ಕರುಣ್, ಮಯಾಂಕ್ ಶತಕದ ಬಳಿಕ ಸುಚಿತ್ ಸ್ಪಿನ್ ಸುಳಿಗೆ ಸಿಲುಕಿ ಸೋತ ಒಡಿಶಾ

ಆರಂಭಿಕರಾದ ಮಯಾಂಕ್ ಅಗರ್ವಾಲ್ (೧೦೨), ಕರುಣ್ ನಾಯರ್ (೧೦೦) ಶತಕದ ಬಳಿಕ ಜೆ ಸುಚಿತ್ (೩೪ಕ್ಕೆ ೫) ಸ್ಪಿನ್ ಸುಳಿಗೆ ಸಿಲುಕಿದ ಒಡಿಶಾವನ್ನು ೧೩೩ ರನ್‌ಗಳಿಂದ ಹಣಿದ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯಾವಳಿಯಲ್ಲಿ ನಾಕೌಟ್ ಹಂತಕ್ಕೆ ದಾಪುಗಾಲಿಟ್ಟಿತು

ಆತಿಥೇಯ ಕರ್ನಾಟಕ ಒಡ್ಡಿದ ೩೫೪ ರನ್‌ಗಳಂಥ ಬೃಹತ್ ಸವಾಲನ್ನು ಮೆಟ್ಟಿನಿಲ್ಲಬೇಕಾದ ಒತ್ತಡದಲ್ಲಿಯೇ ಕ್ರೀಸ್‌ಗಿಳಿದ ಒಡಿಶಾಗೆ ಎಡಗೈ ಸ್ಪಿನ್ನರ್ ಜೆ ಸುಚಿತ್ ಮಾರಕರಾದರು. ‘ಎ’ ದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ಐದು ವಿಕೆಟ್ ಪಡೆದ ಸುಚಿತ್ ಜೊತೆಗೆ, ಶ್ರೇಯಸ್ ಗೋಪಾಲ್ (೫೫ಕ್ಕೆ ೨) ಹಾಗೂ ಕೆ ಗೌತಮ್ (೩೮ಕ್ಕೆ ೨) ತೋಡಿದ ಸ್ಪಿನ್ ಖೆಡ್ಡಾಗೆ ಬಿದ್ದ ಒಡಿಶಾ, ಇನ್ನೂ ಒಂಬತ್ತು ಓವರ್‌ಗಳು ಬಾಕಿ ಇರುವಂತೆಯೇ ೨೨೦ ರನ್‌ಗಳಿಗೆ ಪತನ ಕಂಡಿತು. ಅತ್ಯಂತ ಮಹತ್ವವಾಗಿದ್ದ ಈ ಪಂದ್ಯದಲ್ಲಿ ಕರ್ನಾಟಕ ೧೩೩ ರನ್ ಗೆಲುವಿನೊಂದಿಗೆ ೪ ಅಂಕ ಗಳಿಸಿ, ಆ ಮೂಲಕ ಪ್ರತಿಷ್ಠಿತ ಟೂರ್ನಿಯಲ್ಲಿ ನಾಕೌಟ್‌ ಹಂತದತ್ತ ದಾಪುಗಾಲಿಟ್ಟಿತು.

ಮಂಗಳವಾರ (ಫೆ.೧೩) ಬೆಂಗಳೂರು ನಗರದ ಹೊರವಲಯದ ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಮತ್ತೊಮ್ಮೆ ಆಲ್ರೌಂಡ್ ಆಟದಿಂದ ಜಯ ಪಡೆಯಿತು. ಕಳೆದ ಭಾನುವಾರ (ಫೆ.೧೧) ನಡೆದ ಪಂಜಾಬ್ ವಿರುದ್ಧದ ಹಣಾಹಣಿಯಲ್ಲಿ 4 ರನ್ ರೋಚಕ ಸೋಲನುಭವಿಸಿದ್ದ ವಿನಯ್ ಕುಮಾರ್ ಸಾರಥ್ಯದ ಕರ್ನಾಟಕ ತಂಡ, ಒಡಿಶಾ ವಿರುದ್ಧದ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಹೀಗೆ, ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಒತ್ತಡರಹಿತ ಹೋರಾಟ ನಡೆಸಿದ ಕರ್ನಾಟಕ ಅಮೋಘ ಗೆಲುವು ಪಡೆಯಿತು.

