ಕತಾರ್ ಓಪನ್ ಟೆನಿಸ್ | ಮೊದಲ ಸುತ್ತಲ್ಲೇ ಸೋತು ನಿರ್ಗಮಿಸಿದ ಮರಿಯಾ ಶರಪೋವಾ

ಐದು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡತಿ ಮರಿಯಾ ಶರಪೋವಾ, ಕತಾರ್ ಓಪನ್ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಲ್ಲೇ ಸೋತು ನಿರ್ಗಮಿಸಿದ್ದಾರೆ. ರೊಮೇನಿಯಾದ ಅರ್ಹತಾ ಆಟಗಾರ್ತಿ ಮೋನಿಕಾ ನಿಕುಲೆಸ್ಕು ವಿರುದ್ಧ ರಷ್ಯನ್ ಆಟಗಾರ್ತಿ ಮೂರು ಸೆಟ್‌ಗಳ ಆಟದಲ್ಲಿ ಸೋಲುಂಡರು

ಮೂರು ವರ್ಷಗಳ ಬಳಿಕ ಕತಾರ್‌ನಲ್ಲಿ ಆಡಿದ ಶರಪೋವಾ, ವೈಲ್ಡ್ ಕಾರ್ಡ್‌ನಡಿ ಟೂರ್ನಿಗೆ ಪ್ರವೇಶ ಪಡೆದಿದ್ದರಾದರೂ, ಮೊದಲ ಸುತ್ತಿನಾಚೆಗೆ ಪ್ರವೇಶಿಸಲು ವಿಫಲವಾದರು. ಅರ್ಹತಾ ಆಟಗಾರ್ತಿ ನಿಕುಲೆಸ್ಕು ವಿರುದ್ಧ ೬-೪, ೪-೬, ೩-೬ ಸೆಟ್‌ಗಳಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದರು. ಎರಡು ತಾಸು, ೩೮ ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಮೊದಲ ಸೆಟ್ ಅನ್ನು ಸುಲಭವಾಗಿ ಗೆದ್ದ ಶರಪೋವಾ, ಇನ್ನುಳಿದ ಎರಡೂ ಸೆಟ್‌ಗಳಲ್ಲಿ ನಿಕುಲೆಸ್ಕು ಒಡ್ಡಿದ ಕಠಿಣ ಪ್ರತಿರೋಧವನ್ನು ಹತ್ತಿಕ್ಕಲಾಗದೆ ಪರಾಭವಗೊಂಡು ಟೂರ್ನಿಯಿಂದ ಹೊರನಡೆದರು.

ಪಂದ್ಯದುದ್ದಕ್ಕೂ ತುಸು ಒತ್ತಡಕ್ಕೆ ಸಿಲುಕಿದಂತೆ ಕಂಡುಬಂದ ಶರಪೋವಾ, ೧೧ ಡಬಲ್ ಫಾಲ್ಟ್‌ಗಳಲ್ಲದೆ, ೫೨ ಅನಗತ್ಯ ತಪ್ಪು ಹೊಡೆತಗಳಿಂದ ಬೆಲೆ ತೆತ್ತರು. ಇದಕ್ಕೆ ಪ್ರತಿಯಾಗಿ, ರೊಮೇನಿಯಾ ಆಟಗಾರ್ತಿ ಮೋನಿಕಾ, ಅನುಭವಿ ಆಟಗಾರ್ತಿ ಶರಪೋವಾ ವಿರುದ್ಧ ಆತ್ಮವಿಶ್ವಾಸದಿಂದ ಸೆಣಸಿದರು. ಏಳು ಬ್ರೇಕ್ ಪಾಯಿಂಟ್ಸ್‌ಗಳಲ್ಲಿ ಆರನ್ನು ಜಯದ ಭಾಗವಾಗಿ ಪರಿವರ್ತಿಸಿದ ಮೋನಿಕಾ, ಶರಪೋವಾ ಹೋರಾಟಕ್ಕೆ ತೆರೆ ಎಳೆದರು. ಇದೀಗ ಮುಂದಿನ ಸುತ್ತಿನಲ್ಲಿ ಆಕೆ, ವಿಂಬಲ್ಡನ್ ಸೆಮಿಫೈನಲ್ ಸ್ಪರ್ಧಿ ಮಗ್ದಲೇನಾ ರಿಬಾರಿಕೋವಾ ಇಲ್ಲವೇ ಸ್ಥಳೀಯ ಆಟಗಾರ್ತಿ ಫತ್ಮಾ ಅಲ್ ನಭಾನಿ ವಿರುದ್ಧ ಸೆಣಸಲಿದ್ದಾರೆ.

ಇದನ್ನೂ ಓದಿ : ‘ಓ ಮರಿಯಾ, ವಿಲ್ ಯು ಮ್ಯಾರಿ ಮೀ’ ಎಂದವನಿಗೆ ಶರಪೋವಾ ಓಕೆ ಅನ್ನೋದೇ!

ಸಿಬುಲ್ಕೋವಾ ಗೆಲುವು: ಇದಕ್ಕೂ ಮುನ್ನ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ವಿಂಬಲ್ಡನ್ ಚಾಂಪಿಯನ್, ಫ್ರಾನ್ಸ್‌ನ ಡೊಮಿನಿಕಾ ಸಿಬುಲ್ಕೋವಾ ಗೆಲುವು ಪಡೆದು ಎರಡನೇ ಸುತ್ತಿಗೆ ನಡೆದರು. ಸ್ಥಳೀಯ ಆಟಗಾರ್ತಿ ಅನಸ್ಟಾಸಿಯಾ ಪಾವ್ಲಿಚೆಂಕೋವಾ ವಿರುದ್ಧ ಆಕೆ, ೭-೬ (೮), ೬-೪ ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು. ಮುಂದಿನ ಸುತ್ತಿನಲ್ಲಿ ಸಿಬುಲ್ಕೋವಾ, ಫ್ರಾನ್ಸ್‌ನ ಏಳನೇ ಶ್ರೇಯಾಂಕಿತೆ ಕೆರೊಲಿನಾ ಗಾರ್ಸಿಯಾ ವಿರುದ್ಧ ಕಾದಾಡಲಿದ್ದಾರೆ.

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More