ಚಾಹಲ್ ನೋಬಾಲ್ ಪ್ರಮಾದ; ಪಿಂಕ್ ಡೇನಲ್ಲಿ ಮುಂದುವರಿದ ಹರಿಣಗಳ ಜೈತ್ರಯಾತ್ರೆ

ನಿರ್ಣಾಯಕವಾಗಿದ್ದ ಘಟ್ಟದಲ್ಲಿ ಸ್ಪಿನ್ ಜಾದೂ ನಡೆಸಿದ ಯಜುವೇಂದ್ರ ಚಾಹಲ್, ನೋಬಾಲ್ ಪ್ರಮಾದದಿಂದ ಡೇವಿಡ್ ಮಿಲ್ಲರ್‌ಗೆ ಜೀವದಾನ ಮಾಡಿದರು. ಭಾರತಕ್ಕೆ ಇದು ದುಬಾರಿಯಾಗಿ ಪರಿಣಮಿಸಿದರೆ, ಪಿಂಕ್ ಡೇ ಪಂದ್ಯದಲ್ಲಿ ಹರಿಣಗಳ ಜೈತ್ರಯಾತ್ರೆಯನ್ನು ಮುಂದುವರಿಸಲು ನೆರವಾಯಿತು

ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಮೈದಾನದಲ್ಲಿ ಶನಿವಾರ (ಫೆ.೧೦) ನಡೆದ ಮಳೆಬಾಧಿತ ಪಂದ್ಯದಲ್ಲಿ ಭಾರತ ವಿರುದ್ಧದ ನಾಲ್ಕನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಪುಟಿದೆದ್ದು ನಿಂತಿತು. ಮೊದಲ ಮೂರು ಪಂದ್ಯಗಳಲ್ಲಿ ಏಕಪಕ್ಷೀಯ ಪ್ರದರ್ಶನ ನೀಡಿದ್ದ ವಿರಾಟ್ ಪಡೆಯ ವಿರುದ್ಧ ಡಕ್ವರ್ಥ್ ನಿಯಮಾನುಸಾರ ಐದು ವಿಕೆಟ್‌ಗಳ ಗೆಲುವು ಪಡೆದ ದ. ಆಫ್ರಿಕಾ, ಆರು ಪಂದ್ಯಗಳ ಸರಣಿಯನ್ನು ೩-೧ರಿಂದ ಜೀವಂತವಾಗಿಟ್ಟಿತು. ಇದೇ ಮೊದಲ ಬಾರಿಗೆ ಹರಿಣಗಳ ನೆಲದಲ್ಲಿ ೪-೦ ಮುನ್ನಡೆಯೊಂದಿಗೆ ಸರಣಿ ಕೈವಶ ಮಾಡಿಕೊಳ್ಳುವ ಅವಕಾಶವನ್ನು ಭಾರತ ತಾನೇ ಕೈಚೆಲ್ಲಿತು. ಹೀಗಾಗಿ, ತನ್ನ ನೂರನೇ ಪಂದ್ಯದಲ್ಲಿ ಶತಕ ದಾಖಲಿಸಿ ಭಾರತದ ಸ್ಪರ್ಧಾತ್ಮಕ ಮೊತ್ತಕ್ಕೆ ನೆರವಾಗಿದ್ದ ಶಿಖರ್ ಧವನ್ ಸ್ಮರಣೀಯ ಶತಕ ವ್ಯರ್ಥವಾಯಿತು.

೨೯೦ ರನ್ ಗೆಲುವಿನ ಗುರಿ ಬೆನ್ನುಹತ್ತಿದ್ದ ದ. ಆಫ್ರಿಕಾ ಆರಂಭಿಕ ಹಂತದಲ್ಲಿ ೧ ವಿಕೆಟ್‌ಗೆ ೪೩ ರನ್ ಗಳಿಸಿತ್ತು. ಆದರೆ, ಈ ಹಂತದಲ್ಲಿ ಸುರಿದ ಮಳೆಯಿಂದಾಗಿ ಜಯದ ಗುರಿಯನ್ನು ಪರಿಷ್ಕರಿಸಲಾಯಿತು. ಅದರಂತೆ ೨೮ ಓವರ್‌ಗಳಲ್ಲಿ ೨೦೨ ರನ್ ಗಳಿಸುವಂತೆ ಹೇಳಲಾಯಿತು. ಮಳೆಗೂ ಮುನ್ನ ಕ್ರೀಸ್‌ನಲ್ಲಿದ್ದ ಹಾಶೀಂ ಆಮ್ಲಾ (೩೩) ಅವರೊಂದಿಗೆ ಸೇರಿಕೊಂಡ ಜೆ ಪಿ ಡುಮಿನಿ (೧೦) ಹೋರಾಟವನ್ನು ಕುಲದೀಪ್ ಯಾದವ್ ಹತ್ತಿಕ್ಕಿ ಮತ್ತೊಮ್ಮೆ ಸ್ಪಿನ್ ಚಮತ್ಕಾರ ಮೆರೆದರು.

