ದಾಖಲೆಯ ನಾಲ್ಕನೇ ಕ್ರಿಕೆಟ್ ವಿಶ್ವಕಪ್ ಜಯದ ಕನಸಲ್ಲಿ ಯುವ ಟೀಂ ಇಂಡಿಯಾ

೧೯ ವರ್ಷದೊಳಗಿನ ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಜೇಯ ತಂಡವಾಗಿ ಫೈನಲ್ ತಲುಪಿರುವ ಭಾರತ, ಚಾರಿತ್ರಿಕ ಸಾಧನೆಯ ಹೊಸ್ತಿಲಲ್ಲಿದೆ. ಶನಿವಾರ (ಫೆ.೩) ನಡೆಯಲಿರುವ ಅಂತಿಮ ಪಂದ್ಯದಲ್ಲಿ ಅದಕ್ಕೆ ಆಸೀಸ್ ಸವಾಲು ಎದುರಾಗಿದ್ದು, ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಪೃಥ್ವಿ ಪಡೆ ಪಣ ತೊಟ್ಟಿದೆ

ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಮರ್ಥ ತರಬೇತಿಯಲ್ಲಿ ಹುರಿಗೊಂಡು, ಅತ್ಯದ್ಭುತ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತಿಗೆ ಬಂದುನಿಂತಿರುವ ಭಾರತದ ಕಿರಿಯರ ಕ್ರಿಕೆಟ್ ತಂಡ, ಇದೀಗ ಚಾರಿತ್ರಿಕ ಸಾಧನೆಯ ಕನಸಿನಲ್ಲಿದೆ. ನ್ಯೂಜಿಲೆಂಡ್‌ನ ಮೌಂಟ್ ಮೌಂಗನುಯಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿರುವ ಅಂತಿಮ ಸುತ್ತಿನ ಸೆಣಸಾಟದಲ್ಲಿ ಯುವ ಭಾರತ, ಆಸ್ಟ್ರೇಲಿಯಾ ತಂಡವನ್ನು ಎದುರುಗೊಳ್ಳಲಿದೆ. ಮೇಲ್ನೋಟಕ್ಕೆ ಭಾರತ ಫೇವರಿಟ್ ಎನಿಸಿದರೂ, ಆರಂಭಿಕ ಪಂದ್ಯದಲ್ಲಿನ ಸೋಲಿನ ಬಳಿಕ ಪುಟಿದೆದ್ದು ನಿಂತಿರುವ ಕಾಂಗರೂ ಪಡೆಯು ಪೃಥ್ವಿ ಶಾ ಪಡೆಗೆ ಪ್ರಬಲ ಪೈಪೋಟಿ ಒಡ್ಡಲು ಕಾರ್ಯತಂತ್ರ ಹೆಣೆದಿದೆ.

ಇದೇ ಕಾಂಗರೂ ಪಡೆಯನ್ನು ೧೦೦ ರನ್‌ಗಳಿಂದ ಹಣಿಯುವುದರೊಂದಿಗೆ ಈ ಬಾರಿಯ ಕಿರಿಯರ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದ್ದ ಭಾರತ, ಮತ್ತೊಮ್ಮೆ ಆಸ್ಟ್ರೇಲಿಯಾ ವಿರುದ್ಧವೇ ಸೆಣಸಬೇಕಾಗಿದೆ. ಅಜೇಯ ತಂಡವಾಗಿ ಫೈನಲ್ ತಲುಪಿರುವ ಪೃಥ್ವಿ ಶಾ ಬಳಗಕ್ಕೆ ಕಾಂಗರೂಗಳು ಈ ಬಾರಿ ಪ್ರಬಲ ಪೈಪೋಟಿ ಒಡ್ಡುವುದಂತೂ ಖಾತ್ರಿಯಾಗಿದೆ. ಭಾರತದ ವಿರುದ್ಧ ಸೋಲನುಭವಿಸಿದ ನಂತರದಲ್ಲಿ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿರುವ ಆಸ್ಟ್ರೇಲಿಯಾ, ಭಾರತದ ವಿರುದ್ಧ ಅನುಭವಿಸಿದ ಸೋಲಿಗೆ ಸೂಕ್ತ ಉತ್ತರ ನೀಡಲು ತಹತಹಿಸುತ್ತಿದೆ.

