ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅಲಭ್ಯ

ತ್ರಿಪುರದ ದೀಪಾ ಕರ್ಮಾಕರ್‌ ವೃತ್ತಿಬದುಕಿಗೆ ಆಕೆಯ ಮೊಣಕಾಲು ನೋವು ಬಹುದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ರಿಯೊ ಕೂಟದ ನಂತರ ಯಾವುದೇ ಸಕ್ರಿಯ ಸ್ಪರ್ಧಾವಳಿಯಲ್ಲಿ ಕಾಣಿಸಿಕೊಳ್ಳಲಾಗದ ದೀಪಾ, ಇದೀಗ ಅದೇ ಕಾರಣಕ್ಕೆ ಪ್ರತಿಷ್ಠಿತ ಕಾಮನ್ವೆಲ್ತ್ ಕೂಟದಿಂದಲೂ ವಂಚಿತರಾಗಿದ್ದಾರೆ

ಭಾರತದ ನಂ.೧ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕ್ರೀಡಾಕೂಟದಿಂದ ವಂಚಿತವಾಗಿದ್ದಾರೆ. ಗ್ಲಾಸ್ಗೊ ಕಾಮನ್ವೆಲ್ತ್ ಕೂಟದಲ್ಲಿ ಪದಕ ಗೆದ್ದಿದ್ದ ದೀಪಿಕಾ, ಏ.೪ರಿಂದ ೧೫ರವರೆಗೆ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್ವೆಲ್ತ್ ಕೂಟಕ್ಕೆ ಅಲಭ್ಯವಾಗಿರುವುದು ಜಿಮ್ನಾಸ್ಟ್ ವಿಭಾಗದಲ್ಲಿ ಪದಕದ ಗುರಿ ಹೊತ್ತಿದ್ದ ಭಾರತಕ್ಕೆ ಹಿನ್ನಡೆ ಆದಂತಾಗಿದೆ.

“ಕಾಮನ್ವೆಲ್ತ್ ಕ್ರೀಡಾಕೂಟದಂಥ ಪ್ರಮುಖ ಕ್ರೀಡಾವಳಿಗೆ ದೀಪಾ ಸ್ಪರ್ಧಿಸುವ ಸ್ಥಿತಿಯಲ್ಲಿಲ್ಲ. ಹೀಗಾಗಿ ನಮ್ಮ ಮುಂದಿನ ಗುರಿ ಏಷ್ಯಾ ಕ್ರೀಡಾಕೂಟವಾಗಿದೆ. ಆ.೧೮ರಿಂದ ಸೆ.೨ರವರೆಗೆ ನಡೆಯಲಿರುವ ಏಷ್ಯಾಡ್‌ನಲ್ಲಿ ದೀಪಾ ಭಾಗವಹಿಸುವ ಬಗ್ಗೆ ಭರವಸೆ ಇದೆ,’’ ಎಂದು ಕೋಚ್ ಬಿಶ್ವೇಶ್ವರ್ ನಂದಿ ತಿಳಿಸಿದ್ದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ : ಕತಾರ್ ಓಪನ್ ಟೆನಿಸ್ | ಮೊದಲ ಸುತ್ತಲ್ಲೇ ಸೋತು ನಿರ್ಗಮಿಸಿದ ಮರಿಯಾ ಶರಪೋವಾ

೨೦೧೬ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಮೊಟ್ಟಮೊದಲ ಮಹಿಳಾ ಜಿಮ್ನಾಸ್ಟ್ ಎನಿಸಿ ದಾಖಲೆ ಬರೆದಿದ್ದರು ದೀಪಿಕಾ. ವೋಲ್ಟ್ ವಿಭಾಗದಲ್ಲಿ ಪದಕ ಸುತ್ತಿಗೆ ಲಗ್ಗೆ ಹಾಕಿದ್ದಲ್ಲದೆ, ಐತಿಹಾಸಿಕ ನಾಲ್ಕನೇ ಸ್ಥಾನ ಪಡೆದು ವಿಶ್ವ ಜಿಮ್ನಾಸ್ಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಆದರೆ, ರಾಷ್ಟ್ರ ರಾಜಧಾನಿ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾಮನ್ವೆಲ್ತ್ ಆಯ್ಕೆ ಟ್ರಯಲ್ಸ್‌ನಿಂದ ಹಿಂದೆ ಸರಿದಿದ್ದಾರೆ.

"ದೀಪಾ ದೈಹಿಕವಾಗಿ ಫಿಟ್ ಆಗಿದ್ದರೂ, ಕಾಮನ್ವೆಲ್ತ್‌ನಂಥ ಮಹಾನ್ ಕೂಟದಲ್ಲಿ ಸ್ಪರ್ಧಿಸಲು ಇನ್ನಷ್ಟು ಕಾಲಾವಕಾಶ ಬೇಕೆನಿಸುತ್ತದೆ. ನಾನಿದನ್ನು ಹಿನ್ನಡೆ ಎಂದು ಕರೆಯಲಾರೆ. ದೀಪಾ ಕೂಡ ಇದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಂಡಿದ್ದಾರೆ,’’ ಎಂದು ಕೋಚ್ ನಂದಿ ಹೇಳಿದ್ದಾರೆ. ೨೪ರ ಹರೆಯದ ದೀಪಾ, ೨೦೧೪ರ ಕಾಮನ್ವೆಲ್ತ್‌ನಲ್ಲಿ ಕಂಚು ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಎನಿಸಿ ಚರಿತ್ರೆ ಬರೆದದ್ದಲ್ಲದೆ, ಮರುವರ್ಷ ಏಷ್ಯಾಡ್‌ನಲ್ಲಿಯೂ ತೃತೀಯ ಸ್ಥಾನ ಪಡೆದಿದ್ದರು.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More