ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ವೋಜ್ನಿಯಾಕಿ

ಇತ್ತೀಚೆಗಷ್ಟೇ ಮುಕ್ತಾಯ ಕಂಡ ಆಸ್ಟ್ರೇಲಿಯನ್ ಓಪನ್ ಗೆದ್ದು ವಿಶ್ವ ಮಹಿಳಾ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿ ನಂ.೧ ಸ್ಥಾನಕ್ಕೇರಿದ ವೋಜ್ನಿಯಾಕಿ ಗೆಲುವಿನ ಅಭಿಯಾನ ಮುಂದುವರಿದಿದೆ. ಸೇಂಟ್ ಪೀಟರ್ಸ್‌ಬರ್ಗ್ ಲೇಡಿಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಕೆ ಎಂಟರ ಘಟ್ಟಕ್ಕೆ ಲಗ್ಗೆ ಹಾಕುವಲ್ಲಿ ಸಫಲವಾಗಿದ್ದಾರೆ

ಸ್ಥಳೀಯ ಆಟಗಾರ್ತಿ ಹದಿನಾರರ ಹರೆಯದ ಅನಸ್ತಾಸಿಯಾ ಪೊಟಪೋವಾ ವಿರುದ್ಧ ಆಕ್ರಮಣಕಾರಿ ಆಟವಾಡಿದ ಡೆನ್ಮಾರ್ಕ್ ಆಟಗಾರ್ತಿ ಕೆರೋಲಿನ್ ವೋಜ್ನಿಯಾಕಿ, ೬-೦, ೬-೧ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಗುರುವಾರ (ಫೆ. ೧) ತಡರಾತ್ರಿ ನಡೆದ ಪಂದ್ಯವು ಸಂಪೂರ್ಣ ಏಕಪಕ್ಷೀಯವಾಗಿತ್ತು. ಇಡೀ ಪಂದ್ಯದಲ್ಲಿ ಕೇವಲ ಒಂದೇ ಒಂದು ಗೇಮ್ ಅನ್ನು ಮಾತ್ರ ವೋಜ್ನಿಯಾಕಿ ಕಳೆದುಕೊಂಡರು. ಇದೀಗ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ರಷ್ಯಾದ ಮತ್ತೋರ್ವ ಯುವ ಆಟಗಾರ್ತಿ ಡರಿಯಾ ಕಸಾಕಿನಾ ವಿರುದ್ಧ ಅವರು ಸೆಣಸಲಿದ್ದಾರೆ.

ಆರಂಭದಿಂದಲೇ ಅಬ್ಬರಿಸುತ್ತ ನಡೆದ ವೋಜ್ನಿಯಾಕಿಗೆ ಯಾವ ಹಂತದಲ್ಲಿಯೂ ಪೊಟಪೋವಾ ಸರಿಸಾಟಿ ಪ್ರದರ್ಶನ ನೀಡಲಿಲ್ಲ. ವಾಸ್ತವವಾಗಿ, ವೋಜ್ನಿಯಾಕಿಗೆ (೧೬) ಹೋಲಿಸಿದರೆ, ೧೭ ವಿನ್ನರ್‌ಗಳನ್ನು ಈ ರಷ್ಯನ್ ಆಟಗಾರ್ತಿ ಸಿಡಿಸಿದರಾದರೂ, ಅನಗತ್ಯ ತಪ್ಪು ಹೊಡೆತಗಳಿಗೆ ಬೆಲೆ ತೆರಬೇಕಾಯಿತು. ೩೦ಕ್ಕೂ ಹೆಚ್ಚು ಬಾರಿ ಈ ಪ್ರಮಾದವೆಸಗಿದ ಅವರು, ವೋಜ್ನಿಯಾಕಿ ಗೆಲುವಿಗೆ ರಹದಾರಿ ನಿರ್ಮಿಸಿಕೊಟ್ಟರು. ಇದಕ್ಕೆ ಪ್ರತಿಯಾಗಿ, ಪೊಟಪೋವಾ ಸರ್ವ್ ಅನ್ನು ತುಂಡರಿಸಿದ ವೋಜ್ನಿಯಾಕಿ, ಏಳು ಬಾರಿ ಇದನ್ನು ಪುನರಾವರ್ತಿಸಿ, ಅಂತಿಮವಾಗಿ ಒಂದು ತಾಸು ಏಳು ನಿಮಿಷಗಳ ಕಾದಾಟದಲ್ಲಿ ಜಯದ ನಗೆಬೀರಿದರು.

