ಕಿರಿಯರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್; ಪಾಕ್ ಸವಾಲಿಗೆ ಸಜ್ಜಾದ ಪೃಥ್ವಿ ಪಡೆ

ಐಸಿಸಿ ಕಿರಿಯರ ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ಫೈನಲ್ ಮೇಲೆ ಕಣ್ಣಿಟ್ಟಿದ್ದು, ಮಂಗಳವಾರ (ಜ.೩೦) ನಡೆಯಲಿರುವ ಉಪಾಂತ್ಯದಲ್ಲಿ ಭಾರತ ಫೈನಲ್ ತಲುಪುವ ವಿಶ್ವಾಸದಲ್ಲಿದೆ

ಗುಂಪು ಹಂತದಲ್ಲಿ ಹಾಗೂ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಆಲ್ರೌಂಡ್ ಪ್ರದರ್ಶನದೊಂದಿಗೆ ಪ್ರತಿಷ್ಠಿತ ಐಸಿಸಿ ವಿಶ್ವ ಕಿರಿಯರ ಕ್ರಿಕೆಟ್ ಪಂದ್ಯಾವಳಿಯ ನಾಲ್ಕರ ಘಟ್ಟಕ್ಕೆ ಕಾಲಿಟ್ಟಿರುವ ಪೃಥ್ವಿ ಶಾ ಸಾರಥ್ಯದ ಭಾರತ ತಂಡ, ಇದೀಗ ಪಾಕಿಸ್ತಾನ ವಿರುದ್ಧದ ಹಣಾಹಣಿಗೆ ಅಣಿಯಾಗಿದೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಈ ಪಂದ್ಯವು ವಿಶ್ವ ಕ್ರಿಕೆಟಿಗರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಏತನ್ಮಧ್ಯೆ, ಈ ಪಂದ್ಯದಲ್ಲಿ ಸೋಲನುಭವಿಸಿದವರು ತೃತೀಯ ಸ್ಥಾನಕ್ಕಾಗಿ ಆಫ್ಘಾನಿಸ್ತಾನದ ವಿರುದ್ಧ ಕಾದಾಡಲಿದ್ದಾರೆ.

ತನ್ನ ಆರಂಭಿಕ ಹಂತದ ಪಂದ್ಯದಲ್ಲಿ ಪಾಕಿಸ್ತಾನವು ಐದು ವಿಕೆಟ್‌ಗಳಿಂದ ಆಫ್ಘಾನಿಸ್ತಾನ ವಿರುದ್ಧ ಸೋಲಪ್ಪಿತ್ತು. ಆದರೆ, ಬಳಿಕ ಐರ್ಲೆಂಡ್ ವಿರುದ್ಧ ೯ ವಿಕೆಟ್‌ಗಳಿಂದ ಗೆಲುವು ಪಡೆದರೆ, ಶ್ರೀಲಂಕಾವನ್ನು ಮೂರು ವಿಕೆಟ್‌ಗಳಿಂದ ಹಣಿಯುವ ಮುಖೇನ ಪಂದ್ಯಾವಳಿಯಲ್ಲಿ ಪುಟಿದೆದ್ದು ನಿಂತಿದೆ. ಇನ್ನು, ಕ್ವಾರ್ಟರ್‌ಫೈನಲ್ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾವನ್ನು ಮೂರು ವಿಕೆಟ್‌ಗಳಿಂದ ಮಣಿಸಿ ಸೆಮಿಫೈನಲ್ ತಲುಪಿದೆ. ಇತ್ತ, ಭಾರತ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ೧೦೦ ರನ್‌ಗಳಿಂದ ಮಣಿಸಿದರೆ, ನಂತರದಲ್ಲಿ ಪಪುವಾ ನ್ಯೂಗಿನಿ ವಿರುದ್ಧ ೧೦ ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆಯನ್ನು ೧೦ ವಿಕೆಟ್‌ಗಳಿಂದ ಹಣಿದ ಭಾರತ, ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ೧೩೧ ರನ್‌ಗಳಿಂದ ಮಣಿಸಿತ್ತು.

ಇದನ್ನೂ ಓದಿ : ಕಿರಿಯರ ವಿಶ್ವಕಪ್: ಅಜೇಯ ಭಾರತಕ್ಕೆ ಸೆಮಿಫೈನಲ್‌ನಲ್ಲಿ ಪಾಕ್ ಸವಾಲು

ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಅದ್ವಿತೀಯ ಪ್ರದರ್ಶನ ನೀಡುತ್ತ ಬಂದಿರುವ ಭಾರತ ತಂಡ, ಪಾಕಿಸ್ತಾನವನ್ನು ಮಣಿಸುವ ಫೇವರಿಟ್ ಎನಿಸಿದೆ. ಪೃಥ್ವಿ ಶಾ, ಶುಭಂ ಗಿಲ್ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಧಾರಸ್ತಂಭದಂತಿದ್ದರೆ, ಮಧ್ಯಮ ಕ್ರಮಾಂಕವೂ ಸಶಕ್ತ ಬ್ಯಾಟಿಂಗ್ ಶಕ್ತಿಯಿಂದ ಕೂಡಿದೆ. ಇತ್ತ, ಬೌಲಿಂಗ್ ವಿಭಾಗದಲ್ಲಿ ಕಮಲೇಶ್ ನಾಗರಕೋಟಿ, ಶಿವಂ ಮಾವಿ ಪರಿಣಾಮಕಾರಿ ಬೌಲಿಂಗ್ ನಡೆಸುತ್ತಿರುವುದು ಕೂಡ ಭಾರತವನ್ನು ಫೇವರಿಟ್ ಸ್ಥಾನದಲ್ಲಿರಿಸಿದೆ.

ಸಂಭವನೀಯರ ಪಟ್ಟಿ

ಭಾರತ: ಪೃಥ್ವಿ ಶಾ (ನಾಯಕ), ಮಂಜೋತ್ ಕಲ್ರಾ, ಶುಭಂ ಗಿಲ್, ಹಾರ್ವಿಕ್ ದೇಸಾಯಿ (ವಿಕೆಟ್‌ ಕೀಪರ್), ರಿಯಾನ್ ಪರಾಗ್, ಕಮಲೇಶ್ ನಾಗರಕೋಟಿ, ಅಂಕುಲ್ ಸುಧಾಕರ್ ರಾಯ್, ಶಿವಂ ಮಾವಿ, ಶಿವ ಸಿಂಗ್, ಹಿಮಾಂಶು ರಾಣ ಹಾಗೂ ಆದಿತ್ಯ ಥ್ಯಾಕರೆ

ಪಾಕಿಸ್ತಾನ: ಮೊಹಮದ್ ಜಯೀದ್ ಆಲಂ, ರೊಹೈಲ್ ನಾಜಿರ್ (ವಿಕೆಟ್‌ ಕೀಪರ್), ಅಮ್ಮದ್ ಆಲಂ, ಹಸನ್ ಖಾನ್ (ನಾಯಕ), ಮೊಹಮದ್ ತಾಹ, ಸಾದ್ ಖಾನ್, ಮುಹಮ್ಮದ್ ಮುಸಾ, ಶಹೀನ್ ಅಫ್ರಿದಿ, ಸುಲೇಮಾನ್ ಶಫ್ಕತ್, ಹರ್ಷದ್ ಇಕ್ಬಾಲ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More