. ಏತನ್ಮಧ್ಯೆ, ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಅವರನ್ನು ಕೈಬಿಟ್ಟ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ನ ನಡೆಯನ್ನೂ ಟೀಕಿಸಲಾಗಿತ್ತು. ಸರಣಿ ಜೀವಂತವಾಗಿಡುವ ಹಿನ್ನೆಲೆಯಲ್ಲಿ ಈ ಇಬ್ಬರು ಆಡುವ ಅಂತಿಮ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ.

ಶತಕದ ಹೊಸ್ತಿಲಲ್ಲಿ ಶಮಿ: ಅನುಭವಿ ಬೌಲರ್ ಇಶಾಂತ್ ಶರ್ಮಾರಂಥವರನ್ನು ಕೈಬಿಟ್ಟು, ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾಗೆ ಸ್ಥಾನ ಕಲ್ಪಿಸಿದ್ದ ಟೀಂ ಇಂಡಿಯಾ, ನಿರ್ಣಾಯಕ ಟೆಸ್ಟ್‌ಗೆ ಬುಮ್ರಾ ಅವರನ್ನು ಉಳಿಸಿಕೊಳ್ಳುತ್ತದೋ ಅಥವಾ ಅವರನ್ನು ಕೈಬಿಟ್ಟು ಇಶಾಂತ್‌ಗೆ ಮಣೆ ಹಾಕುತ್ತದೋ ಎಂಬುದು ಕುತೂಹಲ ಕೆರಳಿಸಿದೆ. ಅಂದಹಾಗೆ ಬುಮ್ರಾ, ಕೇಪ್‌ಟೌನ್ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಕ್ರಮಣ ಹಾಗೂ ಅಪಾಯಕಾರಿ ಆಟಗಾರ ಎಬಿ ಡಿವಿಲಿಯರ್ಸ್ ಅವರನ್ನು ಔಟ್ ಮಾಡಿದ್ದರಾದರೂ, ಹೆಚ್ಚು ವಿಕೆಟ್ ಪಡೆಯಲೇನೂ ಯಶಸ್ವಿಯಾಗಿರಲಿಲ್ಲ. ಭುವನೇಶ್ವರ್ ಕುಮಾರ್ ಅದ್ಭುತ ಸ್ವಿಂಗ್‌ನಿಂದ ಆರಂಭದಲ್ಲೇ ಮಿಂಚು ಹರಿಸಿದರೆ, ಮೊಹಮದ್ ಶಮಿ ಕೂಡ ನಿರಾಸೆಯುಂಟು ಮಾಡಿರಲಿಲ್ಲ. ಅಂದಹಾಗೆ, ೯೯ ಟೆಸ್ಟ್ ವಿಕೆಟ್ ಪಡೆದಿರುವ ಶಮಿ ಶತಕದ ಅಂಚಿನಲ್ಲಿದ್ದಾರೆ.

ಸರಣಿ ಮೇಲೆ ಕಣ್ಣು: ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿಗರ ವಿರುದ್ಧ ಜಯ ಸಾಧಿಸಿ ಆತ್ಮವಿಶ್ವಾಸದಿಂದ ತೊನೆಯುತ್ತಿರುವ ಫಾಫ್ ಡು ಪ್ಲೆಸಿಸ್ ನೇತೃತ್ವದ ದ.ಆಫ್ರಿಕಾ, ಸರಣಿ ಮೇಲೆ ಕಣ್ಣಿಟ್ಟಿದೆ. ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಸರಣಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಧಾವಂತದಲ್ಲಿರುವ ಅದು, ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲಿಯೂ ಸಮತೋಲಿತ ಪ್ರದರ್ಶನ ಮುಂದುವರಿಸುವ ಗುರಿ ಹೊತ್ತಿದೆ. ಅಂದಹಾಗೆ, ದ.ಆಫ್ರಿಕಾ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಬೌಲಿಂಗ್‌ನ ಬಲದಿಂದಲೇ ಎಂಬುದನ್ನು ಮರೆಯುವಂತಿಲ್ಲ. ಫಿಲಾಂಡರ್ ಪ್ರಚಂಡ ದಾಳಿ ಭಾರತದ ಬ್ಯಾಟಿಂಗ್‌ ಬೆನ್ನೆಲುಬು ಮುರಿದಿತ್ತು.

