ಇಂಡಿಯಾದ ಕ್ರಿಕೆಟ್‌ ಪ್ರೇಮಿಗಳು ಶಾಹೀದ್ ಅಫ್ರಿದಿಗೆ ಮತ್ತೆ ಕ್ಲೀನ್ ಬೌಲ್ಡ್!

ಸ್ಫೋಟಕ ಬ್ಯಾಟಿಂಗ್‌ನಿಂದಲೇ ವಿಶ್ವ ಕ್ರಿಕೆಟಿಗರ ಹೃನ್ಮನ ಗೆದ್ದ ಪಾಕಿಸ್ತಾನದ ಮಾಜಿ ನಾಯಕ ಶಾಹೀದ್ ಅಫ್ರಿದಿ ಭಾರತದ ಕ್ರಿಕೆಟ್ ಪ್ರಿಯರಿಗೂ ಅಚ್ಚುಮೆಚ್ಚು. ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಐಸ್ ಕ್ರಿಕೆಟ್ ವೇಳೆ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಿದ ಪರಿಗೆ ಎಲ್ಲೆಡೆಯಿಂದ ಮೆಚ್ಚುಗೆ ಮಹಾಪೂರವೇ ಹರಿದಿದೆ

ಅವಕಾಶ ಸಿಕ್ಕಾಗಲೆಲ್ಲ ಇಂಡೋ-ಪಾಕ್ ಬಾಂಧವ್ಯದ ಕುರಿತು ಮಾತನಾಡುವ ಶಾಹೀದ್ ಅಫ್ರಿದಿಯ ಈ ನಡೆ ಅವರನ್ನು ಹತ್ತಿರದಿಂದ ಕಂಡವರಿಗೆ ಅತಿಶಯೋಕ್ತಿಯಾಗಿ ಕಂಡಿರಲಾರದು. ಹಿಮಗಿರಿ ಸ್ವಿಟ್ಸರ್ಲೆಂಡ್‌ನಲ್ಲಿ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಲೋಸುಗ ಏರ್ಪಡಿಸಲಾಗಿದ್ದ ಚೊಚ್ಚಲ ಐಸ್ ಕ್ರಿಕೆಟ್ ಟಿ೨೦ ಪಂದ್ಯಾವಳಿಯಲ್ಲಿ ರಾಯಲ್ಸ್ ತಂಡವನ್ನು ಮುನ್ನಡೆಸಿದ ಶಾಹೀದ್ ಅಫ್ರಿದಿ, ಇದೇ ವೇಳೆ ತಂಡಕ್ಕೆ ಗೆಲುವು ತಂದುಕೊಟ್ಟದ್ದು ಮಾತ್ರವಲ್ಲ, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಸ್ಪಂದಿಸಿದ್ದಾರೆ.

ಬಿಡುಬೀಸಿನ ಆಟಗಾರ ಅಫ್ರಿದಿ ಜತೆಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನೆರೆದಿದ್ದ ಅಭಿಮಾನಿಗಳ ಪೈಕಿ ಒಬ್ಬರು ತ್ರಿವರ್ಣ ಧ್ವಜವನ್ನು ಸರಿಯಾಗಿ ಹಿಡಿದಿರಲಿಲ್ಲ. ಇದನ್ನು ಗಮನಿಸಿದ ಅಫ್ರಿದಿ, ‘ಫ್ಲಾಗ್ ಸೀದಾ ಕರೋ ಅಪ್ನಾ’ ಅಂದರೆ ಧ್ವಜವನ್ನು ನೇರವಾಗಿ ಹಿಡಿಯಿರಿ ಎಂದು ಹೇಳಿ ಬಳಿಕ ಸೆಲ್ಫೀಗೆ ಪೋಸ್ ನೀಡಿದರು. ಅವರ ಈ ವರ್ತನೆ ಸೆಲ್ಫೀ ಕ್ಲಿಕ್ಕಿಸಿಕೊಂಡ ಅಭಿಮಾನಿ ಸೇರಿದಂತೆ ಅಲ್ಲಿದ್ದ ಪ್ರತಿಯೋರ್ವರನ್ನೂ ದಂಗುಬಡಿಸಿತು. ಒಡನೆಯೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತಲ್ಲದೆ, ಅಫ್ರಿದಿ ವರ್ತನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಯಿತು. ಅದರಲ್ಲೂ ಭಾರತದ ಬಹುತೇಕರು ಅಫ್ರಿದಿ ಈ ನಡೆ ಹೃದಯ ತುಂಬಿಬಂದಿದೆ ಎಂದು ಹಾಡಿ ಹೊಗಳಿದರು.

