ಕರುಣ್ ಸ್ಫೋಟಕ ಶತಕ, ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

ಕರುಣ್ ನಾಯರ್ (೧೧೧) ಸಿಡಿಸಿದ ಸ್ಫೋಟಕ ಶತಕದ ಬಲದಿಂದಾಗಿ ಕರ್ನಾಟಕ, ಸೈಯದ್ ಮುಷ್ತಾಕ್ ಅಲಿ ಟಿ೨೦ ಪಂದ್ಯಾವಳಿಯಲ್ಲಿ ಮತ್ತೊಂದು ಜಯ ದಾಖಲಿಸಿತು. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ವಿನಯ್ ಪಡೆ ೭೮ ರನ್ ಗೆಲುವಿನೊಂದಿಗೆ ಟೂರ್ನಿಯಲ್ಲಿ ಮೂರು ಗೆಲುವು ಕಂಡಂತಾಗಿದೆ

ಮತ್ತೊಮ್ಮೆ ಆಕರ್ಷಕ ಹಾಗೂ ಅಬ್ಬರದ ಬ್ಯಾಟಿಂಗ್ ನಡೆಸಿದ ಕರುಣ್ ನಾಯರ್ (೧೧೧: ೫೨ ಎಸೆತ, ೮ ಬೌಂಡರಿ, ೮ ಸಿಕ್ಸರ್) ಸೈಯದ್ ಮುಷ್ತಾಕ್ ಟಿ೨೦ ಪಂದ್ಯಾವಳಿಯಲ್ಲಿ ಅಮೋಘ ಶತಕ ದಾಖಲಿಸಿದರು. ಶುಕ್ರವಾರ (ಜ.೧೨) ವಿಜಯನಗರಂನ ಡಾ.ರಾಜು ಎಸಿಎ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ, ಕೇವಲ ೪೮ ಎಸೆತಗಳಲ್ಲೇ ಶತಕ ದಾಖಲಿಸಿದ ಅವರು, ತಂಡದ ಬ್ಯಾಟಿಂಗ್ ವೈಫಲ್ಯವನ್ನು ಮೆಟ್ಟಿನಿಂತರು. ಈ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳಲ್ಲಿ ದಕ್ಷಿಣ ವಲಯದ ಗುಂಪಿನಲ್ಲಿ ೧೨ ಅಂಕಗಳನ್ನು ಕಲೆಹಾಕಿದ ಕರ್ನಾಟಕ ಮೊದಲ ಸ್ಥಾನಕ್ಕೆ ಜಿಗಿಯಿತು. ಅಂದಹಾಗೆ, ಕರ್ನಾಟಕದ ಎದುರು ೭೮ ರನ್ ಸೋಲಿನ ಹಿನ್ನೆಲೆಯಲ್ಲಿ ಅಗ್ರಸ್ಥಾನದಲ್ಲಿದ್ದ ತಮಿಳುನಾಡು ಇಷ್ಟೇ ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು.

ವಿನಯ್ ಪಡೆ ನೀಡಿದ ೧೮೦ ರನ್ ಗುರಿಯನ್ನು ಬೆನ್ನುಹತ್ತಿದ ತಮಿಳುನಾಡು ಆರಂಭದಲ್ಲೇ ಎಡವಿತಲ್ಲದೆ, ೧೬.೩ ಓವರ್‌ಗಳಲ್ಲೇ ೧೦೧ ರನ್‌ಗಳಿಗೆ ಆಲೌಟ್ ಆಯಿತು. ಅಭಿನವ್ ಮುಕುಂದ್ (೧) ಎರಡನೇ ಓವರ್‌ನಲ್ಲಿಯೇ ವಿಕೆಟ್ ಕಳೆದುಕೊಂಡರು. ವೇಗಿ ಎಸ್ ಅರವಿಂದ್ ಬೌಲಿಂಗ್‌ನಲ್ಲಿ ಭರ್ಜರಿ ಹೊಡೆತಕ್ಕೆ ಕೈಹಾಕಿದ ಅವರು, ಅಭಿಮನ್ಯು ಮಿಥುನ್‌ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಬಳಿಕ ಬಂದ ದಿನೇಶ್ ಕಾರ್ತಿಕ್ (೦) ಮರು ಎಸೆತದಲ್ಲಿ ಪ್ರವೀಣ್ ದುಬೆ ಅವರ ಮಿಂಚಿನ ಕಾರ್ಯಾಚರಣೆಯಿಂದ ರನೌಟ್ ಆಗಿ ಕ್ರೀಸ್ ತೊರೆದರು.

