ಮಾರ್ಕ್ರಮ್, ಹಾಶೀಂ ಆಮ್ಲಾ ಅರ್ಧಶತಕ, ಹರಿಣಗಳ ಓಟಕ್ಕೆ ಕಡಿವಾಣ ಹಾಕಿದ ಅಶ್ವಿನ್

ಶತಕ ವಂಚಿತ ಏಡನ್ ಮಾರ್ಕ್ರಮ್ (೯೪), ಅಪಾಯಕಾರಿ ಹಾಶೀಂ ಆಮ್ಲಾ (೮೨) ಅವರ ಅರ್ಧಶತಕ ಆತಿಥೇಯರ ಕೈಹಿಡಿದರೆ, ದಿನದಾಟದ ಕೊನೇ ಅವಧಿಯಲ್ಲಿ ಪ್ರಮುಖ ಮೂರು ವಿಕೆಟ್ ಹೆಕ್ಕಿದ ಭಾರತ, ಸೆಂಚೂರಿಯನ್‌ನಲ್ಲಿ ಶನಿವಾರ (ಜ.೧೩) ಆರಂಭವಾದ ೨ನೇ ಟೆಸ್ಟ್‌ನಲ್ಲಿ ಪುಟಿದೆದ್ದು ನಿಂತಿತು

ಪ್ರವಾಸಿ ಭಾರತ ತಂಡದ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವ ಧಾವಂತದಲ್ಲಿರುವ ಹರಿಣಗಳು ಸರಿದಿಸೆಯಲ್ಲಿ ಹೆಜ್ಜೆ ಇಡಲು ಮಾರ್ಕ್ರಮ್ (೯೫: ೧೫೦ ಎಸೆತ, ೧೫ ಬೌಂಡರಿ) ಅಡಿಪಾಯ ಹಾಕಿಕೊಟ್ಟರು. ಒಂದು ಹಂತದಲ್ಲಿ ೩ ವಿಕೆಟ್‌ಗೆ ೨೪೬ ರನ್ ಗಳಿಸಿ ಬೃಹತ್ ಮೊತ್ತದತ್ತ ದಿಟ್ಟ ಹೆಜ್ಜೆ ಇಟ್ಟಿದ್ದ ದ. ಆಫ್ರಿಕಾ ವಿರುದ್ಧ ದಿನದಾಟದ ಕೊನೆ ಕೊನೆಗೆ ಮಿಂಚಿನ ಪ್ರದರ್ಶನ ನೀಡಿದ ಭಾರತ, ಆಮ್ಲಾ ಹಾಗೂ ವೆರ್ನಾನ್ ಫಿಲಾಂಡರ್ ಅವರುಗಳನ್ನು ರನೌಟ್ ಮಾಡುವುದರೊಂದಿಗೆ ಹಿಡಿತ ಕಳೆದುಕೊಂಡಿದ್ದ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸಿತು. ಈ ಅನಿರೀಕ್ಷಿತ ತಿರುವಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತೋರಿದ ಮಿಂಚಿನ ಆಟ ಮೈದಾನದಲ್ಲಿ ನೆರೆದಿದ್ದವರ ಮನಗೆದ್ದಿತು.

