ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಮರಳಿದ ಸ್ಪಿನ್ ಮಾಂತ್ರಿಕ ವಾರ್ನ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಮತ್ತೆ ಐಪಿಎಲ್‌ಗೆ ಆಗಮಿಸುತ್ತಾರೆ ಎಂಬ ಮಾತು ನಿಜವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಪ್ರಧಾನ ಸಲಹೆಗಾರನ ಸ್ಥಾನಕ್ಕೆ ಆಗಮಿಸಿರುವ ವಾರ್ನ್, ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನಕ್ಕೆ ಚಾಂಪಿಯನ್ ಪಟ್ಟ ಕಟ್ಟಿದವರು

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೊದಲ ಅಭಿಯಾನದಲ್ಲೇ ರಾಜಸ್ಥಾನವನ್ನು ಚಾಂಪಿಯನ್‌ನೆಡೆ ಮುನ್ನಡೆಸಿದ್ದ ಶೇನ್ ವಾರ್ನ್ ಮತ್ತೊಮ್ಮೆ ತಂಡದ ಉಸ್ತುವಾರಿ ಹೊತ್ತಿದ್ದಾರೆ. ೨೦೦೮ರಿಂದ ೨೦೧೧ರವರೆಗೆ ತಂಡವನ್ನು ಮುನ್ನಡೆಸಿದ್ದ ಶೇನ್ ವಾರ್ನ್, ಹನ್ನೊಂದನೇ ಆವೃತ್ತಿಯಲ್ಲಿ ತಂಡದ ಪ್ರಧಾನ ಸಲಹೆಗಾರನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬುದನ್ನು ಮಂಗಳವಾರ (ಫೆ.೧೩) ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಮೂಲಗಳು ಖಚಿತಪಡಿಸಿವೆ.

“ಮತ್ತೊಮ್ಮೆ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗುತ್ತಿರುವುದು ನನ್ನಲ್ಲಿ ಉದ್ರೇಕ ಹಾಗೂ ಹರ್ಷವನ್ನು ಒಟ್ಟೊಟ್ಟಿಗೆ ತರುತ್ತಿದೆ. ನನ್ನ ಕ್ರಿಕೆಟ್ ಪಯಣದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದೊಟ್ಟಿಗಿನ ದಿನಗಳು ವಿಶೇಷ ಸ್ಥಾನ ಪಡೆದಿವೆ ಎಂದೇ ನಾನು ನಂಬುತ್ತೇನೆ,’’ ಎಂದು ಹೇಳಿರುವ ಶೇನ್ ವಾರ್ನ್, “ತಂಡದೊಟ್ಟಿಗೆ ಇದ್ದ ದಿನಗಳಲ್ಲೆಲ್ಲ ಫ್ರಾಂಚೈಸಿ ಮಾಲೀಕರು ತೋರಿದ ಪ್ರೀತ್ಯಾದರಗಳನ್ನು ಎಂದಿಗೂ ಮರೆಯಲಾಗದು,” ಎಂದೂ ತಿಳಿಸಿದ್ದಾರೆ.

ಇನ್ನು, “ತಂಡ ಹಲವಾರು ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದ್ದು, ಹನ್ನೊಂದನೇ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ,” ಎಂದು ಶೇನ್ ವಾರ್ನ್ ತಿಳಿಸಿದ್ದಾರೆ. ಏತನ್ಮಧ್ಯೆ, ಶೇನ್ ವಾರ್ನ್ ಜೊತೆಗೆ, ೨೦೦೮ರಿಂದಲೂ ಫ್ರಾಂಚೈಸಿಯೊಂದಿಗಿದ್ದ ಮುಂಬೈನ ಮಾಜಿ ಬ್ಯಾಟ್ಸ್‌ಮನ್ ಜುಬಿನ್ ಬರೂಚ ಅವರನ್ನೂ ತನ್ನ ಕ್ರಿಕೆಟ್ ಮುಖ್ಯಸ್ಥನನ್ನಾಗಿ ರಾಯಲ್ಸ್ ಫ್ರಾಂಚೈಸಿ ನಿಯುಕ್ತಿಗೊಳಿಸಿದೆ.

ಇದನ್ನೂ ಓದಿ : ಐಪಿಎಲ್‌ಗೆ ಶೇನ್ ವಾರ್ನ್ ವಾಪಸ್? ಕುತೂಹಲ ಮೂಡಿಸಿದ ಟ್ವೀಟ್!

ಅಂದಹಾಗೆ, ನಟಿ ಶಿಲ್ಪಾ ಶೆಟ್ಟಿ ಸಹಒಡೆತನದ ಹಾಗೂ ಜೈಪುರ ಮೂಲದ ರಾಜಸ್ಥಾನ ರಾಯಲ್ಸ್, ೨೦೧೩ರ ಆರನೇ ಐಪಿಎಲ್ ಪಂದ್ಯಾವಳಿಯ ವೇಳೆ ಘಟಿಸಿದ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ ಸುಳಿಯಲ್ಲಿ ಸಿಲುಕಿ ನ್ಯಾಯಾಲಯದಿಂದ ೨ ವರ್ಷ ಅಮಾನತು ಶಿಕ್ಷೆ ಅನುಭವಿಸಿತ್ತು. ಮತ್ತೆ ಐಪಿಎಲ್ ಕೂಟಕ್ಕೆ ಆಗಮಿಸಿರುವ ಆ ತಂಡದಲ್ಲಿ ಕನ್ನಡಿಗ ಹಾಗೂ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅಲ್ಲದೆ, ಇಂಗ್ಲೆಂಡ್‌ನ ಆಲ್ರೌಂಡರ್ ಬೆನ್ ಸ್ಟೋಕ್ಸ್‌ರಂಥ ಪ್ರಮುಖ ಆಟಗಾರರಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More