ಕೊಹ್ಲಿ ಸ್ನೇಹ ಬೇರ್ಪಡಿಸಲಾಗದು: ಸೇಂಟ್ ಮಾರ್ಟಿಜ್‌ನಲ್ಲಿ ಶನಿವಾರ ಮುಕ್ತಾಯ ಕಂಡ ಎರಡು ದಿನಗಳ ಐಸ್ ಕ್ರಿಕೆಟ್ ಟಿ೨೦ ಪಂದ್ಯಾವಳಿಯ ಬಳಿಕ ನಡೆದ ಈ ಘಟನೆಗೂ ಮುನ್ನ ಅಫ್ರಿದಿ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, “ದ್ವಿಪಕ್ಷೀಯ ಸಂಬಂಧಗಳಾಚೆಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನನ್ನ ನಡುವಣದ ಸ್ನೇಹ ಹಸಿರಾಗಿಯೇ ಇರುತ್ತದೆ. ಎರಡೂ ರಾಷ್ಟ್ರಗಳ ದ್ವಿಪಕ್ಷೀಯ ರಾಜಕೀಯ ನಮ್ಮಿಬ್ಬರ ಸ್ನೇಹದ ನಡುವೆ ಬರುವುದಿಲ್ಲ,” ಎಂದರು. ಮಾತ್ರವಲ್ಲ, “ಪಾಕಿಸ್ತಾನವನ್ನು ಹೊರತುಪಡಿಸಿದರೆ, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರ ನಾನು ಹೆಚ್ಚು ಪ್ರೀತಿ ಪಡೆದಿದ್ದೇನೆ,” ಎಂತಲೂ ಅಫ್ರಿದಿ ಹೇಳಿಕೊಂಡರು.

ಏತನ್ಮಧ್ಯೆ, ಎರಡು ದಿನಗಳ ಐಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿರೇಂದ್ರ ಸೆಹ್ವಾಗ್ ಸಾರಥ್ಯದ ಡೈಮಂಡ್ಸ್ ತಂಡವನ್ನು ಅಫ್ರಿದಿ ನೇತೃತ್ವದ ರಾಯಲ್ಸ್ ಪಡೆ ಮಣಿಸಿ ಜಯಶಾಲಿಯಾಯಿತು. ಮೊದಲ ಪಂದ್ಯದಲ್ಲಿ ಸೆಹ್ವಾಗ್ ಅವರ ಸ್ಫೋಟಕ ೬೨ ರನ್‌ಗಳ ನೆರವಿನಿಂದ ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೧೬೨ ರನ್ ಗಳಿಸಿದ ಡೈಮಂಡ್ಸ್ ವಿರುದ್ಧ ರಾಯಲ್ಸ್ ತಂಡ ೧೫.೪ ಓವರ್‌ಗಳಲ್ಲೇ ಗೆಲುವು ಪಡೆದಿತ್ತು. ಇಂಗ್ಲೆಂಡ್ ಬ್ಯಾಟ್ಸ್‌ಮನ್ ಓವೈಸ್ ಷಾ ಅಜೇಯ ೭೪ ರನ್ ಗಳಿಸಿ ಅಫ್ರಿದಿ ಪಡೆಗೆ ಜಯ ತಂದುಕೊಟ್ಟಿದ್ದರು.

ಇದನ್ನೂ ಓದಿ : ಐತಿಹಾಸಿಕ ಚೊಚ್ಚಲ ಐಸ್ ಕ್ರಿಕೆಟ್ ಸವಾಲಿಗೆ ಸಜ್ಜಾದ ವೀರೂ-ಅಫ್ರಿದಿ ಬಣ

ಇನ್ನು, ಎರಡನೇ ಹಾಗೂ ಕೊನೇ ಪಂದ್ಯದಲ್ಲಿಯೂ ರಾಯಲ್ಸ್ ತಂಡ, ೮ ವಿಕೆಟ್‌ಗಳಿಂದ ಡೈಮಂಡ್ಸ್ ವಿರುದ್ಧ ಜಯಭೇರಿ ಬಾರಿಸಿತು. ದ. ಆಫ್ರಿಕಾದ ಜಾಕ್ ಕಾಲಿಸ್ ಅಜೇಯ ೯೦ ರನ್ ಚಚ್ಚಿ ರಾಯಲ್ಸ್ ತಂಡದ ಗೆಲುವಿನ ರೂವಾರಿ ಎನಿಸಿದರು. ಮಾಜಿ ಕ್ರಿಕೆಟಿಗರಾದ ಮೊಹಮದ್ ಕೈಫ್, ಮಹೇಲಾ ಜಯವರ್ಧನೆ, ಶೋಯೆಬ್ ಅಖ್ತರ್, ಗ್ರೇಮ್ ಸ್ಮಿತ್‌ ಸೇರಿದಂತೆ ಇನ್ನೂ ಹಲವು ಪ್ರಮುಖ ಕ್ರಿಕೆಟಿಗರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಅಂದಹಾಗೆ, ೧೯೮೮ರಿಂದ ಸೇಂಟ್ ಮಾರ್ಟಿಜ್‌ನಲ್ಲಿ ಐಸ್ ಕ್ರಿಕೆಟ್ ಆಡುತ್ತಾ ಬರಲಾಗುತ್ತಿದೆಯಾದರೂ, ಆಲ್ಪೈನ್ ರೆಸಾರ್ಟ್‌ನಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್ ಪಂದ್ಯಾವಳಿ ಆಯೋಜನೆಯಾಗಿದ್ದುದು ಇದೇ ಮೊದಲು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅನುಮೋದನೆ ಪಡೆದು ವಿ ಜೆ ಸ್ಪೋರ್ಟ್ಸ್‌ನ ವಿಜಯ್ ಸಿಂಗ್ ಇದನ್ನು ಆಯೋಜಿಸಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More