ಇಂಡಿಯನ್ ಬ್ಯಾಡ್ಮಿಂಟನ್‌ನಲ್ಲಿ ಸೈನಾ-ಕಶ್ಯಪ್ ಸವಾಲಿಗೆ ತೆರೆ; ಉಪಾಂತ್ಯಕ್ಕೆ ಸಿಂಧು

ಇಂಡಿಯನ್ ಓಪನ್‌ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಹೋರಾಟಕ್ಕೆ ತೆರೆಬಿದ್ದಿದೆ. ಶುಕ್ರವಾರ (ಫೆ.೨) ನಡೆದ ಕ್ವಾರ್ಟರ್‌ಫೈನಲ್ ಕಾದಾಟದಲ್ಲಿ ಅಮೆರಿಕ ಆಟಗಾರ್ತಿ ಬೀವೆನ್ ಝೆಂಗ್ ವಿರುದ್ಧ ೧೦-೨೧, ೧೩-೨೧ ಎರಡು ನೇರ ಗೇಮ್‌ಗಳಲ್ಲಿ ಸೈನಾ ಸೋಲುಂಡರು

೩೫೦,೦೦೦ ಡಾಲರ್ ಬಹುಮಾನ ಮೊತ್ತದ ಇಂಡಿಯನ್ ಓಪನ್ ಸೂಪರ್ ೫೦೦ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಶುಕ್ರವಾರ ನಿರಾಸೆಯ ದಿನವೆನಿಸಿತು. ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ಒಬ್ಬರನ್ನು ಹೊರತುಪಡಿಸಿದರೆ, ಭಾರತದ ಬಹುತೇಕ ಆಟಗಾರರು ಸೋಲಿನ ಆಘಾತ ಅನುಭವಿಸಿದರು. ಪ್ರಮುಖವಾಗಿ ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತೆ ಸೈನಾ ಎಂಟರ ಘಟ್ಟದ ಪಂದ್ಯದಲ್ಲೇ ಅದೂ ಅನನುಭವಿ ಆಟಗಾರ್ತಿಯ ಎದುರು ನೇರ ಗೇಮ್‌ಗಳಲ್ಲಿ ಸೋಲಪ್ಪಿದ್ದು ಭಾರತೀಯ ಬ್ಯಾಡ್ಮಿಂಟನ್ ಪ್ರೇಮಿಗಳನ್ನು ನಿರಾಸೆಗೊಳಿಸಿತು.

ರಾಷ್ಟ್ರ ರಾಜಧಾನಿ ದೆಹಲಿಯ ಸಿರಿ ಫೋರ್ಟ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಪಿ ವಿ ಸಿಂಧು ಕೂಡ ಪ್ರಯಾಸದ ಗೆಲುವು ಕಂಡರು. ವಿಶ್ವದ ೩೬ನೇ ಶ್ರೇಯಾಂಕಿತೆ ಸ್ಪೇನ್‌ನ ಬಿಯಾಟ್ರಿಜ್ ಕೊರ್ರಾಲೆಸ್ ವಿರುದ್ಧ ೨೧-೧೨, ೧೯-೨೧, ೨೧-೧೧ರ ಮೂರು ಗೇಮ್‌ಗಳಲ್ಲಿ ಸಿಂಧು ಜಯಶಾಲಿಯಾದರು. ಇದೀಗ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಿಂಧು, ೨೦೧೩ರ ವಿಶ್ವ ಚಾಂಪಿಯನ್, ಥಾಯ್ಲೆಂಡ್ ಆಟಗಾರ್ತಿ ಇಂಟಾನಾನ್ ರಚಾನಕ್ ವಿರುದ್ಧ ಸೆಣಸಲಿದ್ದಾರೆ.

