ಸಿಡ್ನಿ ಗೆದ್ದ ಟೆನಿಸ್ ತಾರೆ ಏಂಜಲಿಕ್ ಕೆರ್ಬರ್ ಗುರಿ ಈಗ ಮೆಲ್ಬೋರ್ನ್‌ನತ್ತ

ವಿಶ್ವದ ಮಾಜಿ ನಂ ೧ ಆಟಗಾರ್ತಿ, ಜರ್ಮನಿಯ ಏಂಜಲಿಕ್ ಕೆರ್ಬರ್ ಸದ್ಯದಲ್ಲೇ ಶುರುವಾಗುತ್ತಿರುವ ಆಸ್ಟ್ರೇಲಿಯನ್ ಓಪನ್‌ಗೆ ಭರ್ಜರಿ ಎಂಟ್ರಿ ಕೊಡಲು ಅಣಿಯಾಗಿದ್ದಾರೆ. ಶನಿವಾರವಷ್ಟೇ ಮುಕ್ತಾಯ ಕಂಡ ಸಿಡ್ನಿ ಇಂಟರ್‌ನ್ಯಾಷನಲ್‌ನಲ್ಲಿ ಗೆದ್ದ ಆಕೆ ಹೊಸ ಹುರುಪಿನಿಂದ ಹೂಂಕರಿಸುತ್ತಿದ್ದಾರೆ

ಎರಡು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ಏಂಜಲಿಕ್ ಕೆರ್ಬರ್, ಗ್ರಾಂಡ್‌ಸ್ಲಾಮ್ ವೃತ್ತಿಬದುಕಿನಲ್ಲಿ ಹ್ಯಾಟ್ರಿಕ್ ಹೊಡೆಯಲು ಭರ್ಜರಿ ತಯಾರಿಯನ್ನೇ ನಡೆಸಿದ್ದಾರೆ. ಶನಿವಾರವಷ್ಟೇ (ಜ.೧೩) ತೆರೆಬಿದ್ದ ಸಿಡ್ನಿ ಇಂಟರ್‌ನ್ಯಾಷನಲ್ ಟೆನಿಸ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವುದರೊಂದಿಗೆ ಸೋಮವಾರದಿಂದ (ಜ.೧೫) ಆರಂಭವಾಗಲಿರುವ ಆಸ್ಟ್ರೇಲಿಯಾ ಓಪನ್‌ಗೆ ಪೂರ್ಣ ಪ್ರಮಾಣದಲ್ಲಿ ಅಣಿಯಾಗಿರುವುದಾಗಿ ಸಾರಿದರು. ಮಹಿಳೆಯರ ಸಿಂಗಲ್ಸ್ ವಿಭಾಗದ ಅಂತಿಮ ಸುತ್ತಿನ ಸೆಣಸಾಟದಲ್ಲಿ ಕೆರ್ಬರ್, ಆಸ್ಟ್ರೇಲಿಯಾದ ಯುವ ಆಟಗಾರ್ತಿ ಆ್ಯಶ್ಲೆ ಬ್ಯಾರ್ಟಿ ವಿರುದ್ಧ ೬-೪, ೬-೪ ಎರಡು ನೇರ ಸೆಟ್‌ಗಳ ಗೆಲುವು ಪಡೆದರು.