ಭರ್ಜರಿ ಆರಂಭ: ಬೃಹತ್ ಸವಾಲನ್ನು ಬೆನ್ನುಹತ್ತಿದ ಒಡಿಶಾ ಉತ್ತಮ ಆರಂಭವನ್ನೇ ಕಂಡಿತು. ನಾಯಕ ರಾಜೇಶ್ ಧುಪೆರ್ (೫೩: ೪೮ ಎಸೆತ, ೫ ಬೌಂಡರಿ, ೧ ಸಿಕ್ಸರ್) ಹಾಗೂ ಅನುರಾಗ್ ಸಾರಂಗಿ (೫೮: ೫೧ ಎಸೆತ, ೪ ಬೌಂಡರಿ, ೩ ಸಿಕ್ಸರ್) ಎಚ್ಚರಿಕೆಯಿಂದ ಇನ್ನಿಂಗ್ಸ್ ಕಟ್ಟಲು ಮುಂದಾದರು. ದಿಟ್ಟ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಶತಕದ ಜೊತೆಯಾಟದವರೆಗೂ ಬೆಳೆದ ಈ ಜೋಡಿಯನ್ನು ಆಲ್ರೌಂಡರ್ ಕೆ ಗೌತಮ್ ಪೆವಿಲಿಯನ್‌ಗೆ ಅಟ್ಟಿದರು. ಇನ್ನಿಂಗ್ಸ್‌ನ ೧೬ನೇ ಓವರ್‌ನ ಎರಡನೇ ಎಸೆತದಲ್ಲಿ ಅನುರಾಗ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸಿದ ಗೌತಮ್, ೧೧೮ ರನ್‌ಗಳಿಗೆ ಮೊದಲ ವಿಕೆಟ್ ಪತನ ಕಾಣುವಂತೆ ಮಾಡಿದರು.

ಇನ್ನು, ೧೮ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆರಂಭಿಕ ರಾಜೇಶ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಗೌತಮ್, ಮತ್ತೆ ಕರ್ನಾಟಕ ಮೇಲುಗೈ ಮೆರೆಯಲು ಕಾರಣರಾದರು. ಇಲ್ಲಿಂದಾಚೆಗೆ ಒಡಿಶಾ ಬ್ಯಾಟಿಂಗ್‌ಗೆ ಕಂಟಕರಾದದ್ದು ಜೆ ಸುಚಿತ್. ಮಧ್ಯಮ ಮತ್ತು ಕೆಳ ಕ್ರಮಾಂಕವನ್ನು ಅಸ್ಥಿರಗೊಳಿಸುವಲ್ಲಿ ಅವರು ಯಶ ಕಂಡರು. ಅಭಿಷೇಕ್ ರಾವುತ್ (೩೬) ಹಾಗೂ ದೀಪಕ್ ಬೆಹೇರಾ ಅಜೇಯ ೨೦ ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು.