ಪ್ರವೀಣ್ ದುಬೆ ಮಿಂಚು: ಕಳೆದ ಮೂರೂ ಪಂದ್ಯಗಳಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದ ದಿನೇಶ್ ಕಾರ್ತಿಕ್ ಅವರ ಶೂನ್ಯ ಗಳಿಕೆ ತಮಿಳುನಾಡಿನ ಬ್ಯಾಟಿಂಗ್‌ಗೆ ಇನ್ನಿಲ್ಲದಂತೆ ಹೊಡೆತ ನೀಡಿತು. ಆರಂಭಿಕ ವಾಷಿಂಗ್ಟನ್ ಸುಂದರ್ (೩೪: ೨೬ ಎಸೆತ, ೩ ಬೌಂಡರಿ, ೧ ಸಿಕ್ಸರ್) ತಂಡದ ಪರ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಆಟಗಾರನೆನಿಸಿದರು. ಅಪಾಯಕಾರಿ ದಿನೇಶ್ ಕಾರ್ತಿಕ್ ಅವರನ್ನು ರನೌಟ್ ಮಾಡಿದ್ದಲ್ಲದೆ, ಪರಿಣಾಮಕಾರಿ ಬೌಲಿಂಗ್ ನಡೆಸಿದ ಪ್ರವೀಣ್ ದುಬೆ (೧೯ಕ್ಕೆ ೪) ಕರ್ನಾಟಕ ಗೆಲುವಿಗೆ ನೆರವಾದರು.

ಮತ್ತೆ ಮಯಾಂಕ್ ವೈಫಲ್ಯ: ರಣಜಿ ಪಂದ್ಯಾವಳಿಯಲ್ಲಿ ಅಮೋಘ ಬ್ಯಾಟಿಂಗ್ ನಿರ್ವಹಣೆ ನೀಡಿದ್ದ ಮಯಾಂಕ್ ಅಗರ್ವಾಲ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಗೋವಾ ವಿರುದ್ಧ ಅಮೋಘ ಅರ್ಧಶತಕ ಬಾರಿಸಿದ್ದ ಅವರು, ನಂತರದ ಮೂರೂ ಪಂದ್ಯಗಳಲ್ಲಿ ಅಸ್ಥಿರ ಪ್ರದರ್ಶನದಿಂದ ಕಂಗೆಟ್ಟಿದ್ದಾರೆ. ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುವ ಭರವಸೆಯೊಂದಿಗೆ ಕರುಣ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ ಮಯಾಂಕ್, ೧೦ ಎಸೆತಗಳಲ್ಲಿ ೩ ಆಕರ್ಷಕ ಬೌಂಡರಿ ಬಾರಿಸಿ ಎರಡನೇ ಓವರ್‌ನಲ್ಲೇ ಪೆವಿಲಿಯನ್ ದಾರಿ ತುಳಿದರು. ಇನ್ನು, ರಾಜ್ಯದ ಪರ ಎರಡಂಕಿ ದಾಟಿದ ಮತ್ತೋರ್ವ ಆಟಗಾರ ಆರ್ ಸಮರ್ಥ್ (೧೯). ಉಳಿದಂತೆ ಮಿಕ್ಕೆಲ್ಲ ಆಟಗಾರರು ಎರಡಂಕಿ ದಾಟಲಿಲ್ಲ. ಆದರೆ, ಎರಡನೇ ಕ್ರಮಾಂಕದಲ್ಲಿ ಹೆಬ್ಬಂಡೆಯಂತೆ ನಿಂತ ಕರುಣ್, ತಂಡದ ಪರ ಮನೋಜ್ಞ ಬ್ಯಾಟಿಂಗ್ ನಡೆಸಿ ತಮಿಳುನಾಡಿಗೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ : ವಿಮಾನ ನಿಲ್ದಾಣದ ರನ್‌ ವೇನಲ್ಲಿ ಕುಣಿದು ಕುಪ್ಪಳಿಸಿದ ಕೃಷ್ಣಸುಂದರಿ ಸೆರೆನಾ! 

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: ೧೭೯/೯ (ಕರುಣ್ ನಾಯರ್ ೧೧೧; ಅತಿಶಯರಾಜ್ ಡೇವಿಡ್‌ಸನ್ ೩೦ಕ್ಕೆ ೫) ತಮಿಳುನಾಡು: ೧೦೧/೧೦ (ವಾಷಿಂಗ್ಟನ್ ಸುಂದರ್ ೩೪, ವಿಜಯ್ ಶಂಕರ್ ೨೦; ಪ್ರವೀಣ್ ದುಬೆ ೧೯ಕ್ಕೆ ೪) ಫಲಿತಾಂಶ: ಕರ್ನಾಟಕಕ್ಕೆ ೭೮ ರನ್ ಜಯ ಅಂಕ: ಕರ್ನಾಟಕ-೪, ತಮಿಳುನಾಡು-೦

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More