ಸೂಪರ್ ಸ್ಪೋರ್ಟ್ಸ್ ಪಾರ್ಕ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾರ್ಕ್ರಮ್ ಅವರನ್ನು ಶತಕದ ಅಂಚಿನಲ್ಲಿ ಕೆಡವಿದ್ದಲ್ಲದೆ, ಆರಂಭಿಕ ಡೀನ್ ಎಲ್ಗರ್ ಅಲ್ಲದೆ, ಆಕ್ರಮಣಕಾರಿ ಕ್ವಿಂಟಾನ್ ಡಿಕಾಕ್ (೦) ವಿಕೆಟ್ ಎಗರಿಸಿದ ಸ್ಪಿನ್ ಮಾಂತ್ರಿಕ ಅಶ್ವಿನ್, ಹರಿಣಗಳ ನಾಗಾಲೋಟಕ್ಕೆ ತಡೆಹಾಕಿದರು. ದಿನದಾಟದ ಅಂತ್ಯಕ್ಕೆ ೯೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೨೬೯ ರನ್ ಗಳಿಸಿದ ದ. ಆಫ್ರಿಕಾ ಪರ ನಾಯಕ ಫಾಫ್ ಡುಪ್ಲೆಸಿ ಹಾಗೂ ಕೇಶವ್ ಮಹಾರಾಜ್ ಕ್ರಮವಾಗಿ ೨೪ ಮತ್ತು ೧೦ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗಿಳಿದ ದ. ಆಫ್ರಿಕಾ, ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲೆರಡು ಓವರ್‌ಗಳಲ್ಲಿ ಯಾವುದೇ ರನ್ ದಾಖಲಿಸುವಲ್ಲಿ ಆರಂಭಿಕರಾದ ಡೀನ್ ಎಲ್ಗರ್ ಹಾಗೂ ಏಡನ್ ಮಾರ್ಕ್ರಮ್ ವಿಫಲವಾದರು. ಆದರೆ, ಆಟ ಸಾಗುತ್ತಾ ಸಾಗಿದಂತೆ ಈ ಜೋಡಿ ಲಯ ಕಂಡುಕೊಂಡಿತು. ಮನೋಜ್ಞ ಬ್ಯಾಟಿಂಗ್ ಮಾಡಿದ ಡೀನ್ ಎಲ್ಗರ್ ಹಾಗೂ ಮಾರ್ಕ್ರಮ್, ಭಾರತದ ಬೌಲರ್‌ಗಳನ್ನು ನಿರ್ಭಿಡೆಯಿಂದ ಎದುರಿಸಿ ನಿಧಾನಗತಿಯಲ್ಲಿ ರನ್ ಪೇರಿಸುತ್ತಾ, ಭೋಜನ ವಿರಾಮದವರೆಗೂ ಯಾವುದೇ ಅವಘಡ ನಡೆಯದಂತೆ ನೋಡಿಕೊಂಡರು.

ತಿರುವು ನೀಡಿದ ಅಶ್ವಿನ್

ಏಕಪಕ್ಷೀಯವಾಗಿ ಸಾಗಿದ್ದ ಪಂದ್ಯಕ್ಕೆ ಒಂದು ಹಂತದಲ್ಲಿ ತಿರುವು ಸಿಕ್ಕಿದ್ದು ಸ್ಪಿನ್ ಮಾಂತ್ರಿಕ ಆರ್ ಅಶ್ವಿನ್ ಕೈಚಳಕದಲ್ಲಿ ಡೀನ್ ಎಲ್ಗರ್ ವಿಕೆಟ್ ಪತನ ಕಂಡಾಗ. ನಿಧಾನಗತಿಯಲ್ಲಿ ಕ್ರೀಸ್‌ಗೆ ಕಚ್ಚಿಕೊಳ್ಳುತ್ತಿದ್ದ ಎಲ್ಗರ್, ಮುರಳಿ ವಿಜಯ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ೮೩ ಎಸೆತಗಳನ್ನು ಎದುರಿಸಿದ ಅವರು, ೪ ಆಕ‍‍ರ್ಷಕ ಬೌಂಡರಿ ಸೇರಿದ ೩೧ ರನ್ ಗಳಿಸಿ ಹೊರನಡೆದರು. ಇತ್ತ, ಎಲ್ಗರ್ ನಂತರದಲ್ಲಿ ಆಡಲಿಳಿದ ಹಾಶೀಂ ಆಮ್ಲಾ ಅವರನ್ನು ಕೂಡಿಕೊಂಡ ಮಾರ್ಕ್ರಮ್, ಆಕರ್ಷಕ ಬ್ಯಾಟಿಂಗ್ ಮುಂದುವರೆಸಿದರು. ಆದರೆ, ಚಹಾ ವಿರಾಮಕ್ಕೆ ಮುನ್ನ ಅಶ್ವಿನ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಪಾರ್ಥೀವ್ ಪಟೇಲ್‌ಗೆ ಕ್ಯಾಚಿತ್ತು ಮೈದಾನದಲ್ಲಿದ್ದ ಅಪ್ಪ-ಅಮ್ಮ ಹಾಗೂ ಗೆಳತಿಯ ಜತೆಗೆ ಒಂದರೆಕ್ಷಣ ಕ್ರೀಡಾಂಗಣವನ್ನೇ ಸ್ತಬ್ಧಗೊಳಿಸಿದರು.