ಇದನ್ನೂ ಓದಿ : ಕರುಣ್ ಸ್ಫೋಟಕ ಶತಕ, ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

ದಿಗ್ಗಜರ ಸ್ವರ್ಗ: ದ.ಆಫ್ರಿಕಾ ತಂಡದ ಅದ್ವಿತೀಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಹಾಶೀಂ ಆಮ್ಲಾ ಕೇಪ್‌ಟೌನ್ ಟೆಸ್ಟ್‌ನಲ್ಲಿ ತೀವ್ರ ನಿರಾಸೆ ಅನುಭವಿಸಿದ್ದರು. ಆದರೆ, ಸೆಂಚೂರಿಯನ್‌ ತಾಣ ಇವರನ್ನೂ ಒಳಗೊಂಡಂತೆ, ಎಬಿ ಡಿವಿಲಿಯರ್ಸ್ ಅವರಿಗೂ ಅಚ್ಚುಮೆಚ್ಚು. ಇಲ್ಲಿ, ೮೦.೧೩ರ ಸರಾಸರಿಯಲ್ಲಿ ಆಮ್ಲಾ ೧,೨೦೨ ರನ್ ಕಲೆಹಾಕಿದ್ದರೆ, ಎಬಿ ಡಿವಿಲಿಯರ್ಸ್ ೬೦.೮೯ರ ಸರಾಸರಿಯಲ್ಲಿ ೧,೧೫೭ ರನ್ ಪೇರಿಸಿದ್ದಾರೆ. ನಾಯಕ ಫಾಫ್ ಡುಪ್ಲೆಸಿ ಹಾಗೂ ಆರಂಭಿಕ ಡೀನ್ ಎಲ್ಗರ್ ಕೂಡ ಈ ಮೈದಾನದಲ್ಲಿ ನಿರಾಸೆ ಅನುಭವಿಸಿಲ್ಲ. ಇದು ಸೆಂಚೂರಿಯನ್ ತಾಣ ಬ್ಯಾಟಿಂಗ್‌ಗೂ ಸ್ಪಂದಿಸುತ್ತದೆ ಎಂಬುದನ್ನು ಧ್ವನಿಸುತ್ತಿದೆ.

ಸಂಭವನೀಯ ಇಲೆವೆನ್

ಭಾರತ: ಮುರಳಿ ವಿಜಯ್, ಕೆ ಎಲ್ ರಾಹುಲ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಾಹ (ವಿಕೆಟ್‌ ಕೀಪರ್), ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ.

ದ. ಆಫ್ರಿಕಾ: ಡೀನ್ ಎಲ್ಗರ್, ಏಡೆನ್ ಮಾರ್‌ಕ್ರಮ್, ಹಾಶೀಂ ಆಮ್ಲಾ, ಎ ಬಿ ಡಿವಿಲಿಯರ್ಸ್, ಫಾಫ್ ಡು ಪ್ಲೆಸಿಸ್ (ನಾಯಕ), ಕ್ವಿಂಟಾನ್ ಡಿ’ಕಾಕ್ (ವಿಕೆಟ್‌ ಕೀಪರ್), ಕ್ರಿಸ್ ಮೋರಿಸ್/ಡುವಾನಿ ಒಲಿವಿಯರ್, ಕೇಶವ್ ಮಹಾರಾಜ್, ವೆರ್ನಾನ್ ಫಿಲಾಂಡರ್, ಕಾಗಿಸೊ ರಬಾಡ ಮತ್ತು ಮಾರ್ನಿ ಮಾರ್ಕೆಲ್.

ಪಂದ್ಯ ಆರಂಭ: ಮಧ್ಯಾಹ್ನ ೧.೩೦ | ನೇರಪ್ರಸಾರ: ಸೋನಿ ಎಚ್‌ಡಿ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More