ಇದನ್ನೂ ಓದಿ : ವೋಜ್ನಿಯಾಕಿಗೆ ಒಲಿದ ಆಸ್ಟ್ರೇಲಿಯಾ ಓಪನ್ ಗರಿ; ಫೈನಲ್‌ನಲ್ಲಿ ಮುಗ್ಗರಿಸಿದ ಹ್ಯಾಲೆಪ್

ಕ್ರಿಸ್ಟಿನಾ, ಜುಲಿಯಾಗೆ ಜಯ: ಇನ್ನು, ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಪ್ರಿ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಕ್ರಿಸ್ಟಿನಾ ಮ್ಲೆಡನೋವಿಕ್ ೬-೪, ೬-೪ ನೇರ ಸೆಟ್‌ಗಳಿಂದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಗೆಲುವು ದಾಖಲಿಸಿದರು. ಈ ಗೆಲುವಿನೊಂದಿಗೆ ಫ್ರಾನ್ಸ್ ಆಟಗಾರ್ತಿ ಕ್ರಿಸ್ಟಿನಾ, ಸತತ ಹದಿನೈದು ಪಂದ್ಯಗಳ ಸೋಲಿನ ಸುಳಿಯಿಂದ ಮೇಲೆದ್ದರು. ಅಂತೆಯೇ, ಮತ್ತೊಂದು ಪಂದ್ಯದಲ್ಲಿ ಐದನೇ ಶ್ರೇಯಾಂಕಿತೆ ಜುಲಿಯಾ ಜಾರ್ಜಸ್ ೭-೫, ೬-೦ ನೇರ ಸೆಟ್‌ಗಳಲ್ಲಿ ಇಟಲಿಯ ಅರ್ಹತಾ ಆಟಗಾರ್ತಿ ರಾಬೆರ್ಟಾ ವಿನ್ಸಿಯನ್ನು ಮಣಿಸಿದರು. ಜರ್ಮನ್ ಆಟಗಾರ್ತಿ ಜುಲಿಯಾ, ಮುಂದಿನ ಸುತ್ತಿನಲ್ಲಿ ೧೮ರ ಹರೆಯದ ರಷ್ಯನ್ ಆಟಗಾರ್ತಿ ಎಲೆನಾ ರಿಬಾಕಿನಾ ವಿರುದ್ಧ ಕಾದಾಡಲಿದ್ದಾರೆ.

ಕ್ವಿಟೋವಾ ಮುನ್ನಡೆ: ಏತನ್ಮಧ್ಯೆ, ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್, ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ ಪ್ರೀ ಕ್ವಾರ್ಟರ್‌ಫೈನಲ್ ಸವಾಲನ್ನು ಮೆಟ್ಟಿನಿಂತು ಮುನ್ನಡೆ ಸಾಧಿಸಿದರು. ರೊಮೇನಿಯಾ ಆಟಗಾರ್ತಿ ಐರಿನಾ ಬೆಗು ವಿರುದ್ಧದ ಮೂರು ಸೆಟ್‌ಗಳ ಸೆಣಸಾಟದಲ್ಲಿ ಕ್ವಿಟೋವಾ, ೬-೩, ೧-೬, ೬-೧ ಸೆಟ್‌ಗಳಿಂದ ಗೆಲುವು ಪಡೆದು ಮುಂದಿನ ಸುತ್ತಿಗೆ ಧಾವಿಸಿದರು. ವರ್ಷದ ಮೊದಲ ಗ್ರಾಂಡ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲೇ ಮುಗ್ಗರಿಸಿದ ಕ್ವಿಟೋವಾ, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಹೊತ್ತಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More