ಬಾಂಗ್ಲಾದೇಶ ಹಣಿದು ನಿದಾಸ್ ಟ್ರೋಫಿ ಫೈನಲ್‌ಗೆ ಲಗ್ಗೆ ಹಾಕಲು ಭಾರತ ಅಣಿ

ಸತತ ಎರಡು ಪಂದ್ಯಗಳ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಬುಧವಾರ (ಮಾ.೧೪) ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಖಚಿತ ವ್ಯಾಖ್ಯಾನಕ್ಕೆ ಸಿಗದ ಬಾಂಗ್ಲಾದೇಶ ಆಟಗಾರರ ವೈಖರಿ ಸಹಜವಾಗಿ ಇಂಡೋ-ಬಾಂಗ್ಲಾ ಕಾದಾಟದ ರೋಚಕತೆ ಹೆಚ್ಚಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ

ನಿದಾಸ್ ಟ್ರೋಫಿ ಟಿ೨೦ ತ್ರಿಕೋನ ಸರಣಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಸೋಲನುಭವಿಸಿದ ಬಳಿಕ ಪುಟಿದೆದ್ದ ಟೀಂ ಇಂಡಿಯಾ, ಇದೀಗ ಫೈನಲ್‌ನತ್ತ ಕಣ್ಣಿಟ್ಟಿದೆ. ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರುಗೊಳ್ಳುತ್ತಿರುವ ರೋಹಿತ್ ಶರ್ಮಾ ಸಾರಥ್ಯದ ಟೀಂ ಇಂಡಿಯಾ, ಜಯದ ವಿಶ್ವಾಸದಲ್ಲಿದೆ. ಇದೇ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ೬ ವಿಕೆಟ್ ಸುಲಭ ಗೆಲುವು ಸಾಧಿಸಿದ ರೋಹಿತ್ ಪಡೆ ಮತ್ತೊಂದು ಗೆಲುವಿನ ಭರವಸೆಯಲ್ಲಿದೆ.

ಆದರೆ, ಭಾರತ ವಿರುದ್ಧದ ಸೋಲಿನ ಬಳಿಕ ಹುಚ್ಚು ಕುದುರೆಯಂತೆ ತೊನೆಯುತ್ತಿರುವ ಮಹಮುದುಲ್ಲಾ ನೇತೃತ್ವದ ಬಾಂಗ್ಲಾದೇಶ, ಭಾರತಕ್ಕೆ ಈ ಬಾರಿ ಪ್ರಬಲ ಸವಾಲೊಡ್ಡುವ ಸುಳಿವು ನೀಡಿದೆ. ಇದೇ ಮೈದಾನದಲ್ಲಿ ಭಾನುವಾರ (ಮಾ. ೧೧) ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ೨೧೬ ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಬಾಂಗ್ಲಾ ತಂಡಕ್ಕೆ ಯಾವುದೇ ಹಂತದಲ್ಲಿ ಬೇಕಾದರೂ ಪಂದ್ಯದ ಗತಿಯನ್ನು ಬದಲಿಸುವಂಥ ಚಾಲಾಕಿತನವಿದೆ.

ಎರಡನೇ ಹಂತದ ಕೌತುಕ: ತ್ರಿಕೋನ ಸರಣಿಯ ಮೊದಲ ಹಂತದ ಕಾದಾಟದಲ್ಲಿ ಪ್ರತಿಯೊಂದು ತಂಡಗಳು ತಲಾ ಒಂದೊಂದು ಗೆಲುವು ಸಾಧಿಸಿರುವುದು ಗಮನಾರ್ಹ. ಈ ಮಧ್ಯೆ ಟೀಂ ಇಂಡಿಯಾ ಮಾತ್ರ ಒಂದರ ಹಿಂದೊಂದರಂತೆ ಎರಡು ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿಯೂ ಗೆಲುವು ಪಡೆದರೆ, ಅದರ ಫೈನಲ್ ಹಾದಿ ಸುಗಮವಾಗಲಿದೆ. ಮೇಲಾಗಿ, ರನ್‌ರೇಟ್ (+೦.೨೧) ಕೂಡ ಭಾರತದ ಫೈನಲ್‌ ಬಯಕೆಗೆ ಇಂಬುನೀಡಿದೆ. ಒಂದೊಮ್ಮೆ ಬಾಂಗ್ಲಾದೇಶ ವಿರುದ್ಧ ಏನಾದರೂ ಸೋಲನುಭವಿಸಿದರೆ ಭಾರತದ ಫೈನಲ್ ಕನಸು ಡೋಲಾಯಮಾನವಾಗಲಿದೆ. ಬಾಂಗ್ಲಾ ಮತ್ತು ಶ್ರೀಲಂಕಾ ನಡುವಣದ ಕೊನೆಯ ಲೀಗ್ ಪಂದ್ಯದ ಫಲಿತಾಂಶವಲ್ಲದೆ, ನೆಟ್‌ ರನ್‌ರೇಟ್ ಕೂಡ ನಿರ್ಣಾಯಕವೆನಿಸಲಿದೆ.

