ಕಿರಿಯರ ವಿಶ್ವಕಪ್: ಕೈಫ್, ಕೊಹ್ಲಿ, ಚಾಂದ್ ನಂತರ ಇದೀಗ ಪೃಥ್ವಿ ಶಾ ಸರದಿ

ಹತ್ತೊಂಬತ್ತು ವರ್ಷದೊಳಗಿನವರ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾಗಿದೆ. ಮೊಹಮದ್ ಕೈಫ್ (೨೦೦೦), ವಿರಾಟ್ ಕೊಹ್ಲಿ (೨೦೦೮) ಹಾಗೂ ಉನ್ಮುಕ್ತ್ ಚಾಂದ್ (೨೦೧೨) ಬಳಿಕ ಇದೀಗ ಪೃಥ್ವಿ ಶಾ ಭಾರತಕ್ಕೆ ನಾಲ್ಕನೇ ಕಿರಿಯರ ವಿಶ್ವಕಪ್ ತಂದಿತ್ತರು

ಹಿರಿಯರ ಐಸಿಸಿ ವಿಶ್ವಕಪ್ ಪಂದ್ಯಾವಳಿಗಿಂತಲೂ ಕಿರಿಯರ ವಿಭಾಗದಲ್ಲಿ ಭಾರತ ಯಶಸ್ವಿ ಪ್ರದರ್ಶನ ನೀಡಿದೆ. ೧೯೮೩ರಲ್ಲಿ ಮೊದಲಿಗೆ ಕಪಿಲ್ ದೇವ್ ಭಾರತಕ್ಕೆ ವಿಶ್ವ ಕ್ರಿಕೆಟ್ ಗರಿಮೆ ತಂದಿತ್ತರೆ, ಆನಂತರದಲ್ಲಿ ಭಾರತ ಮತ್ತದೇ ಐತಿಹಾಸಿಕ ಸಾಧನೆ ಮಾಡಲು ಬರೋಬ್ಬರಿ ೨೮ ವರ್ಷ ತೆಗೆದುಕೊಂಡಿತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ೨೦೧೧ರ ಫೈನಲ್‌ನಲ್ಲಿ ಶ್ರೀಲಂಕಾವನ್ನು ಹಣಿದ ಎಂ ಎಸ್ ಧೋನಿ ಸಾರಥ್ಯದ ಟೀಂ ಇಂಡಿಯಾ, ಸಿಂಹಳೀಯರನ್ನು ೪ ವಿಕೆಟ್‌ಗಳಿಂದ ಮಣಿಸಿ ಎರಡನೇ ಬಾರಿಗೆ ಐಸಿಸಿ ವಿಶ್ವಕಪ್ ಗೆದ್ದು ಬೀಗಿತು. ಇದೀಗ ಯುವಭಾರತ, ದಾಖಲೆಯ ನಾಲ್ಕನೇ ಬಾರಿಗೆ ಕಪ್ ಗೆದ್ದು ಮಿಂಚು ಹರಿಸಿದೆ. ಇದಕ್ಕೂ ಮುನ್ನ ಮೂರು ವಿಜಯೋತ್ಸವಗಳನ್ನು ಆಚರಿಸಿಕೊಂಡ ಟೀಂ ಇಂಡಿಯಾದ ಹಿನ್ನೋಟ ಇಲ್ಲಿದೆ.