ಮೊದಲ ಗೇಮ್‌ನಲ್ಲಿ ಯಾವುದೇ ಪ್ರಯಾಸವಿಲ್ಲದೆ ಗೆದ್ದ ಸಿಂಧುವಿಗೆ ಎರಡನೇ ಗೇಮ್‌ನಲ್ಲಿ ಸ್ಪೇನ್ ಆಟಗಾರ್ತಿ ಚುರುಕು ಮುಟ್ಟಿಸಿದರು. ಒಂದರ ಹಿಂದೊಂದರಂತೆ ಪಾಯಿಂಟ್ಸ್ ಪೇರಿಸುತ್ತಾ ನಡೆದ ಆಕೆ, ಸಿಂಧುವಿನ ವಿರುದ್ಧ ೧೯-೧೧ರ ಮುನ್ನಡೆ ಕಂಡರು. ಆದರೆ, ಪಟ್ಟುಬಿಡದೆ ಕಾದಿದ ಸಿಂಧು, ಏಳು ಪಾಯಿಂಟ್ಸ್‌ಗಳನ್ನು ಗಳಿಸಿ ೧9-೨೦ಕ್ಕೆ ಅಂತರ ಹೆಚ್ಚಿಸಿದರು. ಅಪಾಯದ ಸುಳಿವರಿತ ಬಿಯಾಟ್ರಿಜ್, ಕೇವಲ ಒಂದು ಪಾಯಿಂಟ್ಸ್‌ ಅಂತರದಲ್ಲಿದ್ದ ಗೇಮ್ ಅನ್ನು ವಶಕ್ಕೆ ಪಡೆದರು. ಆದರೆ, ಸೊಗಸಾದ ಎರಡು ಫೋರ್‌ಹ್ಯಾಂಡ್ ಶಾಟ್‌ನೊಂದಿಗೆ ಬಿಯಾಟ್ರಿಜ್ ಪಂದ್ಯದಲ್ಲಿ ೧-೧ ಸಮಬಲ ಸಾಧಿಸಿದರು. ಆದರೆ, ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಶುರುವಿನಲ್ಲೇ ೨-೦ ಮುನ್ನಡೆಯೊಂದಿಗೆ ಸಾಗಿದ ಸಿಂಧು, ಸಿಡಿಲಬ್ಬರದ ಸ್ಮ್ಯಾಶ್‌ಗಳೊಂದಿಗೆ ವಿಜೃಂಭಿಸಿದ್ದಲ್ಲದೆ, ಹತ್ತು ಮ್ಯಾಚ್ ಪಾಯಿಂಟ್ಸ್‌ ಕಲೆಹಾಕಿ ಅಬ್ಬರದ ಗೆಲುವು ಪಡೆದರು.

ಕಶ್ಯಪ್‌ಗೆ ಸೋಲು: ಇತ್ತ, ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಗ್ಲಾಸ್ಗೊ ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಪರುಪಳ್ಳಿ ಕಶ್ಯಪ್ ಸೋಲನುಭವಿಸಿದರು. ಚೀನಾದ ಕಿಯಾವೊ ಬಿನ್ ವಿರುದ್ಧದ ಪಂದ್ಯದಲ್ಲಿ ಅವರು, ೧೬-೨೧, ೧೮-೨೧ರಿಂದ ಹಿನ್ನಡೆ ಅನುಭವಿಸಿದರು. ಏತನ್ಮಧ್ಯೆ, ಮತ್ತೊಂದು ಪಂದ್ಯದಲ್ಲಿ ಬಿ ಸಾಯಿ ಪ್ರಣೀತ್ ಕೂಡ ಪರಾಜಿತರಾದರು. ಎಂಟನೇ ಶ್ರೇಯಾಂಕಿತ ಪ್ರಣೀತ್, ಮೂರನೇ ಶ್ರೇಯಾಂಕಿತ ಆಟಗಾರ ತೈವಾನ್‌ನ ಚೌ ಟನ್ ಚೆನ್ ವಿರುದ್ಧ ೧೫-೨೧, ೧೩-೨೧ರ ಅಂತರದಲ್ಲಿ ಸೋಲುಂಡರು.

ಇದನ್ನೂ ಓದಿ : ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಪ್ರಯಾಸದ ಗೆಲುವು ಕಂಡ ಕಶ್ಯಪ್ ಕ್ವಾರ್ಟರ್‌ಗೆ

ಉಪಾಂತ್ಯಕ್ಕೆ ಚೋಪ್ರಾ ಜೋಡಿ: ಇನ್ನು, ಮಿಶ್ರ ಡಬಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಎನ್ ಸಿಕಿ ರೆಡ್ಡಿ ಜೋಡಿ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ತಲುಪಿತು. ಚೀನಾದ ಹ್ಯಾನ್ ಚೆಂಗ್ ಹಾಗೂ ಕಾವೊ ತೊಂಗ್ ವೀ ಎದುರು ಅಬ್ಬರದ ಆಟವಾಡಿದ ಭಾರತೀಯ ಜೋಡಿ ೨೧-೮, ೨೧-೧೩ರಿಂದ ಗೆಲುವು ಪಡೆಯಿತು. ಕೇವಲ ೨೪ ನಿಮಿಷಗಳಲ್ಲೇ ಚೋಪ್ರಾ ಜೋಡಿ ಗೆಲುವಿನ ನಗೆಬೀರಿತು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More