ಬಾಂಗ್ಲಾದೇಶದ ವೇಗಿ ಟಸ್ಕಿನ್ ಅಹಮದ್ ಮಂಗಳವಾರ (ಮಾ.೧೩) ಕೊಲಂಬೋ ಮೈದಾನದಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು

ಚಿಂತೆ ಹೆಚ್ಚಿಸಿದ ರೋಹಿತ್: ಮುಂಬೈ ಬ್ಯಾಟ್ಸ್‌ಮನ್ ಅಸ್ಥಿರ ಬ್ಯಾಟಿಂಗ್ ತಂಡವನ್ನು ಚಿಂತೆಗೀಡುಮಾಡಿದೆ. ದೊಡ್ಡ ಇನ್ನಿಂಗ್ಸ್ ಕಟ್ಟಲು ವಿಫಲವಾಗುತ್ತಿರುವ ರೋಹಿತ್ ಶರ್ಮಾ ಒತ್ತಡದ ಬೇಗುದಿಯಲ್ಲಿದ್ದು, ಇದನ್ನು ಮೆಟ್ಟಿನಿಲ್ಲಬೇಕಿದೆ. ಇನ್ನು, ಸರಣಿಯಲ್ಲಿ ೧೫೩ ರನ್ ಗಳಿಸಿರುವ ಶಿಖರ್ ಧವನ್, ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರಿಂದ ಮತ್ತೊಮ್ಮೆ ಸ್ಫೋಟಕ ಆಟ ಹೊರಹೊಮ್ಮಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೂಡ ಕ್ರೀಸ್‌ನಲ್ಲಿ ಹೆಚ್ಚುಕಾಲ ತಿಣುಕುತ್ತಿದ್ದು, ಇದು ತಂಡವನ್ನು ಬಾಧಿಸದಂತೆ ನೋಡಿಕೊಳ್ಳಬೇಕಿದೆ.

ಕನ್ನಡಿಗರ ಪಾತ್ರ: ಪ್ರಸಕ್ತ ಸರಣಿಯ ಮೊದಲೆರಡು ಪಂದ್ಯಗಳಿಗೆ ಕೈಬಿಡಲ್ಪಟ್ಟಿದ್ದ ಕೆ ಎಲ್ ರಾಹುಲ್ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಿದರಾದರೂ, ಹಿಟ್ ವಿಕೆಟ್‌ಗೆ ಬಲಿಯಾಗಿ ಅನಪೇಕ್ಷಿತ ದಾಖಲೆ ಬರೆದರು. ಅಂತಾರಾಷ್ಟ್ರೀಯ ಟಿ೨೦ ಪಂದ್ಯಾವಳಿಯಲ್ಲಿ ಹಿಟ್‌ ವಿಕೆಟ್‌ಗೆ ಬಲಿಯಾದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡ ರಾಹುಲ್, ಇದೀಗ ಪುಟಿದೆದ್ದು ನಿಲ್ಲಬೇಕಿದೆ. ಇನ್ನು, ಮನೀಶ್ ಪಾಂಡೆಯಂತೂ ಯಾವುದೇ ಕ್ರಮಾಂಕದಲ್ಲಿ ಬೇಕಾಧರೂ ತಾನು ತಂಡಕ್ಕೆ ಉಪಯುಕ್ತ ಸೇವೆ ಸಲ್ಲಿಸಬಲ್ಲೆ ಎಂಬುದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದು, ಅವರೊಂದಿಗೆ ತಮಿಳುನಾಡಿನ ದಿನೇಶ್ ಕಾರ್ತಿಕ್ ಕೂಡ ಗಮನ ಸೆಳೆದಿದ್ದಾರೆ.

ಉನದ್ಕಟ್ ದುಬಾರಿ: ಬೌಲಿಂಗ್‌ನಲ್ಲಿ ಸಾಧ್ಯವಾದಷ್ಟೂ ಪರಿಣಾಮಕಾರಿ ಪ್ರದರ್ಶನ ನೀಡುತ್ತಾ ಬರುತ್ತಿರುವ ಟೀಂ ಇಂಡಿಯಾ ಬೌಲರ್‌ಗಳ ಪೈಕಿ ಸೌರಾಷ್ಟ್ರದ ಜೈದೇವ್ ಉನದ್ಕಟ್ ಅತ್ಯಂತ ದುಬಾರಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ದುಬಾರಿಯಾದರೂ, ಆ ಬಳಿಕ ಅವರಿಂದ ಚೇತರಿಕೆ ಪ್ರದರ್ಶನ ಹೊಮ್ಮಿದೆ. ಜತೆಗೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಸ್ಪಿನ್ ವಲಯದಲ್ಲಿ ಆಕರ್ಷಕ ಸ್ಪೆಲ್‌ನಿಂದ ಗಮನ ಸೆಳೆದಿದ್ದಾರೆ.