ಕರುಣ್-ಮಯಾಂಕ್ ಮನೋಜ್ಞ ಆಟ: ಇದಕ್ಕೂ ಮುನ್ನ, ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕಕ್ಕೆ ಮಯಾಂಕ್ ಅಗರ್ವಾಲ್ ಹಾಗೂ ಕರುಣ್ ನಾಯರ್ ಜೋಡಿ ಅತ್ಯದ್ಭುತ ವೇದಿಕೆ ಹಾಕಿಕೊಟ್ಟಿತು. ಮನಮೋಹಕ ಬ್ಯಾಟಿಂಗ್ ನಡೆಸಿದ ಈ ಜೋಡಿ, ಕೇವಲ ೧೦ ರನ್‌ಗಳ ಅಂತರದಿಂದ ೨೦೦ ರನ್‌ ಜೊತೆಯಾಟ ದಾಖಲಿಸುವ ಅವಕಾಶ ಕಳೆದುಕೊಂಡಿತು. ಪ್ರಚಂಡ ಬ್ಯಾಟಿಂಗ್ ನಡೆಸಿದ ಈ ಜೋಡಿ ಬೇರ್ಪಟ್ಟದ್ದು ೩೧ನೇ ಓವರ್‌ನಲ್ಲಿ. ‘ಎ’ ದರ್ಜೆ ಕ್ರಿಕೆಟ್‌ನಲ್ಲಿ ಏಳನೇ ಶತಕ ಪೂರೈಸುತ್ತದ್ದಂತೆ ಮಯಾಂಕ್ ಅವರನ್ನು ಸೂರ್ಯಕಾಂತ್ ಪ್ರಧಾನ್ ಬೌಲ್ಡ್ ಮಾಡಿ ಹೊರಗಟ್ಟಿದರೆ, ಬಳಿಕ ಬಂದ ಆರ್ ಸಮರ್ಥ್ (೧೧) ಮತ್ತು ಕರುಣ್ ನಾಯರ್ ಅವರನ್ನು ದೀಪಕ್ ಬೆಹೇರಾ ಬಲಿ ಪಡೆದರು.

ಪವನ್ ಅರ್ಧಶತಕ: ಬಳಿಕ ಕರ್ನಾಟಕದ ಇನ್ನಿಂಗ್ಸ್‌ಗೆ ಬಲ ತುಂಬಿದ್ದು ಪವನ್ ದೇಶಪಾಂಡೆ. ಬಿಡುಬೀಸಿನ ಬ್ಯಾಟಿಂಗ್ ನಡೆಸಿದ ಅವರು ಕೇವಲ ೩೭ ಎಸೆತಗಳಲ್ಲಿ ೫ ಬೌಂಡರಿ, ೨ ಸಿಕ್ಸರ್‌ಗಳುಳ್ಳ ಅಜೇಯ ೫೪ ರನ್ ಗಳಿಸಿದರೆ, ಆಲ್ರೌಂಡರ್ ಕೆ ಗೌತಮ್ ೨೦ ಎಸೆತಗಳಲ್ಲಿ ೫ ಬೌಂಡರಿ, ೩ ಸಿಕ್ಸರ್‌ಗಳಿಂದ ೪೭ ರನ್ ಚಚ್ಚಿ ತಂಡದ ಮೊತ್ತವನ್ನು ೩೫೦ ರನ್ ಗಡಿ ದಾಟಲು ನೆರವಾದರು.

ಇದನ್ನೂ ಓದಿ : ಕೃಷ್ಣ ಪ್ರಚಂಡ ದಾಳಿಗೆ ಕಂಗೆಟ್ಟ ಅಸ್ಸಾಂ; ಕರ್ನಾಟಕಕ್ಕೆ ಮತ್ತೊಂದು ಗೆಲುವು

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: ೩೫೩/೬ (ಮಯಾಂಕ್ ೧೦೨, ಕರುಣ್ ನಾಯರ್ ೧೦೦, ದೇಶಪಾಂಡೆ ೫೪, ಕೆ ಗೌತಮ್ ೪೭; ದೇಬಬ್ರತ ಪ್ರಧಾನ್ ೬೯ಕ್ಕೆ ೨) ಒಡಿಶಾ: ೨೨೦/೧೦ (ರಾಜೇಶ್ ಧುಪೆರ್ ೫೩, ಅನುರಾಗ್ ಸಾರಂಗಿ ೫೮; ಜೆ ಸುಚಿತ್ ೩೪ಕ್ಕೆ ೫) ಫಲಿತಾಂಶ: ಕರ್ನಾಟಕಕ್ಕೆ ೧೩೩ ರನ್ ಗೆಲುವು ಪಾಯಿಂಟ್ಸ್: ಕರ್ನಾಟಕ-೪, ಒಡಿಶಾ-೦

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More