ಮೊದಲ ನಗು: ಮೊಹಮದ್ ಕೈಫ್ ನಾಯಕತ್ವದ ಯುವಭಾರತ, ೧೯೮೮ರಲ್ಲಿ ಶುರುವಾದ ಕಿರಿಯರ ವಿಶ್ವಕಪ್‌ನಲ್ಲಿ ಮೊದಲ ನಗು ಕಂಡದ್ದು ಹದಿನೆಂಟು ವರ್ಷಗಳ ಹಿಂದೆ. ಕೊಲಂಬೋದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಮೊಹಮದ್ ಕೈಫ್ ಸಾರಥ್ಯದ ಯುವಭಾರತ, ಶ್ರೀಲಂಕಾವನ್ನು ೬ ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು. ಅಂದಹಾಗೆ, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಭಾರತ ೧೭೦ ರನ್‌ಗಳಿಂದ ಹಣಿದಿತ್ತು. ಇನ್ನು, ಈ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಆಲ್ರೌಂಡ್ ಪ್ರದರ್ಶನ ನೀಡಿದ್ದರು. ಎಂಟು ಪಂದ್ಯಗಳಲ್ಲಿ ೨೦೩ ರನ್ ಗಳಿಸಿದ್ದ ಅವರು, ೧೨ ವಿಕೆಟ್‌ಗಳನ್ನೂ ಗಳಿಸಿ ಟೂರ್ನಿಶ್ರೇಷ್ಠ ಎನಿಸಿದ್ದರು. ಆಸಕ್ತಿದಾಯಕ ಸಂಗತಿ ಎಂದರೆ, ೨೦೧೧ರ ಹಿರಿಯರ ವಿಶ್ವಕಪ್‌ನಲ್ಲಿಯೂ ಯುವಿ ಆಲ್ರೌಂಡ್ ಪ್ರದರ್ಶನದಿಂದ ಟೂರ್ನಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

ಕೊಹ್ಲಿ ಪಡೆಯಿಂದ ಇತಿಹಾಸ: ಬೆಳೆಯುವ ಪೈರು ಮೊಳಕೆಯಲ್ಲೇ ಎಂಬಂತೆ, ವಿರಾಟ್ ಕೊಹ್ಲಿ ತಾನೊಬ್ಬ ಅಪ್ರತಿಮ ಆಟಗಾರ ಎಂಬುದನ್ನು ೨೦೦೮ರ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಕಪ್ ಗೆದ್ದುಕೊಡುವುದರ ಮೂಲಕ ನಿರೂಪಿಸಿದ್ದರು. ಈ ಬಾರಿ ಡೇವ್ ವಾಟ್‌ಮೋರ್ ಮಾರ್ಗದರ್ಶನದಲ್ಲಿ ಯುವಭಾರತ, ಎರಡನೇ ಬಾರಿಗೆ ವಿಶ್ವಟ್ರೋಫಿಗೆ ಮುತ್ತಿಕ್ಕಿತ್ತು. ಮಲೇಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ವೇಯ್ನ್ ಪಾರ್ನೆಲ್ ಸಾರಥ್ಯದ ದ.ಭಾರತ ತಂಡವನ್ನು ಡಕ್‌ವರ್ಥ್ ಲೂಯಿಸ್ ನಿಯಮದಡಿ ೧೨ ರನ್‌ಗಳಿಂದ ಮಣಿಸಿ ಕಪ್ ಗೆದ್ದು ಸಂಭ್ರಮಿಸಿತು.

ಇದನ್ನೂ ಓದಿ : ದಾಖಲೆಯ ನಾಲ್ಕನೇ ಕ್ರಿಕೆಟ್ ವಿಶ್ವಕಪ್ ಜಯದ ಕನಸಲ್ಲಿ ಯುವ ಟೀಂ ಇಂಡಿಯಾ

ಉನ್ಮುಕ್ತ್ ಬಳಗದ ಜಯಭೇರಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ಅಜೇಯ ೧೧೧ ರನ್ ಗಳಿಸಿದ ಉನ್ಮುಕ್ತ್ ಚಾಂದ್, ಭಾರತಕ್ಕೆ ಕಿರಿಯರ ವಿಶ್ವಕಪ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಟ್ರೋಫಿ ತಂದಿತ್ತರು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ, ವಿಲಿಯಮ್ ಬೊಸಿಸ್ಟೊ (ಅಜೇಯ ೮೭) ಅವರ ಅರ್ಧಶತಕದೊಂದಿಗೆ ೨೨೫ ರನ್‌ಗಳಿಗೆ ಆಲೌಟ್ ಆಯಿತು. ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತ, ೪೭.೪ ಓವರ್‌ಗಳಲ್ಲೇ ಜಯದ ನಗೆಬೀರಿತು. ಸೊಗಸಾದ ಬ್ಯಾಟಿಂಗ್ ನಡೆಸಿದ ಉನ್ಮುಕ್ತ್ ಚಾಂದ್, ಕಾಂಗರೂಗಳ ಪಾಲಿಗೆ ದುಃಸ್ವಪ್ನವಾದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More