ಆರನೇ ಫೈನಲ್: ಐಸಿಸಿ ಕಿರಿಯರ ವಿಶ್ವಕಪ್ ಚರಿತ್ರೆಯಲ್ಲಿ ಆರನೇ ಬಾರಿಗೆ ಫೈನಲ್ ತಲುಪಿದ ಏಕೈಕ ತಂಡ ಎನಿಸಿಕೊಂಡಿರುವ ಟೀಂ ಇಂಡಿಯಾ, ನಾಲ್ಕನೇ ಕಪ್ ಮೇಲೆ ಕಣ್ಣಿಟ್ಟಿದೆ. ಭಾರತದಂತೆಯೇ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸೀಸ್ ಕಿರಿಯರ ತಂಡ ಕೂಡ ನಾಲ್ಕನೇ ಟ್ರೋಫಿ ಗೆಲ್ಲುವ ತುಡಿತದಲ್ಲಿದೆ. ನಾಲ್ಕು ಐಸಿಸಿ ಕಿರಿಯರ ವಿಶ್ವಕಪ್ ಗೆದ್ದ ಮೊಟ್ಟಮೊದಲ ತಂಡವೆನಿಸಿಕೊಳ್ಳಲು ಇತ್ತಂಡಗಳೂ ಧಾವಂತದಿಂದ ಕೂಡಿದ್ದು, ಯಾರು ಹೊಸ ಚರಿತ್ರೆ ಬರೆಯಲಿದ್ದಾರೆ ಎಂಬುದು ಕೌತುಕ ಕೆರಳಿಸಿದೆ.

ತಂಡಕ್ಕೆ ಅಗತ್ಯವೆಂದಾದಾಗ ನಮ್ಮ ವೇಗದ ಬೌಲರ್‌ಗಳು ಶ್ರೇಷ್ಠವಾದದ್ದನ್ನೇ ನೀಡಿದ್ದಾರೆ. ಅವರ ನಂತರ ಬ್ಯಾಟಿಂಗ್‌ನಲ್ಲಿ ನಮ್ಮ ಬಲವನ್ನು ತೋರಿದ್ದೇವೆ. ಮತ್ತೊಂದು ಆಲ್ರೌಂಡ್ ಆಟಕ್ಕೆ ಸಜ್ಜಾಗಿದ್ದೇವೆ.
ಪೃಥ್ವಿ ಶಾ, ಭಾರತ ತಂಡದ ನಾಯಕ

ಆಕ್ರಮಣಕಾರಿ ಆಟ: ಪೃಥ್ವಿ ಶಾ ಸಾರಥ್ಯದ ಭಾರತ ತಂಡ, ಇದುವರೆಗಿನ ಪಂದ್ಯಗಳಲ್ಲಿ ಆಕ್ರಮಣಕಾರಿ ಆಟದೊಂದಿಗೆ ವಿಜೃಂಭಿಸಿದೆ. ಮುಖ್ಯವಾಗಿ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗಗಳಲ್ಲಿಯೂ ಮನೋಜ್ಞ ಪ್ರದರ್ಶನ ನೀಡುತ್ತ ಬಂದಿರುವ ಯುವ ಭಾರತ, ಸೆಮಿಫೈನಲ್‌ನಲ್ಲಂತೂ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನವನ್ನು ೨೦೩ ರನ್‌ಗಳಿಂದ ಮಣಿಸಿತ್ತು.

ಪೃಥ್ವಿ ಶಾ ಹಾಗೂ ಮಂಜೋತ್ ಕಲ್ರಾ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಡುತ್ತಿದ್ದರೆ, ಮೂರನೇ ಕ್ರಮಾಂಕದಲ್ಲಿ ಶುಭ್‌ಮನ್ ಗಿಲ್ (ಐದು ಪಂದ್ಯಗಳಿಂದ ೩೨೮ ರನ್) ಅಂತೂ ಸ್ಥಿರ ಪ್ರದರ್ಶನದೊಂದಿಗೆ ಮಿಂಚು ಹರಿಸುತ್ತಿರುವುದು ತಂಡದ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿದೆ. ಇತ್ತ, ಶಿವಂ ಮಾವಿ ಹಾಗೂ ಕಮಲೇಶ್ ನಾಗರಕೋಟಿ ಗಂಟೆಗೆ ೧೪೦ ಕಿಮೀ ವೇಗವನ್ನೂ ಮೀರಿ ಭೋರ್ಗರೆಯುತ್ತಿದ್ದರೆ, ಆಲ್ರೌಂಡರ್ ಅಭಿಷೇಕ್ ಶರ್ಮಾ ಹಾಗೂ ಸ್ಪಿನ್ನರ್ ಅಂಕುಲ್ ರಾಯ್ ಪ್ರತಿಸ್ಪರ್ಧಿ ತಂಡಗಳ ಪಾಲಿಗೆ ಕಂಟಕರಾಗಿದ್ದು, ಭಾರತದ ಗೆಲುವಿನಾಸೆ ಗರಿಗೆದರಿದೆ.