ಆಮ್ಲಾ ಅರ್ಧಶತಕ

ಮೊದಲ ಟೆಸ್ಟ್ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ್ದ ದ. ಆಫ್ರಿಕಾದ ಪ್ರಮುಖ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ ತನ್ನ ಪ್ರಿಯ ತಾಣ ಸೆಂಚೂರಿಯನ್‌ನಲ್ಲಿ ಮತ್ತೊಮ್ಮೆ ಮಿಂಚಿದರು. ಆರಂಭದಲ್ಲಿನ ಎರಡು ಜೀವದಾನಗಳನ್ನು ಸದ್ಬಳಕೆ ಮಾಡಿಕೊಂಡ ಆಮ್ಲಾ, ಭಾರತದ ಬೌಲರ್‌ಗಳನ್ನು ಕಾಡಿ ಅರ್ಧಶತಕ ಪೂರೈಸುವಲ್ಲಿ ಯಶಸ್ವಿಯಾದರು. ಆದರೆ, ಎಬಿ ಡಿವಿಲಿಯರ್ಸ್ (೨೦) ಈ ಬಾರಿ ಎಡವಿದರು. ಇನ್ನಿಂಗ್ಸ್‌ನ ೬೩ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇಶಾಂತ್ ಶರ್ಮಾ ಅವರನ್ನು ಬೌಲ್ಡ್ ಮಾಡಿದರು. ೪೮ ಎಸೆತಗಳನ್ನು ಎದುರಿಸಿದ ಎಬಿ ಡಿವಿಲಿಯರ್ಸ್ ೨ ಬೌಂಡರಿ ಸೇರಿದ ಕೇವಲ ೨೦ ರನ್‌ಗಳಿಗೆ ನಿರುತ್ತರರಾದರು.

ಇದನ್ನೂ ಓದಿ : ಸಾಂಪ್ರದಾಯಿಕ ಟೆಸ್ಟ್‌ ಪಂದ್ಯಕ್ಕೆ ವೇಗದ ಸ್ಪರ್ಶ ನೀಡುವ ನಾಲ್ಕು ದಿನಗಳ ಆಟ

ರಾಹುಲ್‌ಗೆ ಸ್ಥಾನ

ಏತನ್ಮಧ್ಯೆ, ನಿರ್ಣಾಯಕವಾಗಿರುವ ಈ ಟೆಸ್ಟ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಭಾರತದ ಅಂತಿಮ ಇಲೆವೆನ್‌ನಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಯಿತು. ದೆಹಲಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಬದಲಿಗೆ ಕನ್ನಡಿಗ ಕೆ ಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದರೆ, ವೃದ್ಧಿಮಾನ್ ಸಾಹಾ ಬದಲು ಪಾರ್ಥೀವ್ ಪಟೇಲ್ ಹಾಗೂ ವೇಗಿ ಭುವನೇಶ್ವರ್ ಕುಮಾರ್ ಬದಲಿಗೆ ಇಶಾಂತ್ ಶರ್ಮಾಗೆ ಅವಕಾಶ ಕಲ್ಪಿಸಲಾಯಿತು. ಅಂದಹಾಗೆ, ಭಾರತ ತಂಡದ ಈ ಮೂರು ಪ್ರಮುಖ ಬದಲಾವಣೆ ಕೂಡ ಸುನೀಲ್ ಗವಾಸ್ಕರ್‌ರಂಥ ಮಾಜಿ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಯಿತು.

ಸಂಕ್ಷಿಪ್ತ ಸ್ಕೋರ್

ದ. ಆಫ್ರಿಕಾ: ೨೬೯/೬ (ಏಡನ್ ಮಾರ್ಕ್ರಮ್ ೯೪, ಹಾಶೀಂ ಆಮ್ಲಾ ೮೨; ಡುಪ್ಲೆಸಿ ೨೪*, ಕೇಶವ್ ಮಹಾರಾಜ್ ೧೦*; ಆರ್ ಅಶ್ವಿನ್ ೯೦ಕ್ಕೆ ೩).

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More