ಡುಮಿನಿ ನಿರ್ಗಮನದ ನಂತರ ಕ್ರೀಸ್‌ಗಿಳಿದ ಅಪಾಯಕಾರಿ ಆಟಗಾರ ಎಬಿ ಡಿವಿಲಿಯರ್ಸ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆದರೆ, ಚಾಹಲ್ ನಿರ್ವಹಿಸಿದ ಹದಿನಾರನೇ ಓವರ್‌ ಭಾರತಕ್ಕೆ ದುಬಾರಿಯಾಯಿತು. ಈ ಓವರ್‌ನಲ್ಲಿ ೨ ಭರ್ಜರಿ ಸಿಕ್ಸರ್ ಸಿಡಿಸಿದ ಎಬಿ ಡಿವಿಲಿಯರ್ಸ್, ಆ ಓವರ್‌ನಲ್ಲಿ ಮಿಲ್ಲರ್ (೧) ಜತೆಗೂಡಿ ೧೭ ರನ್ ಕಲೆಹಾಕಿದರು. ಹೀಗೆ ಕೇವಲ ೧೬ ಎಸೆತಗಳಲ್ಲಿ ಎಬಿಡಿ ಪೇರಿಸಿದ ೨೬ ರನ್ ದ. ಆಫ್ರಿಕಾ ಇನ್ನಿಂಗ್ಸ್‌ಗೆ ಬಲತುಂಬಿತು. ಮರು ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಲಾಂಗ್ ಆನ್‌ನಲ್ಲಿದ್ದ ರೋಹಿತ್ ಶರ್ಮಾಗೆ ಕ್ಯಾಚಿತ್ತು ಎಬಿಡಿ ಕ್ರೀಸ್ ತೊರೆದರು.

ಡಿವಿಲಿಯರ್ಸ್ ನಿರ್ಗಮಿಸುತ್ತಿದ್ದಂತೆ ಭಾರತದ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿತಾದರೂ, ಮತ್ತೊಬ್ಬ ಅಪಾಯಕಾರಿ ಆಟಗಾರ ಡೇವಿಡ್ ಮಿಲ್ಲರ್ ಕ್ರೀಸ್‌ನಲ್ಲಿದ್ದುದರಿಂದ ಕೊಂಚ ಚಡಪಡಿಕೆಯೂ ಇತ್ತು. ಇತ್ತ, ೧೮ನೇ ಓವರ್‌ನ ಐದನೇ ಎಸೆತದಲ್ಲಿ ಚಾಹಲ್, ಮಿಲ್ಲರ್ ಅವರನ್ನು ಬೌಲ್ಡ್ ಮಾಡಿ ಮೈದಾನದಲ್ಲಿ ಸಂಚಲನ ಸೃಷ್ಟಿಸಿದರು. ದುರಾದೃಷ್ಟವಶಾತ್ ಆ ಎಸೆತವು ನೋಬಾಲ್‌ ಆಗಿತ್ತು. ಇದು ಭಾರತದ ಪಾಲಿಗೆ ಬಲು ದುಬಾರಿಯಾಗಿ ಪರಿಣಮಿಸಿತು. ಆಗ ಮಿಲ್ಲರ್ ಗಳಿಕೆ ಕೇವಲ ೭ ರನ್ ಅಷ್ಟೆ.

ಒಂದೊಮ್ಮೆ ಜೀವದಾನ ಪಡೆದ ಅವರು ಮರು ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯಗೆ ಮೊದಲ ಮೂರು ಎಸೆತಗಳನ್ನು ಬೌಂಡರಿಗಟ್ಟಿ ಟೀಂ ಇಂಡಿಯಾ ಕೈ ಕೈ ಹೊಸೆದುಕೊಳ್ಳುವಂತೆ ಮಾಡಿದರು. ೨೪ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಇದೆ ಚಾಹಲ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರಾದರೂ, ಅಷ್ಟೊತ್ತಿಗಾಗಲೇ ಅವರು ಪಂದ್ಯವನ್ನು ಭಾರತದ ಕೈಯಿಂದ ಕಿತ್ತುಕೊಂಡಿದ್ದರು. ೨೮ ಎಸೆತಗಳನ್ನು ಎದುರಿಸಿದ ಅವರು, ೪ ಬೌಂಡರಿ, ೨ ಸಿಕ್ಸರ್ ಸೇರಿದ ೩೯ ರನ್ ಕಲೆಹಾಕಿ ತಂಡಕ್ಕೆ ನೆರವಾದರಲ್ಲದೆ, ವಿಕೆಟ್ ಕೀಪರ್ ಹೆನ್ರಿಚ್ ಕ್ಲಾಸೆನ್ ಜತೆಗೆ ೫ನೇ ವಿಕೆಟ್‌ಗೆ ಕಲೆಹಾಕಿದ ೭೨ ರನ್‌ಗಳು ಭಾರತಕ್ಕೆ ಮುಳುವಾಯಿತು.