ಕಾಂಗರೂ ಕಾತರ: ಇನ್ನು, ಐದನೇ ಬಾರಿಗೆ ಫೈನಲ್ ತಲುಪಿರುವ ಆಸ್ಟ್ರೇಲಿಯಾ, ಮೊದಲ ಪಂದ್ಯದ ಸೋಲಿನ ಬಗ್ಗೆ ಚಿಂತಿಸದೆ ಫೈನಲ್‌ನಲ್ಲಿ ಭಾರತವನ್ನು ಮಣಿಸಿ ನಾಲ್ಕನೇ ಕಪ್ ಎತ್ತಿಹಿಡಿಯಲು ಕಾತರಿಸುತ್ತಿದೆ. “ನಾವು ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸದೆ ಇರಬಹುದು. ಆದರೆ, ನಾವು ಆಸ್ಟ್ರೇಲಿಯನ್ನರು. ನಾವು ಸಂಘಟಿತವಾಗಿ ಆಡಿದ್ದೇ ಆದಲ್ಲಿ, ಯಾವುದೇ ತಂಡವನ್ನು ಮಣಿಸುವಷ್ಟು ಶಕ್ತರು,’’ ಎಂದಿರುವ ಆಸೀಸ್ ನಾಯಕ ಜೇಸನ್ ಸಂಘಾ, ಭಾರತಕ್ಕೆ ತಮ್ಮನ್ನು ಹಗುರವಾಗಿ ಪರಿಗಣಿಸದಂತೆ ಎಚ್ಚರಿಸಿದ್ದಾರೆ.

ನೂರು ರನ್‌ಗಳ ಅಂತರದ ಸೋಲಿನ ಬಗ್ಗೆ ನಾನು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಏಕೆಂದರೆ, ಗ್ರಾಂಡ್ ಫೈನಲ್ ಯಾವಾಗಲೂ ವಿಭಿನ್ನವಾಗಿರುವಂತೆ ಭಿನ್ನ ಪಿಚ್, ಭಿನ್ನ ಒತ್ತಡದ್ದು ಕೂಡ. ಮಾಡು ಇಲ್ಲವೇ ಮಡಿ ಕಾದಾಟಕ್ಕೆ ಅಣಿಯಾಗಿದ್ದೇವೆ.
ಜೇಸನ್ ಸಂಘಾ, ಆಸ್ಟ್ರೇಲಿಯಾ ತಂಡದ ನಾಯಕ
ಇದನ್ನೂ ಓದಿ : ಕಿರಿಯರ ಕ್ರಿಕೆಟ್ ವಿಶ್ವಕಪ್ | ಪಾಕ್ ಮಣಿಸಿ ಫೈನಲ್‌ಗೆ ಲಗ್ಗೆ ಹಾಕಿದ ಭಾರತ

ತಂಡಗಳು ಇಂತಿವೆ

ಭಾರತ-೧೯: ಪೃಥ್ವಿ ಶಾ (ನಾಯಕ), ಶುಭ್‌ಮನ್ ಗಿಲ್, ಮಂಜೋತ್ ಕಲ್ರಾ, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಹಾರ್ವಿಕ್ ದೇಸಾಯಿ, ಶಿವಂ ಮಾವಿ, ಕಮಲೇಶ್ ನಾಗರಕೋಟಿ, ಇಶಾನ್ ಪೋರೆಲ್. ಅಂಕುಲ್ ರಾಯ್, ಶಿವ ಸಿಂಗ್, ಆರ್ಯನ್ ಜುಯಾಲ್, ಅರ್ಷದೀಪ್ ಸಿಂಗ್, ಪಂಕಜ್ ಯಾದವ್, ಆದಿತ್ಯ ಥ್ಯಾಕರೆ.

ಆಸ್ಟ್ರೇಲಿಯಾ-೧೯: ಜೇಸನ್ ಸಂಘಾ (ನಾಯಕ), ವಿಲ್ ಸದರ್ಲೆಂಡ್, ಕ್ಸೇವಿಯರ್ ಬಾರ್ಟ್‌ಲೆಟ್, ಮ್ಯಾಕ್ಸ್ ಬ್ರಯಾಂಟ್, ಜೇಕ್ ಎಡ್ವರ್ಡ್ಸ್, ಜಾಕ್ ಈವನ್ಸ್, ಜೊನಾಥನ್ ಮೆರ್ಲೋ, ಪರಮ್ ಉಪ್ಪಲ್, ನಾಥನ್ ಮೆಕ್‌ಸ್ವೀನಿ, ಬಾಕ್ಸ್ಟರ್ ಜೆ ಹಾಲ್ಟ್ (ವಿಕೆಟ್‌ಕೀಪರ್), ರಿಯಾನ್ ಹ್ಯಾಡ್ಲೆ, ಲಾಯ್ಡ್ ಪೋಪ್, ಪ್ಯಾಟ್ರಿಕ್ ರೋ ಮತ್ತು ಆಸ್ಟಿನ್ ವಾ.

ಪಂದ್ಯ ಆರಂಭ: ಬೆಳಿಗ್ಗೆ ೬.೩೦ (ಭಾರತೀಯ ಕಾಲಮಾನ)

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More