ಕಳೆದ ಋತುವಿನಲ್ಲಿ ಸಂಪೂರ್ಣ ನಿರಾಸೆ ಅನುಭವಿಸಿದ ಕೆರ್ಬರ್, ಪ್ರಸಕ್ತ ವಿಶ್ವ ಮಹಿಳಾ ಟೆನಿಸ್ ಶ್ರೇಯಾಂಕದಲ್ಲಿ ೨೨ನೇ ಸ್ಥಾನದಲ್ಲಿದ್ದು, ಸಿಡ್ನಿ ಗೆಲುವು ಆಕೆಯ ಶ್ರೇಯಾಂಕದಲ್ಲಿ ಮುಖ್ಯ ಪಾತ್ರ ವಹಿಸುವ ಸಂಭವವಿದೆ. ಅಂದಹಾಗೆ, ಈ ಋತುವಿನಲ್ಲಿ ಭರ್ಜರಿ ಆರಂಭ ಕಂಡಿರುವ ಕೆರ್ಬರ್, ಆಡಿದ ಒಂಬತ್ತು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದ್ದಾರೆ. ೨೦೧೬ರಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕೆರ್ಬರ್, ಆಸ್ಟ್ರೇಲಿಯನ್ ಹಾಗೂ ಯುಎಸ್ ಓಪನ್ ಗೆದ್ದು ಬೀಗಿದ್ದರು. ೨೯ರ ಹರೆಯದ ಎಡಗೈ ಆಟಗಾರ್ತಿ ಕಳೆದ ಏಪ್ರಿಲ್ ನಂತರ ಮೊದಲ ಬಾರಿಗೆ ಫೈನಲ್‌ ಪಂದ್ಯದಲ್ಲಿ ಸೆಣಸಿದ್ದು ಗಮನಾರ್ಹ.

ಮತ್ತೊಮ್ಮೆ ಅಸಾಧಾರಣ ಟೆನಿಸ್ ಆಡುತ್ತಿರುವುದು ಋತುವಿನಾದ್ಯಂತ ನಡೆಯುವ ಟೂರ್ನಿಗೆ ಹೊಸ ಹುಮ್ಮಸ್ಸು ತಂದಿದೆ. ನನ್ನ ಮೇಲೆ ನಂಬಿಕೆ ಇಟ್ಟ ನನ್ನ ತಂಡಕ್ಕೆ ನಾನು ಧನ್ಯವಾದ ಅರ್ಪಿಸುತ್ತೇನೆ.
ಏಂಜಲಿಕ್ ಕೆರ್ಬರ್, ವಿಶ್ವದ ಮಾಜಿ ನಂ ೧ ಆಟಗಾರ್ತಿ
ಇದನ್ನೂ ಓದಿ : ವಿಮಾನ ನಿಲ್ದಾಣದ ರನ್‌ ವೇನಲ್ಲಿ ಕುಣಿದು ಕುಪ್ಪಳಿಸಿದ ಕೃಷ್ಣಸುಂದರಿ ಸೆರೆನಾ! 

ಅತ್ಯಂತ ಕಠಿಣಕಾರಿಯಾಗಿದ್ದ ಸರ್ವಿಸ್‌ ಗೇಮ್‌ನ ನಂತರ ಬ್ಯಾರ್ಟಿ ಎಸಗಿದ ಡಬಲ್ ಫಾಲ್ಟ್, ಜರ್ಮನ್ ಆಟಗಾರ್ತಿಯ ೩-೨ರ ಮುನ್ನಡೆಗೆ ಕಾರಣವಾಯಿತು. ಆದಾಗ್ಯೂ, ಆರಂಭಿಕ ಸೆಟ್ ಅನ್ನು ಕೆರ್ಬರ್ ತುಸು ತ್ರಾಸದಾಯಕವಾಗಿಯೇ ನಿರ್ವಹಿಸಿದರು. ಇನ್ನು ಎರಡನೇ ಸೆಟ್‌ನಲ್ಲಿಯೂ ಕೆರ್ಬರ್, ಸ್ಥಳೀಯ ಆಟಗಾರ್ತಿಯನ್ನು ಹಣಿದು ೪-೩ರ ಮುನ್ನಡೆ ಸಾಧಿಸಿದರು. ಶಕ್ತಿಶಾಲಿಯಾದ ಕೆರ್ಬರ್ ಫೋರ್‌ಹ್ಯಾಂಡ್ ಶಾಟ್ ಅನ್ನು ಹಿಂದಿರುಗಿಸುವ ಯತ್ನದಲ್ಲಿ ಬ್ಯಾರ್ಟಿ ಚೆಂಡನ್ನು ನೆಟ್‌ಗೆ ಬಾರಿಸುತ್ತಿದ್ದಂತೆ ಕೆರ್ಬರ್ ವೃತ್ತಿಬದುಕಿನ ೧೧ನೇ ಪ್ರಶಸ್ತಿಗೆ ಸುಗಮವಾಯಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More