ಇದನ್ನೂ ಓದಿ : ಕೈಗೂಡದ ಭಾರತ ವನಿತೆಯರ ಕ್ಲೀನ್‌ಸ್ವೀಪ್ ಕನಸು; ಕೊನೆಗೂ ಗೆದ್ದ ಆತಿಥೇಯರು

ಮಿಲ್ಲರ್ ನಿರ್ಗಮನದ ನಂತರದಲ್ಲಿ ಆಡಲಿಳಿದ ಆಂಡೈಲ್ ಫೆಹ್ಲುಕ್ವಾಯೊ ಕೇವಲ ೫ ಎಸೆತಗಳಲ್ಲಿ ೧ ಬೌಂಡರಿ, ೩ ಸಿಕ್ಸರ್‌ಗಳೊಂದಿಗೆ ಅಬ್ಬರಿಸಿದರು. ಇತ್ತ, ಹೆನ್ರಿಚ್ ಕೂಡ ೨೭ ಎಸೆತಗಳಲ್ಲಿ ೫ ಬೌಂಡರಿ, ೧ ಸಿಕ್ಸರ್ ಸೇರಿದ ೪೩ ರನ್‌ಗಳೊಂದಿಗೆ ಅಜೇಯರಾಗುಳಿದರು. ಈ ಜೋಡಿ ೬ನೇ ವಿಕೆಟ್‌ಗೆ ಮುರಿಯದ ೩೩ ರನ್ ಗಳಿಸಿ ಪಿಂಕ್ ಡೇನಲ್ಲಿ ದಕ್ಷಿಣ ಆಫ್ರಿಕಾದ ಗೆಲುವಿನ ಓಟವನ್ನು ಮುಂದುವರೆಸಿದರು.

ಏನಿದು ಪಿಂಕ್ ಡೇ?: ಪ್ರತೀ ದ್ವಿಪಕ್ಷೀಯ ಸರಣಿಯಲ್ಲಿ ಕ್ರಿಕೆಟ್ ಸೌತ್ ಆಫ್ರಿಕಾ ಜನತೆಯಲ್ಲಿ ಕ್ಯಾನ್ಸರ್ ಜಾಗೃತಿಗಾಗಿ ಈ ಪಿಂಕ್ ಡೇ ಪಂದ್ಯವನ್ನು ನಿಯೋಜಿಸಿರುತ್ತದೆ. ಈ ನಿರ್ದಿಷ್ಟ ದಿನದಂದು ಆತಿಥೇಯರು ಪಿಂಕ್ (ನಸು ಗೆಂಪು) ದಿರಿಸಿನಲ್ಲಿ ಮೈದಾನಕ್ಕಿಳಿಯುತ್ತಾರೆ. ಅಂದಹಾಗೆ, ಈ ಪಂದ್ಯವನ್ನೂ ಸೇರಿದಂತೆ ಕಳೆದ ಐದು ವರ್ಷಗಳ ಅವಧಿಯ ಅರು ಪಿಂಕ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಒಂದರಲ್ಲೂ ಸೋತಿಲ್ಲ.

ಸಂಕ್ಷಿಪ್ತ ಸ್ಕೋರ್

ಭಾರತ: ೨೮೯/೭ (ಶಿಖರ್ ಧವನ್ ೧೦೯, ವಿರಾಟ್ ಕೊಹ್ಲಿ ೭೫, ಧೋನಿ ೪೨*; ಲುಂಗಿ ಗಿಡಿ ೫೨ಕ್ಕೆ ೨) ದಕ್ಷಿಣ ಆಫ್ರಿಕಾ: ೨೦೭/೫ (ಆಮ್ಲಾ ೩೩, ಮಿಲ್ಲರ್ ೩೯, ಕ್ಲಾಸೆನ್ ೪೩*, ಫೆಹ್ಲುಕ್ವಾಯೊ ೨೩*; ಕುಲದೀಪ್ ಯಾದವ್ ೫೧ಕ್ಕೆ ೨) ಫಲಿತಾಂಶ: ಡಕ್ವರ್ಥ್ ನಿಯಮಾನುಸಾರ ದಕ್ಷಿಣ ಆಫ್ರಿಕಾಗೆ ೫ ವಿಕೆಟ್ ಗೆಲುವು ಪಂದ್ಯಶ್ರೇಷ್ಠ: ಹೆನ್ರಿಚ್ ಕ್ಲಾಸೆನ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More