ಕಾಮನ್ವೆಲ್ತ್ ಕ್ರೀಡಾಕೂಟ ತಪ್ಪಿಸಿಕೊಳ್ಳುವ ಭೀತಿಯಲ್ಲಿ ಸುಶೀಲ್ ಕುಮಾರ್

ಕುಸ್ತಿಪಟು ಸುಶೀಲ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಸಹ ಕುಸ್ತಿಪಟು ಪ್ರವೀಣ್ ರಾಣಾ ಜೊತೆಗಿನ ಜಟಾಪಟಿ ಅವರ ಕಾಮನ್ವೆಲ್ತ್ ಕ್ರೀಡಾಕೂಟದ ಪಾಲ್ಗೊಳ್ಳುವಿಕೆಗೆ ಮುಳುವಾಗುವ ಸಂಭವವಿದೆ. ಪೊಲೀಸರೇನಾದರೂ ಸುಶೀಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದರೆ ಅವರ ಪದಕದ ಕನಸು ಕಮರಲಿದೆ

ಇದೇ ಏಪ್ರಿಲ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್ ವೇಳೆ ನಡೆದ ಗಲಭೆಯು ಡಬಲ್ ಒಲಿಂಪಿಕ್ ಪದಕ ವಿಜೇತ ಸುಶೀಲ್‌ ಬದುಕಿನಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಆದರೀಗ ಇದೇ ಘಟನೆಯು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬೇಕೆಂಬ ಅವರ ಕನಸಿಗೆ ಕೊಳ್ಳಿಯಾಗುವ ಸಾಧ್ಯತೆ ಇದೆ. ಒಂದೊಮ್ಮೆ ಗಲಭೆಯ ಕುರಿತು ದೆಹಲಿ ಪೊಲೀಸರು ದೋಷಾರೋಪಣೆ ಸಲ್ಲಿಸಿದರೆ, ಸುಶೀಲ್ ಕುಮಾರ್ ಅವರ ಹೆಸರನ್ನು ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ (ಡಬ್ಲ್ಯೂಎಫ್‌ಐ) ಹಿಂಪಡೆಯುವ ಸಾಧ್ಯತೆ ಇದೆ.

ಡಬಲ್ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್, ಆಯ್ಕೆ ಟ್ರಯಲ್ಸ್‌ನ ೭೪ ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಪ್ರವೀಣ್ ರಾಣಾ ವಿರುದ್ಧ ೭-೩ ಅಂತರದಿಂದ ಗೆದ್ದಿದ್ದರು. ಇದಕ್ಕೂ ಮುಂಚಿನ ಅರ್ಹತಾ ಸ್ಪರ್ಧೆಯಲ್ಲಿ ಜಿತೇಂದರ್ ಕುಮಾರ್ ಅವರನ್ನು ೪-೩ರಿಂದ ಮಣಿಸಿದ್ದರು. ಆದರೆ, ರಾಣಾ ಜೊತೆಗಿನ ಕಾದಾಟವು ವಿವಾದವಾಗಿ ಮಾರ್ಪಟ್ಟಿತ್ತು. ಪ್ರೊ ಕುಸ್ತಿ ಲೀಗ್‌ನಲ್ಲಿ ಸುಶೀಲ್ ಎದುರು ಸ್ಪರ್ಧಿಸಲು ರಾಣಾ ನಿರ್ಧರಿಸಿದ್ದೇ ಈ ವಿವಾದಕ್ಕೆ ಕಾರಣವಾಗಿತ್ತು. ಆಯ್ಕೆ ಟ್ರಯಲ್ಸ್ ಸಂದರ್ಭದಲ್ಲಿ ಸುಶೀಲ್ ಬೆಂಬಲಿಗರು ರಾಣಾ ಮತ್ತು ಅವರ ಸೋದರ ನವೀನ್ ಮೇಲೆ ಹಲ್ಲೆ ನಡೆಸಿದ್ದರು. ತನ್ನ ಹಾಗೂ ತನ್ನ ಸೋದರನ ಮೇಲೆ ನಡೆದ ಹಲ್ಲೆಗೆ ಸುಶೀಲ್ ಪ್ರಚೋದನೆಯೇ ಕಾರಣ, ಅವರೇ ತನ್ನ ಬೆಂಬಲಿಗರಿಗೆ ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ರಾಣಾ ಡಬ್ಲ್ಯೂಎಫ್‌ಐಗೆ ದೂರು ಸಲ್ಲಿಸಿದ್ದರು. ಆದರೆ, ಘಟನೆ ಬಗ್ಗೆ ಸುಶೀಲ್ ತೀವ್ರ ಆಘಾತ ವ್ಯಕ್ತಪಡಿಸಿ ಅಮಾಯಕತೆ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : ಡಬಲ್ ಒಲಿಂಪಿಕ್ ಪದಕ ವಿಜೇತ ಪೈಲ್ವಾನ್ ಸುಶೀಲ್ ಸುತ್ತ ಬೆಂಬಿಡದ ವಿವಾದಗಳು!

ಅಂದಹಾಗೆ, ದೂರಿನ ಹಿನ್ನೆಲೆಯಲ್ಲಿ ಡಬ್ಲ್ಯೂಎಫ್‌ಐ ಸುಶೀಲ್‌ಗೆ ಶೋಕಾಸ್ ನೋಟಿಸ್‌ ಜಾರಿ ಮಾಡಿತ್ತು. ಇದಕ್ಕೆ ಒಂದೇ ಪುಟದಲ್ಲಿ ಸ್ಪಷ್ಟನೆ ನೀಡಿರುವ ಸುಶೀಲ್, “ಗಲಭೆಗೂ ನನಗೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿಯೋ ಅನುದ್ದೇಶಪೂರ್ವಕವಾಗಿಯೋ ನಾನು ಯಾವ ತಪ್ಪನ್ನೂ ಎಸಗಿಲ್ಲ. ಕುಸ್ತಿ ನನ್ನ ಬದುಕಾಗಿದ್ದು, ಕುಸ್ತಿ ಸಂಸ್ಥೆಯ ನೀತಿನಿಯಮಗಳನ್ನು ನಾನು ಗೌರವಿಸುತ್ತಿದ್ದು, ಖಂಡಿತ ಶಿಸ್ತು ಉಲ್ಲಂಘಿಸಿಲ್ಲ,’’ ಎಂದು ಉತ್ತರಿಸಿದ್ದಾರೆ ಎಂದು ‘ದಿ ಟೈಮ್ಸ್ ಆಫ್ ಇಂಡಿಯಾ’ ವರದಿ ಹೇಳಿದೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More