ಹುರುಪಿನಲ್ಲಿ ಬಾಂಗ್ಲಾದೇಶ: ಕಳೆದ ಪಂದ್ಯದಲ್ಲಿ ಸಿಂಹಳೀಯರು ಒಡ್ಡಿದ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಹತ್ತಿಕ್ಕಿ ದಾಖಲೆ ಬರೆದ ಬಾಂಗ್ಲಾದೇಶ, ಎರಡನೇ ಗೆಲುವಿನ ಉತ್ಸಾಹದಲ್ಲಿದೆ. ಆರಂಭಿಕರಾದ ತಮೀಮ್ ಇಕ್ಬಾಲ್ ಮತ್ತು ಲಿಟನ್ ದಾಸ್ ಮತ್ತೊಮ್ಮೆ ತಂಡಕ್ಕೆ ಉತ್ತಮ ವೇದಿಕೆ ಹಾಕಿಕೊಡುವ ವಿಶ್ವಾಸದಲ್ಲಿದ್ದಾರೆ. ಏತನ್ಮಧ್ಯೆ, ಶ್ರೀಲಂಕಾ ಬೌಲರ್‌ಳನ್ನು ಚೆಂಡಾಡಿ ಅಜೇಯ ಅರ್ಧಶತಕದೊಂದಿಗೆ ಬಾಂಗ್ಲಾಗೆ ಸ್ಮರಣೀಯ ಗೆಲುವು ತಂದುಕೊಟ್ಟ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮುಷ್ಪೀಕುರ್ ರಹೀಮ್ ಅತ್ಯಂತ ಅಪಾಯಕಾರಿ ಆಟಗಾರ. ಶಿಸ್ತುಬದ್ಧ ಬೌಲಿಂಗ್ ಏನಾದರೂ ಹೊರಹೊಮ್ಮಿದರೆ ಬಾಂಗ್ಲಾದೇಶ ಸತತ ಎರಡನೇ ಗೆಲುವು ಸಾಧಿಸುವುದೇನೂ ಕಷ್ಟವಾಗದು.

ಸಂಭವನೀಯ ಇಲೆವೆನ್

ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ ಎಲ್ ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ವಿಜಯ್ ಶಂಕರ್ / ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಜೈದೇವ್ ಉನದ್ಕಟ್, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಾಹಲ್.

ಬಾಂಗ್ಲಾದೇಶ: ಲಿಟನ್ ದಾಸ್, ತಮೀಮ್ ಇಕ್ಬಾಲ್, ಮುಷ್ಪೀಕುರ್ ರಹೀಮ್ (ವಿಕೆಟ್‌ ಕೀಪರ್), ಮಹಮುದುಲ್ಲಾ (ನಾಯಕ), ರೂಬೆಲ್ ಹೊಸೇನ್, ಶಬ್ಬೀರ್ ರಹಮಾನ್, ಸೌಮ್ಯ ಸರ್ಕಾರ್, ನಜ್ಮುಲ್ ಇಸ್ಲಾಮ್, ಅಬು ಜಯೇದ್/ಆರಿಫುಲ್ ಹಕ್, ಮುಸ್ತಾಫಿಜುರ್ ರೆಹಮಾನ್ ಹಾಗೂ ಮೆಹಿಡಿ ಹಸನ್.

ಪಂದ್ಯ ಆರಂಭ: ರಾತ್ರಿ ೭.೦೦ | ನೇರ ಪ್ರಸಾರ: ಡಿ ಸ್ಪೋರ್ಟ್ಸ್

ತಿರುವನಂತಪುರದಲ್ಲಿ ಸರಣಿ ಕೈವಶಕ್ಕೆ ಸಜ್ಜಾದ ಭಾರತ, ಎಲ್ಲರ ಗಮನ ಧೋನಿಯತ್ತ
ಗಂಡು ಮಗುವಿನ ಸಂಭ್ರಮದಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ದಂಪತಿ
ಕೊಹ್ಲಿ ಕಟ್ಟಿಹಾಕಿದ ಕೆರಿಬಿಯನ್ನರನ್ನು ಕಾಡಿದ ರೋಹಿತ್-ಅಂಬಟಿ ಬೊಂಬಾಟ್ ಶತಕ
Editor’s Pick More