ಐಪಿಎಲ್ ಹರಾಜಿನ ಸಹಸ್ರಕ್ಕೂ ಹೆಚ್ಚು ಕ್ರಿಕೆಟಿಗರ ಪಟ್ಟಿಯಲ್ಲಿ ಜೋ ರೂಟ್

ಐಪಿಎಲ್‌ನಿಂದ ಜೋ ರೂಟ್ ದೂರ ಇರಬೇಕೆಂದು ಇಂಗ್ಲೆಂಡ್ ಕೋಚ್ ಟ್ರೆವರ್ ಬೇಲಿಸ್ ಸಲಹೆ ನೀಡಿದ್ದರು. ಹೀಗಿದ್ದಾಗ್ಯೂ ಇದೇ ೨೭, ೨೮ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹನ್ನೊಂದನೇ ಐಪಿಎಲ್ ಆಟಗಾರರ ಹರಾಜು ಪಟ್ಟಿಯಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಕೂಡ ಸೇರ್ಪಡೆಯಾಗಿದ್ದಾರೆ

ಈ ಋತುವಿನಲ್ಲಿ ಸಾಕಷ್ಟು ಅಂತಾರಾಷ್ಟ್ರೀಯ ಪಂದ್ಯಾವಳಿಗಳಿದ್ದು, ಜೋ ರೂಟ್ ಐಪಿಎಲ್‌ನಿಂದ ದೂರ ಉಳಿಯಬೇಕು ಎಂಬ ರಾಷ್ಟ್ರೀಯ ಕೋಚ್ ಟ್ರೆವರ್ ಬೇಲಿಸ್ ಅವರ ಸಲಹೆಯ ಮಧ್ಯೆಯೂ ಇಂಗ್ಲೆಂಡ್ ಕಪ್ತಾನ ಜೋ ರೂಟ್ ಐಪಿಎಲ್ ಆಟಗಾರರ ಹರಾಜಿನಲ್ಲಿ ಗುರುತಿಸಿಕೊಂಡಿದ್ದಾರೆ. ಹೆಚ್ಚೆಚ್ಚು ಪಂದ್ಯಗಳಲ್ಲಿ ಆಡುವುದರಿಂದ ವೃಥಾ ಆಟಗಾರರು ಬಳಲುತ್ತಾರೆ. ಇದು ಅವರ ಆಟದ ಮೇಲೆ ಗಂಭೀರ ಪ್ರಭಾವ ಬೀರುವ ಕಾರಣ ಜೋ ರೂಟ್ ಈ ಬಾರಿಯ ಐಪಿಎಲ್‌ನಲ್ಲಿ ಆಡದಿರುವುದು ಲೇಸು ಎಂದು ಟ್ರೆವರ್ ಬೇಲಿಸ್ ಸಲಹೆ ಇತ್ತಿದ್ದರು. ಆದರೆ, ಅವರ ಕರೆಗೆ ಓಗೊಡದ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಜೋ ರೂಟ್ ಐಪಿಎಲ್‌ನಲ್ಲಿ ಆಡಲು ನಿರ್ಧರಿಸಿದ್ದಾರೆ.

ಎಂಟು ಫ್ರಾಂಚೈಸಿಗಳು ಸಲ್ಲಿಸಿರುವ ಐಪಿಎಲ್ ಆಟಗಾರರ ಹರಾಜು ಪಟ್ಟಿಯನ್ನು ಶನಿವಾರ (ಜ.೧೩) ಪ್ರಕಟಿಸಿರುವ ಬಿಸಿಸಿಐ, ಈ ಬಾರಿಯ ಹರಾಜಿನಲ್ಲಿ ಒಟ್ಟು ೧೧೨೨ ಆಟಗಾರರಿದ್ದಾರೆ ಎಂದು ಹೇಳಿದೆ. ಈ ಪೈಕಿ ಭಾರತದ ೭೭೮ ಕ್ರಿಕೆಟಿಗರಿದ್ದಾರೆ. ೨೮೨ ಆಟಗಾರರು ವಿದೇಶಿಗರು. ಇಂಗ್ಲೆಂಡ್ (೨೬), ಆಸ್ಟ್ರೇಲಿಯಾ (೫೮), ನ್ಯೂಜಿಲೆಂಡ್ (೩೦), ದ. ಆಫ್ರಿಕಾ (೫೭), ಆಫ್ಘಾನಿಸ್ತಾನ (೧೩), ಶ್ರೀಲಂಕಾ (೩೯) ಹಾಗೂ ವಿಂಡೀಸ್‌ನ ೩೯ ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. ಏತನ್ಮಧ್ಯೆ, ಹರಾಜು ಪಟ್ಟಿಯಲ್ಲಿರುವವರ ಪೈಕಿ ೨೮೧ ಕ್ರಿಕೆಟಿಗರು ರಾಷ್ಟ್ರೀಯ ತಂಡದ ಪರ ಆಡಿದವರಾಗಿದ್ದರೆ, ೮೩೮ ಅನ್‌ಕ್ಯಾಪ್ಡ್ ಆಟಗಾರರು ಪಟ್ಟಿಯಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಕ್ರಿಕೆಟಿಗರು ಹರಾಜಿನಲ್ಲಿದ್ದಾರೆ.

ದಿಗ್ಗಜರ ಕಾದಾಟ

ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಎರಡು ಬಾರಿ ಟ್ರೋಫಿ ತಂದಿತ್ತ ಗೌತಮ್ ಗಂಭೀರ್, ಆಲ್ರೌಂಡರ್ ಯುವರಾಜ್ ಸಿಂಗ್, ಆಫ್‌ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ಹರ್ಭಜನ್ ಸಿಂಗ್, ಅಜಿಂಕ್ಯ ರಹಾನೆ, ಚೈನಾಮನ್ ಕುಲದೀಪ್ ಯಾದವ್ ಹಾಗೂ ಆರಂಭಿಕರಾದ ಕೆ ಎಲ್ ರಾಹುಲ್ ಹಾಗೂ ಮುರಳಿ ವಿಜಯ್ ಯಾವ ಫ್ರಾಂಚೈಸಿ ಪಾಲಾಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ : ಇನ್ಮುಂದೆ ಐಪಿಎಲ್ ಪಂದ್ಯಗಳು ಒಂದು ಗಂಟೆ ಮುಂಚೆ ಆರಂಭ ಸಾಧ್ಯತೆ

ಆರ್‌ಸಿಬಿಯಲ್ಲೇ ಗೇಲ್?

ವಿದೇಶಿಯರ ಪೈಕಿ ಕ್ರಿಸ್ ಗೇಲ್ ಹರಾಜು ಪ್ರಕ್ರಿಯೆಯ ಪ್ರಮುಖ ಕೌತುಕವೆನಿಸಿದ್ದಾರೆ. ಆಟಗಾರರ ರೀಟೇನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗೇಲ್ ಅವರನ್ನು ಕೈಬಿಟ್ಟಿದ್ದು, ರೈಟ್ ಟು ಮ್ಯಾಚ್ (ಆರ್‌ಟಿಎಂ) ನಿಯಮದಡಿ ಅವರನ್ನು ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಳ್ಳುತ್ತದೋ ಇಲ್ಲವೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಇನ್ನು, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್, ಕ್ರಿಸ್ ಲಿನ್, ಇಯಾನ್ ಮಾರ್ಗನ್, ಆಸ್ಟ್ರೇಲಿಯಾದ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಯಾವ ಫ್ರಾಂಚೈಸಿ ಮಾಲೀಕರ ಮನಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More